ಬಿಡದಿ ಟೌನ್‌ಶಿಪ್‌: ನಾಲ್ಕು ಪ್ರಮುಖ ಹಕ್ಕೊತ್ತಾಯಗಳಿಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ

ಬೆಂಗಳೂರು: ಬಿಡದಿ ಸ್ಮಾರ್ಟ್‌ ಸಿಟಿ ಅಥವಾ ಟೌನ್‌ಶಿಪ್‌ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ವಿಧಾನಸೌಧ ಚಲೋ ಹೋರಾಟ ನಡೆಯಿತು. ಹೋರಾಟದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಡೆಸಿ, ರೈತರ ಪ್ರಮುಖ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಡದಿ

ಪ್ರತಿಭಟನೆಯಲ್ಲಿ ನಟ ಪ್ರಕಾಶ್‌ ರಾಜ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಚುಕ್ಕಿ ನಂಜುಂಡಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ್‌, ಬಡಗಲಪುರ ನಾಗೇಂದ್ರ, ನೂರ್‌ ಶ್ರೀಧರ್‌, ಎಸ್‌. ವರಲಕ್ಷ್ಮೀ, ಬಸವರಾಜಪ್ಪ, ಲಕ್ಷ್ಮಣ್‌ ಹೂಗಾರ್‌ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ಭಾಗವಹಿಸಿ ಬಿಡದಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹೋರಾಟದ ತೀವ್ರತೆಯನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆಗೆ ‘ಕೃಷ್ಣಾ’ ಗೃಹ ಕಚೇರಿಯಲ್ಲಿ ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬಿಡದಿ ಭಾಗದ ಸಣ್ಣ ಮತ್ತು ಮಧ್ಯಮ ರೈತರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದರು.

ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಸಿದ್ಧರಿಲ್ಲ. ಟೌನ್‌ಶಿಪ್‌ ಯೋಜನೆಯನ್ನು ರದ್ದುಗೊಳಿಸಿ ನಮ್ಮ ಬದುಕು ಮತ್ತು ಕೃಷಿಯನ್ನು ಉಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಹೋರಾಟದ ಮುಖಂಡರು, ಟೌನ್‌ಶಿಪ್‌ ಯೋಜನೆಯಿಂದ ಕೃಷಿ, ಪರಿಸರ ಮತ್ತು ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ನ್ಯಾಯಮೂರ್ತಿ ಗೋಪಾಲಗೌಡರ ನೇತೃತ್ವದ ಸಮಿತಿ ನಡೆಸಿದ ಸಾರ್ವಜನಿಕ ವಿಚಾರಣೆಯ ವರದಿ ಹಾಗೂ ಶೇ.80ಕ್ಕೂ ಹೆಚ್ಚು ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ಸಹಿ ಮಾಡಿರುವ ದಾಖಲೆಗಳಿರುವ ಕಡತವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ :ಬಿಡದಿ ಟೌನ್‌ಶಿಪ್‌ | ಕೋರ್ಟ್‌ ಅನುಮತಿ ಇಲ್ಲದೆ ಒಂದು ಇಟ್ಟಿಗೆಯೂ ಅಲುಗಿಸಬೇಡಿ, ಮರ ಕಡಿಯಬೇಡಿ: ಹೈಕೋರ್ಟ್‌

ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ

ರೈತರ ನಿಯೋಗವು ಸರ್ಕಾರದ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತು.

ಮೊದಲನೆಯದಾಗಿ, ಸರ್ಕಾರ ರಚಿಸುವ ಸಮಿತಿಯು ಯಾವುದೇ ರೀತಿಯ ಕಾಲಹರಣ ಮಾಡದೆ ಒಂದು ತಿಂಗಳ ನಿಗದಿತ ಅವಧಿಯೊಳಗೆ ತನ್ನ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.

ಎರಡನೆಯದಾಗಿ, ಸಮಿತಿಯಲ್ಲಿ ಪರಿಸರ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರಗಳ ತಜ್ಞರನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಮೂರನೆಯದಾಗಿ, ಸಮಿತಿಯ ಸದಸ್ಯರು ಬೆಂಗಳೂರಿನಲ್ಲೇ ಕುಳಿತು ವರದಿ ಸಿದ್ಧಪಡಿಸದೆ, ಬಿಡದಿ ಭಾಗದ ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ, ರೈತರೊಂದಿಗೆ ನೇರವಾಗಿ ಚರ್ಚಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ನಾಲ್ಕನೆಯದಾಗಿ, ಸಮಿತಿಯ ಅಂತಿಮ ವರದಿ ಸಲ್ಲಿಕೆಯಾಗಿ ಸಮಸ್ಯೆ ಇತ್ಯರ್ಥವಾಗುವವರೆಗೆ ಬಿಡದಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಸರ್ಕಾರ ಮುಂದುವರಿಸಬಾರದು ಎಂದು ರೈತರು ಆಗ್ರಹಿಸಿದರು.

ರೈತರ ಬೇಡಿಕೆಗಳಿಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ

ರೈತರ ನಾಲ್ಕು ಪ್ರಮುಖ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಸರ್ಕಾರದ ಸ್ಪಂದನೆಯನ್ನು ಸ್ವಾಗತಿಸಿರುವ ರೈತ ಮುಖಂಡರು, ತಮ್ಮ ಮೂಲ ಹೋರಾಟದ ಸ್ಥಳವಾದ ಬೈರಮಂಗಲದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಒಂದು ತಿಂಗಳ ಕಾಲಮಿತಿಯೊಳಗೆ ಸೂಕ್ತ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೆ ಮತ್ತೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಪ್ರಕಾಶ್‌ ರಾಜ್‌, ಚುಕ್ಕಿ ನಂಜುಂಡಸ್ವಾಮಿ, ಎಸ್‌.ಆರ್‌. ಹಿರೇಮಠ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ನೂರ್‌ ಶ್ರೀಧರ್‌, ಟಿ. ಯಶವಂತ, ಎಸ್‌. ವರಲಕ್ಷ್ಮೀ, ಬಸವರಾಜಪ್ಪ, ಲಕ್ಷ್ಮಣ್‌ ಹೂಗಾರ್‌ ಸೇರಿದಂತೆ ಹಲವು ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

ಇದನ್ನೂ ನೋಡಿ :ಉಚಿತ ಯುಪಿಐಗೆ ಶುಲ್ಕ ಬೀಳುತ್ತಾ? ಕಾರ್ಪೊರೇಟ್ ಲಾಭದ ಸಾಧನವಾಯ್ತೆ ಯುಪಿಐ? Janashakthi Media

Donate Janashakthi Media

Leave a Reply

Your email address will not be published. Required fields are marked *