ಸುಪ್ರೀಂ ಕೋರ್ಟ್ ನೇಮಿಸುವ ಯಾವ ಸಮಿತಿ ಸಭೆಗಳಿಗೆ ನಾವು ಹೋಗುವುದಿಲ್ಲ : ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ

ನವದೆಹಲಿ, ಜ. 11: ಮುಂದಿನ ಆದೇಶದವರೆಗೆ ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದ್ದೇವೆ ಎಂದು ಸುಪ್ರೀಂ ಕೋರ್ಟ್‌ ಆದೇಶವನ್ನು ರೈತರು ಸ್ವಾಗತ್ತಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ ನೇಮಿಸುವ ಯಾವ ಸಮಿತಿ ಸಭೆಗಳಿಗೆ ನಾವು ಹೋಗುವುದಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ ನೀಡಿದೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಪ್ರಕರಣ ಕುರಿತು ಮಹತ್ವದ ತೀರ್ಪಿನ ಆದೇಶನ ಬೆನ್ನಲ್ಲೇ  ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೃಷಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂಬುದು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಎಲ್ಲ ರೈತ ಸಂಘಟನೆಗಳ ಸರ್ವಾನುಮತದ ನಿರ್ಧಾರ ಎಂದು  ಸಂಯುಕ್ತ ಕಿಸಾನ್‌ ಮೋರ್ಚಾದ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದೆ.

ಸೋಮವಾರ ಸುಪ್ರೀಮ್‌ ಕೋರ್ಟ್‌ನಲ್ಲಿ ರೈತ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಣೆಯ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಮೋರ್ಚಾ, ವಿಚಾರಣೆಯ ವೇಳೆ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಮತ್ತು ಹಿತಕರವಾದ ಮಾತುಗಳನ್ನು ಆಡಿದ್ದಕ್ಕೆ ನಾವು ಸುಪ್ರೀಂ ಕೋರ್ಟ್‌ಗೆ ಗೌರವವನ್ನು ವ್ಯಕ್ತಪಡಿಸುತ್ತೇವೆ ಎಂದಿದೆ.

‘ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟ್‌ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್‌ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ  ಸುಪ್ರೀಂ ಕೋರ್ಟ್‌ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ.

ನ್ಯಾಯಾಲಯದಲ್ಲಿ ಸರ್ಕಾರದ ತನ್ನ ಧೋರಣೆ ಮತ್ತು ನಡೆಗಳಿಂದ, ಸಮಿತಿಯ ಮುಂದೂ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಸಂಯುಕ್ತ ಮೋರ್ಚಾದ ದರ್ಶನ್‌ ಪಾಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌, ಮೊಂಡು ಹಿಡಿದಿರುವ ಸರ್ಕಾರದ ಧೋರಣೆಯನ್ನು ನೋಡಿ, ಸಮಿತಿಯೊಂದನ್ನು ನೇಮಿಸುವ ಸಾಧ್ಯತೆ ಇದೆ. ಆದರೆ ನಮ್ಮ ವಕೀಲರು ನ್ಯಾಯಾಲಯದ ಎದುರು, ಹೋರಾಟದಲ್ಲಿ ಪಾಲ್ಗೊಂಡಿರುವ ಯಾವುದೇ ಸಂಘಟನೆಗಳೊಂದಿಗೆ ಸಮಾಲೋಚಿಸದೇ ನೇಮಿಸುವ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ವಿಚಾರಣೆಯ ಬಳಿಕ ನಮ್ಮ ವಕೀಲರೊಂದಿಗೆ ದೀರ್ಘಕಾಲ ಸಮಾಲೋಚಿಸಿದ ಬಳಿಕ ಸಮಿತಿಯ ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದು, ನಾವು ಯಾವುದೇ ಸಮಿತಿಯ ಎದುರು ಹೋಗದಿರಲು ಸರ್ವಾನುಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ ನಮ್ಮ ವಕೀಲರು ಹಾಗೂ ಇತರೆ ವಕೀಲರ ಮೂಲಕ- ಶ್ರೀ ಹರೀಶ್‌ ಸಾಳ್ವೆ- ಮಂಗಳವಾರ ವಿಚಾರಣೆ ನಡೆಸಲು ಮತ್ತು ಸುಪ್ರೀಂ ಕೋರ್ಟ್‌ ಸಲಹೆಗೆ ಸಮ್ಮತಿ ಪಡೆಯಲು ಮನವಿ ಮಾಡಿತ್ತು. ಮಂಗಳವಾರಕ್ಕೆ ಈ ಕುರಿತು ತೀರ್ಪು ನೀಡಲು ಎಲ್ಲ ಸಿದ್ಧತೆಗಳು ನಡೆದಿದ್ದು, ಈ ಬೆಳವಣಿಗೆಗಳಿಂದ ನಾವು, ನಮ್ಮ ವಕೀಲರು ಮತ್ತು ರೈತ ಸಮೂಹ ತೀವ್ರವಾಗಿ ನಿರಾಶರಾಗಿದ್ದೇವೆ. ಹಾಗಾಗಿ ಜಗತ್ತಿಗೆ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವುದಕ್ಕಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

ರೈತರು ಮತ್ತು ಅವರ ಪ್ರತಿನಿಧಿಗಳಾಗಿ ನಾವು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ, ಅದರ ಸಲಹೆಯನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಹೋರಾಟವು ದೇಶದಲ್ಲಿರುವ ಲಕ್ಷಾಂತರ ರೈತರ ಒಳಿತಿಗಾಗಿ ಆಗಿರುವುದರಿಂದ ಮತ್ತು ಸಾರ್ವಜನಿಕ ಆಸಕ್ತಿಯ ಇರುವುದರಿಂದ, ಸರ್ಕಾರವು ಈ ಪ್ರತಿಭಟನೆಯನ್ನು ಪಂಜಾಬ್‌ ರೈತರಿಗಷ್ಟೇ ಸೀಮಿತಗೊಳಿಸುತ್ತಿದ್ದು, ಹರ್ಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿ ಗಡಿಯಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ.

ಮೋರ್ಚಾದ ಎಸ್‌ ಬಲ್ವೀರ್‌ ಎಸ್‌ ರಾಜೇವಾಲ್‌, ಡಾ. ದರ್ಶನ್‌ಪಾಲ್‌, ಎಸ್‌ ಪ್ರೇಮ್‌ ಎಸ್‌ ಭಂಗು, ಎಸ್‌ ರಾಜೀಂದರ್‌ ಸಿಂಘ್‌ದೀಪ್‌ ಸಿಂಘ್‌ ವಾಲ ಮತ್ತು ಎಸ್‌ ಜಗ್‌ಮೋಹನ್‌ ಸಿಂಘ್‌ ಅವರು, ನ್ಯಾಯವಾದಿಗಳಾದ ದುಶ್ಯಂತ ದವೆ, ಎಸ್‌ ಪ್ರಶಾಂತ್‌ ಭೂಷಣ್‌, ಎಸ್‌ ಕಾಲಿನ್‌ ಗೋನ್ಸಾವ್ಲಿಸ್‌ ಮತ್ತು ಎಚ್‌ ಎಸ್‌ ಫೂಲ್ಕಾ ಅವರೊಂದಿಗೆ ನಡೆಸಿದ ಸಮಾಲೋಚನೆಯ ಬಳಿಕ ಈ ಹೇಳಿಕೆ ನೀಡಿರುವುದಾಗಿ ಮೋರ್ಚಾ ಪ್ರಕಟಣೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *