ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ 2002ರ ಮತದಾರರ ಪಟ್ಟಿಯ ವಿವರಗಳನ್ನು ಎಸ್‌ಐಆರ್ ನಮೂನೆಯಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಿಲ್ಲ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾಗರಿಕರು ಮೊದಲು ಆಗಸ್ಟ್ 8ರೊಳಗೆ ನಮೂನೆಯನ್ನು ಸಲ್ಲಿಸಬೇಕು. 2002ರ ವಿವರ ಲಭ್ಯವಿಲ್ಲದಿದ್ದರೆ ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಎಸ್‌ಐಆರ್
ಅನ್ಬುಕುಮಾರ್ ಅವರ ಪ್ರಕಾರ, 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ಪೋಷಕರ ಹೆಸರುಗಳ ವಿವರ ಇಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ನಮೂನೆಯನ್ನು ಸಲ್ಲಿಸಿದ ಬಳಿಕ ಸಂಬಂಧಪಟ್ಟ ಮತದಾರರಿಗೆ ನಂತರ ನೋಟಿಸ್ ನೀಡಲಾಗುತ್ತದೆ. ಆಗ ನಮೂನೆಯ ಹಿಂಭಾಗದಲ್ಲಿ ಸೂಚಿಸಿರುವ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದಾಗಿದೆ. ಯಾವ ದಾಖಲೆಗಳನ್ನು ಪರಿಗಣಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಕೈಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಎಸ್‌ಐಆರ್ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದ್ದು, ಜುಲೈ 22ರ ವೇಳೆಗೆ 5,53,70,473 (98.89%) ಮತದಾರರಿಗೆ ನಮೂನೆಗಳನ್ನು ವಿತರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಶೇ.100ರಷ್ಟು ವಿತರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಇದುವರೆಗೆ 3,67,81,041 (66.35%) ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಅವುಗಳಲ್ಲಿ ಸುಮಾರು 5.94 ಲಕ್ಷ ನಮೂನೆಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. ಎಸ್‌ಐಆರ್
ಇದನ್ನೂ ನೋಡಿ :ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
ಅಂಕಿಅಂಶಗಳ ಪ್ರಕಾರ, ಸುಮಾರು 1.56 ಕೋಟಿ ಮತದಾರರು ತಮ್ಮ ಹೆಸರನ್ನು ಸ್ವತಃ ಮ್ಯಾಪ್ ಮಾಡಿಕೊಂಡಿದ್ದರೆ, 1.93 ಕೋಟಿ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರ ಮೂಲಕ ಮ್ಯಾಪಿಂಗ್ ನಡೆದಿದೆ. ಸುಮಾರು 17.19 ಲಕ್ಷ ನಮೂನೆಗಳಲ್ಲಿ 2002ರ ಮಾಹಿತಿ ಲಭ್ಯವಾಗಿಲ್ಲ. ಇಂತಹ ಪ್ರಕರಣಗಳ ಪರಿಶೀಲನೆ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ನಡೆಯಲಿದೆ.
ಇದೇ ವೇಳೆ, 44.84 ಲಕ್ಷ ಮತದಾರರನ್ನು ಗೈರುಹಾಜರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲು ಹೆಸರುಗಳು ಹಾಗೂ ಇತರೆ ವರ್ಗಗಳ (ASDDO) ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪ್ರತಿಯೊಂದು ಪ್ರಕರಣಕ್ಕೂ ಬೂತ್ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುತ್ತಿದ್ದು, ಬೂತ್ ಮಟ್ಟದ ಏಜೆಂಟರ ಸಹಿಯನ್ನೂ ಪಡೆಯಲಾಗುತ್ತಿದೆ ಎಂದು ಅನ್ಬುಕುಮಾರ್ ಹೇಳಿದರು.
ಉತ್ತರಹಳ್ಳಿ, ಬೊಮ್ಮನಹಳ್ಳಿ, ವರ್ತೂರು ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮ್ಯಾಪಿಂಗ್‌ನಲ್ಲಿ ಕಂಡುಬಂದ ದೋಷಗಳ ಕುರಿತು ದೂರುಗಳು ಬಂದಿದ್ದು, ಕೆಲ ತಾಂತ್ರಿಕ ಸಮಸ್ಯೆಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಉಳಿದ ದೂರುಗಳ ಬಗ್ಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹೆಚ್ಚಿದ ಬಳಕೆಯಿಂದ ಕೆಲವೊಮ್ಮೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ ಎಂದು ಒಪ್ಪಿಕೊಂಡ ಅನ್ಬುಕುಮಾರ್, ಅದನ್ನು ಸರಿಪಡಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರು ಆತಂಕಪಡಬೇಕಿಲ್ಲ ಎಂದೂ ಅವರು ಮನವಿ ಮಾಡಿದ್ದಾರೆ. ಎಸ್‌ಐಆರ್
ಇದನ್ನೂ ನೋಡಿ : ನೀಟ್ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್‌ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media
