ನವದೆಹಲಿ ಸುಮಾರು 14 ವರ್ಷಗಳಿಂದ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿದ್ದು, ಅರ್ಜಿದಾರರ ವಾದವನ್ನು ಆಲಿಸಲು ಒಪ್ಪಿಗೆ ಸೂಚಿಸಿದೆ. ಈ ಬೆಳವಣಿಗೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯ ಕುಟುಂಬ, ನಾಗರಿಕ ಸಂಘಟನೆಗಳು ಹಾಗೂ ಹೋರಾಟಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸೌಜನ್ಯ
ಪ್ರಕರಣದ ತನಿಖೆಯಲ್ಲಿ ಹಲವು ಗಂಭೀರ ಲೋಪಗಳು ನಡೆದಿವೆ, ಪ್ರಮುಖ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಪರಿಶೀಲಿಸಲಾಗಿಲ್ಲ ಹಾಗೂ ನೈಜ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ ಸಂಸ್ಥೆಯಿಂದ ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಮರುತನಿಖೆ ನಡೆಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಪ್ರಕರಣದ ಹಿನ್ನಲೆ ಏನು?
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕಾಲೇಜಿಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಮರುದಿನ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರದ ನಂತರ ಕೊಲೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಘಟನೆ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ವಿವಿಧ ನಾಗರಿಕ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ, ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದವು.
ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ಜತೆಗೆ ಸ್ಪೀಕರ್ ಆಯ್ಕೆ; ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ
ಸಿಬಿಐ ತನಿಖೆ ಮತ್ತು ನ್ಯಾಯಾಲಯದ ತೀರ್ಪು
ರಾಜ್ಯ ಪೊಲೀಸ್ ತನಿಖೆಯ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿತು.
ಆದರೆ 2023ರಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ಆರೋಪದ ಪರವಾಗಿ ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸಲು ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ಹೇಳಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು. ತನಿಖೆಯಲ್ಲಿ ಗಂಭೀರ ಕೊರತೆಗಳಿರುವ ಬಗ್ಗೆ ನ್ಯಾಯಾಲಯವೂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಮರುತನಿಖೆಗೆ ಏಕೆ ಆಗ್ರಹ?
ಆರೋಪಿಯ ಖುಲಾಸೆಯ ನಂತರ, ನೈಜ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂಬ ಪ್ರಶ್ನೆ ಮತ್ತೆ ಬಲವಾಗಿ ಕೇಳಿಬಂತು. ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರು ಮತ್ತು ವಿವಿಧ ಸಂಘಟನೆಗಳು ಪ್ರಕರಣದ ಮರುತನಿಖೆಗೆ ಆಗ್ರಹಿಸಿದರು.
ತನಿಖೆಯಲ್ಲಿ ಅನೇಕ ಸಾಕ್ಷಿಗಳನ್ನು ಸಮರ್ಪಕವಾಗಿ ವಿಚಾರಣೆ ಮಾಡಿಲ್ಲ, ವೈಜ್ಞಾನಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿಲ್ಲ ಹಾಗೂ ಹಲವು ಅನುಮಾನಾಸ್ಪದ ಅಂಶಗಳು ಕಡೆಗಣಿಸಲ್ಪಟ್ಟಿವೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು.
ಈ ಅರ್ಜಿಯನ್ನು ಇದೀಗ ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಅರ್ಜಿಯಲ್ಲಿನ ವಾದಗಳನ್ನು ಆಲಿಸಿದ ಬಳಿಕ ಮುಂದಿನ ಹಂತದಲ್ಲಿ ನ್ಯಾಯಾಲಯ ಮರುತನಿಖೆಗೆ ಆದೇಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಸುಪ್ರೀಂಕೋರ್ಟ್ ಅಂತಿಮವಾಗಿ ಮರುತನಿಖೆಗೆ ಆದೇಶ ನೀಡಿದರೆ, ಪ್ರಕರಣವನ್ನು ಹೊಸದಾಗಿ ಪರಿಶೀಲಿಸುವ ಸಾಧ್ಯತೆ ಇದೆ. ಇದರಿಂದ ಹಲವು ವರ್ಷಗಳಿಂದ ಉತ್ತರಿಸದ ಪ್ರಶ್ನೆಗಳಿಗೆ ಸ್ಪಷ್ಟತೆ ಸಿಗಬಹುದೆಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ : ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್‌ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media
