- ನವೆಂಬರ್ 12, 13 ಮತ್ತು 14 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ವಿಚಾರ ಸಂಕೀರ್ಣ.
- ಪ್ರವಾಸೋದ್ಯಮದ ಸಾಧ್ಯತೆ-ಸವಾಲುಗಳ ಪರಿಶೋಧನೆ ಬಗ್ಗೆ ಅರಿವು ಮೂಡಿಸುವುದು.
- ಅಶೋಕ ಚಕ್ರವರ್ತಿಯ ಶಾಸನ, ಪಾಳೇಗಾರರ ಆಳ್ವಿಕೆಯ ಐತಿಹಾಸಿಕ ತಾಣಗಳ ಅನಾವರಣ.
ಕೊಪ್ಪಳ: ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ʻಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ: ಸಾಧ್ಯತೆ ಮತ್ತು ಸವಾಲುಗಳುʼ ಎಂಬ ವಿಷಯದ ಕುರಿತು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರ್ಣವನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಪ್ರವಾಸ
ಮೂರು ದಿನ ವಿಚಾರ ಸಂಕೀರ್ಣ
ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗೆಜಿಟಿಯರ್ ಇಲಾಖೆ (ಕಲಬುರ್ಗಿ) ಸಂಯುಕ್ತ ಆಶ್ರಯದಲ್ಲಿ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ನವೆಂಬರ್ 12, 13 ಮತ್ತು 14 ರಂದು ಈ ವಿಚಾರ ಸಂಕೀರ್ಣವು ಕೊಪ್ಪಳದಲ್ಲಿ ಜರುಗಲಿದೆ.
ಐತಿಹಾಸಿಕ ಮಹತ್ವ ಅನಾವರಣ
ಕನ್ನಡ ನೆಲದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಇತಿಹಾಸದಲ್ಲಿ ಕಲ್ಯಾಣ ಕರ್ನಾಟಕವು ಅತಿ ಪ್ರಮುಖ ಸ್ಥಾನ ಪಡೆದಿದೆ. ಬೌದ್ಧ ಮತ್ತು ಜೈನ ಧರ್ಮಗಳ ನೆಲೆವೀಡಾಗಿರುವ ಈ ಭೂಮಿಯಲ್ಲಿ ಸಾಮ್ರಾಟ ಅಶೋಕನ ಶಾಸನಗಳು ದೊರೆತಿವೆ. ಭರತಖಂಡದಲ್ಲಿಯೇ ಅಶೋಕನ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಶಾಸನ ಪತ್ತೆಯಾಗಿರುವುದು ಕಲ್ಯಾಣ ಕರ್ನಾಟಕದಲ್ಲೇ ಎಂಬುದು ವಿಶೇಷ.
ಇದನ್ನೂ ಓದಿ: ಹೆದ್ದಾರಿ ಹೆಚ್ಚಿದರೂ ನಿಲ್ಲದ ಅಪಘಾತ ಸಾವು! ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 34 ಮಂದಿ ಬಲಿ
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯ ಕೇಂದ್ರ ಸ್ಥಾನವಾಗಿ, ಶ್ರಮ ಮತ್ತು ಸಮಸಂಸ್ಕೃತಿಯ ಪ್ರತಿಪಾದನಾ ಸ್ಥಳವಾಗಿ ಈ ಪ್ರದೇಶ ಹೊರಹೊಮ್ಮಿದೆ. ಭೀಮಾ ನದಂಡೆಯ ಸನ್ನತಿಯು ಕನ್ನಡ ನಾಡಿನ ಚರಿತ್ರೆಯನ್ನು ಕ್ರಿಸ್ತಪೂರ್ವ ಎರಡನೇ ಶತಮಾನದ ಮೌರ್ಯರ ಕಾಲಕ್ಕೆ ಕೊಂಡೊಯ್ಯುತ್ತದೆ. ಜತೆಗೆ, ಭೀಮಾ, ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ದೋಹಬ್ ಪ್ರದೇಶವಾಗಿರುವ ಇಲ್ಲಿ ಜೈನ, ಬೌದ್ಧ, ವೈದಿಕ, ಶೈವ, ವೀರಶೈವ-ಲಿಂಗಾಯತ ಹಾಗೂ ಇಸ್ಲಾಮ್ ಧರ್ಮಗಳ ಭಾವೈಕ್ಯತೆಯ ಸಮ್ಮಿಳನವನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ತಳಸಮುದಾಯ ಹಾಗೂ ಬೇಡ-ಬುಡಕಟ್ಟು ಪಾಳೇಗಾರರು ಪ್ರಬಲ ಸಂಸ್ಥಾನಗಳನ್ನು ಸ್ಥಾಪಿಸಿ ಆಳಿದ ಐತಿಹಾಸಿಕ ಹಿನ್ನೆಲೆಯೂ ಈ ಭಾಗಕ್ಕಿದೆ.
ಈ ಬಗ್ಗೆ ಚರ್ಚೆ ಇರಲಿದೆ
ದಕ್ಷಿಣ, ಕರಾವಳಿ ಮತ್ತು ಉತ್ತರ ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಸಾಂಸ್ಕೃತಿಕ ಹಿನ್ನೆಲೆ ಇದ್ದರೂ ಕಲ್ಯಾಣ ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಲು ವಿಳಂಬವಾಗಿದೆ. ಈ ವಿಚಾರ ಸಂಕಿರ್ಣದಲ್ಲಿ ಒಟ್ಟು ಐದು ಗೋಷ್ಠಿಗಳು ನಡೆಯಲಿದ್ದು, ಈ ಕೆಳಗಿನ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
- ಕಲ್ಯಾಣ ಕರ್ನಾಟಕದ ಐತಿಹಾಸಿಕತೆ ಮತ್ತು ಪ್ರಾಗೈತಿಹಾಸಿಕ ನೆಲೆಗಳು.
- ಐತಿಹಾಸಿಕ ಸ್ಮಾರಕಗಳು, ಕೋಟೆ ಕೊತ್ತಲಗಳು.
- ಬೌದ್ಧ ಹಾಗೂ ಜೈನ ಧರ್ಮದ ಐತಿಹಾಸಿಕ ನೆಲೆಗಳು.
- ಶರಣ-ಶರಣೀಯರ ಸ್ಮಾರಕಗಳು.
- ಪಾಳೇಗಾರರು ಆಳ್ವಿಕೆ ನಡೆಸಿದ ಐತಿಹಾಸಿಕ ಸ್ಥಳಗಳ ಮಹತ್ವ.
ಈ ವಿಚಾರ ಸಂಕೀರ್ಣವು ಪ್ರವಾಸೋದ್ಯಮದ ಸಾಧ್ಯತೆ ಮತ್ತು ಸವಾಲುಗಳ ಮೂಲಕ ಕರ್ನಾಟಕ ಸರ್ಕಾರದ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಆಶಯವನ್ನು ಹೊಂದಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಇತಿಹಾಸದ ಕುರಿತು ವಸ್ತುನಿಷ್ಠ ಪ್ರಬಂಧಗಳು ಮಂಡನೆಯಾಗಲಿವೆ ಎನ್ನಲಾಗಿದೆ.
ಇದನ್ನು ನೋಡಿ: ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media
