ಭಿನ್ನಮತದ ಹಕ್ಕು ಮತ್ತು ನಾಗರಿಕರಿಗೆ ಸಾರ್ವಜನಿಕ ಸ್ಥಳಗಳ ನಿರಾಕರಣೆ:

ʼಪರ್ಮಿಶನ್‌ ರಾಜ್ಯಭಾರʼ- ಜಂತರ್‌ ಮಂತರ್‌, ಫ್ರೀಡಂ ಪಾರ್ಕ್‌ ಯಾರಿಗಾಗಿ?

ಎಂ ಎ ಬೇಬಿ, 

ಭಾರತದಲ್ಲಿ ಇಂದು ದುಡಿಯುವ ವರ್ಗದ ಜನರು ಒಂದು ಶತಮಾನದ ಹಿಂದೆ ಲೆನಿನ್ ವಿವರಿಸಿದ್ದ ಪ್ರಶ್ನೆಯ ಮಾರ್ಪಡಿಸಿದ ರೂಪವೊಂದನ್ನು ಎದುರಿಸುತ್ತಿದ್ದಾರೆ. ಖಾಸಗಿ ಸ್ಥಳಾವಕಾಶಗಳ ಮೇಲಿನ ಕಾರ್ಪೊರೇಟ್-ಭೂಮಾಲೀಕ ಏಕಸ್ವಾಮ್ಯದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭುತ್ವವೇ ಸಾರ್ವಜನಿಕ ಸ್ಥಳದ ದ್ವಾರಪಾಲಕನಾಗಿದೆ. ಜನರಿಗೆ ಸೇರಿದ ಸಾರ್ವಜನಿಕ ಸ್ಥಳವನ್ನು ಒಂದು ಸವಲತ್ತು ಎಂಬಂತೆ ನಿರ್ವಹಿಸಲಾಗುತ್ತದೆ.  ಸೆಕ್ಷನ್ 163 ಮತ್ತು ಪ್ರಸ್ತುತ ಇರುವ ʼಪರ್ಮಿಶನ್ʼ ಆಳ್ವಿಕೆಯು, ನವ-ಫ್ಯಾಸಿಸ್ಟ್ ಪ್ರವೃತ್ತಿಗಳೊಂದಿಗೆ ಸರ್ವಾಧಿಕಾರದ  ಅಡಿಯಲ್ಲಿ ಕಾರ್ಪೊರೇಟ್-ಕೋಮುವಾದಿ ಕೂಟದ ಆಳ್ವಿಕೆಯನ್ನು ರಕ್ಷಿಸಲು ರೂಪಿಸಲಾದ ವರ್ಗ-ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿಯವರೆಗೆ ನಮಗೆ ಒಂದು ‘ಜಂತರ್ ಮಂತರ್’ ಇತ್ತು; ಅದನ್ನೂ ಬಲವಂತವಾಗಿ ನಿರಾಕರಿಸಿದರೆ……..ಈಗ ಅಂತಿಮ ಕ್ಷಣಗಣನೆ ಆರಂಭವಾಗಿದೆ.

ಅನು:ಸಿ.ಸಿದ್ದಯ್ಯ

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಬಹಿರಂಗಪಡಿಸಿದ ನಂತರ, ಅಕ್ಟೋಬರ್ 2, 2026  ರಂದು, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷಗಳ ನಾಯಕರು, ಕಾರ್ಯಕರ್ತರು ಮತ್ತು ಸಾಮೂಹಿಕ ಸಂಘಟನೆಗಳ ಪ್ರತಿನಿಧಿಗಳನ್ನು ದಸ್ತಗಿರಿ ಮಾಡಲಾಯಿತು. ದೇಶದ ರಾಜಧಾನಿಯಲ್ಲಿ ಪ್ರತಿಭಟನೆಗೆಂದೇ ನಿಗದಿಯಾಗಿರುವ ಜಂತರ್ ಮಂತರ್‌ನಲ್ಲಿ ಅವರಿಗೆ ಸಭೆ ಸೇರಲೂ ಅನುಮತಿ ನೀಡಲಿಲ್ಲ. ದಿಲ್ಲಿ ಪೊಲಿಸ್‌ನ  ʼಪರ್ಮಿಷನ್ ರಾಜ್ಯಭಾರʼ ಈ ಬಂಧನಗಳಿಗೆ ನೆಪವಾಯಿತು.

ಯಾವುದೇ ಪ್ರಜಾಸತ್ತಾತ್ಮಕ ಸಮಾಜದಲ್ಲಿ, ಜನರಿಗೆ ತಮ್ಮ ಅಭಿಪ್ರಾಯಗಳನ್ನು ಅಧಿಕಾರಸ್ಥರ ಮುಂದೆ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯ ಮತ್ತು ಹಕ್ಕುಗಳಿರಬೇಕು. ಇಂತಹ ಯಾವುದೇ ಸಾಮೂಹಿಕ ಅಭಿವ್ಯಕ್ತಿಗೆ ಸಾರ್ವಜನಿಕ ಮೈದಾನ  ಅಥವಾ ದೊಡ್ಡ ಸಭಾಂಗಣಗಳು ಸುಲಭವಾಗಿ ಲಭ್ಯವಾಗಬೇಕಾದುದು ಕನಿಷ್ಠ ಅಗತ್ಯವಾಗಿದೆ. ವರ್ಗಗಳಾಗಿ ವಿಂಗಡಣೆಯಾಗಿರುವ ಯಾವುದೇ ಸಮಾಜದಲ್ಲಿ ‘ಉಳ್ಳವರು’ ಮತ್ತು ‘ಇಲ್ಲದವರು’ ಇರುತ್ತಾರೆ. ಇಂತಹ ಪ್ರಜಾಸತ್ತಾತ್ಮಕ ಸ್ಥಳಗಳ ಲಭ್ಯತೆಯು ಕೂಡ ಉಳ್ಳವರ ಏಕಸ್ವಾಮ್ಯಕ್ಕೆ ಒಳಗಾಗಿರುತ್ತದೆ, ಇಲ್ಲದವರಿಗೆ ಅದನ್ನು ನಿರಾಕರಿಸಲಾಗುತ್ತದೆ.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ಔಪಚಾರಿಕವಾಗಿ ಎಲ್ಲರಿಗೂ ತೆರೆದಿರುತ್ತವೆ, ಆದರೆ ಪ್ರಾಯೋಗಿಕವಾಗಿ ಭೌತಿಕ ಸಂಪನ್ಮೂಲಗಳನ್ನು ಹೊಂದಿರುವವರು ಅವನ್ನು  ನಿಯಂತ್ರಿಸುತ್ತಾರೆ. ದುಡಿಯುವ ವರ್ಗವು ಅತಿಯಾದ ಕೆಲಸ, ಬಡತನದಿಂದ ಬಳಲುತ್ತಿದ್ದು, ಸಂಘಟಿತರಾಗಲು ಅಗತ್ಯವಿರುವ ಸ್ಥಳಗಳು, ಸಭಾಂಗಣಗಳು ಮತ್ತು ಉತ್ತಮ ಕಟ್ಟಡಗಳ ಕೊರತೆಯನ್ನು ಎದುರಿಸುತ್ತದೆ.

ಲೆನಿನ್ ಈ ಗೋಸುಂಬೆ ನೀತಿಯನ್ನು “ಶುದ್ಧ ಪ್ರಜಾಪ್ರಭುತ್ವ”ದ ಭ್ರಮೆಯನ್ನು ಕುರಿತು ಮಾತನಾಡುತ್ತಿದ್ದಾಗ ಅತ್ಯಂತ ಸಮರ್ಥವಾಗಿ ಬಯಲಿಗೆಳೆದರು. ಅವರು ತಮ್ಮ 1919 ರ ಬೂರ್ಜ್ವಾ ಪ್ರಜಾಪ್ರಭುತ್ವದ ಕುರಿತಾದ ಪ್ರಬಂಧಗಳಲ್ಲಿ ಹೀಗೆ ಬರೆದಿದ್ದಾರೆ:

“ದುಡಿಯುವ ಜನರಿಗೆ… ಬೂರ್ಜ್ವಾ ಪ್ರಜಾಪ್ರಭುತ್ವದ ಅಡಿಯಲ್ಲಿ ‘ಸಭೆ ಸೇರುವ ಸ್ವಾತಂತ್ರ್ಯ’ ಎಂಬುದು ಒಂದು ವಂಚನೆ ಎಂದು ತಿಳಿದಿದೆ. ಏಕೆಂದರೆ ಶ್ರೀಮಂತರು ತಮ್ಮ ಬಳಿ ಎಲ್ಲಾ ಅತ್ಯುತ್ತಮ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳನ್ನು ಇಟ್ಟುಕೊಂಡಿದ್ದಾರೆ. ಅವರು ಸಭೆಗಳನ್ನು ನಡೆಸಲು ಸಾಕಷ್ಟು ಬಿಡುವಿನ ಸಮಯವನ್ನು ಹೊಂದಿದ್ದಾರೆ ಹಾಗೂ ಬೂರ್ಜ್ವಾ ಅಧಿಕಾರ ಯಂತ್ರದಿಂದ ಅದಕ್ಕೆ ರಕ್ಷಣೆಯಿದೆ. ಗ್ರಾಮೀಣ ಮತ್ತು ನಗರ ಕಾರ್ಮಿಕರು ಹಾಗೂ ಸಣ್ಣ ರೈತರಿಗೆ… ಇವೆಲ್ಲವೂ ನಿರಾಕರಿಸಲ್ಪಟ್ಟಿವೆ.”

ಅದಕ್ಕೂ ಮೊದಲು, ʼದಿ ಪ್ರೊಲೆಟೇರಿಯನ್ ರೆವಲ್ಯೂಷನ್ ಆಂಡ್ ದಿ ರೆನೆಗೇಡ್ ಕೌಟ್ಸ್ಕಿ (1918)ʼ (ಕಾರ್ಮಿಕ ವರ್ಗದ ಕ್ರಾಂತಿ ಮತ್ತು ತತ್ವಭ್ರಷ್ಟ ಕೌಟ್ಸ್ಕಿ) ಕೃತಿಯಲ್ಲಿ, ಆವರಣದ ಮೇಲೆ ಭೌತಿಕ ನಿಯಂತ್ರಣವಿಲ್ಲದೆ ಸೈದ್ಧಾಂತಿಕ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿಲ್ಲ ಎಂದು ಲೆನಿನ್ ಎತ್ತಿ ತೋರಿಸಿದರು.  ಸಮಾಜವಾದಿ ಪ್ರಭುತ್ವವು “ಶೋಷಕರಿಂದ ಇಂತಹ ಅತ್ಯುತ್ತಮ ಕಟ್ಟಡಗಳನ್ನು ಒಂದೇ ಏಟಿಗೆ ಸಾವಿರಾರು ಸಂಖ್ಯೆಯಲ್ಲಿ ವಶಪಡಿಸಿಕೊಳ್ಳುವ ಮೂಲಕʼʼ ಈ ಸಮಸ್ಯೆಯನ್ನು ಬಗೆಹರಿಸಿತು ಮತ್ತು ಇದು ಜನಸಾಮಾನ್ಯರಿಗೆ ಸಭೆ ಸೇರುವ ಹಕ್ಕನ್ನು “ಲಕ್ಷ ಪಟ್ಟು ಹೆಚ್ಚು ಪ್ರಜಾಸತ್ತಾತ್ಮಕವನ್ನಾಗಿ” ಮಾಡಿತು ಎಂದು ಅವರು ಟಿಪ್ಪಣಿ ಮಾಡಿದರು.

ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಯಶಸ್ವಿ ಹೋರಾಟವೇ ಆ ಪ್ರತಿಭಟನಾ ಸ್ಥಳದಲ್ಲಿನ ಕೊನೆಯ ಯಶಸ್ವಿ ಹೋರಾಟವಾಗುವಂತೆ ಮಾಡಲು ಮೋದಿ ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಅಕ್ಟೋಬರ್ 2 ರಂದು ವಿರೋಧ ಪಕ್ಷಗಳು ಕರೆ ನೀಡಿದ ಪ್ರತಿಭಟನೆಯನ್ನು ಕಾನೂನು-ಸುವ್ಯವಸ್ಥೆಯ ನೆಪ ಒಡ್ಡಿ ಅನುಮತಿ ನಿರಾಕರಿಸುವ ಮೂಲಕ ತಡೆಹಿಡಿಯಲಾಯಿತು. 1,200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ದಸ್ತಗಿರಿ ಮಾಡಲಾಯಿತು ಮತ್ತು 11 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು.

ಶೋಷಿತರಿಗೆ ಸ್ಥಳಾವಕಾಶ  ನಿರಾಕರಣೆ

ಲಭ್ಯತೆಯಿಲ್ಲದ ಸ್ವಾತಂತ್ರ್ಯವು ಕೇವಲ ಮಿಥ್ಯೆ ಎಂಬುದು ಲೆನಿನ್ ಅವರ ಒಳನೋಟವಾಗಿತ್ತು. ಯಾವ ವರ್ಗವು ಸ್ಥಳಗಳ ಒಡೆತನವನ್ನು ಹೊಂದಿರುತ್ತದೆಯೋ, ವಾಸ್ತವವಾಗಿ ಅದೇ ಸಭೆ ಸೇರುವ ಹಕ್ಕನ್ನೂ ಹೊಂದಿರುತ್ತದೆ. ಇಂದಿನ ಭಾರತದಲ್ಲಿ, ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ, ದುಡಿಯುವ ವರ್ಗದ ಜನರು ಲೆನಿನ್ ವಿವರಿಸಿದ್ದ ಸಮಸ್ಯೆಯ ಮಾರ್ಪಡಿಸಿದ ರೂಪವೊಂದನ್ನು ಎದುರಿಸುತ್ತಿದ್ದಾರೆ. ಇಲ್ಲಿ, ಖಾಸಗಿ ಸ್ಥಳಾವಕಾಶಗಳ ಮೇಲಿನ ಕಾರ್ಪೊರೇಟ್-ಭೂಮಾಲೀಕ ಏಕಸ್ವಾಮ್ಯದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭುತ್ವವೇ ಸಾರ್ವಜನಿಕ ಸ್ಥಳದ ದ್ವಾರಪಾಲಕನಾಗಿದೆ. ಜನರಿಗೆ ಸೇರಿದ ಸಾರ್ವಜನಿಕ ಸ್ಥಳವನ್ನು ಒಂದು ಸವಲತ್ತು ಎಂಬಂತೆ ನಿರ್ವಹಿಸಲಾಗುತ್ತದೆ. ಶೋಷಿತರಿಗೆ ಸ್ಥಳಾವಕಾಶವನ್ನು ನಿರಾಕರಿಸುವುದು ಒಂದು ಶೋಷಣಾತ್ಮಕ ಆಳ್ವಿಕೆಯ ಮೂಲಭೂತ ಲಕ್ಷಣವಾಗಿದೆ. ಸೆಕ್ಷನ್ 163 ಮತ್ತು ಪ್ರಸ್ತುತ ಇರುವ ʼಪರ್ಮಿಶನ್ʼ ಆಳ್ವಿಕೆಯು, ನವ-ಫ್ಯಾಸಿಸ್ಟ್ ಪ್ರವೃತ್ತಿಗಳೊಂದಿಗೆ ಸರ್ವಾಧಿಕಾರದ  ಅಡಿಯಲ್ಲಿ ಕಾರ್ಪೊರೇಟ್-ಕೋಮುವಾದಿ ಕೂಟದ ಆಳ್ವಿಕೆಯನ್ನು ರಕ್ಷಿಸಲು ರೂಪಿಸಲಾದ ವರ್ಗ-ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.

ಯಾವಾಗಲೂ ಹೀಗಿರಲಿಲ್ಲ. 1981ರ ಸೆಪ್ಟೆಂಬರ್ 15ರ ದಿನ ನನಗೆ ಇನ್ನೂ ನೆನಪಿದೆ; ಅಂದು ದೆಹಲಿಯ ಹೃದಯಭಾಗದಲ್ಲಿರುವ ‘ಬೋಟ್ ಕ್ಲಬ್’ನಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳ ಬೃಹತ್ ರ್ಯಾಲಿಯೊಂದು ನಡೆದಿತ್ತು. ಆ ಸ್ಥಳದಿಂದ ದೇಶದ ಅಧಿಕಾರ ಕೇಂದ್ರಗಳಾದ ಸಂಸತ್ತು, ಸೌತ್ ಬ್ಲಾಕ್, ನಾರ್ತ್ ಬ್ಲಾಕ್ ಮತ್ತು ರಾಷ್ಟ್ರಪತಿ ಭವನಗಳು ಕಾಣುತ್ತಿದ್ದವು. ಆ ದಶಕದಲ್ಲಿ, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತು ಯುವಜನರ ಇಂತಹ ಅನೇಕ ಬೃಹತ್ ರ್ಯಾಲಿಗಳು ಅದೇ ಸ್ಥಳದಲ್ಲಿ ನಡೆದವು. ಆದರೆ, ತೊಂಬತ್ತರ ದಶಕದ ಆರಂಭದಿಂದ ಬೋಟ್ ಕ್ಲಬ್‌ನಲ್ಲಿ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಯಿತು. ಒಮ್ಮೆ ಬೋಟ್ ಕ್ಲಬ್‌ಗೆ ಪ್ರವೇಶ ನಿರಾಕರಿಸಿದ ನಂತರ, ನವದೆಹಲಿಯ ಸಂಸತ್ ಮಾರ್ಗ ಮತ್ತು ಜಂತರ್ ಮಂತರ್‌ನಂತಹ ವಿವಿಧ ಸ್ಥಳಗಳನ್ನು ಸಭೆಗಳಿಗೆ ಲಭ್ಯಗೊಳಿಸಲಾಯಿತು.

‘ಪರ್ಮಿಷನ್ ರಾಜ್ಯಭಾರʼದಲ್ಲಿ

ಜಂತರ್ ಮಂತರ್ 1993ರಲ್ಲಿ ಪ್ರತಿಭಟನೆಗಳು ಮತ್ತು ಸಭೆಗಳನ್ನು ನಡೆಸಲು ನಿಗದಿತ ಸ್ಥಳವಾಯಿತು. ಜಂತರ್ ಮಂತರ್‌ನಲ್ಲಿನ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಮಂಡಿ ಹೌಸ್ ಅಥವಾ ಇತರ ಹತ್ತಿರದ ಸ್ಥಳಗಳಿಂದ ಮೆರವಣಿಗೆಯೊಂದಿಗೆ ಬರಲು ಅನುಮತಿ ನೀಡಲಾಗುತ್ತಿತ್ತು. ಇದರಿಂದಾಗಿ ಸಂಘಟಕರು ತಮ್ಮ ಬೇಡಿಕೆಗಳನ್ನು ಎತ್ತಿ ತೋರಿಸುತ್ತಾ, ‘ಲ್ಯೂತ್ಯೆನ್ಸ್ ದೆಹಲಿ'(ಪ್ರತಿಷ್ಠಿತರ ದಿಲ್ಲಿ)ಯ ಅತ್ಯಂತ ಪ್ರಮುಖ ಪ್ರದೇಶಗಳಲ್ಲೊಂದರ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಸಾಧ್ಯವಾಯಿತು. ಆದರೆ, ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಹೇರಲಾದ ಬೇಜವಾಬ್ದಾರಿಯುತ ಲಾಕ್‌ಡೌನ್‌ನ ನಂತರ, ನಗರದ ಪ್ರಜಾಸತ್ತಾತ್ಮಕ ಅವಕಾಶಗಳು ನಿರಂತರವಾಗಿ ಸಂಕುಚಿತಗೊಳ್ಳುತ್ತಲೇ ಬಂದವು. ತಮ್ಮ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳನ್ನು ವ್ಯಕ್ತಪಡಿಸುವ ಅವಕಾಶದಿಂದ ಸಾರ್ವಜನಿಕರನ್ನು ವಂಚಿಸಲು, ಸಾಂಕ್ರಾಮಿಕದ ಅವಧಿಯಲ್ಲಿದ್ದ ತಾತ್ಕಾಲಿಕ ನಿರ್ಬಂಧಗಳು ಶಾಶ್ವತ ಸ್ಥಿತಿಯಾಗಿ ಬದಲಾದವು. ಕಳೆದ ಒಂದು ದಶಕದಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸರ್ಕಾರವು ಬಲಪಡಿಸಿರುವ ‘ಪರ್ಮಿಷನ್ ರಾಜ್ಯಭಾರʼದಲ್ಲಿ ಮಂಡಿ ಹೌಸ್‌ನಿಂದ ಜಂತರ್ ಮಂತರ್‌ವರೆಗಿನ ಸಾಂಪ್ರದಾಯಿಕ ಮೆರವಣಿಗೆಯ ಮಾರ್ಗವನ್ನು ಜನಸಾಮಾನ್ಯರಿಗೆ ನಿರ್ಬಂಧಿಸಲಾಯಿತು.

ಮೋದಿ ಸರ್ಕಾರದ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಯ (NTA) ಅತ್ಯಂತ ಬೇಜವಾಬ್ದಾರಿ ಮತ್ತು ಕೆಟ್ಟ ನಡವಳಿಕೆಯಿಂದಾಗಿ ದೇಶಾದ್ಯಂತ ಸಂಚಲನ ಮೂಡಿಸಿದ ಸಾಲು ಸಾಲು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ನಂತರ, ವಿದ್ಯಾರ್ಥಿಗಳು, ಪೋಷಕರು ಮತ್ತು ದೇಶದ ಬಗ್ಗೆ ಕಾಳಜಿಯುಳ್ಳ ನಾಗರಿಕರಲ್ಲಿ ವ್ಯಾಪಕ ಆಕ್ರೋಶ ಹಾಗೂ ಹತಾಶೆ ಉಂಟಾಯಿತು.. ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ನಾಶಕ್ಕೆ ಕಾರಣವಾದ ಪ್ರಮುಖ ಅಪರಾಧಿಗಳಾಗಿವೆ. ಉದಾಹರಣೆಗೆ, ಕೇಂದ್ರೀಕರಣದ ಪರಿಣಾಮವಾಗಿ, ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಗಳ ಜವಾಬ್ದಾರಿಯನ್ನು ಹೊಸದಾಗಿ ರಚಿಸಲಾದ ‘ಎನ್‌ಟಿಎ’ ಗೆ ವಹಿಸಲಾಯಿತು; ಈ ಸಂಸ್ಥೆಯು ಆ ಕೆಲಸವನ್ನು ವಾಣಿಜ್ಯ ಸ್ವರೂಪದ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿತು. ನೀಟ್ ಪರೀಕ್ಷೆಗಳನ್ನು ನಡೆಸಿದ ಅತ್ಯಂತ ಬೇಜವಾಬ್ದಾರಿ ಮತ್ತು ನಿರ್ದಯ ಧೋರಣೆಯಿಂದಾಗಿ 20ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದ್ದು ಅತ್ಯಂತ ದುಃಖಕರ ಸಂಗತಿಯಾಗಿದೆ. ಸಹಜವಾಗಿಯೇ ಈ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಬೇಕಿತ್ತು; ಇದು ಜಂತರ್ ಮಂತರ್‌ನಲ್ಲಿ ಈ ವರ್ಷದ ಜುಲೈ 20 ರಂದು ನಡೆದ ಬೃಹತ್ ಸಮಾವೇಶದಲ್ಲಿ ಪರಾಕಾಷ್ಠೆಯನ್ನು ತಲುಪಿತು.

ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಯಶಸ್ವಿ ಹೋರಾಟವೇ ಆ ಪ್ರತಿಭಟನಾ ಸ್ಥಳದಲ್ಲಿನ ಕೊನೆಯ ಯಶಸ್ವಿ ಹೋರಾಟವಾಗುವಂತೆ ಮಾಡಲು ಮೋದಿ ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಅಕ್ಟೋಬರ್ 2 ರಂದು ವಿರೋಧ ಪಕ್ಷಗಳು ಕರೆ ನೀಡಿದ ಪ್ರತಿಭಟನೆಯನ್ನು ಕಾನೂನು-ಸುವ್ಯವಸ್ಥೆಯ ನೆಪ ಒಡ್ಡಿ ಅನುಮತಿ ನಿರಾಕರಿಸುವ ಮೂಲಕ ತಡೆಹಿಡಿಯಲಾಯಿತು. 1,200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ದಸ್ತಗಿರಿ ಮಾಡಲಾಯಿತು ಮತ್ತು 11 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನಾ ಸಭೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಹೀಗಾಗಿ, ನಿಷೇಧ ಹೇರಲು ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಕಾರಣವಿಲ್ಲ; ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದೆ.

ನಾಗರಿಕರ ಎರಡು ವರ್ಗಗಳಿವೆ. ಒಂದು ವರ್ಗವು ರಕ್ಷಿತವಾಗಿರುತ್ತದೆ; ಅವರಿಗಾಗಿ ರಸ್ತೆಗಳನ್ನು ತೆರವುಗೊಳಿಸಲಾಗುತ್ತದೆ ಮತ್ತು ನಗರವನ್ನೇ ಸ್ತಬ್ಧಗೊಳಿಸಲಾಗುತ್ತದೆ. ಸಾರ್ವಜನಿಕ ಸ್ಥಳವು ಅಧಿಕಾರಸ್ಥರಿಗೆ ಲಭ್ಯವಾಗುತ್ತದೆಯಾದರೂ, ಜನಸಾಮಾನ್ಯರಿಗೆ ಮಾತ್ರ ಅದು ಮುಚ್ಚಲ್ಪಟ್ಟಿರುತ್ತದೆ. ಈ ಬೆಂಗಾವಲು ಪಡೆಗಳಿಗೆ ರಸ್ತೆಗಳನ್ನು ತೆರವುಗೊಳಿಸುವ ದಿಲ್ಲಿ ಪೊಲೀಸರೇ, ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಜಂತರ್ ಮಂತರ್ ಪ್ರತಿಭಟನೆಯನ್ನು ತಡೆಯುತ್ತಾರೆ. ಯಾವ ತರ್ಕವು ಕಾರ್ಮಿಕರನ್ನು ಜಂತರ್ ಮಂತರ್‌ನಿಂದ ತಡೆಯುತ್ತದೆಯೋ, ಅದೇ ತರ್ಕವು ರಸ್ತೆಬದಿಯ ಅಂಗಡಿಕಾರರ ಅಂಗಡಿಯ ಬಾಗಿಲನ್ನೂ ಮುಚ್ಚಿಸುತ್ತದೆ.

ಸಾರ್ವಜನಿಕ ಸ್ಥಳಗಳ ಅಸಮಾನ ಬಳಕೆ

ಸಾರ್ವಜನಿಕ ಸ್ಥಳಗಳ ಅಸಮಾನ ಬಳಕೆಯು ಕೇವಲ ಪ್ರತಿಭಟನೆಗಳ ದಮನದಲ್ಲಿ ಮಾತ್ರವಲ್ಲದೆ, ಅಧಿಕಾರದಲ್ಲಿರುವವರಿಗಾಗಿ ನಗರವನ್ನು ತೆರವುಗೊಳಿಸುವ ರೀತಿಯಲ್ಲಿಯೂ ಕಂಡುಬರುತ್ತದೆ. ಪ್ರಧಾನಿ, ಗೃಹ ಸಚಿವರು ಅಥವಾ ಬಿಜೆಪಿಯ ಇತರ ನಾಯಕರು ಪ್ರಯಾಣಿಸುವಾಗ, ಸಾಧ್ಯವಿರುವ ಎಲ್ಲ ಮಾರ್ಗಗಳಲ್ಲಿನ ಅಂಗಡಿಗಳನ್ನು ಸುದೀರ್ಘ ಸಮಯದ ವರೆಗೆ ಮುಚ್ಚಿಸಲಾಗುತ್ತದೆ. ಇದು ವಿಶೇಷವಾಗಿ ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ ಭವನ ಮತ್ತು ಪಟೇಲ್ ಚೌಕ್‌ನಂತಹ ಪ್ರದೇಶಗಳಲ್ಲಿನ ನೂರಾರು ಬೀದಿಬದಿ ಅಂಗಡಿಗಳು, ಬೀದಿ ವ್ಯಾಪಾರಿಗಳು ಮತ್ತು ಭಾರಿ ಬಾಡಿಗೆ ಪಾವತಿಸುವ MCD/NDMC-ಅನುಮೋದಿತ ಅಂಗಡಿಗಳ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಸಂಚಾರಗಳು ಬಹುತೇಕ ಪ್ರತಿದಿನವೂ ನಡೆಯುತ್ತವೆ; ವಿಶೇಷವಾಗಿ ಕಚೇರಿಗಳು ಮುಚ್ಚಿ ನೌಕರರು ಮನೆಗೆ ತೆರಳುವ ಸಂಜೆಯ ಗರಿಷ್ಠ ಸಂಚಾರದ ಅವಧಿಯಲ್ಲಿ. ಬೆಂಗಾವಲು ಪಡೆಗಳ ವಾಹನಗಳ ಸಾಲು ಹಾದುಹೋಗುವ ಮೊದಲು ಮತ್ತು ನಂತರ ದೀರ್ಘಕಾಲದವರೆಗೆ ಪಾದಚಾರಿಗಳಿಗೆ ಪಾದಚಾರಿ ಮಾರ್ಗಗಳನ್ನು ಬಳಸಲು ಅವಕಾಶವಿರುವುದಿಲ್ಲ. ರೇಸ್ ಕೋರ್ಸ್ ರಸ್ತೆ ಮತ್ತು ಕೃಷ್ಣ ಮೆನನ್ ಮಾರ್ಗ್‌ನಂತಹ ರಸ್ತೆಗಳು ಸೇರಿದಂತೆ ನಗರದ ಹಲವು ಸಾರ್ವಜನಿಕ ರಸ್ತೆಗಳು, ಆ ರಸ್ತೆಗಳ ನಿಜವಾದ ಮಾಲೀಕರಾದ ಜನಸಾಮಾನ್ಯರಿಗೆ ಶಾಶ್ವತವಾಗಿ ನಿರ್ಬಂಧಿಸಲ್ಪಟ್ಟಿವೆ. ದಿಲ್ಲಿ ಪೊಲೀಸ್ ಯಾರನ್ನು ‘ವಿಐಪಿ’ ಎಂದು ಪರಿಗಣಿಸಲಾಗುತ್ತದೆ ಎಂಬುದರ ಪಟ್ಟಿಯನ್ನೂ ನೀಡಿಲ್ಲ, ಅಥವಾ ಅಂತಹವರ ಸಂಚಾರದ ವೇಳೆ ಸಂಚಾರ ನಿರ್ಬಂಧಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನೂ ರೂಪಿಸಿಲ್ಲ.

ನಾಗರಿಕರ ಎರಡು ವರ್ಗಗಳಿವೆ. ಒಂದು ವರ್ಗವು ರಕ್ಷಿತವಾಗಿರುತ್ತದೆ; ಅವರಿಗಾಗಿ ರಸ್ತೆಗಳನ್ನು ತೆರವುಗೊಳಿಸಲಾಗುತ್ತದೆ ಮತ್ತು ನಗರವನ್ನೇ ಸ್ತಬ್ಧಗೊಳಿಸಲಾಗುತ್ತದೆ. ಮತ್ತೊಂದು ವರ್ಗವು ತನ್ನ ಜೀವನೋಪಾಯ ಮತ್ತು ಸಂಚಾರ ಸ್ವಾತಂತ್ರ್ಯವನ್ನು ಬಲಿಕೊಟ್ಟು ಅದರ ಬೆಲೆ ತೆರುತ್ತದೆ; ಸಾರ್ವಜನಿಕ ಸ್ಥಳವು ಅಧಿಕಾರಸ್ಥರಿಗೆ ಲಭ್ಯವಾಗುತ್ತದೆಯಾದರೂ, ಜನಸಾಮಾನ್ಯರಿಗೆ ಮಾತ್ರ ಅದು ಮುಚ್ಚಲ್ಪಟ್ಟಿರುತ್ತದೆ. ಈ ಬೆಂಗಾವಲು ಪಡೆಗಳಿಗೆ ರಸ್ತೆಗಳನ್ನು ತೆರವುಗೊಳಿಸುವ ದಿಲ್ಲಿ ಪೊಲೀಸರೇ, ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಜಂತರ್ ಮಂತರ್ ಪ್ರತಿಭಟನೆಯನ್ನು ತಡೆಯುತ್ತಾರೆ. ಯಾವ ತರ್ಕವು ಕಾರ್ಮಿಕರನ್ನು ಜಂತರ್ ಮಂತರ್‌ನಿಂದ ತಡೆಯುತ್ತದೆಯೋ, ಅದೇ ತರ್ಕವು ರಸ್ತೆಬದಿಯ ಅಂಗಡಿಕಾರರ ಅಂಗಡಿಯ ಬಾಗಿಲನ್ನೂ ಮುಚ್ಚಿಸುತ್ತದೆ.

ಇಲ್ಲಿಯವರೆಗೆ ನಮಗೆ ಒಂದು ‘ಜಂತರ್ ಮಂತರ್’ ಇತ್ತು; ಅದನ್ನೂ ಬಲವಂತವಾಗಿ ನಿರಾಕರಿಸಿದರೆ, ಕೇವಲ ನಗರಗಳಲ್ಲಿ ಮಾತ್ರವಲ್ಲದೆ ದೂರದ ಹಳ್ಳಿಗಳಲ್ಲೂ ಸಹ ಎರಡು, ಮೂರು ಅಥವಾ ನಾಲ್ಕು ‘ಜಂತರ್ ಮಂತರ್’ಗಳು ಸೃಷ್ಟಿಯಾಗಲಿವೆ.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವ ಕೂಗನ್ನು ಬ್ಯಾರಿಕೇಡ್‌ಗಳಿಂದಾಗಲಿ ಅಥವಾ ಸೆಕ್ಷನ್ 163 ರ ಆದೇಶಗಳಿಂದಾಗಲಿ ತಡೆಯಲು ಸಾಧ್ಯವಿಲ್ಲ. ಕೇವಲ ಭ್ರಷ್ಟ ಜ್ಞಾನೇಶ್ ಕುಮಾರ್‌ಗೆ ಮಾತ್ರವಲ್ಲದೆ, ಅವರ ಅಪರಾಧಿ ಯಜಮಾನರು ಹಾಗೂ ಪ್ರಜಾಪ್ರಭುತ್ವದ ಕಸಾಯಿಗಳಾದ ಮೋದಿ, ಶಾ ಮತ್ತು ಭಾಗವತ್ ತ್ರಿಮೂರ್ತಿಗಳಿಗೂ ಈಗ ಅಂತಿಮ ಕ್ಷಣಗಣನೆ ಆರಂಭವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *