ವಿಶ್ವ ರಂಗಭೂಮಿ ದಿನ | ರಂಗಭೂಮಿ ಮತ್ತು ಕಾಲದ ಸವಾಲುಗಳು: ಯುದ್ಧ, ತಂತ್ರಜ್ಞಾನ, ಮಾನವತೆ”

ರಂಗಭೂಮಿಯ ನಿಜವಾದ ಗುರುಗಳನ್ನು ಬಹಳ ಸುಲಭವಾಗಿ ವೇದಿಕೆಯಿಂದ ದೂರದಲ್ಲಿ ಕಾಣಬಹುದು. ಮತ್ತು ಇವರಿಗೆ ಚಾಲ್ತಿಯಲ್ಲಿರುವ ರಂಗ ಕ್ರಮಗಳನ್ನು, ರಂಗ ಪದ್ಧತಿಗಳನ್ನು, ನಕಲು ಮಾಡುವ ಅಥವಾ ಹಳಸಿ ಹೋದ ಮಾತುಗಳನ್ನು ಪುನಃ ಪುನಃ ಹೇಳುವಂತಹ ಯಾಂತ್ರಿಕ ರಂಗಭೂಮಿಯಲ್ಲಿ ಸಾಮಾನ್ಯವಾಗಿ ಆಸಕ್ತಿ ಇರುವುದಿಲ್ಲ. ರಂಗಭೂಮಿಯಿಂದ ಅಥವಾ ರಂಗಮಂದಿರದಿಂದ ಒಂದಲ್ಲ ಒಂದು ಜಗತ್ತನ್ನು ಅನುಕರಣೆ ಮಾಡಬೇಕೆಂದು  ಕಾತರಿಸುತ್ತಿರುವ ಅಸಂಖ್ಯಾತ ಜನರನ್ನು ದಾಟಿ ನಿಜ ರಂಗಭೂಮಿ ಮಿಡಿಯುತ್ತಿರುವ ಮೂಲವನ್ನು ಅದರ ಜೀವಂತ ತರಂಗಗಳನ್ನು ಅವರು ಹುಡುಕಾಟ ನಡೆಸಿ ಹಿಡಿದು ತರುತ್ತಾರೆ. ವಿಶ್ವ

– ಐಕೆ ಬೋಲ್ವಾರ್

ಈಗಲೂ ನಾವೆಲ್ಲ ಪ್ರೇಕ್ಷಕರ ಜೊತೆಯಲ್ಲಿ ತೆರೆದುಕೊಳ್ಳುವ ವಸ್ತುವನ್ನು ಅಥವಾ ಅದನ್ನೇ ಅವಲಂಬಿಸಿರುವ ಜಗತ್ತನ್ನು ಹೊಸತಾಗಿ ಸೇವಿಸುವ ಬದಲು ಯತಾವತ್ ನಕಲು ಮಾಡುತ್ತಿದ್ದೇವೆ. ಆದರೆ ಬಾಹ್ಯ ರೂಪದಲ್ಲಿ ವಾಸ್ತವವಾಗಿ ತುಂಬಿಕೊಂಡಿರುವ ಭಾವಗಳನ್ನು, ಭಾವೋದ್ರೇಕಗಳನ್ನು ಬಹಿರಂಗಗೊಳಿಸಲು ರಂಗಭೂಮಿಯಷ್ಟು ಸಶಕ್ತವಾದ ಮತ್ತು ಅನೂಹ್ಯವಾದ ದಾರಿ ಬೇರೊಂದಿಲ್ಲ. ವಿಶ್ವ

ಈ ಸಾಲುಗಳನ್ನು ಹೇಳಿರುವವರು ಪೋಲೆಂಡಿನ ರಂಗ ನಿರ್ದೇಶಕ ಕ್ರಜಿಸ್ಟಾಫ್ ವಾರ್ಲಿಕಾವಸ್ಕಿ

ಸಂದರ್ಭ : 2015ರ ಮಾರ್ಚ್ 27ರಂದು ಜಗತ್ತಿನಾದ್ಯಂತ ವಿಶ್ವ ರಂಗಭೂಮಿ ದಿನ ಆಚರಿಸುವ ರಂಗಭೂಮಿಯ ನಟ ನಟಿಯರಿಗೆ, ನಿರ್ದೇಶಕರಿಗೆ, ರಂಗಕರ್ಮಿಗಳಿಗೆ, ಪ್ರೇಕ್ಷಕರಿಗೆ ಮತ್ತು ವಿಶ್ವದ ಎಲ್ಲ ಜನರಿಗೂ ರಂಗ ಸಂದೇಶದ ನೆಪದಲ್ಲಿ ಕರೆ ನೀಡಿದರು.

ವಿಶ್ವ ರಂಗಭೂಮಿ ದಿನಾಚರಣೆ ಯಾಕಾಗಿ ಆರಂಭವಾಯಿತು? ಆ ದಿನ ನೀಡಲಾಗುವ ರಂಗ ಸಂದೇಶದ ಮಹತ್ವವೇನು? ಇದನ್ನು ಜಗತ್ತಿನ ಎಲ್ಲ ದೇಶಗಳ ಎಲ್ಲ ಊರುಗಳಲ್ಲಿಯೂ ಯಾಕೆ ಆಚರಿಸಬೇಕು? ಎಂಬುದಕ್ಕೆ ದಂತಕತೆಯ ಮಾದರಿಯ ಐತಿಹಾಸಿಕ ದಾಖಲೆಯನ್ನು ಹೇಳಬೇಕು.

ವಿಶ್ವ ರಂಗಭೂಮಿ ದಿನಾಚರಣೆ ಪ್ರತಿ ವರ್ಷವೂ ಮಾರ್ಚ್ 27ರಂದು ನಡೆಸಲಾಗುತ್ತದೆ. ಆ ದಿನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ರಂಗಭೂಮಿಯ ಮೂಲಕ ನಾವು ಏನೇನನ್ನು ಹೇಳಬಹುದು? ಎಂದು ಚರ್ಚಿಸುತ್ತಾರೆ. ಚಿಂತನೆ ನಡೆಸುತ್ತಾರೆ. ನಾಟಕಗಳನ್ನು ಪ್ರದರ್ಶಿಸುತ್ತಾರೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಲಾಲು ಪ್ರಸಾದ್ ಯಾದವ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಉಪನ್ಯಾಸಗಳನ್ನು, ವಿಚಾರ ಸಂಕಿರಣಗಳನ್ನು, ಉತ್ಸವಗಳನ್ನು ನಡೆಸುತ್ತಾರೆ .ಪ್ರಮುಖವಾಗಿ ಆ ವರ್ಷದಲ್ಲಿ ಆಯ್ಕೆಯಾದ ಜಗತ್ತಿನ ಪ್ರಮುಖ ರಂಗ ಕರ್ಮಿಯೊಬ್ಬರು ನೀಡಿರುವ ರಂಗ ಸಂದೇಶವನ್ನು ಸೇರಿರುವ ಪ್ರೇಕ್ಷಕರ ಸಮ್ಮುಖದಲ್ಲಿ ವಾಚಿಸುತ್ತಾರೆ, ಮತ್ತು ಚರ್ಚಿಸುತ್ತಾರೆ.

ರಂಗಭೂಮಿ ಆರಂಭವಾದ ದಿನದಿಂದಲೂ ಈ ಬಗೆಯ ಆಚರಣೆ ನಡೆದುಬಂದಿದೆಯೇ?ಎಂದು ಪ್ರಶ್ನಿಸಿದರೆ ಹಾಗೇನೂ ಇರಲಿಲ್ಲ. ಇತ್ತೀಚೆಗೆ ಅಂದರೆ 1948ರಲ್ಲಿ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾದ ಯುನೆಸ್ಕೋ ಒಂದು ಸ್ವಾಯತ್ತವಾದ ವೃತ್ತಿಪರವಾದ ಅಂತರಾಷ್ಟ್ರೀಯ ರಂಗಸಂಸ್ಥೆಯೊಂದನ್ನು ಪ್ರಾರಂಭಿಸಿತು. ಅದನ್ನು ಇಂಟರ್ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ ಎಂದು ಕರೆಯಲಾಗುತ್ತದೆ, (ITI).

1961ರಲ್ಲಿ ಹಲ್ಸಂಕಿಯಲ್ಲಿ ನಡೆದ ಅಂತರಾಷ್ಟ್ರೀಯ ಥೇಟರ್ ಕಾಂಗ್ರೆಸ್ ರಂಗಸಮ್ಮೇಳನದ ಸಂದರ್ಭದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸುವ ವಿಷಯ ಪ್ರಸ್ತಾಪವಾಯಿತು. ಈ ಪ್ರಸ್ತಾವನೆಗೆ ವ್ಯಾಪಕ ಬೆಂಬಲ ಒದಗಿ ಬಂದು ಅದರ ಮುಂದಿನ ವರ್ಷದಿಂದ ಅಂದರೆ 1962ರಿಂದ ಪ್ರತಿ ವರ್ಷ ಮಾರ್ಚ್ 27ರಂದು ಈ ರಂಗ ದಿನಾಚರಣೆಯನ್ನು ಜಗತ್ತಿನಾದ್ಯಂತ ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಜಾಗತಿಕ ರಂಗಭೂಮಿಯಲ್ಲಿ ವಿಶೇಷ ಹೆಸರು ಮಾಡಿರುವ ನಾಟಕಕಾರ, ರಂಗ ನಿರ್ದೇಶಕ, ಅಥವಾ ರಂಗಕರ್ಮಿ ಒಬ್ಬರಿಂದ ಸಂದೇಶವನ್ನು ಆಹ್ವಾನಿಸಿ ಬಿಡುಗಡೆ ಮಾಡಲಾಗುತ್ತದೆ. ವಿಶ್ವಾದ್ಯಂತ ಜನರು ಅದನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ. ಬೇರೆ ಬೇರೆ ದೇಶಗಳ ಜನರು ಅದನ್ನು ತಮ್ಮ ಸ್ಥಳೀಯ ಭಾಷೆಗಳಿಗೆ ತರ್ಜುಮೆ ಮಾಡಿಕೊಂಡು ಹಂಚುತ್ತಾರೆ. ವಾಚಿಸುತ್ತಾರೆ. ಸಂಭ್ರಮಿಸುತ್ತಾರೆ ಮತ್ತು ಚರ್ಚಿಸುತ್ತಾರೆ.

ಈತನಕ 60 ಕ್ಕೂ ಹೆಚ್ಚಿನ ಮಹಾನ್ ನಾಟಕಕಾರರು, ಹೆಸರಾಂತ ರಂಗ ನಿರ್ದೇಶಕರು, ನೊಬೆಲ್ ಪ್ರಶಸ್ತಿ ವಿಜೇತರು, ಈ ರಂಗ ಸಂದೇಶಗಳನ್ನು ನೀಡಿದ್ದಾರೆ .ಜಗತ್ತೇ ಗೌರವಿಸುವ ಪೀಟರ್ ಬ್ರೂಕ್, ಆರ್ಥರ್ ಮಿಲ್ಲರ್,  ಪಾಬ್ಲೊ ನೆರೂದ, ಯೂಜಿನ್ ಅಯನೆಸ್ಕೋ,  ವೋಲೆ ಸೋಯೆಂಕಾ, ರಸ್ಕಿನ್ ಬಾಂಡ್, ಆಗಸ್ಟೋ ಬೋಲ್, ಆರಿಯಾನ್ ಮುಷ್ಕಿನ್, ದಾರಿಯೋಫೋ, ವಿಲ್ ಯೆಮ್ ಡೆಫೋ- ಮುಂತಾದವರು ಸರದಿಯಲ್ಲಿ ತಾವು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇವೆ. ಎನ್ನುವಂತೆ ರಂಗ ಸಂದೇಶಗಳನ್ನುನೀಡಿದ್ದಾರೆ.

ಜಗತ್ತು ಕೂಡ ಅದನ್ನು ಬಹಳ ಪ್ರೀತಿಯಿಂದ ಸ್ವೀಕಾರ ಮಾಡಿದೆ.

ಇಲ್ಲಿ ಉಲ್ಲೇಖ ಮಾಡಿರುವ ಅಷ್ಟೂ ಮಂದಿ ನಾಟಕಕಾರರು ರಂಗ ನಿರ್ದೇಶಕರು ಭಾರತೀಯ ರಂಗಭೂಮಿಯೊಂದಿಗೆ ನಿಕಟ ಸಂಪರ್ಕ ಇದ್ದವರು. ಭಾರತದ ಜನಪದ ರಂಗಭೂಮಿಯ ಅಧ್ಯಯನಕ್ಕಾಗಿ ಭೇಟಿ ನೀಡಿದವರು ಆಗಿದ್ದಾರೆ. ಇವರೆಲ್ಲರ ನಾಟಕಗಳು ಭಾರತೀಯ ಭಾಷೆಗಳಿಗೆ ಅನುವಾದ ಗೊಂಡು ಜನ ಮೆಚ್ಚಿಗೆ ಗಳಿಸಿದೆ. ಕನ್ನಡದಲ್ಲಿ ಇವರ ನಾಟಕಗಳು ತರ್ಜುಮೆಗೊಂಡು ಪ್ರದರ್ಶಿಸಲ್ಪಟ್ಟಿವೆ.

ಇವರೆಲ್ಲರೂ ಜಾಗತಿಕ ಆಗುಹೋಗುಗಳಿಗೆ ತಮ್ಮ ಅಭಿಪ್ರಾಯಗಳನ್ನು ರಂಗಭೂಮಿಯ ಪ್ರಯೋಗಗಳ ಮೂಲಕ ತಿಳಿಸುತ್ತಾ ಬಂದವರು. ನಾಟಕ ವೆಂದರೆ ಪಾತ್ರಗಳ ನಡುವಣ ತವಕ- ತಲ್ಲಣಗಳು, ನಾಡಿನಲ್ಲಿ ನಡೆಯುವ ಸಂಘರ್ಷದ ಬದುಕನ್ನು ವಿಸ್ತಾರವಾಗಿ ನಿರೂಪಿಸುತ್ತಾ ಶಾಂತಿಯ ಬದುಕಿಗೆ ಹಂಬಲಿಸುವವರು.

ಇಂತಹ ಮಹತ್ವದ ರಂಗ ಸಂದೇಶವನ್ನು ನೀಡುವ ಅವಕಾಶ ಭಾರತೀಯರ ಪಾಲಿಗೆ ಬಂದಿಲ್ಲವೇ? ಎಂದು ಪ್ರಶ್ನಿಸುವುದಾದರೆ ವಿಶ್ವ ರಂಗಭೂಮಿ ದಿನದ ರಂಗ ಸಂದೇಶವನ್ನು ನಾಡಿನಾದ್ಯಂತ ಪರಿಚಯಿಸುವ ಕೆಲಸ ಆರಂಭವಾದ 40 ವರ್ಷಗಳ ಬಳಿಕ ಅಂದರೆ

2002ರಲ್ಲಿ ಆ ಅವಕಾಶ ಕನ್ನಡದ ಪ್ರಸಿದ್ಧ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗಿರೀಶ್ ಕಾರ್ನಾಡರಿಗೆ ಪ್ರಾಪ್ತವಾಗುತ್ತದೆ.

2002 ರ ಸಂದರ್ಭದಲ್ಲಿ ಕಾರ್ನಾಡರು ನೀಡಿರುವ ರಂಗ ಸಂದೇಶದಲ್ಲಿ ಮುಖ್ಯವಾಗಿ ಅಡಕವಾದದ್ದು ಕ್ರಿಸ್ತ ಪೂರ್ವ ಮೂರನೆಯ ಶತಮಾನದಷ್ಟು ಹಿಂದಿನದಾದ ರಂಗಭೂಮಿ ಕುರಿತ ಜಗತ್ತಿನ ಮೊಟ್ಟ ಮೊದಲ ಗ್ರಂಥಗಳಲ್ಲೊಂದಾದ *ಭರತನ ನಾಟ್ಯ ಶಾಸ್ತ್ರವನ್ನು ಕುರಿತು*

ಕಾರ್ನಾಡರು ನಾಟ್ಯ ಶಾಸ್ತ್ರವನ್ನು ವಿಶ್ಲೇಷಿಸುತ್ತ ರಂಗಭೂಮಿಯಲ್ಲಿ ಈಗ ನಡೆಯುತ್ತಿರುವ ಅನಿಶ್ಚಿತತೆಯ ಕುರಿತು ನಾಟಕಗಳು ನಿರೂಪಿಸುವ ಕೋಲಾಹಲ ಹಾಗೂ ಹಿಂಸಾಚಾರದ ಕುರಿತು ಉಲ್ಲೇಖಿಸುತ್ತಾರೆ.

ಆ ಬಳಿಕ ಭಾರತೀಯರಿಗೆ ರಂಗ ಸಂದೇಶ ನೀಡುವ ಅವಕಾಶ ಬಂದಿರುವುದು 2018ರಲ್ಲಿ.

ರಾಷ್ಟ್ರೀಯ ನಾಟಕ ಶಾಲೆ NSD ನವದೆಹಲಿಯ ನಿರ್ದೇಶಕರಾಗಿದ್ದ ರಾಮ್ ಗೋಪಾಲ್ ಬಜಾಜ್ ರವರು ತಮ್ಮ ರಂಗ ಸಂದೇಶವನ್ನು ನೀಡಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಇಂದಿನ ಲೌಕಿಕವಾದ ಬದುಕಿನಲ್ಲಿ ಒಬ್ಬ ಕಲಾವಿದನಲ್ಲಿ ಅಂತರ್ಗತವಾಗಿರುವ ಕಲೆ, ಅಭಿವ್ಯಕ್ತಿಯ ಒಳಗಿನ ಕಲಾತ್ಮಕ ವಿಚಾರಗಳು,  ಪ್ರಾಥಮಿಕ ಶಾಲಾ ಮಕ್ಕಳಿಗೆ ಅವರ ಶಿಕ್ಷಣದ ಮೂಲಕ ಸಿಗಬೇಕಾಗಿದೆ. ಅಂತಹದ್ದೊಂದು ಪೀಳಿಗೆ ಮಾತ್ರ ಸದಾಚಾರದ ಬದುಕಿನ ಬಗ್ಗೆ ಸೂಕ್ಷ್ಮಗ್ರಾಹಿ ಆಗಬಲ್ಲುದು. ಸಂವೇದನಾಶೀಲವಾಗಬಲ್ಲುದು ಎಂದು ಹೇಳಿದ್ದಾರೆ.

ಜಗತ್ತಿನ ಕೆಲವು ಪ್ರಮುಖ ರಂಗಕರ್ಮಿಗಳ ಸಂದೇಶಗಳನ್ನು ಆಲಿಸಿ.

ಅನ ತೊಲಿ ವಸಲೇವ್ (ರಷ್ಯಾ)2016

ಯಂತ್ರೋಪಕರಣಗಳನ್ನು ದೂರ ತಳ್ಳಿರಿ ನೇರವಾಗಿ ರಂಗಮಂದಿರಕ್ಕೆ ನಡೆಯಿರಿ ಸಾಲಾದ ಆಸನಗಳಲ್ಲಿ ಕುಳಿತುಕೊಳ್ಳಿರಿ

ಮಾತುಗಳನ್ನು ಆಲಿಸಿರಿ

ಮತ್ತು ಜೀವಂತ ಆಕಾರಗಳನ್ನು ನೋಡಿ ಅರ್ಥೈಸಿಕೊಳ್ಳಿರಿ ನಿಮ್ಮೆದುರಿಗೇ ನಿಂತಿದೆ ರಂಗಭೂಮಿ

ಪವಿತ್ರ ರಂಗ ಭೂಮಿ

ಎಳ್ಳಷ್ಟೂ ಅಲಕ್ಷ್ಯ ನಿರ್ಲಕ್ಷ್ಯ ಮಾಡಬೇಡಿರಿ

ರಂಗ ಭೂಮಿಯಲ್ಲಿ ಭಾಗಿಯಾಗುವ ಒಂದೇ ಒಂದು ಅವಕಾಶವನ್ನು ತಪ್ಪಿಸಿಕೊಳ್ಳಬೇಡಿರಿ

ಇದು ನಮ್ಮೆಲ್ಲರ ಒತ್ತಡದ ಬದುಕಿನಲ್ಲಿ ನಮ್ಮ ವಿಚಾರಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಇರುವ ಅತ್ಯಮೂಲ್ಯ ಅವಕಾಶವಾಗಿದೆ.

ಇಸಾಬೆಲ್ಲೇ ಹಾಪರ್ಟ್ [ ಫ್ರಾನ್ಸ್ ] 2018

ರಂಗಭೂಮಿ ಎಂದರೆ ಅದು ಪರಸ್ಪರ ನಡೆಸುವ ಸಂಭಾಷಣೆ.

ಅದು ದ್ವೇಷದ ಗೈರು ಹಾಜರಿಯಾಗಿದೆ. ಅದು ಜನರ ನಡುವಿನ ಮಿತ್ರತ್ವವನ್ನು ಬಯಸುತ್ತದೆ.

ರಂಗಭೂಮಿ ನಮ್ಮನ್ನು ರಕ್ಷಿಸುತ್ತದೆ. ಅದು ನಮಗೆ ಆಶ್ರಯ ನೀಡುತ್ತದೆ. ಹಾಗಾಗಿ ಎಲ್ಲರೂ ರಂಗಭೂಮಿಗೆ ದಾರಿ ಕೊಡಿ.

ಶಾಹಿದ್ ನಾದೀಮ್ (ಪಾಕಿಸ್ತಾನ) 2020

ನಾನು ಮೂಲತ ಹಲವಾರು ಮಿಲಿಟರಿ ಸರ್ವಾಧಿಕಾರಿಗಳ ಆಡಳಿತಕ್ಕೆ ಸಾಕ್ಷಿಯಾದವನು. ಭಯಾನಕವಾದ ಧಾರ್ಮಿಕ ಮೂಲಭೂತವಾದ ದಿಂದ ತತ್ತರಿಸುತ್ತಿರುವ ಭೀಭತ್ಸ, ಉಗ್ರಗಾಮಿ ಪ್ರತಿಪಾದಕರಿರುವ ಧಾರ್ಮಿಕ ಕಟ್ಟುಪಾಡುಗಳುಳ್ಳ ಮುಸ್ಲಿಂ ರಾಷ್ಟ್ರದ ಪ್ರಜೆ ನಾನು.

ಯಾವ ದೇಶದೊಂದಿಗೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಹಂಚಿಕೊಂಡಿದ್ದೇವೆಯೋ ಅಂತಹ ಭಾರತ ವೆಂಬ ನೆರೆ ರಾಷ್ಟ್ರದೊಂದಿಗೆ ಮೂರು ಬಾರಿ ಭಾರೀ ಯುದ್ಧ ನಡೆದಾಗ, ಅದರ ಕಷ್ಟ ದುಃಖಗಳನ್ನು ಸಮೀಪದಿಂದ ಕಂಡವರು ನಾವು. ಇಂದಿಗೂ ಕೂಡ ನಮ್ಮ ನೆರೆದೇಶಗಳೊಂದಿಗೆ ಸದಾ ಯುದ್ಧವೆಂಬ ಉನ್ಮಾದದ ಕರಿನೆರಳಲ್ಲಿ ಅದರಲ್ಲೂ ಪರಮಾಣುಗಳನ್ನು ಅಸ್ತ್ರಗಳನ್ನು ಸಂಗ್ರಹಿಸಿ ಆತಂಕದಲ್ಲಿ ಮುಳುಗಿದ್ದೇವೆ.

ಹಾಗಿದ್ದರೂ ನಾವು ತಮಾಷೆಗಾಗಿ ಹೇಳುವುದುಂಟು.

ಎಲ್ಲರಿಗೂ ಕಷ್ಟ ಬಂದಾಗ ಅದು ರಂಗಭೂಮಿಯವರಿಗೆ ಒಳ್ಳೆಯ ಕಾಲ ಎಂಬುದಾಗಿ. ಅದಕ್ಕಾಗಿಯೇ ಆಡು ಮಾತು ಬಂದಿರುವುದು

ಸಂಕಷ್ಟದ ಸಮಯ ಎನ್ನುವುದು ರಂಗಭೂಮಿ ಚಟುವಟಿಕೆಗಳಿಗೆ ಸುಸಂದರ್ಭದ ಅವಕಾಶ ಕಾಲ ಎಂಬುದಾಗಿ.

ಇಂಥ ಸಂದರ್ಭದಲ್ಲಿ ಯಾವುದೇ ಹಿಂಜರಿಕೆಗಳು ಇರುವುದಿಲ್ಲ. ರಂಗಪ್ರಸ್ತುತಿಯಲ್ಲಿ ಯಾವುದೇ ಸಂದಿಗ್ದತೆಗಳು ಇರುವುದಿಲ್ಲ.

ಪೀಟರ್ ಸೆಲ್ಲಾರ್ಸ್ (USA) 2022

ಇಂದಿನವರ್ತಮಾನ ಪತ್ರಿಕೆಗಳು ಸುದ್ದಿ ಮಾಧ್ಯಮಗಳು ಎಷ್ಟು ಅವ್ಯವಸ್ಥಿತವಾಗಿದೆ ಎಂದರೆ ನಾವು ಹೇಗೆ ಜೀವಿಸಬಲ್ಲೆವೊ ಅದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಕಾರ್ಯೋನ್ಮುಖವಾಗಿವೆ.

ನಮ್ಮ ಜನರಾಡುವ ಭಾಷೆಗಳು ಎಲ್ಲಿವೆ?

ನಾವು ಚಲಿಸುತ್ತಿರುವ ಚಲನೆಗಳಾದರೂ ಎಂಥವು?

ಒಂದು ಶುದ್ಧ ಪರಿಸರ ಜನ್ಯ ವ್ಯವಸ್ಥೆ, ಒಂದು ಸ್ನೇಹ ಸಮಯ ವಾತಾವರಣ ಅಥವಾ ಅಪರಿಚಿತ ಆಗಸದಲ್ಲಿ ಮೂಡಿಬರುವ ಬೆಳಕಿನ ಗುಣಮಟ್ಟವನ್ನು ಅರಿತುಕೊಳ್ಳುವ ವಿಧಾನಗಳು ಏನಾದರೂ ಇದೆಯೇ?

ನಮ್ಮ ಮನಸ್ಸುಗಳು  ನಮ್ಮ ಸಂವೇದನೆಗಳು ಮತ್ತು ನಮ್ಮ ಗಾಢವಾದ ಉಲ್ಲಾಸಗಳಿಗಾಗಿ ಇರುವ ಸಮಯ ಇದಾಗಿದೆ.

ಹಾಗಾಗಿ ನಮ್ಮ ಚರಿತ್ರೆ ಕಲಿಸಿದ ಪಾಠಗಳನ್ನು ಮತ್ತು ನಮ್ಮ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಒಂಟಿಯಾಗಿ ಕೆಲಸ ಮಾಡ ಬಯಸುವ ಜನರಿಂದ ಈ ಕೆಲಸ ಸಾಧ್ಯವಿಲ್ಲದಿರುವುದರಿಂದ, ಇವೆಲ್ಲವನ್ನು ನಾವು ಒಟ್ಟಾಗಿ ಮಾಡಬೇಕಾಗಿದೆ.

ಅಂತಹ ಕೆಲಸವನ್ನು ಒಟ್ಟಾಗಿ ಮಾಡಲು ರಂಗಭೂಮಿಗೆ ನೀಡಿರುವ ಪ್ರೀತಿಯ ಆಹ್ವಾನ ಎಂದು ತಿಳಿಯಬೇಕಾಗಿದೆ.

ಸಮೀಹಾ ಅಯೌಬ್  [ಈಜಿಪ್ಟ್] 2023

ರಂಗಭೂಮಿ ಎನ್ನುವುದು ಮಾನವೀಯ ಜೀವನದ ನಿಜ ದರ್ಶನದ ಒಂದು ಮೂಲಭೂತ ಅಸ್ತಿತ್ವ .

ನೀವು ಪಾದಗಳಿಗೆ ಮಣ್ಣನ್ನು ಮೆಟ್ಟಿಕೊಂಡು ರಂಗಭೂಮಿಗೆ ಕಾಲಿಡಬೇಡಿರಿ.

ನಿಮ್ಮ ಕಾಲುಗಳಿಗೆ ಅಂಟಿರುವ ಧೂಳು ಮಣ್ಣನ್ನು ಹೊರಗೆ

ಕೊಡವಿ ಶುಚಿಯಾಗಿ ಬನ್ನಿರಿ.

ಅಂತೆಯೇ ನಿಮ್ಮನ್ನು ಬಾಧಿಸುತ್ತಿರುವ ಚಿಂತೆಗಳು, ಕಷ್ಠ ಕಾರ್ಪಣ್ಯಗಳು ಇವೆಲ್ಲವೂ ನಿಮ್ಮನ್ನು ಈ ಕಲಾ ಜಗತ್ತಿನಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಳ್ಳಲು ಬಿಡಲಾರವು.

ಅವುಗಳನ್ನು ಹೊಸ್ತಿಲಾಚೆಗೇ ಬಿಟ್ಟು ಬನ್ನಿರಿ.

ರಂಗಭೂಮಿ ಜಗತ್ತಿನಾದ್ಯಂತ ತನ್ನ ಸೃಜನಶೀಲ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. ಹೊಸ ಬಗೆಯ ವಸ್ತು- ರೂಪ- ವಿನ್ಯಾಸಗಳ ಅನ್ವೇಷಣೆಯಲ್ಲಿ ತೊಡಗಿದೆ.

ರಂಗಭೂಮಿಯನ್ನು ಉದ್ಯಮವಾಗಿಸಬೇಕೆನ್ನುವ ಪ್ರಯತ್ನವೂ ನಡೆಯುತ್ತಿದೆ. ಪ್ರಯೋಗಗಳೂ ನಡೆಯುತ್ತಿವೆ.

ಆದರೆ ರಂಗಭೂಮಿ ಉದ್ಯಮವಾಗಿ ಯಶಸ್ವಿಯಾದೀತು ಎಂಬ ವಿಶ್ವಾಸ ಎಲ್ಲಿಯೂ ಕಂಡುಬಂದಿಲ್ಲ.

ಆದರೆ ಹವ್ಯಾಸಿಗಳ ವೃತ್ತಿಪರರ ರೆಪರ್ಟರಿಗಳ ಪ್ರಯೋಗ ಮುನ್ನಡೆಯುತ್ತಲೇ ಇದೆ.

ಇತ್ತೀಚಿಗೆ ನಮ್ಮಲ್ಲಿ ನೂರಾರು ನಾಟಕ ಉತ್ಸವಗಳು ಸಡಗರದಿಂದ ನಡೆಯುತ್ತಿವೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸ್ಪರ್ಧೆಗಳು ಉತ್ಸವಗಳು ನಡೆಯುತ್ತಿವೆ. ಅದರಲ್ಲಿ ಭಾಗವಹಿಸುವುದೇ ತಮ್ಮ ಸೌಭಾಗ್ಯ ಎಂಬ ವಾತಾವರಣವೂ ಉಂಟಾಗಿದೆ.

ಹಲವು ಪಂಥಗಳನ್ನು ದಾಟಿ ಬಂದ ಕನ್ನಡ ರಂಗಭೂಮಿ ಮತ್ತು ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ತುಳು ರಂಗಭೂಮಿಯಲ್ಲಿ ಗುರುತಿಸುವಂತಹ ಪ್ರಯತ್ನಗಳು ಆಗುತ್ತಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ನಾಡಿನಲ್ಲಿರುವ ಕೆಲವೇ ಕೆಲವು ಸುಸಜ್ಜಿತರಂಗ ಮಂದಿರಗಳನ್ನೇ ಮಾದರಿಯಾಗಿರಿಸಿದ ರಂಗವಿನ್ಯಾಸ ಹೊಂದಿರುವ ನಾಟಕಗಳು ಸಿದ್ದಗೊಳ್ಳುತ್ತವೆ. ಅಂತ: ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರದರ್ಶನ ನಡೆಸಲು ಬಹಳ ಕಷ್ಟ ಪಡಬೇಕಾಗುತ್ತದೆ. ಹವ್ಯಾಸಿಗಳಂತೂ ಪ್ರದರ್ಶನಕ್ಕಾಗುವ ಆರ್ಥಿಕ ವೆಚ್ಚಗಳನ್ನು ಸರಿದೂಗಿಸಲಾಗದೆ ಹೊಸ ಪ್ರಯೋಗದತ್ತ ಮುಖ ಮಾಡುತ್ತಿಲ್ಲ. ವೃತ್ತಿಪರ ತಂಡದವರಿಗೆ ಲಾಭದಾಯಕ ಆರ್ಥಿಕ ವ್ಯವಸ್ಥೆ ಯನ್ನಂತೂ ತತ್ಕಾಲದ ರಂಗಭೂಮಿ ತಂದು ಕೊಟ್ಟಿಲ್ಲ. ವಿಶ್ವ

ಈ ಹಿಂದೆ ಇದ್ದ ರಾಜಾಶ್ರಯದ ಹಾಗೆ ಪ್ರಾಯೋಜಕರ, ಸರಕಾರಿ ಅನುದಾನದ ನೆರವಿನಿಂದಲೇ ಪ್ರದರ್ಶನ ನಡೆಸಬೇಕಾದ ಪರಿಸ್ಥಿತಿ ಇರುವುದರಿಂದ ಹೊಸ ಬಗೆಯ ಸಾಧ್ಯತೆಗಳತ್ತ  ಹೊಸ ತಲೆಮಾರಿನ ಯುವಜನರು ಮನಸ್ಸು ಮಾಡುತ್ತಿಲ್ಲ.

ರಂಗ ಶಿಕ್ಷಣ ಕೇಂದ್ರಗಳಿಂದ ಬಂದವರು ಕೂಡ ತಮ್ಮ ನಟನಾ ಸಾಮರ್ಥ್ಯ ಪ್ರದರ್ಶನಕ್ಕೆ TV ಸೀರಿಯಲ್ ಗಳು ಸಿನಿಮಾ ಮಾಧ್ಯಮಗಳೇ ದಾರಿದೀಪ ಎಂದು ನಂಬಿಕೊಂಡಿದ್ದಾರೆ.

ಶಾಲಾ ಶಿಕ್ಷಣದಲ್ಲಿ ರಂಗಭೂಮಿಯಂತು ಇವತ್ತು ಬರುತ್ತದೆ- ನಾಳೆ ಬರುತ್ತದೆ- ಎಂಬ ಭರವಸೆಯ ದಿನಗಳನ್ನು ಕಾಯುತ್ತಲಿದೆ. ಆದರೂ ರಂಗಭೂಮಿಗೆ ಇದೆಲ್ಲವನ್ನು ಮೀರಿ ನಿಲ್ಲುವ ಶಕ್ತಿ ಇದೆ. ಎಂಬುದನ್ನು ನಾವು ಮರೆಯಬಾರದು.

ಈತನಕದ ರಂಗ ಸಂದೇಶಗಳಲ್ಲಿ ಬಹು ಪಾಲು ಮಂದಿ ರಂಗಭೂಮಿಯ ಮಹತ್ವವನ್ನು ಹೇಳುವುದರ ಜೊತೆಯಲ್ಲಿಯೇ ಜಗತ್ತನ್ನು ನಿರಂತರವಾಗಿ ಕಾಡುತ್ತಿರುವ ಯುದ್ಧಗಳ ಬಗ್ಗೆ, ಯುದ್ಧದ ಕ್ರೌರ್ಯಗಳ ಬಗ್ಗೆ, ಅವುಗಳ ಅಪಾಯಗಳ ಬಗ್ಗೆ, ಜಾಗತಿಕ ಶಾಂತಿಯನ್ನು ಕಾಪಾಡಬೇಕಾದ ಅನಿವಾರ್ಯತೆ ಕುರಿತಾಗಿ ಮಾತನಾಡಿದ್ದಾರೆ.

ದೇಶ ದೇಶಗಳ ನಡುವಿನ ವೈಷಮ್ಯ- ಮಾನವ ಕುಲಕ್ಕೆ ಅಪಾಯ ತಂದಿರುವ ಯುದ್ಧಭೀತಿಯನ್ನು ನಿವಾರಿಸಲು ರಂಗಭೂಮಿಯಿಂದಲೇ ಸಾಧ್ಯ ಎನ್ನುವ ವಿಶ್ವಾಸದ ನಂಬಿಕೆಯ ಮಾತುಗಳನ್ನಾಡಿದ್ದಾರೆ .

ಇವರ ಮಾತುಗಳಲ್ಲಿ ಆಧುನಿಕ ಸರಕು ಸಂಸ್ಕೃತಿಯ ತೊಂದರೆಗಳು, ಪರಿಸರ ನಾಶ ದ ಕಾರಣದಿಂದ ಉಂಟಾಗಿರುವ ಗ್ಲೋಬಲ್ ವಾರ್ಮಿಂಗ್ ನಂತಹ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

ಈ ಬಾರಿಯ ರಂಗ ಸಂದೇಶ ನೀಡಿರುವ ವಿಲ್ ಯೆಮ್ ಡೆಫೋ ಇವತ್ತು ನಮ್ಮೆಲ್ಲರನ್ನು ಆವರಿಸಿಕೊಂಡು ಎಲ್ಲವನ್ನು ತೆಕ್ಕೆಗೆ ತೆಗೆದುಕೊಂಡಿರುವ ಕೃತಕ ಬುದ್ಧಿಮತ್ತೆಯ ಬಗ್ಗೆ ,ಅವುಗಳಿಂದ ಉಂಟಾಗಬಹುದಾದ ಕಲಾತ್ಮಕ ಮನಸ್ಸುಗಳು ಕಳೆದು ಹೋಗಬಹುದಾದ ಅಪಾಯದ ಬಗ್ಗೆ, ಮಾತನಾಡಿದ್ದಾರೆ. ಡೆಫೋ ಅವರು AI ಕೃತಕ ಬುದ್ಧಿ ಮತ್ತೆ ಯ ಆವರಿಸಿಕೊಳ್ಳುವಿಕೆಯನ್ನು *ಕೊಠಡಿಯಲ್ಲಿ ಇರುವ ಆನೆಯ ಹಾಗೆ* ಎಂಬ ಉಪಮೆಯ ಮೂಲಕ ಹೇಳುತ್ತಾ ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆಯನ್ನು ನೀಡುವುದರ ಜೊತೆಯಲ್ಲಿಯೇ ಜನರು ಒಬ್ಬರಿಂದ ಒಬ್ಬರು ದೂರ- ದೂರ ಆಗುತ್ತಿರುವ ದುರಂತ ನಡವಳಿಕೆಯ ಬಗ್ಗೆ ಉಲ್ಲೇಖಿಸುತ್ತಾರೆ.

ಸಮಾಜ ಜೀವಿಗಳು ಜಗತ್ತಿನೊಂದಿಗೆ ತೊಡಗಿಸಿಕೊಳ್ಳಲು ಜೀವ ಶಾಸ್ತ್ರೀಯವಾಗಿ ರೂಪುಗೊಂಡವರು ನಾವು .

ಈ ಪ್ರಪಂಚದ ಅತಿ ದೊಡ್ಡ ಜಿಜ್ಞಾಸೆ ಯಾದ ನಾನು ಯಾರು? ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವಂತದ್ದು ರಂಗಭೂಮಿಯಿಂದಲೇ ಆಗಿದೆ.

ಕಥನ ,ಸೌಂದರ್ಯಶಾಸ್ತ್ರ, ಭಾಷೆ, ದೃಶ್ಯವಿನ್ಯಾಸಗಳ ಸಮಗ್ರ ಕಲಾ ರೂಪವಾದ ಈ ರಂಗಭೂಮಿ ನಮಗೆ ಈ ಹಿಂದೆ ಏನಿತ್ತು? ಈಗ ಏನು ಇದೆ ? ಮತ್ತು ನಮ್ಮ ಜಗತ್ತು ಹೇಗಿರಲು ಸಾಧ್ಯವಿದೆ? ಎಂಬುದನ್ನು ತೋರಿಸುವ ಒಂದು ಅನನ್ಯವಾದ ಚೇತೋಹಾರಿ ಅವಕಾಶ ರಂಗಭೂಮಿಯ ಜೊತೆಯಲ್ಲಿ ನಮ್ಮೊಂದಿಗಿದೆ…. ಎಂಬ ಸಂದೇಶದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಜಗತ್ತಿನ ಎಲ್ಲ ಜನರೊಂದಿಗೆ ಹಂಚಿಕೊಂಡಿದ್ದಾರೆ

ಅದು ಜಗತ್ತಿನ ಎಲ್ಲ ಜನರ ಗೆಲ್ಮನದ ಗೆಲುವಿನ ಶಕ್ತಿಯೂ ಹೌದು.

ಇದನ್ನೂ ನೋಡಿ: ಯುವತಲೆಮಾರಿಗೆ ಕುವೆಂಪು ಓದು; ಸಾಹಿತ್ಯ ಚಿಂತನೆಗಳ ಸಡಗರ Janashakthi Media

Donate Janashakthi Media