ಕಾಲ್ಚೆಂಡಾಟ ಫುಟ್ಬಾಲ್‌ನ ಜಾಗತಿಕ ಕಪ್ ಗಾಗಿ ಪಂದ್ಯಗಳು ಜೂನ್ 11ರಿಂದ ಪ್ರಾರಂಭವಾಗಿದ್ದು ಅವು ಜುಲೈ 18 ರ ವರೆಗೆ ನಡೆಯಲಿವೆ. ಕೆನಡಾ, ಮೆಕ್ಸಿಕೊ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ ಈ ಸಾರಿಯ ಅಥಿತೇಯ ದೇಶಗಳಾಗಿವೆ. ಒಟ್ಟು 48 ತಂಡಗಳು ಪಾಲ್ಗೊಳ್ಳುವ ಈ ಕಪ್ ಪಂದ್ಯದಲ್ಲಿ 104 ಪಂದ್ಯಾಟಗಳು ಇರಲಿವೆ. ಜಾಗತಿಕವಾಗಿ ಇದು ಅತಿ ದೊಡ್ಡ ಪಂದ್ಯಾಟ.ಜಾಗತ್ತಿನಾದ್ಯಂತ ಕ್ರೀಡಾ ಪ್ರೇಮಿಗಳು ಅತಿಯಾದ ಆಸಕ್ತಿ ತೋರುವ ಪಂದ್ಯ ಇದು. ಫೀಫಾ (Federation Internationale de Football Association) ಅತಿ ಶ್ರೀಮಂತ ಸಂಸ್ಥೆಯೂ ಹೌದು. ಅದಕ್ಕೆ ಅದರದೇ ಇತಿಹಾಸವಿದೆ. ಜಗತ್ತಿನ ಅತಿ ಸುಂದರ ಆಟ ಎಂದು ಕರೆಸಿಕೊಳ್ಳುವ ಈ ಆಟ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಂದ್ಯಾಟವಾಗಿದೆ. ಫುಟ್ಬಾಲ್
ಹಿಂದೆ 1930ರಲ್ಲಿ ಈ ಪಂದ್ಯಾಟ ಪ್ರಾರಂಭವಾದಾಗ ಪಂದ್ಯಾವಳಿಯಲ್ಲಿ 13 ತಂಡಗಳು ಇದ್ದವು. ಫೀಫಾ 1904 ರಲ್ಲಿ 13 ದೇಶಗಳ ಸದಸ್ಯತ್ವದೊಂದಿಗೆ ಅಸ್ತಿತ್ವಕ್ಕೆ ಬಂತು. ಇಂದು ವಿಶ್ವ ಸಂಸ್ಥೆಯ ಸದಸ್ಯತ್ವದ ಸಂಖ್ಯೆಯನ್ನೂ ಮೀರಿ 211 ದೇಶಗಳ ಸದಸ್ಯತ್ವ ಅದಕ್ಕಿದೆ. ಇವೆಲ್ಲಾ ಜಗತ್ತಿನಲ್ಲಿ ಈ ಆಟಕ್ಕೆ ಇರುವ ಮಹತ್ವವನ್ನು ತಿಳಿಸುತ್ತವೆ. ಆಟದ ಆಢಳಿತ, ಸಂಯೋಜನೆ, ಪ್ರಚಾರ, ಹಣಕಾಸು, ಕ್ರೀಡಾಪಟುಗಳ ಬೆಳವಣಿಗೆ, ತರಬೇತಿ, ಭಾಗವಹಿಸುವಿಕೆ, ಪ್ರಯಾಣ ಪರವಾನಗಿಗಳು, ಆಟದ ನಿಯಮಗಳು, ಆಟದ ತೀರ್ಪುಗಾರಿಕೆ ಇತ್ಯಾದಿ ಹಲವು ಹತ್ತು ವಿಷಯಗಳಲ್ಲಿ ಅದು ಶ್ರಮಿಸಬೇಕಾಗುತ್ತದೆ. ಈ ಸಂಸ್ಥೆಯಲ್ಲಿ ಅಪಾರ ಪ್ರಮಾಣದ ಹಣಕಾಸಿನ ಸಂಚಯವೂ ಇದೆ.
ಈಗ ಎದ್ದಿರುವ ಪುಕಾರುಗಳು
ಈಗ ಈ ಸಾರಿಯ ಪಂದ್ಯಾಟಗಳು ಪ್ರಾರಂಭವಾಗಿರುವಾಗ ಹಲವು ಗಂಭೀರ ಪುಕಾರುಗಳು ಎದ್ದಿವೆ. ಶ್ರೀಮಂತಿಕೆ, ವರ್ಣ ಮತ್ತು ಜನಾಂಗೀಯ ತಾರತಮ್ಯದ ನಡೆಗಳು ಆಗಲೇ ಕಂಡುಬಂದಿದ್ದು ಇವು ಚರ್ಚೆಗೆ ಬಂದಿವೆ.ಅಮೇರಿಕ ವೀಸಾ ನಿಯಮಗಳನ್ನು ಬಿಗಿಗೊಳಿಸಿದ್ದು ಈ ತಾರತಮ್ಯ ಒಡೆದು ಕಾಣತೊಡಗಿವೆ.ʼಒಮರ್ ಆರ್ಟಾನ್ʼ ಸೋಮಾಲಿಯಾ ದೇಶದ 34 ವರ್ಷದ ಪುರುಷ ತೀರ್ಪುಗಾರ (ಫುಟಬಾಲ್ ಪಂದ್ಯಗಳಿಗೆ). ಈತ 2025 ರಲ್ಲಿ ಅತ್ಯುತ್ತಮ ತೀರ್ಪುಗಾರನೆಂದು ಆಯ್ಕೆಯಾದವ. ಈತ ಫೀಫಾದ 52 ತೀರ್ಪುಗಾರರ ತಂಡದ ಭಾಗವಾಗಿದ್ದವ. ಈತ ಸೋಮಾಲಿಯಾ ದೇಶದವ (ಮತ್ತು ಕರಿಯ?) ಎಂಬ ಕಾರಣಕ್ಕೆ ಅಮೇರಿಕ ಆತನಿಗೆ ತನ್ನ ದೇಶದೊಳಗೆ ಪ್ರವೇಶ ನಿರಾಕರಿಸಿದೆ. ಈ ತೀರ್ಪುಗಾರ ಅಮೇರಿಕ ಪ್ರವೇಶ ನಿರಾಕರಿಸಿದ ನಂತರ ತನ್ನ ದೇಶವಾದ ಸೋಮಾಲಿಯಾಕ್ಕೆ ಹಿಂತಿರುಗಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ | ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ – ಸಿದ್ದರಾಮಯ್ಯ
ಅಲ್ಲಿ ಅವರಿಗೆ ದೇಶದ ದೊಡ್ಡ ನಾಯಕನಿಗೆ ದೊರವ ಸ್ವಾಗತ ದೊರೆಯಿತು ಎಂಬುದು ಬೇರೆ ಮಾತು. ಅಮೇರಿಕದ ಅದ್ಯಕ್ಷರುಗಳಾದ ಜಾರ್ಜ್ ಡಬ್ಲಯು ಬುಶ್,ಒಬಾಮ, ಬೈಡೆನ್ ಮತ್ತು ಟ್ರಂಪ್ ಎಲ್ಲರೂ ಸೋಮಾಲಿಯಾ ದೇಶದ ಮೇಲೆ ಬಾಂಬ್ ದಾಳಿ ಮಾಡಿದವರು! ಇರಾಕ್ ನ ಆಯ್ಮೆನ್ ಹುಸೇನ್ ಗೆ ಇದೇ ರೀತಿ ಅನುಭವ ಆಗಿದೆ. ಈತ ತಂಡದ ಮುಂಚೂಣಿ ಆಟಗಾರ. ಚಿಕಾಗೊ ವಿಮಾನ ನಿಲ್ದಾಣದಲ್ಲಿ ಈತನ ಮೊಬೈಲನ ತನಿಖೆ ನಡೆಸಲಾಯಿತು. ಇರಕ್ ನ ಅಧಿಕೃತ ಫೋಟೊಗ್ರಾಫರ್ ಇನ್ನೂ ದುರದೃಷ್ಟಶಾಲಿ. ಯಾಕೆಂದರೆ ಈತನಿಗೆ ದೀರ್ಘ ತನಿಖೆಯ ಹಿಂಸೆಯ ನಂತರ ಪ್ರವೇಶವನ್ನೇ ನಿರಾಕರಿಸಲಾಯಿತು! ಇಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ಅತಿಥೇಯ ರಾಷ್ಟ್ರ ಭಾಗವಹಿಸುವ ರಾಷ್ಟ್ರದ ಜೊತೆಗೆ ಯುದ್ಧೊಪಾದಿ ನಡವಳಿಕೆ ಎಂದೇ ಮಾಧ್ಯಮಗಳು ವರದಿ ಮಾಡಿವೆ.
ಅಮೇರಿಕದ ಜೊತೆಗೆ ಯುದ್ಧ ನಡೆಸುತ್ತಿರುವ ಇರಾನ್ ಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರವೇಶ ಇರುತ್ತದೆಯೇ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಅಂತಿಮವಾಗಿ ಇರಾನ್ ತಂಡಕ್ಕೆ ಅವರ ಮೊದಲ ಪಂದ್ಯಕ್ಕೆ ಹತ್ತು ದಿನ ಇರುವಾಗ ಪ್ರವೇಶ ದೊರೆತಿದೆ. ಆದರೆ ಅವರ ಉಸ್ತುವಾರಿ ಸಿಬ್ಬಂದಿಗೆ ಪ್ರವೇಶವಿಲ್ಲ!!! ಇದಲ್ಲದೆ, ಇರಾನ್ ತಂಡ ಪಂದ್ಯದ ದಿನವೇ ಅಮೇರಿಕವನ್ನು ಪ್ರವೇಶಿಸಿ ನಿರ್ಗಮಿಸಬೇಕು!! ಇಡೀ ಮುನುಕುಲವನ್ನೇ ಬೆಸೆಯುವ ಶಕ್ತಿ ಇರುವ ಕ್ರೀಡೆಗಳನ್ನು ಸಾಮ್ರಾಜ್ಯಶಾಹಿ ದೇಶಗಳು ಎಂತಹ ಸ್ಥಿತಿಗೆ ತಳ್ಳುತ್ತಿವೆ ನೋಡಿ!!
ಫಿಫಾದ ಗೊಸುಂಬೆತನ
ಫಿಫಾ ಅಮೇರಿಕದ ಇಂತಹ ನಡೆಯನ್ನು ಸರಿಪಡಿಸಬಹುದಾಗಿತ್ತೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಹಿಂದೆ,1966 ರಲ್ಲಿ ಇಂಗ್ಲಂಡ್ ಉತ್ತರ ಕೊರಿಯಾಗೆ ಅತಿಥೇಯವಾಗಲು ನಿರಾಕರಿಸಿದಾಗ ಫಿಫಾ ಇಡೀ ಪಂದ್ಯಾವಳಿಯನ್ನೇ ಬೇರೆಡೆಗೆ ಸ್ಥಳಾಂತರಿಸುವ ಬೆದರಿಕೆ ಹಾಕಿತ್ತು. ಇಂಗ್ಲಂಡ್ ಸದ್ದಿಲ್ಲದೆ ದಾರಿಗೆ ಬಂದಿತ್ತು. ಇದಕ್ಕಿಂತಾ ಉತ್ತಮ ಉದಾಹರಣೆ ಬೇಕೆ?
ಇದು ಆಟಗಾರರ, ತೀರ್ಪುಗಾರರ, ವ್ಯವಸ್ಥಾಪಕ ಸಿಬ್ಬಂದಿಗಳ ಕತೆಯಾದರೆ, ಆಟದ ಜೀವಾಳವಾದ ಅಭಿಮಾನಿಗಳ/ನೋಡುಗರ ಕತೆಯೇನು? ಆಟದ ಟಿಕೆಟ್ಟುಗಳ ಬೆಲೆಗೆ ಯಾವುದೇ ನಿಯಂತ್ರಣವಿಲ್ಲ. ಪ್ರಯಾಣದ ವ್ಯವಸ್ಥೆಗಳಿಲ್ಲ. ಇವರೆಲ್ಲ ದೊಡ್ಡ ದೊಡ್ಡ ಮೊತ್ತಗಳನ್ನು ಪೀಕಬೇಕು. ಇಲ್ಲದಿದ್ದರೆ ಪಂದ್ಯ ನೋಡುವ ಭಾಗ್ಯ ಕೈಬಿಡಬೇಕು. ಆಟಗಾರರನ್ನು ಯಾರು ಹುರಿದುಂಬಿಸಬೇಕು?ಈ ಹಿಂದೆ ವಿಶ್ವ ಕಪ್ ಗಳು ನಡೆದಾಗ ಆಟಗಾರರು, ವ್ಯವಸ್ಥಾಪನಾ ಸಿಬ್ಬಂದಿ, ಪ್ರೇಕ್ಷಕರು ಎಲ್ಲರಿಗೂ ಅತಿಥೇಯ ದೇಶ ಅನುಕೂಲ ಮಾಡಿಕೊಡುತ್ತಿತ್ತು.
ಫಿಫಾದ ಅಂಧಾದುಂಧಿ ವ್ಯವಹಾರಗಳು
ಫುಟ್ಬಾಲ್ ವಿಷಯದಲ್ಲಿ ಅಪಾರ ಅಧಿಕಾರ ಮತ್ತು ಹಣ ಇರುವ ಸಂಸ್ಥೆ ಫಿಫಾ. ಅದು ಮನಸ್ಸು ಮಾಡಿದರೆ ಆಟಕ್ಕೆ ಒಳ್ಳೆಯದೆನ್ನಿಸುವ ಎಲ್ಲವನ್ನೂ ಮಾಡಬಹುದು. ಆದರೆ ಅದು ಭ್ರಷ್ಟಾಚಾರದ ಕೂಪವಾಗಿದೆ. ಫಿಫಾ ಅದ್ಯಕ್ಷರ ಅವಧಿ ನಾಲ್ಕು ವರ್ಷಗಳು. ಒಬ್ಬರು ಇಂತಹ ಮೂರು ಅವಧಿಗೆ ಅದ್ಯಕ್ಷರಾಗಬಹುದು. ಆದರೆ, ಇಲ್ಲಿಯವರೆಗೆ ಆಗಿರುವ ಎಲ್ಲ ಅದ್ಯಕ್ಷರೂ ಅವಧಿಗಳನ್ನು ಮೀರಿ ಅಧಿಕಾರ ನಡೆಸಿದ್ದಾರೆ.
ಈಗಿನ ಅದ್ಯಕ್ಷ ಗಿಯಾನ್ನಿ ಇನಫಾಂಟಿನೊ. ಈತ ಬಹಳ ಸುಧಾರಣೆಗಳನ್ನು ತರುವ ಭರವಸೆಗಳನ್ನು ನೀಡಿ ಅಧಿಕಾರ ಹಿಡಿದವ. ಆದರೆ ಅಧಿಕಾರ ಹಿಡಿದ ಮೇಲೆ ಸುಧಾರಣೆಗಳು ಒತ್ತಟ್ಟಿಗಿರಲಿ ಭ್ರಷ್ಟಾಚಾರದ ಕೂಪದಲ್ಲಿ ಸ್ವತಃ ಮುಳುಗಿರುವಂತೆ ಕಾಣಿಸುತ್ತಿದೆ. ಈತ ಫಿಫಾದ ಹೆಸರಿನಲ್ಲಿ ಶಾಂತಿ ಪಾರತೋಷಕವೊಂದನ್ನು ಸ್ಥಾಪಿಸಿ ಅದನ್ನು ಅಮೇರಿಕದ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾಶಯನಿಗೆ ನೀಡಿದ್ದಾನೆಂದರೆ ಈತನ ಸಾಚಾತನದ ಪರಿಚಯ ಆದೀತು. ಹೀಗೆ ಪಾರಿತೋಷಕ ನೀಡಿದ ಮೇಲೆ ಅದಕ್ಕೆ ಪ್ರತಿಫಲ ಪಡೆಯದೆ ಇರಲು ಸಾಧ್ಯವೆ? ತಿಳಿದು ಹೇಳಿದವರಿಲ್ಲ ಅಷ್ಟೇ.
ಅಪಾರ ಅಧಿಕಾರ ಮತ್ತು ಹಣ ಇರುವುದರಿಂದ ಫಿಫಾದ ಅದ್ಯಕ್ಷರುಗಳು ಸಂಸ್ಥೆಯನ್ನು ತಮ್ಮ ವೈಯಕ್ತಿಕ ಜಹಗೀರುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ವಿಶ್ವ ಕಪ್ ಎಲ್ಲಿ ನಡೆಯಬೇಕು ಎಂಬುದನ್ನು ನಿರ್ಧರಿಸುವಲ್ಲಿ ಇಂತಹ ಅಧಿಕಾರದ ದುರುಪಯೋಗದ ಅಪಾದನೆಗಳೂ ಇವೆ. ಉದಾಹರಣೆಗೆ 2018 ಮತ್ತು 2022 ರಲ್ಲಿ ರಷ್ಯಾ ಮತ್ತು ಖತಾರ್ ಗಳಿಗೆ ವಿಶ್ವ ಕಪ್ ನಡೆಸುವ ಅವಕಾಶ ನೀಡುವಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆ ಇದೆ.
ಹಳೆಯ ಸಂಸ್ಥೆಯಾದ್ದರಿಂದ ಇದರ (ಫಿಫಾದ) ರಚನೆಯಲ್ಲಿ ಹಲವು ಪ್ರಜಾಸತ್ತಾತ್ಮಕ ಅಂಶಗಳಿವೆ. ಈ ಫುಟ್ಬಾಲ್ ಆಟವನ್ನು ಎಲ್ಲ ದೇಶಗಳಲ್ಲಿ ಬೆಳೆಸುವ ಜವಾಬ್ದಾರಿ ಅದಕ್ಕಿದೆ. ಅದಕ್ಕೆ ಅಷ್ಟು ಖರ್ಚು ಮಾಡುವ ಅಧಿಕಾರವೂ ಇದೆ.ಬರುವ ಆದಾಯದಲ್ಲಿ ವಿವಿಧ ದೇಶಗಳಿಗೆ ಸರಿಯಾಗಿ ಹಂಚಿ ಅಲ್ಲಿ ಈ ಆಟದ ಬೆಳವಣಿಗೆಗೆ ಬಲ ನೀಡುವ ಮಹತ್ತರ ಜವಾಬ್ದಾರಿ ಅದಕ್ಕೆ ಇದೆ. ಆದರೆ ಈ ಅಧಿಕಾರ ಮತ್ತು ಹಣವನ್ನು ಫಿಫಾ ಚುನಾವಣೆಗಳಲ್ಲಿ ವೊಟು ಪಡೆಯಲು ಬಳಸಲಾಗುತ್ತಿದೆ. ವೊಟು ಪಡೆದು ಅಧಿಕಾರ ಪಡೆದ ಮೇಲೆ ಆಟ ಬೆಳೆಸುವ ಗೋಜು ಚುನಾಯಿತ ಅದ್ಯಕ್ಷ ಮತ್ತು ಅವರ ತಂಡಕ್ಕೆ ಇರುವುದಿಲ್ಲ. ಇದು ಫಿಫಾದ ಕತೆ. ಈ ಕ್ರೀಡೆಯ ವ್ಯಥೆಯ ಕತೆ.
(ಸುಧನ್ವ ದೇಶ್ಪಾಂಡೆ ಅವರ “ಲೇಫ್ಟ್ ವ್ಯೂ” ಜಾಲತಾಣದ ಲೇಖನ ಮತ್ತು “ದಿ ಹಿಂದೂ” ದಿನ ಪತ್ರಿಕೆಯ ಜೂನ್ 14 ರ ಲೇಖನಗಳ ಸಾರ ಸಂಗ್ರಹಗಳ ಅನುವಾದ)
ಇದನ್ನೂ ನೋಡಿ: FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್‌ಗೆ AI ಎಂಟ್ರಿ!
