ಕುಂದಾಪುರ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸಾರ್ವಜನಿಕವಾಗಿ ದೈಹಿಕ ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸಿ ಇಂದು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಡಿವೈಎಫ್ಐ ಮಾಜಿ ಮುಖಂಡರಾದ ಸುರೇಶ್ ಕಲ್ಲಾಗರ ಮಾತನಾಡಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಮಹೇಂದ್ರ ಶೆಟ್ಟಿ ಅವರ ವಿರುದ್ಧ ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರು ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದರು. ಇದು ಪತ್ರಕರ್ತರ ಜವಾಬ್ದಾರಿಯ ಭಾಗವಾಗಿದೆ. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಂದ್ರ ಶೆಟ್ಟಿ ಅವರು ತಾವೊಬ್ಬ ವೈದ್ಯರೆಂಬುದನ್ನೂ ಮರೆತು ದೈಹಿಕ ಹಲ್ಲೆ ನಡೆಸಿರುವುದು ಅಸಭ್ಯ ವರ್ತನೆಯಾಗಿದ್ದು, ವೈದ್ಯ ವೃತ್ತಿಗೆ ಕಳಂಕ ತರುವಂತಹ ಅಕ್ಷಮ್ಯ ಕೃತ್ಯವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಕ್ಷೇತ್ರದಲ್ಲಿರುವವರು ಜನರೊಂದಿಗೆ ಬೆರೆತು ಸೇವೆ ಸಲ್ಲಿಸುವುದು ಅವರ ಸಾಂವಿಧಾನಿಕ ಹಾಗೂ ನೈತಿಕ ಕರ್ತವ್ಯವಾಗಿದೆ. ಆದರೆ ಮಹೇಂದ್ರ ಶೆಟ್ಟಿ ಅವರು ಆಸ್ಪತ್ರೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದಾರೆ ಹಾಗೂ ಭ್ರಷ್ಟಾಚಾರಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಗಂಭೀರ ಆರೋಪಗಳಿದ್ದರೂ ಆರೋಗ್ಯ ಇಲಾಖೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಸಮಗ್ರ ತನಿಖೆ ನಡೆಸದೆ ಕೇವಲ ತಾತ್ಕಾಲಿಕ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸ್ಪಷ್ಟವಾಗಿ ಮಾತನಾಡಬೇಕು ಹಾಗೂ ಮಹೇಂದ್ರ ಶೆಟ್ಟಿ ಅವರನ್ನು ಅಮಾನತುಗೊಳಿಸಿ, ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಕಲ್ಲಾಗರ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಡಿವೈಎಫ್ಐ ಮಾಜಿ ಅಧ್ಯಕ್ಷರಾದ ನರಸಿಂಹ ಎಚ್. ಹಾಗೂ ಚಂದ್ರಶೇಖರ ವಿ. ಮಾತನಾಡಿದರು.
ಡಿವೈಎಫ್ಐ ಮುಖಂಡರಾದ ಗಣೇಶ್ ದಾಸ್ ರಾಜ ಬಿಟಿಆರ್, ರವಿ ವಿ.ಎಂ., ಮಂಜುನಾಥ್ ಶೋಗನ್, ಉದಯ ಟೈಲರ್, ಸಂಪತ್ ಕುಮಾರ್, ಚಂದ್ರ ಬಿಟಿಆರ್, ಗಣೇಶ್ ಕಲ್ಲಾಗರ ಹಾಗೂ ಡಿಎಸ್ಎಸ್ ಸಂಘಟನೆಯ ವಿಜಯ್ ಕುಮಾರ್ ಉಪಸ್ಥಿತರಿದ್ದರು. ರಾಘವೇಂದ್ರ ದೋಣಿಮನೆ ವಂದಿಸಿದರು.
