ಶಿಕ್ಷಣದ ಹಕ್ಕಿಗಾಗಿ ಹೋರಾಟ ಮುಂದುವರಿಸುವಂತೆ ಶರಣ್ಯಾ ವರ್ಮಾ ಒತ್ತಾಯ
ಮಂಗಳೂರು :ಜನನುಡಿ 2026ರ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಚಿಂತಕ, ಸಂಸ್ಕೃತಿ ಅಧ್ಯಯನಕಾರ ರಹಮತ್ ತರೀಕೆರೆ ಅವರು ಸಂವಾದ ಸಂಸ್ಕೃತಿಯನ್ನು ಮರಳಿ ಕಟ್ಟುವ ಅಗತ್ಯವನ್ನು ಪ್ರತಿಪಾದಿಸಿದರೆ, ಎಸ್ಎಫ್ಐ ರಾಷ್ಟ್ರೀಯ ನಾಯಕಿ ಶರಣ್ಯಾ ವರ್ಮಾ ಅವರು ಶಿಕ್ಷಣದ ಹಕ್ಕು, ವಿದ್ಯಾರ್ಥಿ ಚಳವಳಿಯ ಇತಿಹಾಸ, ಕ್ಯಾಂಪಸ್ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗಾಗಿ ಹೋರಾಟ ಮುಂದುವರಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜನನುಡಿ ಸಂಘಟಕರಲ್ಲಿ ಒಬ್ಬರಾದ ಮುನೀರ್ ಕಾಟಿಪಳ್ಳ ಅವರು, 2013ರಿಂದ 2026ರವರೆಗೆ ಜನರ ದೇಣಿಗೆಯಿಂದಲೇ ಜನನುಡಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಳವಳಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಸಂವಾದ ಸೋತ ಭಾರತವನ್ನು ಮತ್ತೆ ಕಟ್ಟಬೇಕಿದೆ: ರಹಮತ್ ತರೀಕೆರೆ
ಜನನುಡಿ 2026ರ ಉದ್ಘಾಟನಾ ಭಾಷಣ ಮಾಡಿದ ರಹಮತ್ ತರೀಕೆರೆ ಅವರು, ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಚಳಿ, ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ತಮ್ಮ ಭಾಷಣವನ್ನು ಅರ್ಪಿಸಿದರು. ಆಳುವ ವರ್ಗ ಸಂವೇದನಾರಹಿತವಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಈಡೇರಲಿ ಎಂದು ಹಾರೈಸಿದರು.
ಆರು ವರ್ಷಗಳ ವಿರಾಮದ ನಂತರ ಜನನುಡಿ ಮತ್ತೆ ಆರಂಭವಾಗುತ್ತಿರುವುದು ಸಂತೋಷದ ಸಂಗತಿ. ಈ ಕಾರ್ಯಕ್ರಮ ಕೇವಲ ಸಾಹಿತ್ಯದ ಚರ್ಚೆಗೆ ಸೀಮಿತವಾಗದೆ, ರಾಜಕಾರಣ, ಸಮಾಜ, ದೇಶ, ಸಂಘಟನೆಗಳು, ನಮ್ಮ ಸಂಕಟಗಳು ಮತ್ತು ಸವಾಲುಗಳ ಕುರಿತು ಚರ್ಚಿಸುವ ವೇದಿಕೆಯಾಗಿದೆ. ಲೇಖಕರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವುದರಿಂದ ಈ ಕಾರ್ಯಕ್ರಮಕ್ಕೆ ವಿಶೇಷ ಚೈತನ್ಯ ದೊರೆಯುತ್ತದೆ. ಚರಿತ್ರೆಯ ಭಾರದಿಂದ ಹೊರಬಂದು ವರ್ತಮಾನದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಭವಿಷ್ಯವನ್ನು ಕಟ್ಟುವ ಕನಸುಗಳನ್ನು ಹಂಚಿಕೊಳ್ಳುವುದು ಇಂತಹ ಸಮಾವೇಶಗಳ ಮುಖ್ಯ ಉದ್ದೇಶವಾಗಬೇಕು ಎಂದರು.
ಕೊರೋನಾ ಕಾಲ ದೇಶದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿತ್ತು. ಅದೇ ಸಂದರ್ಭದಲ್ಲಿ ರೈತ ಹೋರಾಟ ಮತ್ತು ಜಂತರ್ ಮಂತರ್ನಲ್ಲಿ ನಡೆದ ಯುವಜನರ ಹೋರಾಟಗಳು ಹೊಸ ಚೈತನ್ಯವನ್ನು ಮೂಡಿಸಿವೆ. ಕತ್ತಲೆಯ ಕಾಲದಲ್ಲಿ ಬೆಳಕನ್ನು ಹೊತ್ತಿಸುವ ಘಟನೆಗಳು ನಡೆದಿವೆ. ಯುವಜನರ ಈ ಹೊಸ ಚೈತನ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಅವರಿಂದ ಹೇಗೆ ಕಲಿಯಬೇಕು ಮತ್ತು ಅದನ್ನು ದೊಡ್ಡ ಆಂದೋಲನವನ್ನಾಗಿ ಬೆಳೆಸುವುದು ಹೇಗೆ ಎಂಬುದನ್ನು ಚರ್ಚಿಸಬೇಕಿದೆ ಎಂದು ಹೇಳಿದರು.
ಸಂವಾದವೇ ಪ್ರಜಾಪ್ರಭುತ್ವದ ಜೀವಾಳ
ವಾದದಲ್ಲಿ ನಮ್ಮದೇ ಸರಿ ಎಂಬ ಗೆಲ್ಲುವಿಕೆಯ ಹುರುಪು ಇರುತ್ತದೆ. ವಾಗ್ವಾದದಲ್ಲಿ ಎರಡು ಭಿನ್ನ ದೃಷ್ಟಿಕೋನಗಳು ಮುಖಾಮುಖಿಯಾಗುತ್ತವೆ. ಆದರೆ ಸಂವಾದವೆಂದರೆ ಅಹಂಕಾರವನ್ನು ಪಕ್ಕಕ್ಕಿಟ್ಟು ಅನುಭವ ಮತ್ತು ತಿಳುವಳಿಕೆಯನ್ನು ಹಂಚಿಕೊಳ್ಳುವುದು, ಭಿನ್ನಮತಗಳೊಂದಿಗೆ ಕಲಿಯುವುದು ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ಮಾನವ ಸಂಬಂಧದ ಪ್ರಕ್ರಿಯೆ ಎಂದು ರಹಮತ್ ತರೀಕೆರೆ ವಿವರಿಸಿದರು.
ಭಾರತ ಮತ್ತು ಕರ್ನಾಟಕದಲ್ಲಿ ಸಂವಾದ ಸಂಸ್ಕೃತಿ ಕಾಣೆಯಾಗುತ್ತಿರುವುದು ಆತಂಕಕಾರಿ. ಸಂವಾದ ಎನ್ನುವುದು ಪ್ರಜಾಸತ್ತಾತ್ಮಕ ಕ್ರಿಯೆ. ಭಿನ್ನಮತಗಳ ಮುಖಾಮುಖಿ ಮತ್ತು ಚರ್ಚೆಯ ಮೂಲಕವೇ ಕಲಿಕೆ ಸಾಧ್ಯ. ಚಳವಳಿಗಳ ಕಾರ್ಯತಂತ್ರಗಳನ್ನು ವಿನಿಮಯ ಮಾಡಿಕೊಳ್ಳುವುದು, ಸಮಾನ ಮನಸ್ಕರ ಜೊತೆಗೆ ಮಾತ್ರವಲ್ಲದೆ ಭಿನ್ನಮತ ಹೊಂದಿರುವವರ ಜೊತೆಯೂ ಕುಳಿತು ಚರ್ಚಿಸುವ ಅವಕಾಶಗಳು ಕಡಿಮೆಯಾಗುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕಾದರೆ ಸಂವಾದ ಸಂಸ್ಕೃತಿಯನ್ನು ಮತ್ತೆ ಮುಂಚೂಣಿಗೆ ತರಬೇಕು ಎಂದು ಹೇಳಿದರು.
ಯಾವ ಸಮಾಜದಲ್ಲಿ ಸಂವಾದಗಳು ನಿಂತುಹೋಗುತ್ತವೆಯೋ ಅಲ್ಲಿ ಸರ್ವಾಧಿಕಾರಿಗಳ ಉದಯವಾಗುತ್ತದೆ. ಶ್ರೇಷ್ಠತೆಯ ವ್ಯಸನಗಳು ಹುಟ್ಟಿಕೊಳ್ಳುತ್ತವೆ. ಜ್ಞಾನ, ವಿಶ್ವವಿದ್ಯಾಲಯಗಳು, ಧರ್ಮಗಳು ಮತ್ತು ಕಲೆಗಳು ಕುಬ್ಜವಾಗುತ್ತವೆ. ಹೀಗಾಗಿ ಸಂವಾದದ ಗೈರುಹಾಜರಿ ಸಮಾಜದ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಎಚ್ಚರಿಸಿದರು.

ಸಂಘರ್ಷಗಳಷ್ಟೇ ಅಲ್ಲ, ಸಂವಾದಗಳ ಮೂಲಕವೂ ಭಾರತದ ಇತಿಹಾಸವನ್ನು ನೋಡಬೇಕು
ಭಾರತದ ಮಧ್ಯಕಾಲೀನ ಇತಿಹಾಸವನ್ನು ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಯುದ್ಧಗಳು, ಸಂಘರ್ಷಗಳು, ರಕ್ತಪಾತ ಮತ್ತು ಧ್ವಂಸಗಳ ಮೂಲಕ ಮಾತ್ರ ನೋಡುವ ದೃಷ್ಟಿಕೋನವನ್ನು ಮುನ್ನೆಲೆಗೆ ತರಲಾಗುತ್ತಿದೆ. ಇತಿಹಾಸದ ಈ ಭಾರ ವರ್ತಮಾನ ಮತ್ತು ಭವಿಷ್ಯವನ್ನು ಕಾಡುತ್ತಿದೆ. ಇತಿಹಾಸವು ಐತಿಹಾಸಿಕ ಪ್ರಜ್ಞೆಯಾಗುವ ಬದಲು ನಮ್ಮ ಎದೆಯ ಮೇಲೆ ಕುಳಿತಿರುವ ಭಾರವಾಗಿ ಪರಿಣಮಿಸಿದೆ ಎಂದು ಅವರು ವಿಶ್ಲೇಷಿಸಿದರು.
ಭಾರತದ ಸಾವಿರ ವರ್ಷಗಳ ಇತಿಹಾಸವನ್ನು ಮತ್ತೊಂದು ದೃಷ್ಟಿಕೋನದಿಂದಲೂ ನೋಡಬಹುದು. ವಿವಿಧ ಭಾಷೆಗಳು, ಧರ್ಮಗಳು, ದರ್ಶನಗಳು ಮತ್ತು ಸಂಸ್ಕೃತಿಗಳ ನಡುವಿನ ಸಂವಾದ, ಕೊಡುಕೊಳ್ಳುವಿಕೆ ಹಾಗೂ ವಿನಿಮಯಗಳ ಮೂಲಕ ಭಾರತದ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ಭಾರತದ ಸಾಂಸ್ಕೃತಿಕ ಸೌಂದರ್ಯವೇ ಭಿನ್ನಮತಗಳ ನಡುವೆ ನಡೆದ ಸಂವಾದದಲ್ಲಿದೆ. ಹಿಂದೂಸ್ತಾನಿ ಸಂಗೀತ, ಉರ್ದು ಭಾಷೆ ಮತ್ತು ಭಾರತೀಯ ಚಿತ್ರಕಲೆಗಳನ್ನು ಸಂವಾದವಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಗುರುಗಳೆಂದು ಗುರುತಿಸಿದ ಕಬೀರ್, ಫುಲೆ ಮತ್ತು ಬುದ್ಧರ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಕಬೀರ್ ಸಂವಾದದ ಫಲಶ್ರುತಿಯಾಗಿದ್ದಾರೆ ಎಂದರು.
ಆದಿಲ್ಶಾಹಿ ಅರಸ ಎರಡನೇ ಇಬ್ರಾಹಿಂ ಬರೆದ ‘ಕಿತಾಬ್-ಇ-ನವರಸ್’ ಕೃತಿ ಗಣಪತಿ, ಸರಸ್ವತಿ ಮತ್ತು ಬಂದೇನವಾಜ್ ಅವರ ಪ್ರಾರ್ಥನೆಗಳೊಂದಿಗೆ ಆರಂಭವಾಗುತ್ತದೆ. ಸಂಗೀತದ ಕುರಿತಾದ ಈ ಕೃತಿ ವಿವಿಧ ಭಾರತೀಯ ಸಂಸ್ಕೃತಿಗಳು, ಭಾಷೆಗಳು ಮತ್ತು ಸಂಗೀತ ಪರಂಪರೆಗಳ ಸಂವಾದದ ಫಲವಾಗಿದೆ. ಸೂಫಿಸಂ ಕೂಡ ಇಂತಹ ಸಂವಾದದ ದೊಡ್ಡ ಫಲವಾಗಿದೆ ಎಂದು ವಿವರಿಸಿದರು.
ಕನ್ನಡ ಸಂಸ್ಕೃತಿಯೂ ಸಂವಾದದ ಫಲ
ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲಿಯೂ ಸಂವಾದದ ಪಾತ್ರ ಮಹತ್ವದ್ದಾಗಿದೆ. ಮಾರ್ಗ ಮತ್ತು ದೇಸಿ ಎಂಬ ಎರಡು ವಿಭಿನ್ನ ಪರಂಪರೆಗಳನ್ನು ಒಟ್ಟುಗೂಡಿಸಿದಾಗ ಮಾತ್ರ ಶ್ರೇಷ್ಠ ಕಾವ್ಯ ಸೃಷ್ಟಿಯಾಗುತ್ತದೆ ಎಂಬುದನ್ನು ಪಂಪ ಗುರುತಿಸಿದ್ದರು. ಬಿ.ಎಂ. ಶ್ರೀ ಅವರು ಪಾಶ್ಚಿಮಾತ್ಯ ಜ್ಞಾನದೊಂದಿಗೆ ಸಂವಾದ ನಡೆಸಿ ಹೊಸ ಸಾಹಿತ್ಯಿಕ ಶೈಲಿಗೆ ದಾರಿ ಮಾಡಿಕೊಟ್ಟರು.
ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬೇಡ್ಕರ್ ಮತ್ತು ರವೀಂದ್ರನಾಥ ಟಾಗೋರ್ ಅವರಂತಹವರು ಪೂರ್ವ ಮತ್ತು ಪಶ್ಚಿಮದ ಜ್ಞಾನಧಾರೆಗಳು ಸಂಧಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಇಪ್ಪತ್ತನೇ ಶತಮಾನದ ಅತ್ಯುತ್ತಮ ಚಿಂತನೆಗಳು ಮತ್ತು ಪ್ರತಿಭೆಗಳು ಇಂತಹ ಕೊಡುಕೊಳ್ಳುವಿಕೆಯ ಫಲವಾಗಿ ರೂಪುಗೊಂಡಿವೆ ಎಂದರು.
ಕುವೆಂಪು, ಲಂಕೇಶ್ ಮತ್ತು ಗೌರಿ ಲಂಕೇಶ್ ಅವರ ಮಾದರಿಗಳು
ಹೊಸ ತಲೆಮಾರಿನೊಂದಿಗೆ ಸಂವಾದ ನಡೆಸಿದ ಕನ್ನಡದ ಮೂವರು ಪ್ರಮುಖ ವ್ಯಕ್ತಿಗಳ ಮಾದರಿಗಳನ್ನು ರಹಮತ್ ತರೀಕೆರೆ ಮುಂದಿಟ್ಟರು.
ಕುವೆಂಪು ಅವರು ಯುವಕರನ್ನು ಕುರಿತು ಹಲವು ಭಾಷಣಗಳನ್ನು ಮಾಡಿದ್ದರು. ಮಲೆನಾಡಿನ ಯುವಕರ ಸಾಲದ ಹೊರೆ, ದುಂದು ವೆಚ್ಚದ ಪ್ರವೃತ್ತಿ ಕುರಿತು ಮಾತನಾಡಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಸಂದೇಶ ನೀಡಿದ್ದರು. ತೇಜಸ್ವಿ, ಲಂಕೇಶ್ ಮತ್ತು ದೇವನೂರ ಮಹಾದೇವ ಅವರಂತಹ ಯುವ ಲೇಖಕರನ್ನು ಉದ್ದೇಶಿಸಿ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಭಾಷಣ ಮಾಡಿದ್ದರು.
ಆದರೆ ಕುವೆಂಪು ಅವರ ಭಾಷಣಗಳಲ್ಲಿ ಹಿರಿಯರು ಕಿರಿಯರಿಗೆ ತಿಳುವಳಿಕೆ ನೀಡುವ ಧೋರಣೆ ಹೆಚ್ಚಾಗಿತ್ತು. ಯುವಜನರಿಂದ ಕಲಿಯುವ ಮತ್ತು ಅವರ ವಿಭಿನ್ನ ಆಲೋಚನೆಗಳನ್ನು ಸ್ವೀಕರಿಸುವ ಸಂವಾದದ ಗುಣ ಅಷ್ಟಾಗಿ ಕಾಣಲಿಲ್ಲ. ಹೀಗಾಗಿಯೇ ತೇಜಸ್ವಿ, ಲಂಕೇಶ್ ಮತ್ತು ಜಿ.ಎಸ್. ಶಿವರುದ್ರಪ್ಪ ಅವರು ತಮ್ಮದೇ ಆದ ವಿಭಿನ್ನ ಹಾದಿಗಳನ್ನು ಕಂಡುಕೊಂಡರು ಎಂದು ವಿಶ್ಲೇಷಿಸಿದರು.
ಎರಡನೇ ಮಾದರಿ ಲಂಕೇಶ್ ಅವರದ್ದು. ತಮ್ಮ ಪತ್ರಿಕೆಯನ್ನು ಯುವಜನರಿಗೆ ಅರ್ಪಿಸಿದ್ದ ಅವರು, ಹೊಸ ತಲೆಮಾರಿನ ಲೇಖಕರೊಂದಿಗೆ ನಿರಂತರವಾಗಿ ಸಂವಾದ ನಡೆಸಿದರು. ಯುವಜನರ ಚೈತನ್ಯವನ್ನು ಸ್ವೀಕರಿಸಿ, ಅವರ ಬೆಳವಣಿಗೆಗೆ ಮಾರ್ಗದರ್ಶನ ನೀಡಿದರು. ಲಂಕೇಶ್ ಪತ್ರಿಕೆಯನ್ನು ಒಂದು ವಿಶ್ವವಿದ್ಯಾಲಯವೆಂದೇ ಪರಿಗಣಿಸಬಹುದು. ಅನೇಕ ಹೊಸ ತಲೆಮಾರಿನ ಲೇಖಕರು ಅವರ ಒಡನಾಟದಲ್ಲಿ ಬೆಳೆದರು ಎಂದರು.
ಮೂರನೇ ಮಾದರಿ ಗೌರಿ ಲಂಕೇಶ್ ಅವರದ್ದು. ಯುವಜನರನ್ನು ತಿದ್ದಬೇಕಾದವರು ತಾವೇ ಎಂಬ ಮನೋಭಾವ ಅವರಲ್ಲಿರಲಿಲ್ಲ. ಯುವಜನರ ಸಂಗಾತಿಯಾಗಿ, ಅವರ ಚೈತನ್ಯವನ್ನು ತಮ್ಮೊಳಗೆ ಸ್ವೀಕರಿಸುವ ಮನೋಭಾವ ಹೊಂದಿದ್ದರು. ಕನ್ಹಯ್ಯ, ಜಿಗ್ನೇಶ್ ಮತ್ತು ಖಾಲಿದ್ ಅವರೊಂದಿಗೆ ಅವರು ನಡೆಸಿದ ಒಡನಾಟದಲ್ಲಿ ತಾಯಿಯ ಪ್ರೀತಿ, ಸಂಗಾತಿತ್ವ ಮತ್ತು ಕಲಿಯುವ ವಿನಯವಿತ್ತು. ಇದು ಕೇವಲ ಕೊಡುವುದಲ್ಲ, ಪಡೆಯುವ ವಿನಯವನ್ನೂ ಒಳಗೊಂಡ ಅದ್ಭುತ ಮಾದರಿ ಎಂದು ಹೇಳಿದರು.
ದೊರೆಸ್ವಾಮಿ ಅವರು ಶತಾಯುಷಿಗಳಾಗಿದ್ದರೂ ಜೀವನದ ಕೊನೆಯವರೆಗೂ ಯುವಜನರೊಂದಿಗೆ ಒಡನಾಟ ಹೊಂದಿದ್ದರು. ತಮ್ಮ ಅನುಭವವನ್ನು ಯುವಜನರೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಅವರಿಂದಲೂ ಕಲಿಯುವ ವಿನಯವನ್ನು ಹೊಂದಿದ್ದರು. ಕೆ.ವಿ. ನಾರಾಯಣ ಅವರೂ ಕಳೆದ ಹತ್ತು ವರ್ಷಗಳಲ್ಲಿ ಇಂತಹ ಸಂವಾದಗಳನ್ನು ನಡೆಸಿದ್ದಾರೆ ಎಂದು ಸ್ಮರಿಸಿದರು.
ಜಾಲತಾಣಗಳು ಸಂಪರ್ಕ ಹೆಚ್ಚಿಸಿದರೂ ಸಂವಾದ ಕಡಿಮೆಯಾಗಿದೆ
ಅನಂತಮೂರ್ತಿ ಅವರು ನಿಧನರಾಗುವ ಮುನ್ನ ‘ಮಾತು ಸೋತ ಭಾರತ’ ಎಂಬ ಪುಸ್ತಕ ಬರೆದಿದ್ದರು. ಇಂದು ನಾವು ಸಂವಾದ ಸೋತ ಭಾರತದೊಂದಿಗೆ ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರಹಮತ್ ತರೀಕೆರೆ ಹೇಳಿದರು.
ಇಂದು ಕ್ಷಣಾರ್ಧದಲ್ಲಿ ಸಾವಿರಾರು ಮೈಲು ದೂರದಲ್ಲಿರುವವರನ್ನು ಸಂಪರ್ಕಿಸಲು ಜಾಲತಾಣಗಳು, ವಿಡಿಯೋ ಮತ್ತು ಇತರ ತಂತ್ರಜ್ಞಾನಗಳು ಲಭ್ಯವಿವೆ. ಆದರೆ ಸಂಪರ್ಕ ಸಾಧನಗಳು ಹೆಚ್ಚಾದರೂ ನಿಜವಾದ ಸಂವಾದ ಕಡಿಮೆಯಾಗುತ್ತಿದೆ. ಜಂತರ್ ಮಂತರ್ನ ಯುವಜನರ ಹೋರಾಟದ ಹಿಂದೆ ಇದೇ ತಂತ್ರಜ್ಞಾನದ ಸಹಾಯವಿದೆ ಎಂಬುದನ್ನೂ ಮರೆಯಬಾರದು. ಆದರೆ ಇದೇ ಜಾಲತಾಣಗಳು ದ್ವೇಷ ಹರಡುವ ಸಂಸ್ಕೃತಿಯನ್ನೂ ಬೆಳೆಸಿವೆ ಎಂದರು.
ಹೊಸ ತಲೆಮಾರಿನಲ್ಲಿಯೇ ಜ್ಞಾನವಿರೋಧಿ, ಅಸಹಿಷ್ಣು ಮತ್ತು ದ್ವೇಷಪೂರಿತ ಮನೋಭಾವಗಳು ಬೆಳೆಯುತ್ತಿರುವುದು ಆತಂಕಕಾರಿ. ಧರ್ಮದ ಹೆಸರಿನಲ್ಲಿ ತನ್ನದೇ ಸಿದ್ಧಾಂತವನ್ನು ಶ್ರೇಷ್ಠವೆಂದು ಭಾವಿಸಿ ಉಳಿದವರೊಂದಿಗೆ ಸಂಬಂಧ ಬೆಳೆಸಲು ನಿರಾಕರಿಸುವ ಮನೋಭಾವ ಇದೆ. ನಕಲಿ ಖಾತೆಗಳ ಮೂಲಕ ಮುಖರಹಿತವಾಗಿ ದಾಳಿ ನಡೆಸುವ ಪ್ರವೃತ್ತಿಯೂ ಹೆಚ್ಚಾಗಿದೆ.
ಇದರ ಪರಿಣಾಮವಾಗಿ ಭಾಷೆ ಮಲಿನವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ನಿಂದನಾತ್ಮಕ ಮತ್ತು ದ್ವೇಷಪೂರಿತ ಭಾಷೆ ಪ್ರವಾಹದಂತೆ ಹರಿಯುತ್ತಿದೆ. ಇದು ಕೇವಲ ಭಾಷಿಕ ಮಾಲಿನ್ಯವಲ್ಲ; ಸೈದ್ಧಾಂತಿಕ ಮತ್ತು ಮಾನಸಿಕ ಮಾಲಿನ್ಯವೂ ಆಗಿದೆ. ಶಾಬ್ದಿಕ ಹಿಂಸೆ ಮುಂದೆ ದೈಹಿಕ ಹಿಂಸೆಗೆ ಕಾರಣವಾಗುತ್ತದೆ. ಗೌರಿ ಲಂಕೇಶ್ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳಿಗೂ ಮುನ್ನ ಅವರ ವಿರುದ್ಧ ಶಾಬ್ದಿಕ ಹಿಂಸೆ ನಡೆದಿದ್ದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ಮಹಿಳೆಯರು, ಅಂಚಿನ ಸಮುದಾಯಗಳ ಧ್ವನಿಗೂ ಅವಕಾಶ ಸಿಗಬೇಕು
ಮತೀಯವಾದ ಮತ್ತು ಮೂಲಭೂತವಾದಿ ಮನೋಭಾವಗಳು ಅನೇಕ ಸಂವಾದಗಳನ್ನು ಕಡಿದುಹಾಕಿವೆ. ಇಸ್ಲಾಮೋಫೋಬಿಯಾದ ಬಲಿಪಶುಗಳಾಗಿರುವ ಮುಸ್ಲಿಂ ಸಮುದಾಯದ ಒಂದು ವಿಭಾಗದಲ್ಲಿ ಆತ್ಮವಿಮರ್ಶೆಯ ಕೊರತೆ ಕಾಣಿಸುತ್ತಿದೆ. ಬಲಿಪಶುಗಳಾಗಿರುವ ಸಮುದಾಯಗಳೂ ಆತ್ಮವಿಮರ್ಶೆಯ ಗುಣವನ್ನು ಕಳೆದುಕೊಳ್ಳಬಾರದು. ಇತರ ಆರೋಗ್ಯಕರ ವಿಚಾರಧಾರೆಗಳೊಂದಿಗೆ ಸಂವಾದ ನಡೆಸಲು ಇದು ಅಗತ್ಯ ಎಂದು ಹೇಳಿದರು.
ಮಹಿಳೆಯರ ಸಮಸ್ಯೆಗಳ ಕುರಿತು ಮಾತನಾಡುವಾಗ ಮಹಿಳೆಯರೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಬೇಕು. ಎಲ್ಲರ ಪರವಾಗಿ ಪುರುಷರೇ ಮಾತನಾಡುವ ಪ್ರವೃತ್ತಿ ಬದಲಾಗಬೇಕು. ಮಹಿಳೆಯರಿಗೆ ತಮ್ಮದೇ ಧ್ವನಿ, ಅಭಿಪ್ರಾಯ ಮತ್ತು ದೃಷ್ಟಿಕೋನವಿದೆ. ಅದನ್ನು ಕೇಳಿಸಿಕೊಳ್ಳುವ ಪ್ರಾಮಾಣಿಕತೆ ಸಮಾಜದಲ್ಲಿ ಇರಬೇಕು ಎಂದರು.
ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರು ‘Remembered Village’ ಪುಸ್ತಕ ಬರೆಯುವ ಸಂದರ್ಭದಲ್ಲಿ ಹಳ್ಳಿಯೊಂದರಲ್ಲಿ ಒಂದು ವರ್ಷ ನೆಲೆಸಿದ್ದರು. ಜಮೀನ್ದಾರರ ಮನೆಯಲ್ಲಿ ವಾಸವಿದ್ದ ಅವರು ದಲಿತರ ಕೇರಿಗೆ ತೆರಳಿ ಅಲ್ಲಿನ ಜನರೊಂದಿಗೆ ಮಾತನಾಡಲು ಬಯಸಿದಾಗ, ಜಮೀನ್ದಾರರು, “ಅವರಿಗೆ ಅವರ ಬಗ್ಗೆ ಏನು ಗೊತ್ತಿದೆ? ನಮಗೆ ಗೊತ್ತಿದೆ. ಕೇಳಿ, ಇಲ್ಲೇ ಬರೆದುಕೊಳ್ಳಿ” ಎಂದು ಹೇಳಿದ್ದರು.
ಇದು ಮತ್ತೊಬ್ಬರ ಧ್ವನಿಯನ್ನು ಅವರ ಅನುಭವವಿಲ್ಲದೆ ಬೇರೆಯವರು ಪ್ರತಿನಿಧಿಸುವ ಪ್ರವೃತ್ತಿಗೆ ಉದಾಹರಣೆ. ದಲಿತರ, ಮಹಿಳೆಯರ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸ್ವಂತ ಧ್ವನಿಗೆ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಮೂಲಭೂತ ಅಗತ್ಯವಾಗಿದೆ ಎಂದು ತಿಳಿಸಿದರು.
ಒಳಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಗಳ ನಡುವೆ ಅಗತ್ಯವಾದ ಸಂವಾದ ಸಾಧ್ಯವಾಗದಿರುವುದು, ವಿಶ್ವವಿದ್ಯಾಲಯಗಳಲ್ಲಿ ವಿವಿಧ ಜ್ಞಾನಶಿಸ್ತುಗಳ ನಡುವೆ ಸಂವಾದದ ಕೊರತೆ, ಕಮ್ಯುನಿಸ್ಟ್ ಪಕ್ಷಗಳ ವಿವಿಧ ಶಾಖೆಗಳ ನಡುವೆ ಸಮನ್ವಯದ ಅಗತ್ಯ, ಕನ್ನಡ ಲೇಖಕರು ಬೇರೆ ಭಾಷೆಗಳ ಲೇಖಕರೊಂದಿಗೆ ಸಂವಾದ ನಡೆಸಬೇಕಾದ ಅಗತ್ಯ ಸೇರಿದಂತೆ ಹಲವು ಪ್ರಶ್ನೆಗಳನ್ನು ಅವರು ಮುಂದಿಟ್ಟರು.
ಯುವಜನರ ಹೊಸ ಹೋರಾಟದ ವಿಧಾನಗಳು ಮಹತ್ವದ್ದು
ಜನ್-ಜಿ ತಲೆಮಾರಿನ ಕುರಿತು ಮಾತನಾಡಿದ ಅವರು, ಈ ತಲೆಮಾರಿನಲ್ಲಿ ನಿರುದ್ಯೋಗಿಗಳು, ನಗರ ಮಧ್ಯಮ ವರ್ಗದವರು, ತಂತ್ರಜ್ಞಾನ ಮತ್ತು ಜಾಗತಿಕ ಸಂಪರ್ಕ ಹೊಂದಿರುವ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ತಲೆಮಾರಿನಲ್ಲಿ ಎಡಪಂಥೀಯರು ಮತ್ತು ಬಲಪಂಥೀಯರು ಇಬ್ಬರೂ ಇದ್ದಾರೆ. ಒಂದು ತಲೆಮಾರಿನ ಎಲ್ಲರೂ ಒಂದೇ ರೀತಿಯ ರಾಜಕೀಯ ಪ್ರಜ್ಞೆ ಹೊಂದಿರುವುದಿಲ್ಲ ಎಂದರು.
ಜಂತರ್ ಮಂತರ್ನಲ್ಲಿ ಯುವಜನರು ತೋರಿಸಿದ ಹೋರಾಟದ ವಿಧಾನಗಳು ವಿಶೇಷವಾಗಿವೆ. ಕೇವಲ ಆಕ್ರೋಶ ವ್ಯಕ್ತಪಡಿಸುವುದಷ್ಟೇ ಹೋರಾಟವಲ್ಲ. ಹಾಡುವುದು, ವ್ಯಂಗ್ಯ ಮಾಡುವುದು, ಕುಳಿತು ಪ್ರತಿಭಟಿಸುವುದು, ಚಿತ್ರ ಬಿಡಿಸುವುದು ಮತ್ತು ಊಟ ಹಂಚಿಕೊಳ್ಳುವುದರ ಮೂಲಕವೂ ಪ್ರಭುತ್ವವನ್ನು ಎದುರಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.
ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ಹೋರಾಡುವಾಗ ಮೊದಲು ಭಯವನ್ನು ದಾಟುವುದು ಮುಖ್ಯ. ಪ್ರಭುತ್ವದ ಬಲಿಷ್ಠತೆಯನ್ನು ಪ್ರಶ್ನಿಸುವ ಧೈರ್ಯವನ್ನು ಯುವಜನರು ತೋರಿಸಿದ್ದಾರೆ. ಸಾಂಪ್ರದಾಯಿಕ ಚಳವಳಿಗಳು ಮತ್ತು ವಿರೋಧ ಪಕ್ಷಗಳು ಮಾಡಲಾಗದ ಸಂಚಲನೆಯನ್ನು ಅವರು ಸೃಷ್ಟಿಸಿದ್ದಾರೆ. ಪ್ರಜಾಪ್ರಭುತ್ವದ ಮಹತ್ವವನ್ನು ಮೌಲ್ಯವಾಗಿ ಮುಂದಿಟ್ಟಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳ ಮೇಲಿನ ಅವಲಂಬನೆಯನ್ನು ಪ್ರಶ್ನಿಸಿ ಪರ್ಯಾಯ ಮಾಧ್ಯಮಗಳ ಸಾಧ್ಯತೆಯನ್ನೂ ತೋರಿಸಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್, ಗಾಂಧಿ ಮತ್ತು ಮಾರ್ಕ್ಸ್ವಾದಿ ಚಿಂತನೆಗಳನ್ನು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುವ ಪ್ರಾಯೋಗಿಕ ವಿವೇಕವನ್ನು ಯುವಜನರು ಪ್ರದರ್ಶಿಸಿದ್ದಾರೆ. ಗಾಂಧಿಯ ಉಪವಾಸ, ಅಂಬೇಡ್ಕರ್ ಅವರ ಸಂವಿಧಾನ ಮತ್ತು ಮಾರ್ಕ್ಸ್ವಾದಿ ಚಿಂತನೆಗಳ ವಿವಿಧ ಅಂಶಗಳನ್ನು ಒಟ್ಟುಗೂಡಿಸಿ ಹೋರಾಟವನ್ನು ರೂಪಿಸಿದ್ದಾರೆ. ಧರ್ಮದ್ವೇಷದ ರಾಜಕಾರಣಕ್ಕೆ ಪ್ರತಿಯಾಗಿ ಎಲ್ಲ ಧಾರ್ಮಿಕ ಸಮುದಾಯಗಳೂ ಒಟ್ಟಾಗಿ ದೇಶ ಕಟ್ಟುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ ಎಂದರು.
ಪರೀಕ್ಷೆಗಳ ಸಮಸ್ಯೆಯಿಂದ ಆರಂಭವಾದ ಹೋರಾಟ ಎಸ್ಐಆರ್ ಸೇರಿದಂತೆ ಹಲವು ವಿಷಯಗಳಿಗೆ ವಿಸ್ತರಿಸಿ, ಪ್ರಭುತ್ವದ ರಾಜಕಾರಣವನ್ನು ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಈ ಬೆಳವಣಿಗೆಯನ್ನು ಕೇವಲ ತಾತ್ಕಾಲಿಕ ಆಕ್ರೋಶವೆಂದು ತಳ್ಳಿಹಾಕಬಾರದು. ಸಣ್ಣ ಸಂಗತಿಗಳಿಂದಲೇ ಜಗತ್ತಿನಲ್ಲಿ ದೊಡ್ಡ ಚಳವಳಿಗಳು ಹುಟ್ಟಿಕೊಂಡಿವೆ. ಹೀಗಾಗಿ ಹೊಸ ತಲೆಮಾರಿನ ರಾಜಕೀಯ ಪ್ರಜ್ಞೆಯನ್ನು ಹೇಗೆ ದೊಡ್ಡ ಆಂದೋಲನವಾಗಿ ರೂಪಿಸಬೇಕು ಎಂಬುದು ನಮ್ಮ ಮುಂದಿರುವ ಸವಾಲು.
ಹಿರಿಯ ತಲೆಮಾರಿನವರು ತಮ್ಮ ಅನುಭವ ಮತ್ತು ತಿಳುವಳಿಕೆಯ ಅಹಂಕಾರವನ್ನು ಬಿಟ್ಟು ಯುವಜನರೊಂದಿಗೆ ಕೈಜೋಡಿಸಬೇಕು. ಸಂಭ್ರಮ ಅಥವಾ ಸಿನಿಕತೆಗೆ ಒಳಗಾಗದೆ, ಎಚ್ಚರಿಕೆಯಿಂದ ಅವರ ಚೈತನ್ಯವನ್ನು ಸಮಾಜದ ಬದಲಾವಣೆಗೆ ಬಳಸಿಕೊಳ್ಳಬೇಕು. ಈ ಸಂವಾದಕ್ಕಾಗಿ ಭಾರತ ಹೊಸ ಭಾಷೆ, ಹೊಸ ನುಡಿಗಟ್ಟು, ಹೊಸ ಸಿದ್ಧಾಂತ ಮತ್ತು ಹೊಸ ತಾತ್ವಿಕ ವಿವೇಕವನ್ನು ಕಂಡುಕೊಳ್ಳಬೇಕು. ಅಂತಹ ವೇದಿಕೆಯಾಗಿ ಜನನುಡಿ ಮುಂದುವರಿಯಲಿ ಎಂದು ಆಶಿಸಿದರು.

ಇದು ಜನ್-ಜಿ ಚಳವಳಿಯಲ್ಲ, ಶಿಕ್ಷಣಕ್ಕಾಗಿ ನಡೆದ ಹೋರಾಟ: ಶರಣ್ಯಾ ವರ್ಮಾ
ಎಸ್ಎಫ್ಐ ರಾಷ್ಟ್ರೀಯ ನಾಯಕಿ ಶರಣ್ಯಾ ವರ್ಮಾ ಅವರು ಮಾತನಾಡಿ, ಭಾರತದ ವಿದ್ಯಾರ್ಥಿ ಚಳವಳಿಗೆ ದೀರ್ಘವಾದ ಪ್ರತಿರೋಧದ ಇತಿಹಾಸವಿದೆ. ಸ್ವಾತಂತ್ರ್ಯವೆಂದರೆ ಕೇವಲ ವಸಾಹತುಶಾಹಿ ಆಡಳಿತದಿಂದ ಮುಕ್ತಿ ಪಡೆಯುವುದಲ್ಲ; ಸಮಾನತೆ ಮತ್ತು ನ್ಯಾಯದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವುದೂ ಆಗಿದೆ. ಈ ಆಶಯವೇ ವಿದ್ಯಾರ್ಥಿ ಚಳವಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಜಂತರ್ ಮಂತರ್ನಲ್ಲಿ ‘ಸಬ್ಕೋ ಶಿಕ್ಷಾ, ಸಬ್ಕೋ ಕಾಮ್’ ಘೋಷಣೆಗಳನ್ನು ಮೊಳಗಿಸುವಾಗ ನಮ್ಮೊಂದಿಗೆ ಇರುವ ಇತಿಹಾಸವನ್ನು ಮರೆಯಬಾರದು. ಜುಲೈ 25ರಂದು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಸುದ್ದಿ ಬಂದಾಗ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆಮಾಡಿತ್ತು. ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ಕ್ರಾಂತಿಕಾರಿಗಳ ಭಾವಚಿತ್ರಗಳನ್ನು ಹಿಡಿದಿದ್ದರು. ಅವುಗಳಲ್ಲಿ ಭಗತ್ ಸಿಂಗ್ ಅವರ ಚಿತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು ಎಂದು ಸ್ಮರಿಸಿದರು.
1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪನೆಯಾಯಿತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್ ಮತ್ತು ಅವರ ಸಹಚರರು ಈ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1928ರಲ್ಲಿ ಅದು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಆಗಿ ಮರುಸಂಘಟನೆಯಾಯಿತು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಪಾತ್ರ ಮತ್ತು ಸಮಾಜವಾದಿ ಆಶಯಗಳು ಮುನ್ನೆಲೆಗೆ ಬಂದವು.
ಈ ಕ್ರಾಂತಿಕಾರಿಗಳು ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದರ ಬಗ್ಗೆ ಮಾತ್ರ ಯೋಚಿಸಲಿಲ್ಲ. ಸ್ವಾತಂತ್ರ್ಯದ ನಂತರ ಯಾವ ರೀತಿಯ ಭಾರತ ನಿರ್ಮಾಣವಾಗಬೇಕು ಎಂಬುದರ ಬಗ್ಗೆಯೂ ಚಿಂತಿಸಿದ್ದರು. ಕಾರ್ಮಿಕರು, ರೈತರು, ಶೋಷಿತರು, ಮಹಿಳೆಯರು ಮತ್ತು ಲಿಂಗ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಆಲೋಚಿಸಿದ್ದರು. ಭಗತ್ ಸಿಂಗ್ ಅವರ ‘ನಾನು ನಾಸ್ತಿಕನಾಗಿರುವುದೇಕೆ?’ ಪ್ರಬಂಧ ಸೇರಿದಂತೆ ಅವರ ಬರಹಗಳು ಕ್ರಾಂತಿಯೆಂದರೆ ಆಡಳಿತಗಾರರನ್ನು ಬದಲಿಸುವುದಕ್ಕಿಂತ ದೊಡ್ಡದಾದ ಸಾಮಾಜಿಕ ಪರಿವರ್ತನೆ ಎಂಬುದನ್ನು ತಿಳಿಸುತ್ತವೆ ಎಂದರು.
1936ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (AISF) ಸ್ಥಾಪನೆಯಾಯಿತು. 1970ರಲ್ಲಿ ಎಸ್ಎಫ್ಐ ಸ್ಥಾಪನೆಯಾಯಿತು. ವಸಾಹತುಶಾಹಿ, ಸಾಮ್ರಾಜ್ಯಶಾಹಿ, ಜಾತಿ ದಬ್ಬಾಳಿಕೆ, ಕೋಮುವಾದ ಮತ್ತು ಅಸಮಾನತೆಯ ವಿರುದ್ಧ ವಿದ್ಯಾರ್ಥಿಗಳ ಹೋರಾಟದ ಪರಂಪರೆಯನ್ನು ಈ ಸಂಘಟನೆಗಳು ಮುಂದುವರಿಸಿಕೊಂಡು ಬಂದಿವೆ ಎಂದು ಹೇಳಿದರು.
ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಸೇರಿದಂತೆ ಹಲವು ತಲೆಮಾರುಗಳ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಬಿತ್ತಿದ ಪ್ರತಿರೋಧದ ಬೀಜ ಇಂದಿಗೂ ಜೀವಂತವಾಗಿದೆ. 2019ರ ಸಿಎಎ-ಎನ್ಆರ್ಸಿ ವಿರೋಧಿ ಹೋರಾಟ, ವಿಶ್ವವಿದ್ಯಾಲಯಗಳೊಳಗಿನ ಶುಲ್ಕ ಹೆಚ್ಚಳದ ವಿರುದ್ಧದ ಚಳವಳಿಗಳು, ಜಾತಿ ದಬ್ಬಾಳಿಕೆ, ಲಿಂಗ ತಾರತಮ್ಯ ಮತ್ತು ಕ್ವಿಯರ್ ಹಾಗೂ ಟ್ರಾನ್ಸ್ಜೆಂಡರ್ ವಿದ್ಯಾರ್ಥಿಗಳ ಹಕ್ಕುಗಳ ಹೋರಾಟಗಳಲ್ಲಿ ಈ ಪ್ರತಿರೋಧದ ಪರಂಪರೆಯನ್ನು ಕಾಣಬಹುದು ಎಂದರು.
ತಲೆಮಾರಲ್ಲ, ರಾಜಕೀಯ ಪ್ರಜ್ಞೆಯೇ ಹೋರಾಟಗಾರರನ್ನು ರೂಪಿಸುತ್ತದೆ
ತಮ್ಮನ್ನು ಜನ್-ಜಿ ಚಳವಳಿಯ ಪ್ರತಿನಿಧಿಯಾಗಿ ಮಾತನಾಡಲು ಆಹ್ವಾನಿಸಲಾಗಿದೆ ಎಂದ ಶರಣ್ಯಾ ವರ್ಮಾ, ಇದು ಕೇವಲ ಜನ್-ಜಿ ಚಳವಳಿಯಲ್ಲ; ಶಿಕ್ಷಣಕ್ಕಾಗಿ ನಡೆದ ಚಳವಳಿ ಎಂದು ಸ್ಪಷ್ಟಪಡಿಸಿದರು.
ಯಾವುದೇ ಒಂದು ತಲೆಮಾರಿನಲ್ಲಿ ಸಹಜವಾಗಿಯೇ ಕ್ರಾಂತಿಕಾರಿ ಗುಣ ಇರುವುದಿಲ್ಲ. ಒಂದು ಜನಸಮೂಹವನ್ನು ಕ್ರಾಂತಿಕಾರಿಯನ್ನಾಗಿ ರೂಪಿಸುವುದು ಅದರ ರಾಜಕೀಯ ಪ್ರಜ್ಞೆ. ನಾವು ಬದುಕುತ್ತಿರುವ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು, ನಮ್ಮ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಗುರುತಿಸುವುದು ಮತ್ತು ಅದರ ವಿರುದ್ಧ ಹೋರಾಡುವ ಪ್ರಜ್ಞೆ ಬೆಳೆಸಿಕೊಳ್ಳುವುದೇ ಜನರನ್ನು ಕ್ರಾಂತಿಕಾರಿಗಳನ್ನಾಗಿ ಮಾಡುತ್ತದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿನ ನೇರ ಪರಿಣಾಮವನ್ನು ಎದುರಿಸುತ್ತಿರುವವರು ಯುವಜನರು. ಶಿಕ್ಷಣ ನಿರಂತರವಾಗಿ ಜನಸಾಮಾನ್ಯರಿಗೆ ಕೈಗೆಟುಕದಂತಾಗುತ್ತಿದೆ. ಅವಕಾಶಗಳಲ್ಲಿನ ಅಸಮಾನತೆ ಹೆಚ್ಚುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ. ಆದ್ದರಿಂದ ಇತ್ತೀಚಿನ ಹೋರಾಟವನ್ನು ಉತ್ತಮ ಶಿಕ್ಷಣಕ್ಕಾಗಿ ನಡೆದ ಚಳವಳಿ ಎಂದು ಗುರುತಿಸಬೇಕು ಎಂದು ಹೇಳಿದರು.
ಎನ್ಟಿಎ ವೈಫಲ್ಯದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುವ ತನ್ನ ಮೂಲ ಉದ್ದೇಶವನ್ನೇ ಪದೇಪದೇ ಈಡೇರಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳು ವ್ಯಂಗ್ಯವಾಗಿ ಅದನ್ನು ‘ನ್ಯಾಷನಲ್ ಟಾರ್ಚರ್ ಏಜೆನ್ಸಿ’ ಅಥವಾ ‘ನ್ಯಾಷನಲ್ ಟ್ರಾಮಾ ಏಜೆನ್ಸಿ’ ಎಂದು ಕರೆಯುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ವಿದ್ಯಾರ್ಥಿ ಮತ್ತು ಅವರ ಕುಟುಂಬ ಆರ್ಥಿಕವಾಗಿ, ಭಾವನಾತ್ಮಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಪಾರ ಶ್ರಮ ಹಾಕಿರುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಅದರ ಪರಿಣಾಮ ಬಡ ಮತ್ತು ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಮೇಲೆ ತೀವ್ರವಾಗಿರುತ್ತದೆ. ಇದು ಕೇವಲ ಪರೀಕ್ಷಾ ವ್ಯವಸ್ಥೆಯ ವೈಫಲ್ಯವಲ್ಲ; ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯವನ್ನು ಅಪಾಯಕ್ಕೆ ತಳ್ಳುವ ಸಂಗತಿಯಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಮುಚ್ಚುವಿಕೆ ಶಿಕ್ಷಣದ ಹಕ್ಕಿನ ಮೇಲಿನ ದಾಳಿ
ಸರ್ಕಾರಿ ಶಾಲೆಗಳ ಸ್ಥಿತಿಯ ಕುರಿತು ಮಾತನಾಡಿದ ಅವರು, ನೀತಿ ಆಯೋಗದ ವರದಿಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ 94 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಅಥವಾ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲಾಗಿದೆ ಎಂದು ತಿಳಿಸಿದರು.
ದೂರದ ಹಳ್ಳಿಯ ಹೆಣ್ಣುಮಗುವಿಗೆ ಶಾಲೆ ನಡೆದುಕೊಂಡು ಹೋಗಬಹುದಾದ ದೂರದಲ್ಲಿದ್ದರೆ ಮಾತ್ರ ಶಿಕ್ಷಣ ಪಡೆಯಲು ಸಾಧ್ಯ. ಆದರೆ ಆ ಶಾಲೆಯನ್ನು ಮುಚ್ಚಿ 15ರಿಂದ 20 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಶಾಲೆಗೆ ಹೋಗುವಂತೆ ಮಾಡಿದರೆ ಆಕೆ ಶಾಲೆ ಬಿಡುವ ಸಾಧ್ಯತೆ ಹೆಚ್ಚುತ್ತದೆ. ಹೀಗೆ ಶಿಕ್ಷಣದ ಹಕ್ಕಿನಿಂದ ಆಕೆಯನ್ನು ದೂರ ಮಾಡಲಾಗುತ್ತದೆ ಎಂದರು.
ಇದು ಕೇವಲ ಸರ್ಕಾರದ ಅಸಮರ್ಥತೆಯಲ್ಲ. ಶಿಕ್ಷಣದ ಅವಕಾಶಗಳಿಂದ ಅಂಚಿನಲ್ಲಿರುವ ಸಮುದಾಯಗಳನ್ನು ವ್ಯವಸ್ಥಿತವಾಗಿ ಹೊರಗಿಡುವ ಪ್ರಕ್ರಿಯೆಯಾಗಿದೆ. ಸರ್ಕಾರದ ನೀತಿಗಳೇ ಇಂತಹ ರಚನೆಗಳನ್ನು ನಿರ್ಮಿಸುತ್ತಿವೆ ಎಂದು ಆರೋಪಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ, ಪರೀಕ್ಷೆಗಳ ಕೇಂದ್ರೀಕರಣ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುತ್ತಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ 2022ರಲ್ಲಿ ಸಿಯುಇಟಿ ಜಾರಿಯಾದ ನಂತರ ಪದವಿ ಪ್ರವೇಶ ಪಡೆದ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 55 ಸಾವಿರದಿಂದ ಒಂದು ವರ್ಷದೊಳಗೆ 34 ಸಾವಿರಕ್ಕೆ ಇಳಿದಿದೆ ಎಂದು ಅವರು ಉದಾಹರಿಸಿದರು.
ನಮ್ಮ ಹೋರಾಟ ಕೇವಲ ಒಬ್ಬ ಶಿಕ್ಷಣ ಸಚಿವರ ರಾಜೀನಾಮೆಗೆ ಸೀಮಿತವಾಗಿಲ್ಲ. ರಾಜೀನಾಮೆ ಒಂದು ಫಲಿತಾಂಶವಾಗಿರಬಹುದು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು, ಪರೀಕ್ಷೆಗಳ ಕೇಂದ್ರೀಕರಣ ನಿಲ್ಲಬೇಕು, ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಕೊನೆಗೊಳ್ಳಬೇಕು. ಎನ್ಟಿಎಯಂತಹ ಸಂಸ್ಥೆಗಳು ತಮ್ಮ ವೈಫಲ್ಯಗಳಿಗೆ ಹೊಣೆಗಾರಿಕೆ ವಹಿಸಬೇಕು. ಜಾತಿ, ಧರ್ಮ, ಪ್ರದೇಶ, ಲಿಂಗ ಮತ್ತು ಆರ್ಥಿಕ ಹಿನ್ನೆಲೆಯ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿ ಚಳವಳಿಗಳ ನಿರಂತರ ಹೋರಾಟವನ್ನು ಗುರುತಿಸಬೇಕು
ಇಂತಹ ಹೋರಾಟಗಳಿಗೆ ನೆಲಮಟ್ಟದಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಸಂಘಟನೆಗಳು ಮತ್ತು ಕಾರ್ಯಕರ್ತರು ಕಾರಣರಾಗಿದ್ದಾರೆ. ಎಸ್ಎಫ್ಐನಂತಹ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿವೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾಜವಾದದ ಆಶಯಗಳನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ.
ವಿದ್ಯಾರ್ಥಿಗಳಿಗೆ ಪ್ರಜಾಸತ್ತಾತ್ಮಕ ಜಾಗಗಳು ದೊರೆಯಬೇಕು, ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣದ ಅವಕಾಶ ಸಿಗಬೇಕು, ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು ಮತ್ತು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಅಧಿಕಾರವನ್ನು ಪ್ರಶ್ನಿಸುವಂತಾಗಬೇಕು ಎಂಬ ಉದ್ದೇಶದಿಂದ ಹಲವು ತಲೆಮಾರುಗಳ ಕಾರ್ಯಕರ್ತರು ರಕ್ತ ಮತ್ತು ಬೆವರನ್ನು ಹರಿಸಿದ್ದಾರೆ. ಅವರನ್ನು ಗುರುತಿಸಿ ಗೌರವಿಸಬೇಕು ಎಂದರು.
ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳು, ಭಗತ್ ಸಿಂಗ್ ಅವರ ಸಮಾಜವಾದದ ಕನಸು, ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಹೋರಾಟಗಳು ಇಂದಿನ ಚಳವಳಿಗಳಿಗೆ ಸ್ಫೂರ್ತಿಯಾಗಿವೆ. ಕರ್ನಾಟಕದ ರೈತ ಮತ್ತು ಕೃಷಿ ಕಾರ್ಮಿಕರ ಸಂಘಟಿತ ಹೋರಾಟಗಳು, ಭೂಸುಧಾರಣಾ ಚಳವಳಿಗಳು ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಆಶಯಕ್ಕಾಗಿ ಪ್ರಾಣತ್ಯಾಗ ಮಾಡಿದ ಕಾಮ್ರೇಡ್ ಭಾಸ್ಕರ್ ಕುಂಹಳೆ ಮತ್ತು ಶ್ರೀನಿವಾಸ್ ಬಜಾಲ್ ಅವರಂತಹ ಹುತಾತ್ಮರಿಂದ ಸ್ಫೂರ್ತಿ ಪಡೆಯಬೇಕು ಎಂದರು.
ಸಾಹಿತ್ಯ ಮತ್ತು ಸಂಸ್ಕೃತಿಯೂ ರಾಜಕೀಯದ ಭಾಗ
ಜನನುಡಿ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ. ತಾವು ಪರ್ಫಾರ್ಮೆನ್ಸ್ ಸ್ಟಡೀಸ್ ವಿದ್ಯಾರ್ಥಿಯಾಗಿದ್ದು, ಕರ್ನಾಟಕದ ಪ್ರಗತಿಪರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತರಗತಿಗಳಲ್ಲಿ ಚರ್ಚಿಸುತ್ತಿರುವುದಾಗಿ ತಿಳಿಸಿದರು.
ಸಮುದಾಯ ರಂಗಭೂಮಿಯ ಕೆಲಸವು ಜನರ ರಂಗಭೂಮಿಯ ಇತಿಹಾಸದಲ್ಲಿ ಮತ್ತು ಭಾರತದ ಪ್ರಗತಿಪರ ಸಾಂಸ್ಕೃತಿಕ ಚಳವಳಿಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ. ಕರ್ನಾಟಕವು ಜಾತಿ ವಿರೋಧಿ ಮತ್ತು ಸಾಮಾಜಿಕ ಸುಧಾರಣಾ ಚಳವಳಿಗಳ ಪ್ರಮುಖ ನೆಲೆಯಾಗಿದೆ. ಸಂಸ್ಕೃತಿ ಮತ್ತು ರಾಜಕಾರಣ ಪರಸ್ಪರ ಪ್ರತ್ಯೇಕವಾದವುಗಳಲ್ಲ ಎಂಬುದನ್ನು ಈ ಇತಿಹಾಸಗಳು ನೆನಪಿಸುತ್ತವೆ ಎಂದರು.
ದೆಹಲಿ ವಿಶ್ವವಿದ್ಯಾಲಯದ ಸಾಹಿತ್ಯ ಉತ್ಸವವನ್ನು ಉಲ್ಲೇಖಿಸಿದ ಅವರು, ಅಲ್ಲಿ ಆಹ್ವಾನಿಸಲಾಗುವ ಭಾಷಣಕಾರರು ಮತ್ತು ಚರ್ಚೆಯ ವಿಷಯಗಳನ್ನು ಗಮನಿಸಿದರೆ ಅದು ಆರ್ಎಸ್ಎಸ್ನ ಮುಖವಾಣಿಯಂತೆ ಕಾಣುತ್ತದೆ ಎಂದು ಟೀಕಿಸಿದರು.
ಭಾರತದ ಸಾಹಿತ್ಯಿಕ ಇತಿಹಾಸದಲ್ಲಿ ಪ್ರೇಮಚಂದ್, ಇಸ್ಮತ್ ಚುಗ್ತಾಯಿ, ಮಂಟೋ ಸೇರಿದಂತೆ ಅನೇಕ ಲೇಖಕರು ಸಾಮಾನ್ಯ ಜನರ ಬದುಕು, ಸಮಾಜದ ವೈರುಧ್ಯಗಳು, ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಅನುಭವಗಳನ್ನು ದಾಖಲಿಸಿದ್ದಾರೆ. ಸಾಹಿತ್ಯವು ಸಮಾಜಕ್ಕೆ ಕನ್ನಡಿ ಹಿಡಿಯುವುದರ ಜೊತೆಗೆ ನಮ್ಮನ್ನು ಪ್ರಶ್ನಿಸುವಂತೆ ಮಾಡಿದೆ.
ಆದರೆ ಇಂದು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಆಯ್ದುಕೊಂಡು ಮಾತ್ರ ನೆನಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಅಂಚಿನಲ್ಲಿರುವ ಸಮುದಾಯಗಳ ಧ್ವನಿಗಳನ್ನು ಹೊರಗಿಡಲಾಗುತ್ತಿದೆ. ಪ್ರಗತಿಪರ ಪರಂಪರೆಗಳನ್ನು ಸಾರ್ವಜನಿಕ ವೇದಿಕೆಗಳಿಂದ ದೂರವಿಡಲಾಗುತ್ತಿದೆ. ಸಾಹಿತ್ಯವನ್ನು ಸಂಕುಚಿತ ಸಾಂಸ್ಕೃತಿಕ ಗುರುತಿನ ಸಂಭ್ರಮಾಚರಣೆಯಾಗಿ ಪರಿವರ್ತಿಸಲಾಗುತ್ತಿದೆ. ಸಾಹಿತ್ಯ ಉತ್ಸವಗಳು ಭಿನ್ನಾಭಿಪ್ರಾಯ, ಪ್ರಶ್ನೆ ಮತ್ತು ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವ ವೇದಿಕೆಗಳಾಗಬೇಕು ಎಂದು ಹೇಳಿದರು.
ಇತಿಹಾಸವನ್ನು ತಿರುಚುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ
ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಪದೇಪದೇ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊಘಲ್ ಕಾಲಘಟ್ಟದ ಇತಿಹಾಸ, ಗುಜರಾತ್ ಗಲಭೆಗಳು, ದಲಿತ ಚಳವಳಿಗಳು ಸೇರಿದಂತೆ ಹಲವು ಮಹತ್ವದ ಐತಿಹಾಸಿಕ ಮತ್ತು ರಾಜಕೀಯ ವಿಷಯಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ ಎಂದು ಟೀಕಿಸಿದರು.
ಒಂದು ಸಮಾಜ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಇತಿಹಾಸ ಅಗತ್ಯ. ಪ್ರಸ್ತುತ ಸಂಸ್ಥೆಗಳು ಹೇಗೆ ರೂಪುಗೊಂಡವು ಮತ್ತು ಜನರು ದಮನಕಾರಿ ವ್ಯವಸ್ಥೆಗಳ ವಿರುದ್ಧ ಹೇಗೆ ಹೋರಾಡಿದರು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಸ್ವಾತಂತ್ರ್ಯ ಯಾರೂ ಸುಮ್ಮನೆ ನೀಡಿದ್ದಲ್ಲ. ವಿವಿಧ ಸಮುದಾಯಗಳ ಜನರ ತ್ಯಾಗ ಮತ್ತು ಹೋರಾಟಗಳ ಫಲವಾಗಿ ಅದು ದೊರೆಯಿತು.
ಇತಿಹಾಸವನ್ನು ಪುರಾಣಕಥೆಗಳಿಗೆ ಸೀಮಿತಗೊಳಿಸಲಾಗುವುದಿಲ್ಲ. ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅದನ್ನು ಮರುಕಥನ ಮಾಡಲೂ ಸಾಧ್ಯವಿಲ್ಲ. ತನ್ನ ಗತಕಾಲವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಸಾಮರ್ಥ್ಯ ಕಳೆದುಕೊಳ್ಳುವ ಸಮಾಜವು ವರ್ತಮಾನವನ್ನು ಅರ್ಥಮಾಡಿಕೊಳ್ಳುವ ಮತ್ತು ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಸಾಧನವನ್ನು ಕಳೆದುಕೊಳ್ಳುತ್ತದೆ ಎಂದರು.
ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಪ್ರಶ್ನಿಸುವ ಸಾಮರ್ಥ್ಯ, ಸ್ವತಂತ್ರವಾಗಿ ಯೋಚಿಸುವ ಶಕ್ತಿ, ಹಕ್ಕು ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹಾಗೂ ಉತ್ತಮ ನಾಗರಿಕರಾಗುವ ಅವಕಾಶವನ್ನು ನೀಡುತ್ತದೆ. ಐತಿಹಾಸಿಕವಾಗಿ ಅವಕಾಶಗಳಿಂದ ವಂಚಿತರಾದವರಿಗೆ ಕನಸು ಕಾಣುವ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಹಕ್ಕನ್ನು ನೀಡುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ಹೆಚ್ಚಳ, ಜಾತಿ ತಾರತಮ್ಯ ಮತ್ತು ಸುರಕ್ಷತೆಯ ಕೊರತೆ
ದೇಶದ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಕುಸಿಯುತ್ತಿರುವ ಮೂಲಸೌಕರ್ಯ, ಹಾಸ್ಟೆಲ್ಗಳ ಕೊರತೆ, ಕಾಯಂ ಬೋಧಕ ಸಿಬ್ಬಂದಿಯ ಅಭಾವ ಮತ್ತು ತಾತ್ಕಾಲಿಕ ನೇಮಕಾತಿ ವ್ಯವಸ್ಥೆ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೇಳಿದರು.
ದೆಹಲಿ ವಿಶ್ವವಿದ್ಯಾಲಯದ ಸತ್ಯನಿಕೇತನದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಸಾವಿರಾರು ವಿದ್ಯಾರ್ಥಿಗಳು ವಾಸಿಸುವ ದೆಹಲಿಯ ಹಲವು ಪ್ರದೇಶಗಳಲ್ಲಿ ಕಾನೂನುಬಾಹಿರ ಮತ್ತು ಅಸುರಕ್ಷಿತ ವಸತಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯಗಳು ಹಾಸ್ಟೆಲ್ ಸೌಲಭ್ಯ ಒದಗಿಸದ ಕಾರಣ ವಿದ್ಯಾರ್ಥಿಗಳು ಅಸುರಕ್ಷಿತ ವಸತಿಗಳಲ್ಲಿ ವಾಸಿಸಬೇಕಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವೇ ಶಿಕ್ಷಣ ಪಡೆಯುವ ಅವಕಾಶವಾಗಿದೆ. ಅದನ್ನು ನಿರಾಕರಿಸುವ ಮೂಲಕ ಅವರನ್ನು ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ ಎಂದು ಹೇಳಿದರು.
ಕ್ಯಾಂಪಸ್ಗಳಲ್ಲಿ ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ ಮತ್ತು ಜಾತಿ ತಾರತಮ್ಯದ ಪ್ರಕರಣಗಳು ಹೆಚ್ಚುತ್ತಿರುವುದನ್ನೂ ಅವರು ಪ್ರಸ್ತಾಪಿಸಿದರು.
ರೋಹಿತ್ ವೇಮುಲ ಅವರ ಸಾಂಸ್ಥಿಕ ಹತ್ಯೆಗೆ ಹತ್ತು ವರ್ಷಗಳು ಕಳೆದಿದ್ದರೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಮುಂದುವರಿದಿದೆ. ಐಐಟಿ ಬಾಂಬೆಯಲ್ಲಿ ಜಾತಿ ತಾರತಮ್ಯಕ್ಕೆ ಸಂಬಂಧಿಸಿದಂತೆ ಸಾಹಿಲ್ ವಾಕಡೆ ಅವರ ಸಾಂಸ್ಥಿಕ ಹತ್ಯೆಯ ಪ್ರಕರಣವೂ ಇದಕ್ಕೆ ಉದಾಹರಣೆಯಾಗಿದೆ. ಈ ಪ್ರಕರಣದ ವಿರುದ್ಧ ಐಐಟಿ ಬಾಂಬೆಯ ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿಯೂ ವಿದ್ಯಾರ್ಥಿಗಳು ಜಾತಿವಾದಿ ಹೇಳಿಕೆ ನೀಡಿದ ಪ್ರಾಧ್ಯಾಪಕರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ದಲಿತ, ಬಹುಜನ ಮತ್ತು ಆದಿವಾಸಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕನ್ನು ರಕ್ಷಿಸಲು ವಿಶ್ವವಿದ್ಯಾಲಯಗಳಲ್ಲಿ ರೋಹಿತ್ ಕಾಯ್ದೆ ಜಾರಿಗೆ ತರಬೇಕೆಂದು ಪ್ರಗತಿಪರ ವಿದ್ಯಾರ್ಥಿ ಚಳವಳಿ ಒತ್ತಾಯಿಸುತ್ತಿದೆ ಎಂದು ತಿಳಿಸಿದರು.
ಕ್ಯಾಂಪಸ್ ಪ್ರಜಾಪ್ರಭುತ್ವ ಮತ್ತು ವಿದ್ಯಾರ್ಥಿ ಸಂಘಗಳ ಚುನಾವಣೆ ಅಗತ್ಯ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಿರ್ಬಂಧಿಸಲಾಗಿದೆ. ಹಿಮಾಚಲ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿಯೂ ಇಂತಹ ಪರಿಸ್ಥಿತಿ ಇದೆ. ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ವಿದ್ಯಾರ್ಥಿಗಳಿಗೆ ನಿರಾಕರಿಸಲಾಗುತ್ತಿದೆ. ಇದು ಕ್ಯಾಂಪಸ್ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಚುನಾಯಿತ ಸಂಘಟನೆಗಳನ್ನು ಹೊಂದುವ ಹಕ್ಕು, ಭಿನ್ನಮತ ವ್ಯಕ್ತಪಡಿಸುವ ಸ್ವಾತಂತ್ರ್ಯ ಮತ್ತು ಸುರಕ್ಷಿತ ಕ್ಯಾಂಪಸ್ಗಳಿಗಾಗಿ ಹೋರಾಡುತ್ತಿದ್ದಾರೆ. ಇವೆಲ್ಲವೂ ಸಂವಿಧಾನದ ಆಶಯಗಳಾಗಿವೆ ಎಂದರು.
ಸಂವಿಧಾನದ ಆಶಯಗಳ ರಕ್ಷಣೆಯೇ ಹೋರಾಟದ ಗುರಿ
ಭಾರತದ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯದ ಆಶಯಗಳನ್ನು ಶರಣ್ಯಾ ವರ್ಮಾ ವಿವರಿಸಿದರು.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ವ್ಯಕ್ತಿಯ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವ ಭ್ರಾತೃತ್ವ ಇವು ಕೇವಲ ಪದಗಳಲ್ಲ. ಭಾರತೀಯ ಜನರು ಪರಸ್ಪರ ಮಾಡಿಕೊಂಡಿರುವ ಬದ್ಧತೆಗಳಾಗಿವೆ ಎಂದರು.
ಕೈಗೆಟುಕುವ ಶಿಕ್ಷಣಕ್ಕಾಗಿ ಹೋರಾಡುವುದು ಅವಕಾಶಗಳ ಸಮಾನತೆಗಾಗಿ ಹೋರಾಡಿದಂತೆ. ಜಾತಿ ತಾರತಮ್ಯದ ವಿರುದ್ಧದ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟ. ಮಹಿಳೆಯರು ಮತ್ತು ಲಿಂಗ ಅಲ್ಪಸಂಖ್ಯಾತರು ಸುರಕ್ಷಿತ ಕ್ಯಾಂಪಸ್ಗಳಿಗಾಗಿ ಒತ್ತಾಯಿಸುವುದು ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ನಡೆಯುವ ಹೋರಾಟ. ವಿದ್ಯಾರ್ಥಿಗಳು ಚುನಾಯಿತ ಸಂಘಗಳು ಮತ್ತು ಭಿನ್ನಮತದ ಹಕ್ಕಿಗಾಗಿ ಹೋರಾಡುವುದು ಪ್ರಜಾಪ್ರಭುತ್ವಕ್ಕಾಗಿ ನಡೆಯುವ ಹೋರಾಟವಾಗಿದೆ ಎಂದು ಹೇಳಿದರು.
ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದನ್ನು ಪ್ರಶ್ನಿಸುವುದೂ ರಾಜಕೀಯ ಭಾಗವಹಿಸುವಿಕೆ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ನಡೆಯುವ ಹೋರಾಟವಾಗಿದೆ ಎಂದರು.
ದೇಶದಲ್ಲಿ 13 ಕೋಟಿಗೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು, ಜನರು ತಮ್ಮನ್ನು ಆಳುವ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಜಂತರ್ ಮಂತರ್ ಹೋರಾಟದ ವಿಶೇಷತೆ: ಎಲ್ಲರಿಗೂ ಶಿಕ್ಷಣ
ಜಂತರ್ ಮಂತರ್ನಲ್ಲಿ ನಡೆದ ಹೋರಾಟದ ತಮ್ಮ ಅನುಭವ ಹಂಚಿಕೊಂಡ ಅವರು, ವಿಭಿನ್ನ ಜಾತಿ, ಧರ್ಮ, ಪ್ರದೇಶ, ಜನಾಂಗೀಯ ಹಿನ್ನೆಲೆ ಮತ್ತು ಲಿಂಗಗಳಿಗೆ ಸೇರಿದ ಜನರು ಒಂದೇ ಬೇಡಿಕೆಯೊಂದಿಗೆ ಒಟ್ಟಾಗಿ ಬಂದಿದ್ದು ಆ ಹೋರಾಟದ ಅತ್ಯಂತ ಅರ್ಥಪೂರ್ಣ ಸಂಗತಿ ಎಂದರು.
ಅವರೆಲ್ಲರೂ ಒಂದೇ ರೀತಿಯ ರಾಜಕೀಯ ಸಿದ್ಧಾಂತ ಅಥವಾ ಅನುಭವ ಹೊಂದಿರಲಿಲ್ಲ. ಆದರೂ ಎಲ್ಲರಿಗೂ ಶಿಕ್ಷಣ ಎಂಬ ಒಂದೇ ಬೇಡಿಕೆಯಡಿ ಒಂದಾಗಿದ್ದರು. ಈ ‘ಎಲ್ಲರಿಗೂ’ ಎಂಬ ಆಶಯವೇ ಭಾರತದ ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದು ಹೇಳಿದರು.
ಎಸ್ಐಆರ್ ವಿರೋಧಿ ಹೋರಾಟ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ಒತ್ತಾಯ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟಗಳು ವಿಭಿನ್ನವಾಗಿದ್ದರೂ ಅವುಗಳ ಬೇರು ಭಾರತದ ದೀರ್ಘ ಪ್ರತಿರೋಧದ ಇತಿಹಾಸದಲ್ಲಿದೆ ಎಂದರು.
ಭಗತ್ ಸಿಂಗ್ ಮತ್ತು ಅವರ ಸಹಚರರು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರು ಬಿತ್ತಿದ ಪ್ರತಿರೋಧದ ಬೀಜ ಇಂದಿಗೂ ಜೀವಂತವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟ, ಎಸ್ಐಆರ್ ವಿರೋಧಿ ಹೋರಾಟ, ಐಐಟಿ ಬಾಂಬೆ ಮತ್ತು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟ, ಶುಲ್ಕ ಹೆಚ್ಚಳದ ವಿರುದ್ಧದ ಹೋರಾಟ, ರೋಹಿತ್ ಕಾಯ್ದೆ ಜಾರಿಗೆ ಆಗ್ರಹ ಮತ್ತು ಚುನಾಯಿತ ವಿದ್ಯಾರ್ಥಿ ಸಂಘಗಳ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಆ ಬೀಜದ ಹೂವುಗಳನ್ನು ಕಾಣಬಹುದು ಎಂದರು.
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಭಿನ್ನಮತವನ್ನು ಹತ್ತಿಕ್ಕಲು, ಇತಿಹಾಸವನ್ನು ಅಳಿಸಲು ಮತ್ತು ಪ್ರಜಾಸತ್ತಾತ್ಮಕ ಜಾಗಗಳನ್ನು ನಿರ್ಬಂಧಿಸಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಪ್ರತಿರೋಧವನ್ನು ಹತ್ತಿಕ್ಕಿದ ಮಾತ್ರಕ್ಕೆ ಅದು ಕಣ್ಮರೆಯಾಗುವುದಿಲ್ಲ. ಅದು ಹೊಸ ರೂಪಗಳನ್ನು ಪಡೆದು, ಹೊಸ ಧ್ವನಿಗಳ ಮೂಲಕ, ಹೊಸ ತಲೆಮಾರುಗಳಲ್ಲಿ ಮತ್ತೆ ಜೀವಂತವಾಗುತ್ತದೆ ಎಂದು ಹೇಳಿದರು.
“ನೀವು ಎಲ್ಲಾ ಹೂವುಗಳನ್ನು ಕತ್ತರಿಸಲು ಪ್ರಯತ್ನಿಸಬಹುದು. ಆದರೆ ವಸಂತ ಬರುವುದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ. ಈ ಹೂವುಗಳು ಹಿಂದೆಯೂ ಅರಳಿವೆ, ಇಂದು ಅರಳುತ್ತಿವೆ ಮತ್ತು ಮುಂದೆಯೂ ಅರಳುತ್ತಲೇ ಇರುತ್ತವೆ” ಎಂದು ಹೇಳಿ ತಮ್ಮ ಭಾಷಣವನ್ನು ಮುಗಿಸಿದರು.
ಜನರ ದೇಣಿಗೆಯಿಂದಲೇ ಜನನುಡಿ: ಮುನೀರ್ ಕಾಟಿಪಳ್ಳ
ಜನನುಡಿ ಸಂಘಟಕರಲ್ಲಿ ಒಬ್ಬರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, 2013ರಿಂದ 2026ರವರೆಗೆ ನಡೆದಿರುವ ಎಲ್ಲಾ ಜನನುಡಿ ಕಾರ್ಯಕ್ರಮಗಳು ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ನಡೆಯುತ್ತಾ ಬಂದಿವೆ ಎಂದು ಹೇಳಿದರು.
ಜನರ ದೇಣಿಗೆಯಿಂದಲೇ ಜನನುಡಿ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ. ಯಾವುದೇ ರಾಜಕಾರಣಿ ಅಥವಾ ಉದ್ಯಮಿಗಳ ಪ್ರಾಯೋಜಕತ್ವವನ್ನು ಈ ಕಾರ್ಯಕ್ರಮ ಸ್ವೀಕರಿಸಿಲ್ಲ. ಬದುಕಿನ ಹಬ್ಬವನ್ನು ಸಂಘಟಿಸುತ್ತಾ ಬಂದಿರುವ ಜನನುಡಿಗೆ ಈ ಬಾರಿಯೂ ಹಲವು ಸಹೃದಯರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ ಎಂದರು.
ಈ ಚಳವಳಿಯ ಸಾಹಿತ್ಯ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಜನರ ಸಹಭಾಗಿತ್ವದಿಂದಲೇ ಜನನುಡಿಯ ಆಶಯ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಂಡು ಮುಂದುವರಿಯಲು ಸಾಧ್ಯ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕ್ರಿಯಾ ಮಾಧ್ಯಮದ ಕ್ಯೂಬಾ ಮತ್ತು ಹೋರಾಟದ ಹಾಡುಗಳು ಎರಡು ಪುಸ್ತಕ ಬಿಡುಗಡೆಗೊಂಡವು. ವೇದಿಕೆಯ ಮೇಲೆ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಎ.ಬಿ.ಇಬ್ರಾಹಿಂ, ಪಿಚ್ವಳ್ಳಿ ಶ್ರೀನಿವಾಸ, ಲವಿತ್ರ ವಸ್ತ್ರದ ಸೇರಿದಂತೆ ಮುಂತಾದವರು ಇದ್ದರು.
