ನೀಟ್‌ ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ವಿದ್ಯಾರ್ಥಿಗಳ ಚಳುವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳು ಒಂದಲ್ಲ, ಎರಡಲ್ಲ… ಪಟ್ಟಿ ದೊಡ್ಡದಿದೆ. ಮೆಟ್ರೋ ಬಂದ್‌ ಮಾಡಿದರು… ಬ್ಯಾರಿಕೇಡ್‌ ಹಾಕಿದರು… ಲಾಠಿ ಬೀಸಿದರು… ಪೆಲೆಟ್‌ ಗುಂಡಿನ ಆರೋಪವೂ ಕೇಳಿಬಂತು. ಆದರೂ ವಿದ್ಯಾರ್ಥಿಗಳ ಧ್ವನಿ ಮಾತ್ರ ನಿಲ್ಲಲಿಲ್ಲ. “ಪ್ರೋಟೀನ್‌ ಕುಡಿದು ಬಂದಿದ್ದೇನೆ” ಎಂದ ವಿದ್ಯಾರ್ಥಿನಿಯ ವ್ಯಂಗ್ಯದಿಂದ “Police Wale Babu, muzhe Danda To Lagado” ಹಾಡಿನವರೆಗೆ ದಮನಕ್ಕೆ ಮುಂದಾದ ವ್ಯವಸ್ಥೆಗೆ ವಿದ್ಯಾರ್ಥಿಗಳು ಕೊಟ್ಟ ಉತ್ತರವೇನು? ಈ ಲೇಖನದಲ್ಲಿ ತಿಳಿಯೋಣ… ನೀಟ್‌

– ಗುರುರಾಜ ದೇಸಾಯಿ

ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳ ಹೋರಾಟವೂ ಅಂತ್ಯಗೊಂಡಿದೆ. ಬೀದಿಯಲ್ಲಿ ಮೊಳಗುತ್ತಿದ್ದ ಘೋಷಣೆಗಳು ಈಗ ನಿಧಾನವಾಗಿ ಮೌನವಾಗುತ್ತಿವೆ. ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಯ ಬ್ಯಾನರ್‌ಗಳು ಕಾಣದಾಗಿವೆ.. ಆದರೆ ಒಂದು ಪ್ರಶ್ನೆ ಮಾತ್ರ ಇನ್ನೂ ಉಳಿದಿದೆ.. ಅದು ಏನೆಂದರೆ ಹೋರಾಟವನ್ನು ಕೇಂದ್ರ ಸರಕಾರ ಹತ್ತಿಕ್ಕಲು ಹೋರಟಿದ್ದು ಯಾಕೆ ? ನೀಟ್‌

ಜಂತರ್‌ ಮಂತರ್‌ ಸುತ್ತಮುತ್ತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸರ್ಕಾರ ಮತ್ತು ಪೊಲೀಸರು ಇದಕ್ಕೆ ಭದ್ರತಾ ಕಾರಣಗಳನ್ನು ನೀಡಬಹುದು. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವುದು ಆಡಳಿತದ ಕರ್ತವ್ಯವೂ ಹೌದು. ಆದರೆ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಜನರು ತಲುಪುವ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಬಂದ್‌ ಆಗುವಾಗ ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ ಇದು ಕೇವಲ ಭದ್ರತಾ ಕ್ರಮವೇ, ಅಥವಾ ಪ್ರತಿಭಟನೆಯ ಜನಸಾಮಾನ್ಯರ ಸಂಪರ್ಕವನ್ನು ಕಡಿತಗೊಳಿಸುವ ಒಂದು ಮಾರ್ಗವೇ? ಎಂದು ಆದರೆ ಮೆಟ್ರೋ ಬಂದ್‌ ಆದರೂ ವಿದ್ಯಾರ್ಥಿಗಳು ನಿಲ್ಲಲಿಲ್ಲ. ಜನರು ಬೇರೆ ಮಾರ್ಗಗಳಲ್ಲಿ ಜಂತರ್‌ ಮಂತರ್‌ ತಲುಪಿದರು. ಸಾರಿಗೆಗೆ ಅಡ್ಡಿಪಡಿಸಿದರೂ ಧ್ವನಿಗೆ ಅಡ್ಡಿಪಡಿಸಲಾಗಲಿಲ್ಲ. ಹೋರಾಟವನ್ನು ನಿಯಂತ್ರಿಸುವ ಮೊದಲ ಪ್ರಯತ್ನವೇ ವಿದ್ಯಾರ್ಥಿಗಳ ಪ್ರತಿರೋಧದಿಂದ ವಿಫಲವಾಯಿತು ಎಂಬ ಸಂದೇಶ ಅಲ್ಲಿಂದಲೇ ಹೊರಬಂದಿತು. ನೀಟ್‌

ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ: ಕಾಂಗ್ರೆಸ್ ಟೀಕೆ

ವಿದ್ಯಾರ್ಥಿಗಳ ಊಟವೂ ನಿಗಾದ ವ್ಯಾಪ್ತಿಗೆ ಬಂದಿತೇ?

ಹೋರಾಟದ ಮತ್ತೊಂದು ಗಮನಾರ್ಹ ದೃಶ್ಯವೆಂದರೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಂದ ಬಂದ ಆಹಾರ. ಬಿಸಿಲಿನಲ್ಲಿ, ದಣಿವಿನಲ್ಲಿ, ಗಂಟೆಗಟ್ಟಲೆ ಕುಳಿತಿದ್ದ ವಿದ್ಯಾರ್ಥಿಗಳಿಗೆ ಜನರು ನೀರು, ಊಟ, ಓಆರ್‌ಎಸ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿದರು. ಕೆಲವು ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳಿಂದಲೂ ಪ್ಯಾಕೆಟ್‌ಗಳು ತಲುಪಿದವು. ಪ್ರತಿಭಟನಾಕಾರರ ಬಳಿ ಬಂದ ಪ್ರತಿಯೊಂದು ಆಹಾರ ಪ್ಯಾಕೆಟ್‌ ಕೂಡ ಒಂದು ರೀತಿಯಲ್ಲಿ ನಾಗರಿಕರ ಬೆಂಬಲದ ಸಂಕೇತವಾಗಿತ್ತು.

ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳಿಗೆ ಊಟ, ನೀರು ಹಂಚುತ್ತಿದ್ದ ಮೊಹಮ್ಮದ್‌ ಜುನೈದ್‌ ಎನ್ನುವವರನ್ನು ಪೊಲೀಸರು ಬಂದಿಸುತ್ತಾರೆ? ಕಣ್ಣುಮುಚ್ಚಿಸಿ ರಾತ್ರಿ ಪೂರ್ತಿ ವಿಚಾರಿಸಿದರು, ಆಹಾರಕ್ಕೆ ಹಣ ಎಲ್ಲಿಂದ ಬರುತ್ತದೆ? ಎಲ್ಲಿಂದ ಆಹಾರ ಬರುತ್ತದೆ ಎಂದು ಪ್ರಶ್ನಿಸುತ್ತಾರೆ. ಸಾರ್ವಜನಿಕರು, ಹಿತೈಶಿಗಳು ದೇಣಿಗೆ ನೀಡುತ್ತಿದ್ದಾರೆ, ಅದರಲ್ಲಿ ಕೊಡಿಸುತ್ತಿದ್ದೇನೆ ಎಂದು ಉತ್ತರ ನೀಡಿದರು ವಿಚಾರಣೆಯನ್ನು ನಿಲ್ಲಿಸುವುದಿಲ್ಲ.. ಇದರ ಬೆನ್ನಲ್ಲೇ ಅವರ ಕುಟುಂಬದ ಮೇಲೂ ಪೊಲೀಸ್‌ ದೌರ್ಜನ್ಯದ ಆರೋಪ ಕೇಳಿಬಂತು. ಹಾಗಾದರೆ ಜುನೈದ್‌ ಅವರ ತಪ್ಪೇನು? ಪ್ರತಿಭಟನಾಕಾರರಿಗೆ ಊಟ–ನೀರು ಕೊಟ್ಟದ್ದೇ? ಅಥವಾ ಅವರು ಮುಸ್ಲಿಂ ಎಂಬ ಕಾರಣಕ್ಕೆ ಗುರಿಯಾದರೇ? ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ನೀಟ್‌

ಆಹಾರ ಪ್ಯಾಕೆಟ್‌ಗಳ ಕವರ್‌ಗಳು ಮತ್ತು ಪ್ಯಾಕೇಜಿಂಗ್‌ಗಳ ಮೂಲಕ ಪ್ರತಿಭಟನಾಕಾರರಿಗೆ ಆಹಾರ ಕಳುಹಿಸಿದ ರೆಸ್ಟೋರೆಂಟ್‌ಗಳನ್ನು ಪತ್ತೆಹಚ್ಚಲಾಗಿದೆ, ವಿಚಾರಣೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಆಹಾರ ಕಳುಹಿಸಿದವರ ವಿವರಗಳನ್ನು ಪರಿಶೀಲಿಸಲಾಗಿದೆ ಎಂಬ ಮಾತುಗಳು ಹೊರಬಂದವು. ನೀಟ್‌

ಲಾಠಿ ಬೀಸಿದರು

ಬ್ಯಾರಿಕೇಡ್‌ಗಳಾಚೆಗೆ ಹೋಗದಂತೆ ತಡೆ ಹಿಡಿಯುತ್ತಾರೆ, ಪ್ರತಿಭಟನೆಕಾರರ ಮೇಲೆ ಲಾಠಿ ಬೀಸುತ್ತಾರೆ.. ಶಾಂತಿಯುತವಾಗಿ ಪ್ರತಿಭಟನೆಯು ಮುಂದುವರಿದಂತೆ ವಿದ್ಯಾರ್ಥಿಗಳ ಮತ್ತು ಪೊಲೀಸರ ನಡುವಿನ ಸಂಘರ್ಷವೂ ತೀವ್ರವಾಯಿತು. ಪ್ರತಿಭಟನಾಕಾರರು ಸಂಸತ್‌ ಭವನದತ್ತ ಮೆರವಣಿಗೆ ನಡೆಸಲು ಮುಂದಾದಾಗ ಭದ್ರತಾ ಪಡೆಗಳು ಅವರನ್ನು ತಡೆದವು. ಲಾಠಿಚಾರ್ಜ್‌, ಅಶ್ರುವಾಯು ಸೇರಿದಂತೆ ಬಲಪ್ರಯೋಗದ ಆರೋಪಗಳು ಕೇಳಿಬಂದವು. ಸರ್ಕಾರದ ವಾದ ಏನೇ ಇರಲಿ, ಕಾನೂನು-ಸುವ್ಯವಸ್ಥೆ ಕಾಪಾಡಬೇಕಿತ್ತು ಎಂಬುದೇ ಆಗಿರಲಿ ಆದರೆ, ವಿದ್ಯಾರ್ಥಿಗಳ ಬೇಡಿಕೆಗೆ ಉತ್ತರ ನೀಡುವ ಬದಲು ಪೊಲೀಸ್‌ ಮೂಲಕ ಲಾಠಿ ಬೀಸವುದು ಮುಖ್ಯ ಸಾಧನವಾಗಿತ್ತೇ? ನೀಟ್‌

ಈ ಹೋರಾಟದ ಅತ್ಯಂತ ಗಂಭೀರ ಆರೋಪ ಇಲ್ಲಿಯೇ ಕೇಳಿಬಂತು ಪ್ರತಿಭಟನಾಕಾರರ ಮೇಲೆ ಪೆಲೆಟ್‌ ಗುಂಡು ಹಾರಿಸಲಾಗಿದೆ ಎಂಬ ಆರೋಪ. ಕೆಲವರು ಪೆಲೆಟ್‌ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಬಂದವು. ವೈದ್ಯಕೀಯ ದಾಖಲೆಗಳಲ್ಲಿಯೂ ಪೆಲೆಟ್‌ ಗಾಯಗಳ ಉಲ್ಲೇಖವಿದೆ ಎಂಬ ವರದಿಗಳು ಹೊರಬಂದವು. ನೀಟ್‌

ಅವಧಿ ಮುಗಿದಿದ್ದ ಟೀಯರ್‌ ಗ್ಯಾಸ್‌ ಬಳಸಲಾಯಿತು. ಆದರೆ ವಿದ್ಯಾರ್ಥಿಗಳು ಹೆದರಲಿಲ್ಲ… “ಅಂಕಲ್‌, ಇವತ್ತು ಹೊಡೆಯುತ್ತೀರಾ?” ಪೊಲೀಸ್‌ ಬಲಪ್ರಯೋಗದ ಆರೋಪಗಳ ನಡುವೆಯೂ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುವ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯಿತು “ಅಂಕಲ್‌, ಇವತ್ತು ಹೊಡೆಯುತ್ತೀರಾ? ನಾನು ಪ್ರೋಟೀನ್‌ ಕುಡಿದು ಬರುತ್ತೇನೆ ಹೇಳಿ!” ನೀಟ್‌

ಕೇಳಲು ಇದು ತಮಾಷೆಯ ಮಾತಿನಂತೆ ಕಾಣಬಹುದು. ಆದರೆ ಅದರೊಳಗೆ ಆಳವಾದ ರಾಜಕೀಯ ವ್ಯಂಗ್ಯವಿದೆ. ಪೊಲೀಸ್‌ ಲಾಠಿಯ ಭಯವನ್ನು ಎದುರಿಸುವ ಬದಲು ಅದನ್ನೇ ಹಾಸ್ಯವನ್ನಾಗಿ ಪರಿವರ್ತಿಸುವ ಧೈರ್ಯ. “ಹೊಡೆಯಬೇಕಾದರೆ ಹೊಡಿ, ನಾವು ಹೆದರುವುದಿಲ್ಲ” ಎಂಬ ಸಂದೇಶವನ್ನು ನಗುವಿನ ಮೂಲಕ ಹೇಳುವ ಪ್ರಯತ್ನ. ಸರ್ಕಾರದ ಬಲಪ್ರಯೋಗದ ಎದುರು ವಿದ್ಯಾರ್ಥಿಗಳ ಮಾನಸಿಕ ಪ್ರತಿರೋಧದ ಒಂದು ಸಣ್ಣ ಆದರೆ ಪ್ರಬಲ ಚಿತ್ರಣ ಇದು. ನೀಟ್‌

ಲಾಠಿಯನ್ನೇ ಹಾಡಾಗಿಸಿದ ವಿದ್ಯಾರ್ಥಿಗಳ ವ್ಯಂಗ್ಯ!

ಈ ಪ್ರತಿಭಟನೆಯ ಮತ್ತೊಂದು ವಿಶಿಷ್ಟ ದೃಶ್ಯ “Police Wale Babu, muzhe Danda To Lagado” ಎಂಬ ವ್ಯಂಗ್ಯಭರಿತ ಹಾಡು. ಸಾಮಾನ್ಯವಾಗಿ ಪೊಲೀಸ್‌ ಲಾಠಿ ಎಂದರೆ ಅಧಿಕಾರ, ನಿಯಂತ್ರಣ ಮತ್ತು ಭಯದ ಸಂಕೇತ. ಆದರೆ ವಿದ್ಯಾರ್ಥಿಗಳು ಅದೇ ಲಾಠಿಯನ್ನು ಹಾಡಿನ ವಿಷಯವನ್ನಾಗಿ ಮಾಡಿಕೊಂಡರು. ನೀಟ್‌

ಹಾಡಿನ ವ್ಯಂಗ್ಯದಲ್ಲಿ ಒಂದು ಗಂಭೀರ ರಾಜಕೀಯ ಸಂದೇಶ ಅಡಗಿದೆ. “ನಮ್ಮ ಪ್ರಶ್ನೆಗೆ ಉತ್ತರ ನೀಡುವ ಬದಲು ಲಾಠಿ ನೀಡುತ್ತೀರಾ? ಹಾಗಾದರೆ ಆ ಲಾಠಿಯನ್ನೇ ನಾವು ವ್ಯಂಗ್ಯವನ್ನಾಗಿ ಮಾಡುತ್ತೇವೆ” ಎನ್ನುವ ಮನೋಭಾವ. ಅಧಿಕಾರದ ಬಲವನ್ನು ಎದುರಿಸಲು ಕೆಲವೊಮ್ಮೆ ಘೋಷಣೆಗಿಂತ ವ್ಯಂಗ್ಯವೇ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಲಾಠಿ ದೇಹಕ್ಕೆ ನೋವು ಕೊಡಬಹುದು; ಆದರೆ ವ್ಯಂಗ್ಯ ಅಧಿಕಾರದ ನೈತಿಕತೆಯನ್ನೇ ಪ್ರಶ್ನಿಸುತ್ತದೆ.

“ಗೋದಿ ಮೀಡಿಯಾ ಗೋ ಬ್ಯಾಕ್‌”

ಹೋರಾಟದ ಜಾಗಕ್ಕೆ ವರದಿ ಮಾಡಲು ಹೋಗಿದ್ದ, ಗೋದಿ ಮೀಡಿಯಾದ ಕ್ಯಾಮರ, ಲೋಗೋ ಕಾಣುತ್ತಿದ್ದಂತೆ, “ಗೋದಿ ಮೀಡಿಯಾ ಗೋ ಬ್ಯಾಕ್‌” ಕೂಗಾಡುತ್ತಿದ್ದರು. ಇದಕ್ಕೆ ಕಾರಣವೇನುಂಬುದನ್ನು ತಿಳಿಯುವುದು ಮುಖ್ಯ.

ಗೋದಿ ಮೀಡಿಯಾ ಎಂದರೆ ಸರಕಾರದ ಮಡಿಲ ಮಾಧ್ಯಮಗಳು ಅಂತಾ ಅರ್ಥ ಇನ್ನೂ ಸರಳವಾಗಿ ಹೇಳಬೇಕಾದರೆ ಸರಕಾರದ ಪರವಾಗಿ ಅಭಿಪ್ರಾಯವನ್ನು ರೂಪಿಸುವ ಚಾನಲ್‌ಗಳನ್ನು ಗೋದಿ ಮೀಡಿಯಾ ಎಂದು ಕರೆಯಲಾಗುತ್ತದೆ, ಈ ರೀತಿಯ ಕೋಪ ಯಾಕೆ ಬರುತ್ತೆ, ಇದರ ಹಿಂದೆ ಆಳವಾದ ಅಸಮಾಧಾನವಿದೆಯೇ? ಮಾಧ್ಯಮದ ಮೇಲಿನ ಜನರ ನಂಬಿಕೆಯೇ ಕುಸಿಯುತ್ತಿದೆಯೇ? ಪತ್ರಕರ್ತರು ಜನರ ಧ್ವನಿಯಾಗಬೇಕಾದ ಜಾಗದಲ್ಲಿ ಸರಕಾರದ ಧ್ವನಿಯಾಗುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆಯೇ? ಎಂದು ಮಾಧ್ಯಮಗಳನ್ನು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಿಲ್ಲ.

ಗೋದಿ ಮೀಡಿಯಾದ ನ್ಯೂಸ್‌ ರೂಮ್‌ ಒಳಗೆ ಏನು ನಡೆಯುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ. ಸಾವಿರಾರು ಜನ ಬೀದಿಯಲ್ಲಿದ್ದಾರೆ. ಅವರ ಬೇಡಿಕೆಗಳಿವೆ. ಅವರ ಘೋಷಣೆಗಳಿವೆ. ಅವರ ಆಕ್ರೋಶವಿದೆ. ಆದರೆ ನ್ಯೂಸ್‌ ರೂಮ್‌ಗೆ ಮೊದಲು ಬೇಕಾಗಿರುವುದು ಏನು? ಹೋರಾಟ ಯಾಕೆ ನಡೆಯುತ್ತದೆ, ಅದರ ಹಿನ್ನಲೆ ಏನು ಬೇಡಿಕೆ ಎನು? ಸರಕಾರ ಏನು ಹೇಳುತ್ತಿದೆ ಇತ್ಯಾದಿ ಅಂಶಗಳು ಬೇಕು.

ಆದರೆ ಗೋದಿ ಮೀಡಿಯಾದ ರೂಮಿನಲ್ಲಿ ನಡೆಯುವ ಸ್ಕ್ರಿಪ್ಟ್‌ ಗಳೆ ಬೇರೆ… ಅರ್ನಬ್‌ ಗೋಸ್ವಾಮಿ ಸ್ಟುಡಿಯೋದಲ್ಲಿ ಕುಳಿತು ಒಂದು ನಿರೂಪಣೆಯನ್ನು ಕಟ್ಟುತ್ತಾರೆ, ಸುಧೀರ್‌ ಚೌಧರಿ ಪ್ರೈಮ್‌ ಟೈಮ್‌ನಲ್ಲಿ ತಮ್ಮದೇ ರೀತಿಯ ನಿರೂಪಣೆಯನ್ನು ನೀಡುತ್ತಾರೆ, ವಾಹಿನಿಯ ಮಾಲೀಕರು ರಾಜಕೀಯ ಸಂಪರ್ಕವನ್ನು ಕಾಪಾಡಿಕೊಳ್ಳುತ್ತಾರೆ, ಸಂಪಾದಕರು ಪ್ರತಿಭಟನೆಯನ್ನು ಯಾವ ಕೋನದಿಂದ ತೋರಿಸಬೇಕು ಎಂದು ನಿರ್ಧರಿಸುತ್ತಾರೆ, ನಂತರ ಔಟ್‌ಪುಟ್‌ ಹೆಡ್‌ ಅತ್ಯಂತ ಪ್ರಚೋದನಕಾರಿ ದೃಶ್ಯವನ್ನು ಆಯ್ಕೆ ಪ್ರಸಾರವನ್ನು ಮಾಡ್ತಾರೆ.. ಅವರದೇ ಶೈಲಿಯಲ್ಲಿ ಸುದ್ದಿಯನ್ನು ಓದಾದಾದರೆ “ದೆಹಲಿಯಲ್ಲಿ ಅಶಾಂತಿ”, “ಪ್ರತಿಭಟನೆಯಲ್ಲಿ ಹಿಂಸಾಚಾರ”, ಪ್ರತಿಭಟನೆಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ, ಪ್ರಧಾನಿಯನ್ನು ಪ್ರಶ್ನಿಸುವ ಮೂಲಕ ಭಾರತಕ್ಕೆ ಅವಮಾನ ಮಾಡಿದ್ದಾರೆ” ಹೀಗೆ ನಿರೂಪಕರು ಅರಚುತ್ತಾರೆ.

ಒಂದು ಪ್ರತಿಭಟನೆಯಲ್ಲಿ ಸಾವಿರಾರು ಜನರ ಬೇಡಿಕೆಗಳಿಗಿಂತ ಒಬ್ಬ ಪ್ರತಿಭಟನಾಕಾರನ ಕೋಪದ ಮುಖವೇ ಹೆಚ್ಚು ಮುಖ್ಯವಾಗಿಬಿಟ್ಟರೆ? ಹೇಗೆ? ಒಂದು ಗಂಟೆಯ ಪ್ರತಿಭಟನೆಯಲ್ಲಿ ನಡೆದ ಒಂದು ಘಟನೆ ಹತ್ತು ಸೆಕೆಂಡ್‌ಗಳ ದೃಶ್ಯವಾಗಿ ಬದಲಾಗಿಬಿಡುತ್ತೆ. ಆದರೆ ಗೋದಿ ಮೀಡಿಯಾದ ನಿರೂಪಣೆಯಲ್ಲಿ ಪರೀಕ್ಷಾ ವ್ಯವಸ್ಥೆಯ ವೈಫಲ್ಯ ? ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಶ್ನೆ ?ವಿದ್ಯಾರ್ಥಿಗಳ ಸಾವು? ಹೊಣೆಗಾರಿಕೆಯ ಪ್ರಶ್ನೆ ಇದ್ಯಾವುದು ಕಾಣುವುದೆ ಇಲ್ಲ. ನ್ಯೂಸ್‌ ರೂಮ್‌ನ ನಿರೂಪಣೆಯ ಕೆಟ್ಟ ಪರಿಣಾಮ ಬೀರುವುದು ವರದಿಗೆ ಹೋಗುವ ವರದಿಗಾರನ ಮೇಲೆ. ಪ್ರಸಾರವಾದ ಸುದ್ದಿಯಲ್ಲಿ ವರದಾಗಾರನ ಪಾತ್ರವೇ ಇರುವುದಿಲ್ಲ. ಟೈಟಲ್‌ನಿಂದ ಹಿಡಿದು ಕೊನೆಯ ದೃಶ್ಯದ ವರೆಗೆ ವರದಿಗಾರನ ಪಾತ್ರವೇ ಇಲ್ಲ ಇರೋದಿಲ್ಲ. ಆತನಿಗೂ ಆ ಸುದ್ದಿಯನ್ನು ಯಾಕೆ ತಿರುಚಲಾಗಿದೆ ಎಂಬ ಅರಿವೂ ಇರುವುದಿಲ್ಲ. ಮರು ದಿನ ಆ ಪತ್ರಕರ್ತ ಕ್ಯಾಮರ, ಮೈಕ್‌ ಹಿಡುದು ಪ್ರತಿಭಟನೆ ಜಾಗಕ್ಕೆ ಬಂದಾಗ ಸಹಜವಾಗಿಯೇ ಗೋದಿ ಮೀಡಿಯಾ ಗೋ ಬ್ಯಾಕ್‌ ಎಂಬ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ.

ಅರ್ನಬ್‌ ಗೋಸ್ವಾಮಿ ಎಂದಾದರೂ ತಮ್ಮ ಪ್ರಧಾನ ಸಮಯದ ಕಾರ್ಯಕ್ರಮಗಳಲ್ಲಿ ನಡೆಯುವ ಕೂಗಾಟ, ಆಕ್ರಮಣಕಾರಿ ಚರ್ಚೆ ಮತ್ತು ಒಂದು ನಿರ್ದಿಷ್ಟ ಕೋನದಿಂದ ಮಾಡುವ ನಿರೂಪಣೆ ಮೈದಾನದ ವರದಿಗಾರರಿಗೆ ಯಾವ ರೀತಿಯ ವಾತಾವರಣ ಸೃಷ್ಟಿಸುತ್ತದೆ ಎಂದು ತಮ್ಮ ವರದಿಗಾರರನ್ನು ಕೇಳಿದ್ದಾರೆಯೇ? ಸುಧೀರ್‌ ಚೌಧರಿ ಅವರ ಕಾರ್ಯಕ್ರಮಗಳಲ್ಲಿ ಪ್ರತಿಭಟನೆಗಳಿಗೆ “ವಿರೋಧ ಪಕ್ಷದ”, “ದೇಶವಿರೋಧಿ” ಅಥವಾ ಇತರ ರಾಜಕೀಯ ಕೋನಗಳನ್ನು ಹುಡುಕುವ ವಿಧಾನ, ಆ ವಾಹಿನಿಯ ಮುಂದಿನ ದಿನದ ಮೈದಾನದ ವರದಿಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಇದೇ ಪ್ರಶ್ನೆಗಳನ್ನು ದೀಪಕ್‌ ಚೌರಾಸಿಯಾ ಮತ್ತು ಇತರ ಖ್ಯಾತ ನಿರೂಪಕರಿಗೂ ಕೇಳಬೇಕಾಗುತ್ತದೆ. ರಾಜ್ಯದ ಒಂದು ಪ್ರತಿಷ್ಟಿತ ಪತ್ರಿಕೆ, ಗೆಳೆಯನೊಬ್ಬ ಕೆಲಸ ಮಾಡುತ್ತಿದ್ದಿನಾ, ಅದರ ಸಂಪಾದಕ, ಇನ್‌ಪುಟ್‌ ಹೆಡ್‌ ಅವರಿಗೆ ಹೇಳುತ್ತಾರಂತೆ ಅಪರಾದಿ ಮುಸ್ಲಿಂ ನಿದ್ದರೆ ಹೆಸರಿನ ಸಮೇತ, ಕುಟುಂಬ, ಮನೆಯ ವಿವರಗಳನ್ನು ಹಾಕಿ, ಉಗ್ರರ ನಂಟು ಎಂದು ಸೇರಿಸಿ ಎಂದು ಹೇಳುತ್ತಾರಂತೆ, ಅಪರಾದಿ ಹಿಂದೂ ಆಗಿದ್ದರೆ ವಿವರಗಳು ಲಭ್ಯವಾಗಬೇಕಿದೆ ಎಂದು ಹಾಕಿ ಅಂತಾ ಹೇಳುತ್ತಾರಂತೆ…

ಈ ರೀತಿ ಮಾಡ್ತಾ ಇರೋದು ಇವತ್ತು ನಿನ್ನೆಯದಲ್ಲ, ಹಿಂದಿನಿಮದಲೂ ನಡೆದಿದಿದೆ, ಅದರಲ್ಲೂ 2014 ರಿಂದ ಮೂರು ಪಟ್ಟು ಹೆಚ್ಚಾಗಿದೆ ಅಂತಾನೇ ಹೇಳಬಹುದು. ಜೆಎನ್‌ಯು ನೆನಪಿಸಿಕೊಳ್ಳಿ. ಘೋಷಣೆಗಳ ವೀಡಿಯೊಗಳು ಹರಿದಾಡಿದವು. ಧ್ವನಿಯ ಬಗ್ಗೆ ಪ್ರಶ್ನೆಗಳು ಎದ್ದವು. ವಿಭಿನ್ನ ದೃಶ್ಯಗಳು ಹೊರಬಂದವು. ಕೆಲವು ದೃಶ್ಯಗಳನ್ನು ತಿರುಚಲಾಗಿದೆ ಎಂಬ ಆರೋಪಗಳೂ ಕೇಳಿಬಂದವು. ಜೀ ನ್ಯೂಸ್‌ನ ನಿರ್ಮಾಪಕ ವಿಶ್ವ ದೀಪಕ್‌ ರಾಜೀನಾಮೆ ನೀಡುವಾಗ ತಾವು ಚಿತ್ರೀಕರಿಸಿದ ದೃಶ್ಯದಲ್ಲಿ “ಪಾಕಿಸ್ತಾನ್‌ ಜಿಂದಾಬಾದ್‌” ಎಂಬ ಘೋಷಣೆ ಕೇಳಿಸಲಿಲ್ಲ ಎಂದು ಹೇಳಿದ್ದರು. ಆದರೆ ಆ ಹೊತ್ತಿಗೆ ದೂರದರ್ಶನದ ತೀರ್ಪು ಹೊರಬಂದಿತ್ತು. ವಿದ್ಯಾರ್ಥಿಗಳು ಆರೋಪಿಗಳಾಗಿದ್ದರು.

ವಿಶ್ವವಿದ್ಯಾಲಯವೇ ಆರೋಪಿಯ ಸ್ಥಾನದಲ್ಲಿತ್ತು. ಸಾಕ್ಷ್ಯ ಬರುವ ಮುನ್ನ ಮಾಧ್ಯಮ ವಿಚಾರಣೆ ಮುಗಿದಿತ್ತು. ಶಾಹೀನ್‌ ಬಾಗ್‌ನಲ್ಲಿ ಇದೇ ಪ್ರಶ್ನೆ ಎದ್ದಿತ್ತ, ಪ್ರೈಮ್‌ ಟೈಮ್‌ ವೇಳೆ ಸ್ಟುಡಿಯೋಗಳಲ್ಲಿ ತಿಂಗಳುಗಟ್ಟಲೆ ಪ್ರತಿಭಟನಾಕಾರರನ್ನು ನಾಗರಿಕರಂತೆ ಅಲ್ಲ, ರಾಜಕೀಯ ಶಂಕಿತರಂತೆ ಬಿಂಬಿಸಲಾಯಿತು. ಪಾಕಿಸ್ತಾನದಿಂದ ಬಂದವರು, ಬಾಂಗ್ಲಾ ನುಸುಳುಕೋರರು ಎಂದು ಹಸಿ ಸುಳ್ಳನ್ನು ಪ್ರಸಾರ ಮಾಡಲಾಯಿತು.

ರೈತರ ಹೋರಾಟದಲ್ಲೂ ಇದೇ ಕಥೆ. ರೈತರು ಮೂರು ಕೃಷಿ ಕಾಯ್ದೆಗಳು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ಮಾರುಕಟ್ಟೆ ಮತ್ತು ಸರ್ಕಾರಿ ಖರೀದಿ ಬಗ್ಗೆ ಮಾತನಾಡುತ್ತಿದ್ದರು. ಆದರೆ ಮಾಧ್ಯಮದ ಒಂದು ಭಾಗದ ಪ್ರಶ್ನೆಗಳು ಬೇರೆ ದಿಕ್ಕಿಗೆ ಹೋದವು — “ಇವರ ಹಿಂದೆ ಯಾರಿದ್ದಾರೆ?”, “ವಿದೇಶಿ ಹಣ ಬರುತ್ತಿದೆಯೇ?”, “ಖಲಿಸ್ತಾನವೇ?”, “ಚಳವಳಿಯನ್ನು ಯಾರಾದರೂ ಹೈಜಾಕ್‌ ಮಾಡಿದ್ದಾರೆಯೇ?” ರೈತರು ಸರ್ಕಾರವನ್ನು ವಿರೋಧಿಸಿದರೆ, ಅವರ ಹಿಂದೆ ಯಾರಾದರೂ ಇರಲೇಬೇಕು ಎಂಬ ನಿರೂಪಣೆ ಕಟ್ಟುತ್ತಾರೆ.

ಅದೇ ಮಾದರಿ ಮುಸ್ಲಿಂ ಪ್ರತಿಭಟನೆಗಳಲ್ಲೂ ಕಂಡುಬಂದಿದೆ ಎಂಬ ಆರೋಪಗಳಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಂ ನಾಗರಿಕರು ಪ್ರಶ್ನಿಸಿದರೆ ದೇಶಭಕ್ತಿಯ ಪ್ರಮಾಣಪತ್ರ ಕೇಳುವುದು; ವಿದ್ಯಾರ್ಥಿಗಳು ಪ್ರಶ್ನಿಸಿದರೆ “ತುಕ್ಡೆ ತುಕ್ಡೆ” ಅಥವಾ “ನಗರ ನಕ್ಸಲ್‌” ಎಂಬ ಹಣೆಪಟ್ಟಿ ಹಾಕುವುದು; ರೈತರು ಪ್ರಶ್ನಿಸಿದರೆ ಯಾರೋ ಪ್ರಚೋದಿಸಿದ್ದಾರೆ ಎನ್ನುವ ನಿರೂಪಣೆ ಸೃಷ್ಟಿಸುತ್ತಾರೆ.

ಪತ್ರಿಕೋದ್ಯಮದ ಮೂಲ ನಿಯಮ ಏನು? ಮೊದಲು ಪರಿಶೀಲನೆ, ನಂತರ ಪ್ರಸಾರ. ಆದರೆ ವೇಗದ ಸುದ್ದಿ ಯುಗದಲ್ಲಿ ಆಗುತ್ತಿರುವುದು ಏನು? ಮೊದಲು ಪ್ರಸಾರ.. ನಂತರ ನೋಡೋಣ ಎಂಬ ಜಿದ್ದಿಗೆ, ನಮ್ಮಲ್ಲೆ ಮೊದಲು ಎಂಬ ಬ್ರಿಕಿಂಗ್‌ ಹಾವಳಿಗೆ ಜೋತು ಬಿದ್ದಿದ್ದಾರೆ. ಇಲ್ಲಿಯೇ “ಗೋದಿ ಮೀಡಿಯಾ ಗೋ ಬ್ಯಾಕ್‌” ಘೋಷಣೆಯ ಅರ್ಥವನ್ನು ಅರ್ಥಮಾಡಿಕೊಳ್ಳಬೇಕು. ಜನರು ಪತ್ರಿಕೋದ್ಯಮವನ್ನೇ ತಿರಸ್ಕರಿಸುತ್ತಿದ್ದಾರೆಯೇ? ಖಂಡಿತಾ ಇಲ್ಲ, ಗೋದಿ ಮೀಡಿಯಾಗಳ ಸುಳ್ಳು ಸುದ್ದಿಗೆ ನಮಗೆ ನಾವೇ ಮಾಧ್ಯಮ ಅಂತ ಸಾಮಾಜಿಕ ಜಾಲತಾಣಗಳನ್ನು ಕ್ರಿಯಾಶೀಲವಾಗಿ ಬಳಸುತ್ತಿದ್ದಾರೆ.

ರೈತರ ಹೋರಾಟ, ಜೆಎನ್‌ಯು ಹೋರಾಟ,ನೀಟ್‌ ವಿದ್ಯಾರ್ಥಿಗಳ ಹೋರಾಟದಲ್ಲಿ ನಾವು ಅದನ್ನು ಕಾಣಬಹುದು. ಜನತಾ ಮಾಧ್ಯಮಗಳು ಜನರಿಗೆ ಧ್ವನಿಯಾಗಿ ನಿಂತಿವೆ, ಪತ್ರಿಕೋಧ್ಯಮದ ನಿಜವಾದ ಅರ್ಥವನ್ನು ಜನತಾ ಮಾಧ್ಯಮಗಳು ಎತ್ತಿ ತೋರಸ್ತಾ ಇವೆ. ಮಾಧ್ಯಮ ಆಳುವವರನ್ನು ಪ್ರಶ್ನಿಸುವ ವಿರೋಧ ಪಕ್ಚವಾಗಬೇಕೆ ಹೊರತು, ತುತ್ತೂರಿ ಊದವ ಮಧ್ಯಮವಾಗಬಾರದು.

ಇದನ್ನೂ ನೋಡಿ: NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್‌ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ

Donate Janashakthi Media

Leave a Reply

Your email address will not be published. Required fields are marked *