ನೀಟ್ ಪೇಪರ್ ಲೀಕ್ ಪ್ರಕರಣದ ‘ಮಹಾ ಮಾಸ್ಟರ್‌ಮೈಂಡ್’ ಪತ್ತೆ!

ನವದೆಹಲಿ: ನೀಟ್ ಪೇಪರ್ ಲೀಕ್ ಪ್ರಕರಣದ ಸಂಬಂಧ,​ ಅಸಲಿ ‘ಮಹಾ ಮಾಸ್ಟರ್‌ಮೈಂಡ್’ ಕೊನೆಗೂ ಪತ್ತೆಯಾಗಿದ್ದು, ಇದರ ಹಿಂದೆ ಒಬ್ಬ ನಿಗೂಢ ಮಹಿಳೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್​ ಯುಜಿ- 2026 ಪೇಪರ್ ಲೀಕ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಹಾರಾಷ್ಟ್ರದ ಪುಣೆಯ ಹಿರಿಯ ಬೋಟನಿ ಶಿಕ್ಷಕಿ ಮನಿಷಾ ಗುರುನಾಥ ಮಂಡಾರೆ ಅವರನ್ನು ಬಂಧಿಸಿದೆ. ತನಿಖಾ ಸಂಸ್ಥೆಯ ಪ್ರಕಾರ, ಮನಿಷಾ ಮಂಡಾರೆ ಈ ಪೇಪರ್ ಲೀಕ್ ಜಾಲದ ಪ್ರಮುಖ ಸಂಚುಕೋರರಲ್ಲಿ ಒಬ್ಬರು ಎಂದು ಶಂಕಿಸಲಾಗಿದೆ.

CBI ಮಾಹಿತಿ ಪ್ರಕಾರ, ಮನಿಷಾ ಮಂಡಾರೆ ಎನ್​ಟಿಎ ನೇಮಿಸಿದ್ದ ವಿಷಯ ತಜ್ಞೆಯಾಗಿದ್ದರು. ಅವರು NEET-UG ಪ್ರಶ್ನೆಪತ್ರಿಕೆ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದ ಪರೀಕ್ಷೆಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆಗೆ ನೇರ ಪ್ರವೇಶ ಹೊಂದಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಪ್ರಶ್ನೆಪತ್ರಿಕೆಯನ್ನು ಹೊರಗೆ ಸೋರಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ನವದೆಹಲಿ| ಸಿಎನ್‌ಜಿ ಬೆಲೆ ಮತ್ತೆ ಕೆಜಿಗೆ 1 ರೂ. ಏರಿಕೆ; 2 ದಿನಗಳಲ್ಲಿ ಎರಡನೇ ಏರಿಕೆ

ತನಿಖೆಯಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಹೊರಬಿದ್ದಿದೆ. ಮನಿಷಾ ಮಂಡಾರೆ ಕೆಲ ವಿದ್ಯಾರ್ಥಿಗಳಿಗೆ “ವಿಶೇಷ ತರಗತಿ”ಗಳ ಹೆಸರಿನಲ್ಲಿ ಗುಪ್ತ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ. ಆ ತರಗತಿಗಳಲ್ಲಿ ನೀಡಿದ ಪ್ರಶ್ನೆಗಳು ಮತ್ತು ನಿಜವಾದ ನೀಟ್​ ಪರೀಕ್ಷೆಯ ಪ್ರಶ್ನೆಗಳು ಒಂದೇ ಆಗಿದ್ದವು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆ ತಲುಪಿಸಲಾಗಿತ್ತೇ ಎಂಬ ಅನುಮಾನ ಬಲವಾಗಿದೆ.

ಈಗಾಗಲೇ ಕುಲಕರ್ಣಿ ಬಂಧನ!

ಈ ಪ್ರಕರಣದಲ್ಲಿ ಈಗಾಗಲೇ ಪುಣೆಯ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ.ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅವರು ಕೂಡ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರೆಂದು ಶಂಕಿಸಲಾಗಿದೆ. ಮನಿಷಾ ಮಂಡಾರೆ ಬಂಧನದೊಂದಿಗೆ ಪ್ರಕರಣದ ಸಂಚು ಇನ್ನಷ್ಟು ದೊಡ್ಡ ಮಟ್ಟದಲ್ಲಿರುವುದು ಸ್ಪಷ್ಟವಾಗಿದೆ.

CBI ದೇಶದ ಹಲವು ನಗರಗಳಲ್ಲಿ ದಾಳಿ ನಡೆಸಿ ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಬ್ಯಾಂಕ್ ದಾಖಲೆಗಳು ಮತ್ತು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಜಾಲವು ಹಲವು ರಾಜ್ಯಗಳಿಗೆ ವಿಸ್ತರಿಸಿರಬಹುದೆಂಬ ಶಂಕೆಯೂ ಇದೆ. ಕೆಲವು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ನೀಡಿ ಪ್ರಶ್ನೆಪತ್ರಿಕೆ ಪಡೆದಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಪೇಪರ್ ಲೀಕ್ ಪ್ರಕರಣ ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ಪರೀಕ್ಷೆಯ ನಿಷ್ಪಕ್ಷಪಾತತೆಗೆ ಧಕ್ಕೆ ಉಂಟಾಗಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ. ಅನೇಕ ವಿದ್ಯಾರ್ಥಿ ಸಂಘಟನೆಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.

ತನಿಖೆ ತೀವ್ರಗೊಳಿಸಿದೆ ಸಿಬಿಐ!

ಈಗ ಸಿಬಿಐ ತನಿಖೆ ಮತ್ತಷ್ಟು ತೀವ್ರಗೊಳಿಸಿದ್ದು, ಎನ್​​ಟಿಎ ಒಳಗಿನ ಇನ್ನೂ ಕೆಲವರ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ. ಈ ಪ್ರಕರಣದ ಅಂತಿಮ ತನಿಖಾ ವರದಿ ದೇಶದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ನೋಡಿ: ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *