ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಹಿರಿಯ ಬಿಜೆಪಿ ನಾಯಕ ಜಾರ್ಜ್ ಕುರಿಯನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಸಭೆಯ ಸದಸ್ಯರಾಗಿ ಅವರ ಆರು ವರ್ಷದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ನಿಯಮಾನುಸಾರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 75ನೇ ವಿಧಿ (2)ರ ಅಡಿಯಲ್ಲಿ ಕುರಿಯನ್ ಅವರ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ರಾಷ್ಟ್ರಪತಿ ಭವನ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಈ ಬಾರಿ ರಾಜ್ಯಸಭೆಗೆ ಮರುನಾಮನಿರ್ದೇಶನ ದೊರಕದಿರುವುದು ಅವರ ನಿರ್ಗಮನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿರದಿರುವುದೂ ಈ ನಿರ್ಧಾರಕ್ಕೆ ಹಿನ್ನೆಲೆ ಎನ್ನಲಾಗಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯವರಾದ ಜಾರ್ಜ್ ಕುರಿಯನ್, ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. 1980ರಲ್ಲಿ ಬಿಜೆಪಿ ಸ್ಥಾಪನೆಯಾಗಿದ್ದಾಗಿನಿಂದಲೇ ಅವರು ಪಕ್ಷದೊಂದಿಗೆ ಸಕ್ರಿಯವಾಗಿ ಜೋಡಿಸಿಕೊಂಡಿದ್ದಾರೆ.
2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಮೂರನೇ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು, ಈ ಹಿಂದೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರಾಗಿಯೂ ಹಾಗೂ ಮಾಜಿ ಕೇಂದ್ರ ಸಚಿವ ಓ. ರಾಜಗೋಪಾಲ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ನೋಡಿ: ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
