ಬೆಂಗಳೂರು: ಖ್ಯಾತ ಹಿರಿಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ (78) ಅವರು ಜೂನ್ 30ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಅವರು ನಗರದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಹಿರಿಯ
ಕಲಾ ಕ್ಷೇತ್ರದ ಜೊತೆಗೆ ರೈತ ಹಾಗೂ ದಲಿತ ಚಳವಳಿಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರ ಅಗಲಿಕೆಗೆ ನಾಡಿನ ಗಣ್ಯರು ಹಾಗೂ ಕಲಾರಸಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ
1947ರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೃಷಿಕ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ ಇತ್ತು. ಆದರೆ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅವರು ಮೊದಲಿಗೆ ಇಂಜಿನಿಯರಿಂಗ್ ಅಧ್ಯಯನ ಆರಂಭಿಸಿದ್ದರು. ನಂತರ ಕಲೆಯತ್ತ ಇರುವ ಒಲವಿನ ಕಾರಣದಿಂದ ಆ ಅಧ್ಯಯನವನ್ನು ಮಧ್ಯದಲ್ಲೇ ತೊರೆದು ಮುಂಬೈನ ಪ್ರಸಿದ್ಧ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಗೆ ಸೇರಿದರು. ಅಲ್ಲಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು ತಮ್ಮ ಕಲಾ ಪಯಣ ಆರಂಭಿಸಿದರು.
ಇದನ್ನೂ ಓದಿ: ಬೆಂಗಳೂರು ಸುತ್ತ ಚತುಷ್ಪಥ ರೈಲು ಮಾರ್ಗ: ಮಂಗಳೂರು ಸಂಪರ್ಕಕ್ಕೂ ಕೇಂದ್ರದ ಚಿಂತನೆ
ವಿಶಿಷ್ಟ ಕಲಾಶೈಲಿಯಿಂದ ಗಮನ ಸೆಳೆದ ಶಿವಪ್ರಸಾದ್ ಅವರ ಕೃತಿಗಳನ್ನು ಬ್ರಿಟನ್ನ ಮಾಡರ್ನಿಸ್ಟ್ ಕಲಾವಿದ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಸಲಾಗುತ್ತಿತ್ತು. ಅವರ ಚಿತ್ರಗಳು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದು, 1976ರಿಂದ ಬೆಂಗಳೂರು, ಮೈಸೂರು, ಮುಂಬೈ ಹಾಗೂ ನವದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದರು.
ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್ ಟುಡೇ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರ ಕೃತಿಗಳು ಪ್ರದರ್ಶನಗೊಂಡಿದ್ದವು. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರು ಗುರುತಿಸಿಕೊಂಡಿದ್ದು, ಭೋಪಾಲ್ ಬಿನ್ನಾಲೆ (1988), ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಮತ್ತು ಹಾಂಗ್ಕಾಂಗ್ ಪ್ರದರ್ಶನಗಳು (1996)ಗಳಲ್ಲಿ ಭಾಗವಹಿಸಿದ್ದರು.
ಕಲಾ ಕ್ಷೇತ್ರಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ನಿಧನದಿಂದ ಕಲಾ ಲೋಕವು ಮಹತ್ವದ ವ್ಯಕ್ತಿತ್ವವೊಂದನ್ನು ಕಳೆದುಕೊಂಡಂತಾಗಿದೆ.
ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.ಬಸವರಾಜ Janashakthi Media
