ಉಡುಪಿ: ಜಿಲ್ಲೆಯಲ್ಲಿ ಒಂದು ತಿಂಗಳ ಹೆಣ್ಣು ಮಗು ಸಂಬಂಧಿಸಿದ ಅಕ್ರಮ ದತ್ತು ಮತ್ತು ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ (CDPO) ನೀಡಿದ ಮಾಹಿತಿಯ ಮೇರೆಗೆ, ನೆಜಾರು ಸಮೀಪದ ಸಂತೇಕಟ್ಟೆ ನಿವಾಸಿ ದಂಪತಿ ಕಾನೂನುಬದ್ಧ ದತ್ತು ಪ್ರಕ್ರಿಯೆ ಇಲ್ಲದೆ ಒಂದು ತಿಂಗಳ ಮಗು ಸಾಕುತ್ತಿರುವುದು ಪತ್ತೆಯಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಪ್ರಕಾಶ್, ಅವರ ಪತ್ನಿ ಪೂರ್ಣಿಮಾ, ಮಗು ಮತ್ತು ಪೂರ್ಣಿಮಾ ಸಹೋದರಿ ಲಕ್ಷ್ಮಿ ಮನೆಯಲ್ಲಿದ್ದರು. ವಿಚಾರಣೆ ವೇಳೆ ದಂಪತಿ ನೀಡಿದ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂದಿತು.
ಇದನ್ನೂ ಓದಿ: ಕೋಲ್ಕತ್ತಾ| ರಸ್ತೆ ಮರುನಾಮಕರಣ ವಿವಾದ: ಹಸನ್ ಸುಹ್ರಾವರ್ಡಿ – ಹುಸೇನ್ ಸುಹ್ರಾವರ್ಡಿ ಹೆಸರಿನಲ್ಲಿ ಗೊಂದಲ
ಹೆಚ್ಚಿನ ತನಿಖೆಯಲ್ಲಿ, 11 ವರ್ಷಗಳಿಂದ ಸಂತಾನಲಾಭವಿಲ್ಲದ ಈ ದಂಪತಿ ಉಡುಪಿಯ ಕಾಮತ್ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಲಕ್ಷ್ಮಿ ಸ್ನೇಹಿತರಿಂದ ಮಾಹಿತಿ ಪಡೆದು ವೈದ್ಯರಾದ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ಒದಗಿಸುವಂತೆ ಕೇಳಿದ್ದಾಳೆ.
ಆರೋಪದಂತೆ, ವೈದ್ಯರು ಒಂದು ತಿಂಗಳ ಹೆಣ್ಣು ಮಗುವನ್ನು ದಂಪತಿಗೆ ಒಪ್ಪಿಸಿ, ಅವರೇ ಪೋಷಕರು ಎಂಬಂತೆ ನಕಲಿ ಜನನ ಪ್ರಮಾಣಪತ್ರ ಸಿದ್ಧಪಡಿಸಲು ಸಹ ನೆರವಾದರು.
ಪೊಲೀಸರ ಪ್ರಕಾರ, ಮಗು ಯಾರದ್ದು ಎಂಬ ಮಾಹಿತಿ ದಂಪತಿಗೆ ತಿಳಿದಿರಲಿಲ್ಲ. ತನಿಖೆಯಲ್ಲಿ ಮಗು ಪೋಷಕರಾದ ಸಂಪತ್ (22) ಮತ್ತು ಸುಪ್ರೀತಿ (22) ಅವರನ್ನು ಸಹ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಗು ಅಕ್ರಮವಾಗಿ ಹಸ್ತಾಂತರಿಸಿರುವ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ನೋಡಿ: BLO ಕೆಲಸದ ಒತ್ತಡಕ್ಕೆ ಬೇಸತ್ತ ಅಂಗನವಾಡಿ ನೌಕರರು! ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ Janashakthi Media
