ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಲಕ್ಷಣಗಳು

ಪ್ರಜಾತಂತ್ರವನ್ನು ವ್ಯಕ್ತಿನಿಷ್ಠ ಮೌಲ್ಯಗಳ ನೆಲೆಯಲ್ಲಿ ನಿಷ್ಕರ್ಷೆ ಮಾಡುವ ಸಮಯ ಬಂದಿದೆ
ನವಭಾರತ ವಿಕಸಿತ ಭಾರತ ಆಗುವ ಹಾದಿಯಲ್ಲಿ ಸಾಗುತ್ತಿರುವಾಗಲೇ ‘ವಿಕಾಸ’ ಎನ್ನುವ ಸುಂದರ ಪದ ನಾನಾ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ. 1947ರ ಸ್ವಾತಂತ್ರ್ಯದ ಕನಸುಗಳು ಹಾಗೂ 1950ರ ಗಣತಂತ್ರದ ಭ್ರಮೆ 2047ರ ವೇಳೆಗೆ ನನಸಾಗುವುದೋ ಅಥವಾ ಸಮಕಾಲೀನ ಚರಿತೆಯ ಕಲುಷಿತ ವಾತಾವರಣದಲ್ಲಿ ಆವಿಯಾಗಿಹೋಗುವುದೋ ಎಂಬ ಜಿಜ್ಞಾಸೆ ಕಾಡುತ್ತಿದೆ. ಗ್ರಾಂಥಿಕವಾಗಿ ಎಲ್ಲವೂ ಸುಂದರವಾಗಿ ಕಾಣುತ್ತಿವೆ. ಘೋಷಣೆಗಳಲ್ಲಿ ಆಶಾದಾಯಕವಾಗಿ ಕಾಣುತ್ತಿವೆ. ಆದರೆ ನೆಲದ ವಾಸ್ತವಗಳನ್ನು ಗಮನಿಸಿದಾಗ ಪ್ರಜಾಪ್ರಭುತ್ವ ತಳಮಟ್ಟದಿಂದಲೇ ಶಿಥಿಲವಾಗುತ್ತಿರುವುದು ಢಾಳಾಗಿ ಗೋಚರಿಸುತ್ತದೆ. ಈ ವ್ಯವಸ್ಥೆಯನ್ನು ಸಂರಕ್ಷಿಸಬೇಕಾದ ಸಂವಿಧಾನ ಸುರಕ್ಷಿತ ಕೈಗಳಲ್ಲಿ ಇಲ್ಲ ಎಂಬ ಆತಂಕ ಸಮಾಜಗಳನ್ನು ಕಾಡುತ್ತಿದೆ. ʼ ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವು ʼ ಸಾಮಾಜಿಕ ಹೋರಾಟಗಳ ಯುದ್ಧ ಘೋಷಣೆ (War Cry) ಆಗಿರುವುದು ಇದನ್ನೇ ಸೂಚಿಸುತ್ತದೆ.

– ನಾ ದಿವಾಕರ

ಸಾಂವಿಧಾನಿಕ ಸಂಸ್ಥೆಗಳು ಒಂದೊಂದಾಗಿ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಸಾರ್ವಭೌಮ ಜನತೆಯ ಭವಿಷ್ಯದ ಆಕಾಂಕ್ಷೆ-ಭರವಸೆಗಳು ಬತ್ತಿಹೋಗುತ್ತಿರುವಂತೆ ಭಾಸವಾಗುತ್ತದೆ. ಆದರೆ ಸಾಮಾನ್ಯವಾಗಿ ಹಾಗಾಗುವುದಿಲ್ಲ. ಚರಿತ್ರೆಯನ್ನು ಇಣುಕಿ ನೋಡಿದಾಗ, ತಳಸಮಾಜದ ಈ ಜನರ ನಿಟ್ಟುಸಿರು, ಹತಾಶೆ, ಆಕ್ರೋಶಗಳೇ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಪ್ರಸಂಗಗಳು ಕಾಣುತ್ತವೆ. ಈ ಆಶಯವನ್ನು ಎದೆಯಲ್ಲಿಟ್ಟುಕೊಂಡೇ ಭವಿಷ್ಯ ಭಾರತದ ಬಗ್ಗೆ ಹೊಸ ರೀತಿಯಲ್ಲಿ ಯೋಚನೆ ಮಾಡಬೇಕಿದೆ. ವರ್ತಮಾನ ಸಮಾಜದ ಗುರಿ ಮೂಲತಃ ಮಿಲೆನಿಯಂ ಜಗತ್ತಿನ (20-25ರ ವಯೋಮಾನದ ಸಮಾಜ)  ಕಡೆಗೆ ಇರಬೇಕಾದುದು ಸಹಜ. ಪ್ರಜಾಪ್ರಭುತ್ವ

ಆದರೆ ಕೊಂಚ ದೂರ ಯೋಚಿಸಿದಾಗ 2026ರಲ್ಲಿ ಜನಿಸುವ ಕೋಟ್ಯಂತರ ಮಕ್ಕಳು ಭಾರತ ವಿಕಾಸವಾಗುವ ಹೊತ್ತಿಗೆ, ಅಂದರೆ 2047ಕ್ಕೆ, ಮತದಾನದ ಹಕ್ಕು ಪಡೆದು ನಿರ್ಣಾಯಕ ಶಕ್ತಿ ಆಗಿರುತ್ತಾರೆ. ಈ ನವ ಯುಗದ ಚೇತನಗಳಿಗೆ ಅಗತ್ಯವಾಗಬಹುದಾದ ಜೀವನ ಮೌಲ್ಯಗಳ, ರಾಜಕೀಯ ಸಿದ್ಧಾಂತಗಳ, ಸಾಮಾಜಿಕ ತತ್ವಗಳ ಹಾಗೂ ಸಾಂಸ್ಕೃತಿಕ ಚಿಂತನೆಗಳ ಬೀಜಗಳನ್ನು ಈಗಲೇ ಬಿತ್ತಿದರೆ, ನಾವು ಕಲ್ಪಿಸುತ್ತಿರುವ ʼಸರ್ವಜನಾಂಗದ ಶಾಂತಿಯ ತೋಟ ʼದ ಹಸಿರು ಆ ವೇಳೆಗೆ ಹೊಂಗೆಯ ನೆರಳಿನಂತಾಗುತ್ತವೆ. ವರ್ತಮಾನದ ನಡಿಗೆಯಲ್ಲಿ ಹಿರಿಯ-ಕಿರಿಯ ಪೀಳಿಗೆ ಇಡುವ ಪ್ರತಿ ಹೆಜ್ಜೆಯೂ ಇಲ್ಲಿ ನಿರ್ಣಾಯಕವಾಗುತ್ತದೆ. ನಾವು ಪ್ರತಿಬಾರಿ ಎಡವಿದಾಗಲೂ 2047ರ ವಿಕಸಿತ ಭಾರತದ ಕಲ್ಪನೆ ನಮ್ಮನ್ನು ಜಾಗೃತಗೊಳಿಸಬೇಕಾಗುತ್ತದೆ. ಪ್ರಜಾಪ್ರಭುತ್ವ

ಇದನ್ನೂ ಓದಿ: ಕರ್ನಾಟಕದಿಂದ ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ

ಬಿತ್ತ ಬೀಜಗಳ ಫಲಾಫಲ

ನಾವಿಂದು ಬಿತ್ತನೆ ಮಾಡಬೇಕಾದ ಮೌಲ್ಯಗಳು ಎಂತಹವು ? ನಮ್ಮ ಮುಂದೆ ಸುಂದರ ಭವಿಷ್ಯ ಕಟ್ಟುವ ತಾತ್ವಿಕ ಚಿಂತನೆಗಳು, ಸೈದ್ದಾಂತಿಕ ಮಾದರಿಗಳು ಹೇರಳವಾಗಿವೆ. ಬುದ್ಧ, ಬಸವ, ಅಲ್ಲಮ, ಫುಲೆ, ಗಾಂಧಿ, ಅಂಬೇಡ್ಕರ್‌, ಲೋಹಿಯಾ, ಮಾರ್ಕ್ಸ್‌ ಹೀಗೆ ಚರಿತ್ರೆಯ ದಾರ್ಶನಿಕರನ್ನು ನಿತ್ಯ ಭಜಿಸುತ್ತಲೇ ವ್ಯವಸ್ಥೆಯನ್ನು ಸರಿಪಡಿಸುವ ಹೋರಾಟಗಳಲ್ಲಿ ನಿರತರಾಗಿದ್ದೇವೆ. ಹೀಗೆ ಭಜಿಸುತ್ತಲೇ ಧ್ಯಾನಸ್ಥ ಸ್ಥಿತಿ ತಲುಪಿರುವ ಸಮಾಜ ಒಂದು ಹಂತದಲ್ಲಿ ವರ್ತಮಾನಕ್ಕೆ ಕುರುಡಾಗಿಬಿಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಧೃತರಾಷ್ಟ್ರರಾದರೂ ಒಂದೇ, ಗಾಂಧಾರಿಗಳಾದರೂ ಒಂದೇ,  ನೆಲದ ವಾಸ್ತವಗಳು (Ground Realities) ನಮಗೆ ಕಾಣುವುದಿಲ್ಲ. ಈ ವಿಶಾಲ ದೃಷ್ಟಿಕೋನದಿಂದ (Broader view point) ಆತ್ಮವಿಮರ್ಶೆಯಲ್ಲಿ ತೊಡಗಿದಾಗ, ನಾವು ಅನುಸರಿಸುತ್ತಿರುವ ಮೌಲ್ಯಗಳನ್ನು ಮರುನಿರ್ವಚಿಸಿ, ಪುನರ್‌ ವ್ಯಾಖ್ಯಾನಿಸಿ ನಮ್ಮ ಆಲೋಚನೆಗಳನ್ನು ಮೊನಚುಗೊಳಿಸುವ ಅವಶ್ಯಕತೆ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವ

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಸಮಾಜಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಿರುವುದು ಈ ಮೌಲ್ಯಗಳ ನಿರ್ವಚನೆ ಮತ್ತು ಅನುಸರಣೆಯನ್ನು. ಅಧಿಕಾರ ರಾಜಕಾರಣದ ಆಕಾಂಕ್ಷಿಗಳನ್ನು ಹೊರಗಿಟ್ಟು ನೋಡಿದಾಗ ನಮಗೆ ಗೋಚರಿಸುವ ವಿಶಾಲ ಸಮಾಜದಲ್ಲಿ ಜೀವನ ಮೌಲ್ಯ, ಸಾಮಾಜಿಕ-ಸಾಂಸ್ಕೃತಿಕ ಮೌಲ್ಯ, ಸಾಂವಿಧಾನಿಕ ಮೌಲ್ಯ, ಆಡಳಿತಾತ್ಮಕ ಮೌಲ್ಯ ಹಾಗೂ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ವೈಯುಕ್ತಿಕ-ಸಾಮೂಹಿಕ ಮೌಲ್ಯಗಳು ಮುಖ್ಯವಾಗಿ ಕಾಣುತ್ತವೆ. ಇಲ್ಲಿ ವರ್ತಮಾನದ ಸಮಾಜ ಬಿತ್ತುವ ಪ್ರತಿಯೊಂದು ಬೀಜವೂ 2047ರ ವಿಕಸಿತ ಭಾರತದಲ್ಲಿ ಹೆಮ್ಮರವಾಗಿ ಬೆಳೆದಿರುತ್ತದೆ. ಈ ಬಿತ್ತನೆ ಕಾರ್ಯದಲ್ಲಿ ನಮಗೆ ಕಳೆ ಕೀಳುವ ಜವಾಬ್ದಾರಿಯಷ್ಟೇ ಅಲ್ಲದೆ, ಕಳೆದ ನಾಲ್ಕೈದು ದಶಕಗಳಲ್ಲಿ ದುಷ್ಟ ಶಕ್ತಿಗಳು ಬಿತ್ತಿರುವ ಮತದ್ವೇಷ, ಅಸೂಯೆ, ಮತ್ಸರ ಮತ್ತು ಪ್ರತ್ಯೇಕತಾವಾದದ (Seperatist) ವಿಷ ಬೀಜಗಳನ್ನೂ ಕಿತ್ತೆಸೆಯಬೇಕಿದೆ. ಪ್ರಜಾಪ್ರಭುತ್ವ

ಈ ದೃಷ್ಟಿಯಿಂದ ನಾವು ಸಮಷ್ಟಿಯೆಡೆಗೆ ನೋಡಿದಾಗ ಪ್ರಜಾಪ್ರಭುತ್ವದ ಮೌಲ್ಯಗಳು ಶಿಥಿಲವಾಗುತ್ತಿರುವುದಕ್ಕೆ ನಮ್ಮೊಳಗೇ ಇರುವ ಅರಿವಿನ ಕೊರತೆ ಅಥವಾ ಜ್ಞಾನದ ಅಹಮಿಕೆಯೇ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಕಳೆದ ಐವತ್ತು ವರ್ಷಗಳಿಂದಲೂ ಹಿರಿಯ ಪೀಳಿಗೆಯ ಬೌದ್ಧಿಕ ಸಂಕಥನಗಳಲ್ಲಿ ಜ್ಞಾನದ ಹಂಚಿಕೆಯಾಗಿದೆ, ಹೀಗೆ ಹಂಚಲ್ಪಟ್ಟ ಜ್ಞಾನ ಅರಿವಿನ ರೂಪ ಪಡೆದು, ಹನಿಹನಿಯಾಗಿ ತೊಟ್ಟಿಕ್ಕುತ್ತಾ, ಕಿರಿಯ ತಲೆಮಾರನ್ನು ತಲುಪುತ್ತದೆ ಎಂಬ ಭರವಸೆಯೊಡನೆ ನಡೆದುಬಂದಿದ್ದೇವೆ. ಆದರೆ ಹಿಂತಿರುಗಿ ನೋಡುವಾಗ ನಮ್ಮಲ್ಲಿ ಮೂಡುವ ಮಂದಹಾಸ ಮುಂದಿರುವ ದೃಶ್ಯದೆಡೆ ಹೊರಳಿದಾಗ ಮರೆಯಾಗಿಬಿಡುತ್ತದೆ. ಅಂದರೆ ನಮ್ಮ ಅರಿವಿನ ಬೇಸಾಯ ವ್ಯರ್ಥವಾಯಿತೆಂದು ಭಾವಿಸಬೇಕೇ ? ಅಥವಾ ನಮ್ಮ ಬಿತ್ತನೆಯ ಮಾದರಿಯೇ ಸರಿಯಿರಲಿಲ್ಲ ಎಂದು ಅರ್ಥೈಸಬೇಕೇ ?

ಚಹರೆಗೆ ಕನ್ನಡಿ ಹಿಡಿದು

ಎರಡೂ ಅಗತ್ಯವಿಲ್ಲ. ಇದು ಚರಿತ್ರೆಯಲ್ಲಿ ಕಂಡರಿಯದ ಅನುಭವ ಏನಲ್ಲ. ಎಲ್ಲ ಕಾಲಘಟ್ಟಗಳಲ್ಲೂ, ಎಲ್ಲ ದೇಶಗಳಲ್ಲೂ ಬೌದ್ಧಿಕ ಅಭ್ಯುದಯದ ಹಾದಿಯಲ್ಲಿ ಈ ವ್ಯತ್ಯಯವನ್ನು ಕಾಣುತ್ತಲೇ ಬಂದಿದ್ದೇವೆ. ಭಾರತದಲ್ಲಿ ಬೌದ್ಧಿಕತೆಯ ಕೊರತೆ (Paucity of Intellectualism) ಇಲ್ಲ ಆದರೆ ‘ಬೌದ್ಧಿಕ ದಾರಿದ್ರ್ಯ’ (Poverty of Intellectualism) ತುಸು ಹೆಚ್ಚಿದೆ. ಅಂದರೆ ನಾವು ಚರಿತ್ರೆಗೆ ಭೂತಗನ್ನಡಿ ಹಿಡಿದು ಮಾತನಾಡುತ್ತೇವೆ ವರ್ತಮಾನವನ್ನು ಬರಿಗಣ್ಣಿನಿಂದಲೂ ಗಮನಿಸುವುದಿಲ್ಲ. ಹಾಗೆ ನೋಡಿದರೂ ಸಹ ನಮ್ಮೊಳಗಿನ ಜಾತಿ, ಮತ, ಧರ್ಮ, ಭಾಷೆ ಅಡ್ಡಿಯಾಗುತ್ತದೆ ಅಥವಾ ನಾವು ಅನುಸರಿಸುವ ತತ್ವ, ಸಿದ್ದಾಂತ, ದಾರ್ಶನಿಕರ ಮಾರ್ಗಸೂಚಿಗಳು ತಡೆಯೊಡ್ಡುತ್ತವೆ. ಈ ಮಸೂರಗಳು ನಮ್ಮೊಳಗಿನ ಅರಿವನ್ನೂ, ರೂಢಿಸಿಕೊಂಡಿರುವ ಪ್ರಜ್ಞೆಯನ್ನೂ ಜಿಜ್ಞಾಸೆಗಳ ಕೂಪಕ್ಕೆ ತಳ್ಳಿಬಿಡುತ್ತವೆ. ಹೀಗಾಗಿ ನಮಗೆ ವಾಸ್ತವಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಪ್ರಜಾಪ್ರಭುತ್ವ

ಬೌದ್ಧಿಕ ಅಸ್ತಿತ್ವ ಮತ್ತು ಸಾಮಾಜಿಕ ಅಸ್ಮಿತೆಗಳೇ ಪ್ರಧಾನವಾಗಿರುವ ಸಮಾಜದಲ್ಲಿ ಇದು ಸಹಜ ಎಂದೇ ಭಾವಿಸಿದರೂ, ನಾವು ಅನುಸರಿಸುವ ದರ್ಶನಗಳು ಅಥವಾ ದೃಷ್ಟಿಕೋನಗಳನ್ನು ನಮ್ಮೊಳಗಿಳಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬ ಆತ್ಮಸಾಕ್ಷಿಯ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ನಡೆದು ಬಂದ ಪ್ರತಿಹೆಜ್ಜೆಯನ್ನೂ ಮರಳಿ ಮರಳಿ ನೆನಪಿಸಿಕೊಳ್ಳುವಾಗ, ಅಲ್ಲಿನ ಯಶಸ್ಸು, ಸಾಫಲ್ಯಗಳನ್ನು ಸಂಭ್ರಮಿಸುವಾಗ, ಎಡವಿದ ಕ್ಷಣಗಳನ್ನೂ, ಎಡವಲು ಕಾರಣವಾದ ಸನ್ನಿವೇಶಗಳನ್ನೂ ಹಾಗೂ ಕವಲುಗಳನ್ನು ಸೃಷ್ಟಸಿದ್ದ ತಪ್ಪು ತಿಳುವಳಿಕೆ/ಗ್ರಹಿಕೆಗಳನ್ನೂ ವಿಮರ್ಶೆಗೊಡ್ಡಬೇಕಲ್ಲವೇ ? ಈ ವಿಮರ್ಶಾತ್ಮಕ ಕಣ್ಣೋಟವನ್ನು ನಾವು ಕಳೆದುಕೊಂಡಿಲ್ಲ ಆದರೆ ಪ್ರಾಮಾಣಿಕವಾಗಿ ಪ್ರಯೋಗಿಸುತ್ತಿಲ್ಲ. 75 ವರ್ಷಗಳ, ವಿಶೇಷವಾಗಿ ಕಳೆದ ಐದು ದಶಕಗಳ ಎಲ್ಲ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಹೋರಾಟಗಳೂ, ಚಳುವಳಿಗಳೂ ಇದನ್ನು ಒಪ್ಪಬೇಕಿದೆ. ಪ್ರಜಾಪ್ರಭುತ್ವ

ಮೌಲ್ಯಗಳ ಇಂದು ನಾಳೆಗಳು 

ಡಾ ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯಪೂರ್ವದ ಎಲ್ಲ ಚಿಂತಕರೂ ಪ್ರತಿಪಾದಿಸಿದ ʻಒಳಗೊಳ್ಳುವಿಕೆ  (Inclusiveness) ಯನ್ನು ಆಚರಣಾತ್ಮಕವಾಗಿ ಗ್ರಹಿಸಿರುವ ನಮ್ಮ ಸಮಾಜ ಆಂತರಿಕವಾಗಿ ʼಹೊರಗಿಡುವಿಕೆಯನ್ನೇʼ (Exclusionary) ಅಳವಡಿಸಿಕೊಂಡಿರುವುದನ್ನು ನಾವು ಈಗಲಾದರೂ ಮನಗಾಣಬೇಕಿದೆ. ಇದನ್ನು ʼಮನುವಾದʼ ಎಂದು ಅಲಕ್ಷಿಸುವ ಬದಲು,  ಇಲ್ಲಿ ನಮಗೆ ಸಾಮಾಜಿಕ ಹೋರಾಟ ಮತ್ತು ಚರ್ಚೆಗಳನ್ನು ಬಹುಮಟ್ಟಿಗೆ ಆವರಿಸಿರುವ ʼ ಪ್ರಗತಿಪರ ʼ ಅಥವಾ ʼ ಪುರೋಗಾಮಿ ʼ (progressive) ಚಿಂತನಾ ಕ್ರಮಗಳು ಮುಖ್ಯವಾಗುತ್ತವೆ . ದೇಶದ ನರನಾಡಿಗಳಲ್ಲೂ ʻಪ್ರತಿಗಾಮಿ ʼ ಆಲೋಚನೆಗಳು ವ್ಯವಸ್ಥಿತವಾಗಿ ಪ್ರವಹಿಸುತ್ತಿರುವ ವರ್ತಮಾನದ ಸನ್ನಿವೇಶದಲ್ಲಿ ನಮ್ಮ ʼಪುರೋಗಾಮಿʼ ಚಿಂತನೆಗಳು, ಸಾಮಾಜಿಕ ನ್ಯಾಯಕ್ಕಾಗಿ, ಅನ್ಯಾಯದ ವಿರುದ್ಧ ಹೋರಾಡುವ, ದೌರ್ಜನ್ಯಗಳ ವಿರುದ್ಧ ಮಾತನಾಡುವ, ಅಸಮಾನತೆಯನ್ನು ವಿರೋಧಿಸುವ ಪ್ರತಿ ವ್ಯಕ್ತಿಯಲ್ಲೂ ಅಂತರೀಕರಣಗೊಳ್ಳುವುದು (Internalise) ಅತ್ಯವಶ್ಯ.

ʻಪ್ರಗತಿಪರʼ ಎಂಬ ವಿಶೇಷಣ ಕ್ಲೀಷೆಯಾಗುವ ಮಟ್ಟಿಗೆ ನಮ್ಮ ಹೋರಾಟಗಳಲ್ಲಿ ಬಳಕೆಯಾಗಿಬಿಟ್ಟಿದೆ. ಒಂದು ನೆಲೆಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ಅಸ್ಮಿತೆಗಳ ಅನುಕೂಲಕ್ಕೆ ತಕ್ಕಂತೆ ಬಳಸಬಹುದಾದ ಪದವೂ ಆಗಿದೆ. ಸಮಾಜದ-ದೇಶದ ಸರ್ವತೋಮುಖ-ಸರ್ವಾಂಗೀಣ ‘ಪ್ರಗತಿ’ ಬಯಸುವ ಮನಸ್ಸುಗಳಲ್ಲಿರಬೇಕಾದ ಪಾರದರ್ಶಕತೆ,  ಸ್ವ-ವಿಮರ್ಶೆ ಮತ್ತು ʻಗುರಿ ನಿಷ್ಠೆ ʼ, ಸಾಂಘಿಕ-ಸಾಂಸ್ಥಿಕ ಆವರಣಗಳಲ್ಲಿ ಸದ್ದಿಲ್ಲದೆ ಕರಗಿಹೋಗುತ್ತದೆ. ಇದಕ್ಕೆ ಸಂಘಟನೆಗಳು ಸೃಷ್ಟಿಸಿಕೊಂಡಿರುವ ಸೈದ್ದಾಂತಿಕ ಅಸ್ಮಿತೆಗಳು ಮತ್ತು ಇದನ್ನು ಕಾಪಾಡಲು ಅವಶ್ಯವಾದ ಅಸ್ತಿತ್ವದ ರಕ್ಷಣೆ ಮೂಲ ಕಾರಣವಾಗುತ್ತದೆ. ಚಿಹ್ನೆ, ಬಾವುಟ, ಬ್ಯಾನರ್‌ ಇತ್ಯಾದಿಗಳು ಈ ಜಿಜ್ಞಾಸೆಯನ್ನು ಬಿಂಬಿಸುವ ಪ್ರಧಾನ ಸಾರ್ವಜನಿಕ ಅಭಿವ್ಯಕ್ತಿಗಳು. ಪ್ರಜಾಪ್ರಭುತ್ವ

ಭಾರತದ ಸಂದರ್ಭದಲ್ಲಿ ಎಡಪಕ್ಷಗಳನ್ನೂ ಒಳಗೊಂಡಂತೆ, ಕಾರ್ಮಿಕ ಸಂಘಗಳು, ಸಾಂಸ್ಕೃತಿಕ ಸಂಘಟನೆಗಳು, ದಲಿತ ಚಳುವಳಿಗಳು, ಅಹಿಂದ ಮುಂತಾದ ಜಾತಿ ಗುಂಪುಗಳು , ಅಪವಾದವಾದರೂ ಮಹಿಳಾ ಚಳುವಳಿಗಳೂ ಸಹ ಈ ಜಿಜ್ಞಾಸೆಗಳಿಂದ ಹೊರಬರಲು ಸಾಧ್ಯವಾಗಿಲ್ಲ. ಇಲ್ಲಿ ಸೃಷ್ಟಿಯಾಗುವ ʼಅಸ್ಮಿತೆಯ ಬಿಕ್ಕಟ್ಟು (Identity Crisis) ಚಳುವಳಿಗಳ ವಿಘಟನೆಗೆ ಕಾರಣವಾಗುವುದಷ್ಟೇ ಅಲ್ಲದೆ, ರೂಪಾಂತರಗೊಂಡ ಹೊಸ ಸಂಘಟನೆಗಳ ಹುಟ್ಟಿಗೂ ಕಾರಣವಾಗುತ್ತದೆ. ಇಲ್ಲಿ ʼ ಗುರಿನಿಷ್ಠೆ ʼ ಗಿಂತಲೂ ವ್ಯಕ್ತಿನಿಷ್ಠೆ ಮುಖ್ಯವಾಗುತ್ತದೆ. ಸ್ವ-ವಿಮರ್ಶೆ ಇಲ್ಲವಾಗುತ್ತದೆ. ಪಾರದರ್ಶಕತೆ ಹೆಸರಿಲ್ಲದಂತಾಗುತ್ತದೆ. ಈ ವೈಪರೀತ್ಯಗಳೇ ಎಂತಹ ವಿನಾಶಕಾರಿ ಸಂದರ್ಭದಲ್ಲೂ ಐಕ್ಯತೆಯನ್ನು ಆಗುಮಾಡದ ತಡೆಗೋಡೆಗಳಾಗಿ ಪರಿಣಮಿಸುತ್ತವೆ. ‘ಪ್ರಗತಿಪರ’ ಎಂದು ಗುರುತಿಸಲ್ಪಡುವ ಯಾವುದೇ ವ್ಯಕ್ತಿ-ಸಂಘಟನೆಗಳಲ್ಲಿ ಈ ವೈಪರೀತ್ಯಗಳನ್ನು ಇಲ್ಲವಾಗಿಸುವುದು ಈ ಹೊತ್ತಿನ ತುರ್ತು. ಪ್ರಜಾಪ್ರಭುತ್ವ

ಪ್ರಗತಿಪರ ಲಕ್ಷಣಗಳ ಒಳನೋಟ

ಈ ದೃಷ್ಟಿಯಿಂದ ನೋಡಿದಾಗ ಪ್ರಗತಿಪರ ಸಂಘಟನೆಗಳು ಮತ್ತು ಅವುಗಳನ್ನು ಪ್ರತಿನಿಧಿಸುವ ಸಾಮಾಜಿಕ ಹೋರಾಟಗಾರರು-ಕಾರ್ಯಕರ್ತರು ಹಲವು ಮೌಲ್ಯಗಳನ್ನು ಸ್ವತಃ ವಿಧಿಸಿಕೊಳ್ಳಬೇಕು. ಇದರಲ್ಲಿ ಕೆಲವನ್ನು ವ್ಯಕ್ತಿಗತ ನೆಲೆಯಲ್ಲಿ ಇನ್ನು ಕೆಲವನ್ನು ಸಾಂಘಿಕ ನೆಲೆಯಲ್ಲಿ ಅಂತರೀಕರಣಕ್ಕೊಳಗಾಗಬೇಕಾದ (Internalise) ಮೌಲ್ಯಗಳಾಗಿ ಪರಿಗಣಿಸಬೇಕು. ವೈಯುಕ್ತಿಕವಾಗಿ ನಾವು ಅಳವಡಿಸಿಕೊಳ್ಳುವ ಮೌಲ್ಯಗಳು ಸಾಂಘಿಕ ನೆಲೆಯಲ್ಲಿ ಕಾಣದೆ ಹೋದಾಗ ಅದನ್ನು ಸಮಾಲೋಚನೆಯ ಮೂಲಕ ಸರಿಪಡಿಸುವ ವ್ಯವಧಾನವನ್ನು ರೂಢಿಸಿಕೊಳ್ಳಬೇಕು. ಈ ರೀತಿಯ ಸಲಹೆ, ಸೂಚನೆಗಳನ್ನು ವ್ಯಕ್ತಿಗತವಾಗಿ ಶ್ರೇಣೀಕರಿಸದೆ (Ranking), ವರ್ಗೀಕರಿಸದೆ (Categorise) ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಪ್ರಾಮಾಣಿಕತೆಯನ್ನು ಸಂಘಟನೆಗಳೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಮೌಲ್ಯಗಳು ಆಳಕ್ಕಿಳಿಯಲು ಸಾಧ್ಯವಾದೀತು. ಪ್ರಜಾಪ್ರಭುತ್ವ

ಇಂತಹ ಕೆಲವು ಅನುಕರಣೀಯ ಮೌಲ್ಯಗಳನ್ನು ಹೀಗೆ ನಿರ್ವಚಿಸಬಹುದು :

1. ಸಂಘಟನೆಯ ಒಳಗೆ ನಡೆಯುವ ಸಂವಾದಗಳಲ್ಲಿ ಜ್ಞಾನ ಹಂಚಿಕೆಯ (Sharing of Knowledge) ಮನೋಭಾವವನ್ನು ತೊರೆದು ಅಭಿಪ್ರಾಯ/ಅನುಭವದ ಹಂಚಿಕೆಯನ್ನು ಅಳವಡಿಸಿಕೊಳ್ಳಬೇಕು. ಆಗ ಆಂತರಿಕವಾಗಿ ಅನುಭಸ್ಥರು ಹೊಸಬರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಇಲ್ಲಿ ಹಿರಿತನದ ಅಹಮಿಕೆಯನ್ನು ಬದಿಗಿಟ್ಟು ಸಮಾನ ಮನಸ್ಕ ವಾತಾವರಣವನ್ನು ಸೃಷ್ಟಿಸುವುದು ಅತ್ಯವಶ್ಯ. ನಾಯಕತ್ವವನ್ನು ಶ್ರೇಣೀಕರಣಗೊಳಿಸದೆ (Heirarchical leadership) ಪಾಲ್ಗೊಳ್ಳುವಿಕೆಯ ನೆಲೆಯಲ್ಲಿ ನಿರ್ವಹಿಸುವುದು ನಿರ್ಣಾಯಕವಾಗುತ್ತದೆ. ಆಗ ಯುವ ಮನಸ್ಸುಗಳು ಮುಕ್ತ ಸಂವಾದದಲ್ಲಿ ತೊಡಗುತ್ತವೆ.

2. ಸಂಘಟನೆಗಳಲ್ಲಿ ಆಂತರಿಕವಾಗಿ ನಡೆಯುವ ಚರ್ಚೆಗಳು ವೇದಿಕೆಯಿಂದ ಸಭಾಂಗಣಕ್ಕೆ ರವಾನೆಯಾಗುವ ಮಾಹಿತಿ/ಜ್ಞಾನಕ್ಕೆ ಸೀಮಿತವಾಗಬಾರದು. ಇದು ಅದಲು ಬದಲಾಗಬೇಕು. ಸಮಾಜದ ತಳಮಟ್ಟದಿಂದ ಬರುವ ಯುವ ಜನಾಂಗದ ಅನುಭವಗಳು ಮತ್ತು ಗೊಂದಲಗಳು ಮುಖ್ಯ ಚರ್ಚೆಯ ವಿಷಯವಾಗಬೇಕು. ಅಲ್ಲಿ ಮೂಡುವಂತಹ ಅರಿವು ಸಂಘಟನೆಗೆ ತಾತ್ವಿಕ ಬಲವನ್ನು ಹೆಚ್ಚಿಸುತ್ತದೆ. ಅಧ್ಯಯನ ಶಿಬಿರಗಳಲ್ಲಿ ಈ ಮಾದರಿಯನ್ನು ಅಳವಡಿಸಬೇಕು.

3. ಪ್ರಗತಿಪರ ಎಂಬ ಪದವೇ ಸಮಾಜವನ್ನು ಎಲ್ಲ ಆಯಾಮಗಳಲ್ಲೂ ಮುಂದಕ್ಕೆ ಕರೆದೊಯ್ಯುವ ಒಂದು ವಿಶೇಷಣ. ಹೀಗಾಗಿ ಸಾಮಾಜಿಕ ಹೋರಾಟಗಳಲ್ಲಿ ಈ ಪದವನ್ನು ಬಳಸುವ ಮುನ್ನ ವ್ಯಕ್ತಿಗತವಾಗಿ ನಮ್ಮೊಳಗೆ ವಿಚಾರವಾದದ ಅರಿವು, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಇದೆಯೇ ಎಂಬ ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಇಲ್ಲಿ ನಮಗೆ ಚಾರಿತ್ರಿಕ ದಾರ್ಶನಿಕರ, ಅತೀತ ಶಕ್ತಿಗಳ ಆರಾಧನೆ ಮುಖ್ಯ ತೊಡಕಾಗಿ ಕಾಣುತ್ತದೆ. ತಾರ್ಕಿಕ ನೆಲೆಯಲ್ಲಿ ವಿಚಾರವಾದವನ್ನು ಅಳವಡಿಸಿಕೊಳ್ಳದಿದ್ದರೆ ಅದು ಘೋಷಣೆಯಾಗಿಬಿಡುವ ಸಂಭವವೇ ಹೆಚ್ಚು.

4. ಸಾಮಾಜಿಕ ನೆಲೆಯಲ್ಲಿ ಪ್ರಗತಿಪರತೆ ಕಾಣುವುದು ಒಳಗೊಳ್ಳುವಿಕೆಯ (Inclusiveness) ಮತ್ತು ಪ್ರಾತಿನಿಧಿತ್ವದ (Representitive) ಅನುಸರಣೆಯಲ್ಲಿ. ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯ ಮುಖ್ಯವಾಗುತ್ತದೆ. ಸಂಘಟನೆಗಳ ನಿರ್ವಹಣೆಯಲ್ಲಿ ಮೇಲ್ಪದರದ ಶ್ರೇಣೀಕೃತ ಸ್ಥಾನಗಳಲ್ಲಿ ಮತ್ತು ನಿರ್ಣಾಯಕ ಸ್ತರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇರುವುದು ಪ್ರಗತಿಪರ ಲಕ್ಷಣಗಳಲ್ಲಿ ಪ್ರಧಾನವಾದುದು. ಇಂದು ನಾವು ಎದುರಿಸುತ್ತಿರುವ ಕೊರತೆಗಳಲ್ಲಿ ಇದು ಪ್ರಮುಖವಾದುದು.

5. ಸಂಘಟನೆ, ಪಕ್ಷಗಳು ತಮ್ಮನ್ನು ಪ್ರಗತಿಪರ ಎಂದು ಬಿಂಬಿಸಿಕೊಳ್ಳುವ ಮುನ್ನ, ಆಂತರಿಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ನಾಯಕತ್ವ, ಏಕವ್ಯಕ್ತಿ ನಾಯಕತ್ವ ಅಥವಾ ಪ್ರಭಾವಳಿ ನಾಯಕತ್ವಗಳನ್ನು ಕೊನೆಗೊಳಿಸಬೇಕು. ಆಂತರಿಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳದ ಯಾವುದೇ ಪಕ್ಷ, ಸಂಘಟನೆ, ಕಾರ್ಮಿಕ ಸಂಘಗಳು ʼ ಪ್ರಗತಿಪರ ʼ ಎನಿಸಿಕೊಳ್ಳುವುದಿಲ್ಲ. ಭಾರತದಲ್ಲಿ ಬಹುಶಃ ಈ ಕೊರತೆ ಇಲ್ಲದ ಗುಂಪುಗಳೇ ಇಲ್ಲ. ಆದರೂ ನಮ್ಮ ʼ ಪ್ರಗತಿಪರʼ ದನಿಗಳು ಗಟ್ಟಿಯಾಗಿವೆ. ಏಕೆಂದರೆ ತಳಸಮಾಜದಲ್ಲೂ ಈ ಅರಿವನ್ನು ನಾವು ಮೂಡಿಸಿಲ್ಲ. ದಲಿತ ಸಂಘಟನೆಗಳು, ಎಡಪಕ್ಷಗಳು ಇದನ್ನು ಮುಖ್ಯವಾಗಿ ಗಮನಿಸಬೇಕು.

6. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಸದಾ ಗೌರವಿಸುವ ʼ ಪ್ರಗತಿಪರ ʼ ಚಿಂತನೆಗಳಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಆಲೋಚನಾ ಕ್ರಮ ಇರಲೇಬೇಕು. ಭಿನ್ನ ತತ್ವ ಸಿದ್ಧಾಂತಗಳು ಸಾಂಘಿಕ ನೆಲೆಯಲ್ಲಿ ಸಹಜವಾದರೂ ಈ ʼ ಭಿನ್ನತೆ ʼ ಪ್ರತ್ಯೇಕೀಕರಣಕ್ಕೆ (Sectarian) ಅಥವಾ ಅನ್ಯ (Other) ಭಾವನೆಯನ್ನು ಮೂಡಿಸುವುದಕ್ಕೆ ಕಾರಣವಾಗಕೂಡದು. ಸಮಾನ ಗುರಿ ಇರುವಾಗ ಮಾರ್ಗ ಭಿನ್ನವಾದರೂ ದೃಷ್ಟಿ ಒಂದಾಗಿರಬೇಕು. ಭಾರತದಲ್ಲಿ ಸಾಂಘಿಕ ವಿಘಟನೆಗೆ ಈ ದೃಷ್ಟಿ ಇಲ್ಲದಿರುವುದೇ ಸಮಸ್ಯೆ.

7. ನಾವು ನಂಬುವ ತತ್ವ ಸಿದ್ದಾಂತಗಳ ಅನುಸರಣೆ, ಅನುಕರಣೆ ಮತ್ತು ಒಳಗಿಳಿಸಿಕೊಳ್ಳುವಿಕೆಯಲ್ಲಿ ಬದ್ಧತೆ ಗ್ರಾಂಥಿಕವಾಗಿ ಮಾತ್ರ ಇದ್ದರೆ ಅದು ತೋರಿಕೆಯ ರೂಪ ಪಡೆದುಕೊಳ್ಳುತ್ತದೆ. ಆಚರಣಾತ್ಮಕವಾಗಿ ಅಳವಡಿಸಿಕೊಂಡಾಗ ತಳಸಮಾಜಕ್ಕೆ ತಲುಪುವ ಹೆದ್ದಾರಿಯಾಗುತ್ತದೆ. ಇಲ್ಲಿ ಎದುರಾಗುವ ಸಮಾನ ಚಿಂತನೆಗಳನ್ನು ಒಪ್ಪದಿದ್ದರೂ, ಜೊತೆಗೂಡಿ ನಡೆಯುವ ವ್ಯವಧಾನವನ್ನು ಬೆಳೆಸಿಕೊಳ್ಳುವುದು ಪ್ರಗತಿಪರ ಲಕ್ಷಣಗಳಲ್ಲೊಂದು. ಪ್ರತಿಗಾಮಿ ಚಿಂತನೆಗಳನ್ನು ನೇರವಾಗಿ ತಿರಸ್ಕರಿಸುವುದೂ ಅಷ್ಟೇ ಮುಖ್ಯ.

8. ಪ್ರಗತಿಪರರಲ್ಲಿ ಮುಖ್ಯವಾಗಿ ಇರಬೇಕಾದ್ದು ವಿಚಾರವಾದ ಮತ್ತು ವೈಜ್ಞಾನಿಕ ಚಿಂತನೆ. ಭಾರತದ ಸಂದರ್ಭದಲ್ಲಿ ಇದನ್ನು ಭಿನ್ನವಾಗಿ ನೋಡಬೇಕಾಗುತ್ತದೆ. ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಗಳನ್ನೇ ಅನುಸರಿಸುವ ನಮ್ಮ ಸಾಮಾಜಿಕ ಪರಿಸರದಲ್ಲಿ ಪ್ರಗತಿಪರ ಚಿಂತೆನಗಳನ್ನು ಬಿತ್ತಬೇಕಾದರೆ ಸಾಂಪ್ರದಾಯಿಕ ಮೌಲ್ಯಗಳಾದ ಪಿತೃಪ್ರಧಾನತೆ, ಊಳಿಗಮಾನ್ಯತೆ ಮತ್ತು ಮೌಢ್ಯಾಚರಣೆಗಳನ್ನು ಕೊನೆಗೊಳಿಸಬೇಕು. ಲಿಂಗ ಸೂಕ್ಷ್ಮತೆಯನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸನ್ಮಾನಗಳು, ಜನ್ಮ ದಿನಾಚರಣೆಗಳು, ಅಭಿನಂದನೆಯ ಹೆಸರಿನಲ್ಲಿ ನಡೆಯುವ ವ್ಯಕ್ತಿ ವೈಭವೀಕರಣ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಸಲಾಗುವ ಆಚರಣೆಗಳು ಪ್ರಗತಿಪರ ಮನಸ್ಸುಗಳನ್ನು ಭ್ರಷ್ಟಗೊಳಿಸುತ್ತವೆ. ಇದನ್ನು ನಿವಾರಿಸಬೇಕಿದೆ.

9. ಕೊನೆಯದಾಗಿ ಪ್ರಗತಿ ಎಂಬ ಪದವೇ ಮುಂಗಾಣ್ಕೆಯ ಸೂಚಕ. ಇದು ಬೌದ್ಧಿಕವಾಗಿಯೂ ನಮ್ಮನ್ನು ಪ್ರಚೋದಿಸಬೇಕು. ಹೋರಾಟ ಚಳುವಳಿಗಳಲ್ಲಿ, ಸಾರ್ವಜನಿಕ ಸಂವಾದ, ಚರ್ಚೆಗಳಲ್ಲಿ ಈ ಮುಂಗಾಣ್ಕೆ ಇಲ್ಲದೆ ಹೋದರೆ ʼ ಸಿದ್ಧಮಾದರಿಗಳು ʼ ನಮ್ಮನ್ನು ಕಟ್ಟಿಹಾಕುತ್ತವೆ. 50 ವರ್ಷಗಳ ಹಳೆಯ ಮಾದರಿಗಳನ್ನು ಮಿಲೆನಿಯಂ ಮನಸ್ಸುಗಳ ಮೇಲೆ ಹೇರಿದರೆ, ಯುವ ಜನಾಂಗ ಹೋರಾಟಗಳಿಗೆ ವಿಮುಖವಾಗುತ್ತದೆ. ಡಿಜಿಟಲ್‌ ಯುಗಕ್ಕೆ ಅನ್ವಯವಾಗುವ ಬೌದ್ಧಿಕ ಮಾದರಿಗಳನ್ನು, ಚಟುವಟಿಕೆಗಳನ್ನು ರೂಪಿಸುವುದು ನಮ್ಮ ಆದ್ಯತೆಯಾಗಬೇಕಿದೆ.

ʼಪ್ರಗತಿಪರ ಸಂಘಟನೆಗಳು ʼ ಎಂಬ ವಿಶಾಲ ಹಂದರದಲ್ಲಿ ಒಟ್ಟುಗೂಡುವ ಸಂಘ ಸಂಸ್ಥೆಗಳು, ಸಂಘಟನೆಗಳು, ಪಕ್ಷಗಳು ಮತ್ತು ಸೈದ್ಧಾಂತಿಕ ಗುಂಪುಗಳು ತಾವು ಪ್ರತಿನಿಧಿಸುವ ಜನರ ಮತ್ತು ಸಮಾಜಗಳ ಜೀವನ ವಿಧಾನಗಳನ್ನು ಗಮನಿಸುತ್ತಿರಬೇಕು. ಅಲ್ಲಿ ಇರಬಹುದಾದ ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸುವ ಪ್ರಯತ್ನ ನಿರಂತರವಾಗಿ ಇರಬೇಕು. ಸಾಮಾಜಿಕ ಬಹಿಷ್ಕಾರ ಹೇರುವ, ಅಸ್ಪೃಶ್ಯತೆಯನ್ನು ಆಚರಿಸುವ, ಲಿಂಗ ತಾರತಮ್ಯವನ್ನು ಅನುಸರಿಸುವ ಹಿಂದುಳಿದ/ಮುಂದುವರೆದ/ದಲಿತ ಸಂಘಟನೆಗಳೂ ಕೆಲವೊಮ್ಮೆ ಈ ಆವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಆಗ ಇಡೀ ಪ್ರಗತಿಪರ ಅಥವಾ ಪುರೋಗಾಮಿ ಚಳುವಳಿಗಳು ಸತ್ವಹೀನವಾಗತೊಡಗುತ್ತವೆ.

ಮುಂಗಾಣ್ಕೆಯ ಹಾದಿ

ಪ್ರಸ್ತುತ ಸಂದರ್ಭದಲ್ಲಿ ಹಿಂದುತ್ವ/ಬಿಜೆಪಿ/ಆರೆಸ್ಸೆಸ್‌ ವಿರೋಧಿ ಧೋರಣೆಯನ್ನೇ ʼ ಪ್ರಗತಿಪರ ʼ ಎಂದು ನಿರ್ವಚಿಸುವುದನ್ನೂ ಗಮನಿಸಬಹುದು. ಆದರೆ ಈ ಚಿಂತನೆಗಳ ನಡುವೆಯೇ ಅನ್ಯ ಕೋಮುಗಳಲ್ಲಿ, ಸಮಾಜಗಳಲ್ಲಿ ಇರಬಹುದಾದ ಧಾರ್ಮಿಕ ಮೂಲಭೂತವಾದ, ಅಂಧಾನುಕರಣೆ, ಮೌಢ್ಯಾಚರಣೆಗಳನ್ನು, ಲಿಂಗ ತಾರತಮ್ಯಗಳನ್ನು ಸಹ ವಿರೋಧಿಸುವ ದಾರ್ಷ್ಟ್ಯ ನಮ್ಮಲ್ಲಿರಬೇಕು. ಪ್ರಗತಿಪರ-ಪುರೋಗಾಮಿ ಆಲೋಚನಾ ಕ್ರಮಗಳು ರಾಜಕೀಯ ಚೌಕಟ್ಟುಗಳಿಂದ ಹೊರನಿಂತು ವಿಶಾಲ ಸಮಾಜದ ಕಡೆ ನೋಡುವಂತಾಗಬೇಕು. ಏಕೆಂದರೆ ಪ್ರಗತಿ ಆಗಬೇಕಿರುವುದು ಸಮಾಜದಲ್ಲೇ ಹೊರತು ಸಂಘಟನೆಗಳಲ್ಲಿ ಅಲ್ಲ. ಈ ಸಮಾಜವನ್ನು ಪ್ರತಿನಿಧಿಸುವ ಶೋಷಿತ, ಅವಕಾಶವಂಚಿತ ಜನರು    ʼ ಪ್ರಗತಿಪರರ ʼ ಕಡೆ ನೋಡುವಾಗ ಅಲ್ಲಿ ವಿಮೋಚನೆಯ ಕನಸು ಮೂಡಿರುತ್ತದೆ.

ಸಮಾನತೆ, ಸ್ವಾತಂತ್ರ್ಯ, ಬಂಧುತ್ವ ಮತ್ತು ಬಹುತ್ವವನ್ನು ಸಾಕಾರಗೊಳಿಸುವ ಒಂದು ಸುಂದರ ಸಮಾಜದ ಕನಸು ಅವರಲ್ಲಿರುತ್ತದೆ. ಈ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ನಮಗೆ ದಾರ್ಶನಿಕರು ಮಾರ್ಗಸೂಚಿಗಳನ್ನು ಬಿಟ್ಟುಹೋಗಿದ್ದಾರೆ. ವಿಪರ್ಯಾಸವೆಂದರೆ ನಾವು ಅವರ ನಡುವೆಯೇ ಗೋಡೆಗಳನ್ನು ಕಟ್ಟಿದ್ದೇವೆ. ಅವರನ್ನು ಸ್ಥಾವರಗಳಲ್ಲಿ ಬಂಧಿಸಿ ಪ್ರತಿಮೆಗಳನ್ನಾಗಿಸಿದ್ದೇವೆ. ಈಗ ಆರಾಧಿಸಲಾರಂಭಿಸಿದ್ದೇವೆ. ಇದು ದಾರ್ಶನಿಕರನ್ನು ಪ್ರಶ್ನಾತೀತರಾಗಿಸುವ ಒಂದು ದುಷ್ಟ ಪ್ರವೃತ್ತಿ. ಚರಿತ್ರೆ ಮತ್ತು ಚಾರಿತ್ರಿಕ ವ್ಯಕ್ತಿ-ದರ್ಶನಗಳ ಪ್ರಶ್ನಾತೀತತೆ ನಮ್ಮ ಮುಂಗಾಣ್ಕೆಯನ್ನು ನಾಶಪಡಿಸುವುದೇ ಅಲ್ಲದೆ, ಮುನ್ನಡೆಯ ಹಾದಿಗಳಲ್ಲಿ ಬೇಲಿಗಳನ್ನು ಸೃಷ್ಟಿಸುತ್ತದೆ.

ಈ ಎಚ್ಚರದೊಂದಿಗೇ ನಾವು ನವ ಭಾರತದ ಮಿಲೆನಿಯಂ ಸಮಾಜಕ್ಕೆ ಮತ್ತು 2047ರ ವಿಕಸಿತ ಭಾರತದ ಯುವ ಜನಾಂಗಕ್ಕೆ ಒಂದು ಆದರಣೀಯ ಮಾದರಿಯನ್ನು ಕಟ್ಟಿಕೊಡಬೇಕಿದೆ. “ಕಟ್ಟುವೆವು ನಾವು ಹೊಸ ನಾಡೊಂದನು “ ಎಂದು ವರ್ಷಗಟ್ಟಲೆ ಹಾಡಿದ್ದಾಯಿತು, “ ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ “ ಎಂದು ಹಾಡುತ್ತಲೇ ಇದ್ದೇವೆ. ಆದರೆ ಏನನ್ನೂ ಕಟ್ಟಲಾರಂಭಿಸಿಲ್ಲ. ಆದರೆ ಅನಿವಾರ್ಯವಾಗಿ ಹೊಸ ಸಮಾಜವೊಂದನ್ನು ಕಟ್ಟಲೇಬೇಕಿದೆ. ಸಾಮೂಹಿಕ ಪ್ರಯತ್ನದೊಂದಿಗೆ ಇಟ್ಟಿಗೆಗಳನ್ನು ಜೋಡಿಸಬೇಕಿದೆ. ಮೊದಲ ಇಟ್ಟಿಗೆಗಿಂತಲೂ ಕೊನೆಯ ಇಟ್ಟಿಗೆ ನಮ್ಮ ಗುರಿಯಾಗಬೇಕು. ಆಗ ʼ ನಾವು ಪ್ರಗತಿಪರರು ʼ ಎಂದು ಬೆನ್ನುತಟ್ಟಿಕೊಳ್ಳಬಹುದು.

ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್‌ಟಿಎ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *