‘ಕೃಷ್ಣ’ ಹೆಸರಿನ ಕನ್ನಡ ಪಠ್ಯ ಹಿಂಪಡೆಯಿರಿ; ಕನ್ನಡದ ಅಸ್ಮಿತೆಗೆ ಧಕ್ಕೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ಸಿಬಿಎಸ್‌ಇ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕನ್ನಡ ಬೋಧನೆಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಕಟಿಸಿರುವ ‘ಕೃಷ್ಣ’ ಹೆಸರಿನ ಕನ್ನಡ ಪಠ್ಯವನ್ನು ಹಿಂಪಡೆದು, ಕನ್ನಡದ ಅಸ್ಮಿತೆಯನ್ನು ಪ್ರತಿಬಿಂಬಿಸುವ ಪಠ್ಯವನ್ನು ಮರುಜಾರಿಗೆ ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು, ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಗುರುತಿಗೆ ‘ಕಾವೇರಿ’ ಹೆಚ್ಚು ಸೂಕ್ತ ಸಂಕೇತವಾಗಿದ್ದರೂ, ಕನ್ನಡ ಪಠ್ಯಕ್ಕೆ ‘ಕೃಷ್ಣ’ ಎಂಬ ಹೆಸರಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಭಾಷಾ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯೊಂದಿಗೆ ಕಾವೇರಿ ನದಿಗೆ ಅವಿನಾಭಾವ ಸಂಬಂಧವಿದ್ದು, ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವ ಪ್ರಮುಖ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ಸಿಇಆರ್‌ಟಿ ಪ್ರಕಟಿಸಿರುವ ಪಠ್ಯವು ರಾಷ್ಟ್ರೀಯ ಶಿಕ್ಷಣ ನೀತಿ–2020ನ್ನು ಪರೋಕ್ಷವಾಗಿ ಜಾರಿಗೊಳಿಸುವ ಪ್ರಯತ್ನದ ಭಾಗವಾಗಿದ್ದು, ಅದರ ವಿಷಯವಸ್ತುಗಳು ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವಿಕತೆಯಿಂದ ದೂರವಾಗಿವೆ ಎಂದು ಪ್ರಾಧಿಕಾರ ಆರೋಪಿಸಿದೆ. ಪಠ್ಯದೊಳಗೆ ಋಷಿ ಪರಂಪರೆ, ಆಧ್ಯಾತ್ಮಿಕತೆ ಮತ್ತು ಏಕಧರ್ಮದ ಆರಾಧನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ತಳಸಮುದಾಯಗಳ ಸಂಸ್ಕೃತಿ, ಆಚರಣೆ ಹಾಗೂ ಜನಜೀವನಕ್ಕೆ ಸಮರ್ಪಕ ಸ್ಥಾನ ನೀಡಿಲ್ಲ ಎಂದು ಟೀಕಿಸಲಾಗಿದೆ.

ಇದನ್ನೂ ಓದಿ: ಭಾರಿ ಮಳೆ, ಆಕಸ್ಮಿಕ ಪ್ರವಾಹ ಎಚ್ಚರಿಕೆ – ಅಸ್ಸಾಂ ಹೈ ಅಲರ್ಟ್

ಇದಲ್ಲದೆ, ಕರ್ನಾಟಕದ ಆಹಾರ ಸಂಸ್ಕೃತಿ, ಸ್ಥಳೀಯ ಪರಂಪರೆ, ಜನಪದ ಬದುಕು, ಪ್ರಾದೇಶಿಕ ವೈವಿಧ್ಯತೆ ಹಾಗೂ ಸಾಮಾಜಿಕ ವಾಸ್ತವತೆಗಳನ್ನು ಪಠ್ಯದಲ್ಲಿ ಸಮರ್ಪಕವಾಗಿ ಪ್ರತಿಬಿಂಬಿಸಲಾಗಿಲ್ಲ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಸಮತೋಲನ ಆಹಾರದ ಕುರಿತು ಉಲ್ಲೇಖಿಸುವ ಸಂದರ್ಭದಲ್ಲಿ ರಾಜ್ಯದ ವಿವಿಧ ಆಹಾರ ಪದ್ಧತಿಗಳಲ್ಲಿ ಪ್ರಮುಖವಾಗಿರುವ ಮಾಂಸಾಹಾರದ ಪ್ರಾತಿನಿಧ್ಯವೂ ಕಾಣಿಸುತ್ತಿಲ್ಲ ಎಂದು ಹೇಳಲಾಗಿದೆ.

ಕರ್ನಾಟಕದ ಶೈಕ್ಷಣಿಕ ತಜ್ಞರು ರೂಪಿಸಿರುವ ‘ಸಿರಿಗನ್ನಡ’, ‘ನಲಿ ಕನ್ನಡ’ ಮತ್ತು ‘ತಿಳಿ ಕನ್ನಡ’ ಪಠ್ಯಗಳು ರಾಜ್ಯದ ಇತಿಹಾಸ, ಸಂಸ್ಕೃತಿ, ಜನಜೀವನ, ಆಹಾರ ಪದ್ಧತಿ, ಆಚರಣೆಗಳು ಹಾಗೂ ಸ್ಥಳೀಯ ವೀರರ ಪರಿಚಯವನ್ನು ಒಳಗೊಂಡಿದ್ದು, ಅವುಗಳನ್ನು ಮುಂದುವರಿಸಬೇಕು ಎಂದು ಪ್ರಾಧಿಕಾರ ಒತ್ತಾಯಿಸಿದೆ.

ಎನ್‌ಸಿಇಆರ್‌ಟಿ ನೀಡಿರುವ ಸ್ಪಷ್ಟೀಕರಣವನ್ನೂ ಪ್ರಾಧಿಕಾರ ತಿರಸ್ಕರಿಸಿದ್ದು, ಅದು ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ. ಕರ್ನಾಟಕದ ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿಯನ್ನು ಈ ಪ್ರಕ್ರಿಯೆಯಲ್ಲಿ ಏಕೆ ಒಳಗೊಳ್ಳಿಸಲಿಲ್ಲ ಹಾಗೂ ರಾಜ್ಯದಲ್ಲಿ ಈಗಾಗಲೇ ಬಳಕೆಯಲ್ಲಿರುವ ಕನ್ನಡ ಪಠ್ಯಪುಸ್ತಕಗಳನ್ನು ಏಕೆ ಪರಿಗಣಿಸಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಕೃಷ್ಣ’ ಹೆಸರಿನ ಪಠ್ಯವನ್ನು ಮರುಪರಿಶೀಲಿಸಿ, ಕನ್ನಡದ ಭಾಷಾ-ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಬಿಂಬಿಸುವ ಪಠ್ಯವನ್ನು ಜಾರಿಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರ ಮತ್ತು ಎನ್‌ಸಿಇಆರ್‌ಟಿಗೆ ಮನವಿ ಮಾಡಿದೆ.

ಈ ಪ್ರಕಟಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹಾಗೂ ಸದಸ್ಯರಾದ ಪ್ರೊ. ಎ.ಬಿ. ರಾಮಚಂದ್ರಪ್ಪ, ಡಾ. ನಿರಂಜನಾರಾಧ್ಯ ವಿ.ಪಿ., ಟಿ. ಗುರುರಾಜ್, ಡಾ. ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಾಕ್ಷಪ್ಪ ಕಲ್ಲೂರು ಮತ್ತು ಟಿ. ತಿಮ್ಮೇಶ್ ಸಹಿ ಹಾಕಿದ್ದಾರೆ.

ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media

Donate Janashakthi Media

Leave a Reply

Your email address will not be published. Required fields are marked *