2,823 ಎಕರೆ ಭೂಸ್ವಾಧೀನ ವಿರೋಧಿಸಿ ‘ವಿಧಾನಸೌಧ ಚಲೋ’; ರೈತರ ಬೈಕ್ ರ‍್ಯಾಲಿ ತಡೆದ ಪೊಲೀಸರು

ಚಿಕ್ಕಬಳ್ಳಾಪುರ: ಕೈಗಾರಿಕಾ ಯೋಜನೆಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ವಿಧಾನಸೌಧ ಚಲೋ’ ಬೈಕ್ ರ‍್ಯಾಲಿಯನ್ನು ಪೊಲೀಸರು ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಅನಕನೂರು ಸಮೀಪ ತಡೆದರು. 2,823 ಎಕರೆ 

ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಸುಮಾರು 2,823 ಎಕರೆ ಭೂಮಿಯನ್ನು ಕೈಗಾರಿಕಾ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ರೈತರು ಬೈಕ್ ರ‍್ಯಾಲಿ ಮೂಲಕ ಬೆಂಗಳೂರಿನ ವಿಧಾನಸೌಧಕ್ಕೆ ತೆರಳಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು.

ಆದರೆ ಅನಕನೂರು ಬಳಿ ಪೊಲೀಸರು ರ‍್ಯಾಲಿಯನ್ನು ತಡೆದು ಪ್ರತಿಭಟನಾಕಾರರನ್ನು ಮುಂದೆ ಸಾಗದಂತೆ ತಡೆದರು. ಈ ವೇಳೆ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಹಾಸನ | ಅಂತರ್ಜಾತಿ ವಿವಾಹಿತರಿಗೆ 11.90 ಕೋಟಿ ರೂ. ಪ್ರೋತ್ಸಾಹಧನ ವಿತರಿಸದ ಸರ್ಕಾರ: ಡಿಎಚ್‌ಎಸ್ ಆಕ್ರೋಶ

ಹೋರಾಟಗಾರರ ಪ್ರಕಾರ, ಪ್ರಸ್ತಾವಿತ ಯೋಜನೆಯಿಂದ ಸಾವಿರಾರು ರೈತ ಕುಟುಂಬಗಳು ತಮ್ಮ ಕೃಷಿಭೂಮಿ ಕಳೆದುಕೊಳ್ಳಲಿದ್ದು, ಜೀವನೋಪಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ರೈತರ ಒಪ್ಪಿಗೆ ಪಡೆಯದೆ ಹಾಗೂ ಸಮರ್ಪಕ ಸಮಾಲೋಚನೆ ನಡೆಸದೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರೈತ ಸಂಘದ ಮುಖಂಡರು, ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿಭೂಮಿಯನ್ನು ಕಸಿದುಕೊಳ್ಳುವುದು ಸರಿಯಲ್ಲ. ಸರ್ಕಾರ ತಕ್ಷಣ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆದು ರೈತರೊಂದಿಗೆ ನೇರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ನಡುವೆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಭೂಸ್ವಾಧೀನ ವಿರೋಧಿ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌,   ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ,  ರೈತ ಮುಖಂಡರಾದ ಆನಂದ್ ಪಟೇಲ್ ಮತ್ತು ರಾಮನಾಥ್ ಹೋರಾಟದ ನೇತೃತ್ವ ವಹಿಸಿದ್ದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್‌ ಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ನೋಡಿ : ಸಾಮಾಜಿಕ ನ್ಯಾಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ – ಕೆ.ನೀಲಾ Janashakthi Media

Donate Janashakthi Media

Leave a Reply

Your email address will not be published. Required fields are marked *