ಧಾರವಾಡ: ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಆಗಸ್ಟ್ 1ರಂದು ನಡೆಯಲಿರುವ ವಿಶೇಷ ಮಹಿಳಾ ನ್ಯಾಯಪೀಠಗಳ ವಿಚಾರಣೆಗೆ ರಾಜ್ಯ ಸರ್ಕಾರದ ಪರವಾಗಿ ಸಂಪೂರ್ಣ ಮಹಿಳಾ ಕಾನೂನು ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ.
ಈ ಕುರಿತು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಆದೇಶ ಹೊರಡಿಸಿದ್ದು, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ತಂಡದ ನೇತೃತ್ವ ವಹಿಸಲಿದ್ದಾರೆ. ಈ ತಂಡವು ಮಹಿಳಾ ನ್ಯಾಯಪೀಠಗಳ ಮುಂದೆ ಪ್ರತ್ಯೇಕ ಜವಾಬ್ದಾರಿಯೊಂದಿಗೆ ಹಾಜರಾಗಲಿದೆ.
ತಂಡದಲ್ಲಿ ನಂದಿನಿ ಸೋಮಾಪುರ, ಪ್ರಮೋದಿನಿ ಕಿಶನ್, ಸಾವಿತ್ರಮ್ಮ, ಬಿ.ಪಿ. ರಾಧಾ, ಸುನೀತಾ ಸಿಕ್ವೇರಿಯಾ, ಮಮತಾ ಶೆಟ್ಟಿ, ಮಾಲಾ ಬಿ. ಭೂತೆ, ವಿ. ಹೇಮಲತಾ, ಆರ್.ಕೆ. ಪ್ರತಿಭಾ, ವಿ. ಸ್ಫೂರ್ತಿ, ಗಿರಿಜಾ ಹಿರೇಮಠ, ರಶ್ಮಿ ಪಟೇಲ್, ರಶ್ಮಿ ರಾವ್, ಕೀರ್ತಿಲತಾ ಪಾಟೀಲ್, ರತ್ನಮಲಾ, ಎಸ್. ಚಾಂದಿನಿ, ಆರ್. ಸೌಮ್ಯ, ವಹೀದಾ ಮತ್ತು ದೀಪ್ತಿ ಆಳ್ವಾ ಸೇರಿದಂತೆ ಹಲವು ಮಹಿಳಾ ಕಾನೂನು ಅಧಿಕಾರಿಗಳು ಸೇರಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ
ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರವಾಡ ಪೀಠದಲ್ಲಿ ಒಂದು ದಿನದ ಸಂಪೂರ್ಣ ಕಲಾಪವನ್ನು 10 ಮಹಿಳಾ ನ್ಯಾಯಮೂರ್ತಿಗಳು ನಡೆಸಲಿದ್ದಾರೆ.
ಮೂರು ವಿಭಾಗೀಯ ಪೀಠಗಳನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಹಾಗೂ ಕೆ.ಜಿ. ಶಾಂತಿ, ಜ್ಯೋತಿ ಮೂಲಿಮನಿ ಹಾಗೂ ಪಿ. ಶ್ರೀಸುಧಾ, ಲಲಿತಾ ಕನ್ನೆಗಂಟಿ ಹಾಗೂ ಕೆ.ಎಸ್. ಹೇಮಲೇಖಾ ಮುನ್ನಡೆಸಲಿದ್ದಾರೆ.
ಇನ್ನು ಏಕಸದಸ್ಯ ಪೀಠಗಳಲ್ಲಿ ಚಿಲ್ಲಕೂರು ಸುಮಲತಾ, ತಾರಾ ವಿತಾಸ್ತಾ ಗಂಜು, ಕೆ.ಬಿ. ಗೀತಾ ಮತ್ತು ರಾಜೇಶ್ವರಿ ಎನ್. ಹೆಗ್ಡೆ ವಿಚಾರಣೆ ನಡೆಸಲಿದ್ದಾರೆ.
ಆಗಸ್ಟ್ 8 ಮತ್ತು 9ರಂದು ಬೆಂಗಳೂರಿನಲ್ಲಿ ನಡೆಯಲಿರುವ ದೇಶದ ಎಲ್ಲಾ ಹೈಕೋರ್ಟ್ ಮಹಿಳಾ ನ್ಯಾಯಮೂರ್ತಿಗಳ ಸಮಾವೇಶದ ಪೂರ್ವಭಾವಿಯಾಗಿ ಈ ವಿಶೇಷ ಮಹಿಳಾ ಪೀಠಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ನೋಡಿ: “ಮುತ್ತು ಬಂದಿದೆ ಕೇರಿಗೆ” — ಕನಕದಾಸರ ಕುರಿತ ನೃತ್ಯ ರೂಪಕ Janashakthi Media
