ಗರ್ಭವತಿ ಎಂದು ಭಾವಿಸಿದ್ದವಳ ಹೊಟ್ಟೆಯಲ್ಲಿತ್ತು ದೊಡ್ಡದಾದ ಗಡ್ಡೆ

– ಸಂಧ್ಯಾ ಸೊರಬ

ತಾನು ಮತ್ತೆ ಗರ್ಭವತಿಯಾಗಿದ್ದೇನೆ. ಎರಡೂ ಮಕ್ಕಳಾಗಿ, ಮುಂದೆ ಮಕ್ಕಳಾಗದಂತೆ “ಟ್ಯುಬೆಕ್ಟಮಿ”ಆಪರೇಷನನ್ನೂ ಕೂಡ ಮಾಡಿಕೊಂಡಿದ್ದೇನೆ. ಆದರೂ ಕೂಡ ನನ್ನ ಹೊಟ್ಟೆ ಮುಂದೆ ಬಂದಿದೆಯಲ್ಲಾ, ಅಂತ ಯೋಚಿಸ್ತಿದ್ದ ಮಹಿಳೆ ಆಕೆ. ಅರೆ, ಗರ್ಭವತಿ ಆದರೂ ಮಧ್ಯೆ ಮಧ್ಯೆ ಋತುಸ್ರಾವ ಆಗುವುದು ಏಕೆ? ಅಂತ ಯೋಚಿಸಿ, 40 ವರ್ಷ ಆಯಿತಲ್ಲಾ, ಬಹುಶಃ ಇದು ಬಹುಶಃ ಮೆನೋಪಾಸ್‌ಗೆ ಇರಬಹುದೇನೋ ಅಂತೆಲ್ಲಾ ಯೋಚಿಸ್ತಾ ಚಿಂತಿಸ್ತಾ ಹಾಗೆಯೇ ಕಾಲದೂಡುತ್ತಾ ಇದ್ದ ಗ್ರಾಮೀಣ ಮಹಿಳೆಗೆ ಶಾಕ್‌ ಆಗಿ ಬಡಿದಿದ್ದು, ತನ್ನ ಹೊಟ್ಟೆಯಲ್ಲಿ ಯಾವುದೇ ಮಗುವಾಗಲೀ, ಹೊಟ್ಟೆ ಬೊಜ್ಜಾಗಲೀ ಬಂದಿಲ್ಲ, ಅಲ್ಲಿರೋದು ದೊಡ್ಡದಾದ ಗಡ್ಡೆ ಅಂತ. ಗರ್ಭವತಿ

ಇದ್ದಕ್ಕಿದ್ದಂತೆ ಆಕೆಗೆ ಹೆಚ್ಚಾದ ಋತುಸ್ರಾವ ಸುಸ್ತು ಕಾಣಿಸಿಕೊಂಡಿತು. ಹೊಸನಗರ ತಾಲೂಕಿನ ಗ್ರಾಮೀಣ ಭಾಗದ ಜಯನಗರದ ಶಶಿಕಲಾ ಎಂಬ ಈ ಮಹಿಳೆ ತಪಾಸಣೆಗಾಗಿ ಹೋಗಿದ್ದು ಸಾಗರದ “ತಾಯಿ ಮತ್ತು ಮಕ್ಕಳ ಆಸ್ಪತ್ರೆ”ಗೆ. ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ನಾಗೇಂದ್ರಪ್ಪರಲ್ಲಿ ಚಿಕಿತ್ಸೆಗಾಗಿ ಹೋದಾಗ ಶಶಿಕಲಾಳ ಹಾಗೂ ಆಕೆಯ ಕುಟುಂಬಸ್ಥರಿಗಿದ್ದ ಭ್ರಮೆ ಕಳಚಿಹೋಯಿತು. ಅದು ವೈದ್ಯರ ಸೂಚನೆ ಮೇರೆಗೆ “ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌” ಮಾಡಿಸಿದಾಗಲೇ. ಆಗ ನೋಡಿ ಗೊತ್ತಾಗಿದ್ದು, ಆಕೆಯ ಹೊಟ್ಟೆಯಲ್ಲಿ ಯಾವುದೇ ಮಗುವಾಗಲೀ ಬೊಜ್ಜಾಗಲೀ ಏನೂ ಇಲ್ಲ ಅಲ್ಲಿರೋದು ಸುಮಾರು 7 ರಿಂದ 8 ಕೆ.ಜಿ ತೂಕದ ದೊಡ್ಡದಾದ ಗಡ್ಡೆ(ಫೈಬ್ರಾಯಿಡ್).‌

ಇದನ್ನು ಪತ್ತೆಹಚ್ಚಿದ ಡಾ.ನಾಗೇಂದ್ರಪ್ಪರ ನೇತೃತ್ವದ ವೈದ್ಯರ ತಂಡ ಸರ್ಕಾರಿ ಆಸ್ಪತ್ರೆಯಲ್ಲಿಯೇ ಆಕೆಯನ್ನು ಎರಡು ದಿನಗಳ ಕಾಲ ಒಳರೋಗಿಯಾಗಿ ದಾಖಲಿಸಿ ಪರಿಶೀಲಿಸಿ ಬಳಿಕ 3 ತಾಸುಗಳ ಕಾಲ ಸರ್ಜರಿ ಮಾಡಿ ಫೈಬ್ರಾಯಿಡ್‌ ಅನ್ನ ಹೊರತೆಗೆದಿದ್ದಾರೆ. ಇದಕ್ಕಾಗಿ ಆಕೆಗೆ ಎರಡೂ ಬಾಟಲ್‌ ರಕ್ತದ ಅವ‍್ಯಕತೆತಯೂ ಇತ್ತು. ಅದನ್ನು ಹೊಂದಿಸಿದ ವೈದ್ಯರ ತಂಡ ಯಶಸ್ವಿಯಾಗಿ ಸರ್ಜರಿ ಮಾಡಿದೆ. ಗರ್ಭವತಿ

ಇದನ್ನು ಓದಿ  : ಚುನಾವಣಾ ಆಯೋಗದಿಂದ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಕುರಿತು ಸ್ಪಷ್ಟೀಕರಣ ಕೇಳಿದ ಸುಪ್ರೀಂ ಕೋರ್ಟ್

ಈ ಬಗ್ಗೆ ಜನಶಕ್ತಿ ಮೀಡಿಯಾ ಡಾ.ನಾಗೇಂದ್ರಪ್ಪರನ್ನು ಸಂಪರ್ಕಿಸಿ ಕೇಳಿದಾಗ, ಈ ನಡುವೆ ಮಹಿಳೆಯರಿಗೆ ಗರ್ಭಕೋಶಕ್ಕೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳು ಇಂದಿನ ಲೈಫ್‌ಸ್ಟೈಲ್‌ನಿಂದಾಗಿ ಕಂಡುಬರುತ್ತಿವೆ. ಅದರಲ್ಲಿಯೂ ಗ್ರಾಮೀಣ ಮಹಿಳೆಯರಿಗೆ ಗರ್ಭಕೋಶದ ಬಗ್ಗೆ ಜ್ಞಾನದ ಕೊರತೆಯೇ ಇನ್ನೂಇದೆ. ಇಂತಹ ಫೈಬ್ರಾಯಿಡ್‌ಗಳು ಹಾರ್ಮೋನಲ್‌ ಸಮಸ್ಯೆಯಿಂದ ಉಂಟಾಗುತ್ತವೆ. ಬಹುತೇಕರಲ್ಲಿ ಈ ಫೈಬ್ರಾಯಿಡ್‌ ಚಿಕ್ಕದಾಗಿರುತ್ತವೆ. ಇವು ಪೇನ್ಲೆಸ್‌ ಆಗಿರುವುದರಿಂದ ಬಹುತೇಕರು ಇದರತ್ತ ಗಮನ ನೀಡುವುದಿಲ್ಲ. ಆದರೆ, ಮಹಿಳೆಯರು ವರ್ಷಕ್ಕೆರಡು ಬಾರಿ ತನ್ನ ಗರ್ಭಕೋಶದ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿಕೊಳ್ಳುವುದು ಅತಿಮುಖ್ಯವಾಗಿದೆ. ಸಣ್ಣದಾಗಿರುವಂತಹ ಇಂತಹ ಫೈಬ್ರಾಯಿಡ್‌ಗಳನ್ನು “ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಮೂಲಕವೇ ಪತ್ತೆಹಚ್ಚಬಹುದೇ ವಿನಃ ಬೇರೆ ಚಿಕಿತ್ಸಾವಿಧಿ ಇದಕ್ಕಿಲ್ಲ.

ಈ ಮಹಿಳೆಗೆ ಸುಮಾರು ಎರಡು ವರ್ಷದಿಂದ ಈ ಫೈಬ್ರಾಯಿಡ್‌ ಇದ್ದು, ಇದು ಈಗ ಇಷ್ಟೊಂದು ದೊಡ್ಡದಾಗಿದೆ. ಯಾವುದೇ ನೋವಿಲ್ಲ ಎಂದು ಫೈಬ್ರಾಯಿಡ್‌ಗಳನ್ನು ಬಿಡಬಾರದು. ಹಾಗೆ ಬಿಟ್ಟಲ್ಲಿ ಇದು ಮುಂದೆ ಕ್ಯಾನ್ಸರ್‌ಗೆ ಕಾರಣವಾಗಬಹುದೆಂಬ ಅಂಶವನ್ನಿಲ್ಲಿ ಡಾ.ನಾಗೇಂದ್ರಪ್ಪ ಹೇಳಿದರು. ಕಡ್ಡಾಯವಾಗಿ ಮಹಿಳೆಯರು ತಮ್ಮ ಆರೋಗ್ಯದತ್ತ ಅದರಲ್ಲಿಯೂ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆ ಶುಚಿತ್ವ ಆರೋಗ್ಯಕ್ಕೆ ನೀಡಬೇಕೆಂದು ಸಲಹೆ ನೀಡಿದರು.

ಇದು ಗ್ರಾಮೀಣ ಮಹಿಳೆಯಲ್ಲಿ ಕಂಡು ಬಂದ ಸಮಸ್ಯೆಯಾಗಿದ್ದು, ಆಕೆ ಆರೋಗ್ಯವಾಗಿದ್ದಾಳೆಂದು ವೈದ್ಯರು ಹೇಳಿದ್ದಾರೆ. ಜನಪರ ಕಾಳಜಿಗಾಗಿ ಜನಶಕ್ತಿ ಮೀಡಿಯಾ ಮಹಿಳೆಯರ ಸುರಕ್ಷತೆಗಾಗಿ ಈ ವರದಿಯನ್ನು ನೀಡಿದೆ.

ಇದನ್ನು ನೋಡಿ : ಮೈ ತುಂಬಾ ದ್ವೇಷ ತುಂಬಿಕೊಂಡಿರುವ ತೇಜಸ್ವಿ ಸೂರ್ಯನನ್ನು ಸೋಲಿಸುವುದೆ ಕೆಆರ್‌ಎಸ್‌ ಪಕ್ಷದ ಗುರಿ Janashakthi Media

Donate Janashakthi Media

Leave a Reply

Your email address will not be published. Required fields are marked *