ಇತಿಹಾಸ ಸುಮ್ಮನಿರುವವರನ್ನು ಕ್ಷಮಿಸುವುದಿಲ್ಲ: ಪ್ರಕಾಶ್ ರಾಜ್

Please follow and like us:
ಮಂಗಳೂರು: ಇತಿಹಾಸ ತಪ್ಪು ಮಾಡಿದವರನ್ನು ಕ್ಷಮಿಸುತ್ತದೆ. ಆದರೆ ಸುಮ್ಮನಿರುವವರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಹೇಳಿದರು.

ಜನನುಡಿ 2026 ಪ್ರಯುಕ್ತ ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ “ಯುವಜನ ರಾಜಕಾರಣ : ದಿಕ್ಕು – ಭವಿಷ್ಯ – ಸವಾಲು” ಆಶಯದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇವತ್ತು ಬಿಜೆಪಿ ಜೊತೆಗೆ ಇರುವವರೆಲ್ಲರೂ ಸೈದ್ದಾಂತಿಕ ಕಾರಣಕ್ಕೆ ಜೊತೆಗಿರುವವರಲ್ಲ, ಅದು ಕೇವಲ ಅವಕಾಶವಾದಿಗಳು ಹಾಗೂ ಮಾರಿಕೊಂಡ ಮಾಧ್ಯಮಗಳು. ಇಂದು ಪತ್ರಿಕೆಗಳನ್ನು ನೋಡಿ ಅವು ಯಾವ ಪಕ್ಷಕ್ಕೆ ಸೇರಿದೆ ಅನ್ನೋದನ್ನು ಹೇಳಬಹುದು ಎಂದು ಪ್ರಕಾಶ್ ರಾಜ್ ಹೇಳಿದರು.

ಪೊಲೀಸ್ ಇಲಾಖೆ, ಉದ್ಯಮಿಗಳು, ಸಂಸ್ಥೆಗಳು, ನ್ಯಾಯಸ್ಥಾನಗಳೇ ‘ತಾರೀಕ್ ಪೆ ತಾರೀಕ್’ ಹೇಳ್ತಿರೋದು “ಇಟ್ ಈಸ್ ಜಸ್ಟ್ ಎ ಪವರ್ ಆ್ಯಂಡ್ ದ ಫಿಯರ್” ಎಂದ ಅವರು, ದೇಶ ಇವತ್ತು ಸೈದ್ಧಾಂತಿಕವಾಗಿ ಮಾರಿಕೊಂಡಕ್ಕಿಂತ ಅವಕಾಶ ಬಾಧೆಯಿಂದ ನೋವು ಅನುಭವಿಸುತ್ತಿದೆ ಎಂದರು.

ಫುಟ್ಬಾಲ್ ಮ್ಯಾಚ್ ಗೆ ಹೋದರೆ ನಾವು ಆಟಗಾರರಾಗಬೇಕು, ಅಂಪೈರ್ ಆಗಬೇಕು ಇಲ್ಲವೇ ವೀಕ್ಷಕನಾಗಿರಬೇಕು. ಆದರೆ, ನಾವೇ ಫುಟ್ಬಾಲ್ ಆಗುತ್ತಿದ್ದೇವೆ. ದೇಶ ನಡೆಯುತ್ತಿರುವುದು ನಮ್ಮ ತೆರಿಗೆ, ದುಡಿಮೆಯಿಂದ. ರಾಜಕೀಯ ಪಕ್ಷಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಅನ್ನೋದಕ್ಕಿಂತ ನಾವೇ ಮೂರ್ಖರಾಗುತ್ತಿದ್ದೇವೆ. ಹಾಗಾಗಿ ತಪ್ಪು ನಮ್ಮಲ್ಲೂ ಇದೆ ಎಂದರು.

ಬದುಕಿಗೆ ಒಂದು ಅರ್ಥ ಬೇಕು. ಸಾಯೋದಕ್ಕಿಂತ ಮುಂಚೆ ನಾನು ಸಾಯಲ್ಲ. ನೇರವಾಗಿ ಮಾತನಾಡಿದರೆ ಅವರು ಹೆದರುತ್ತಾರೆ. ಅವರು ಪುಕ್ಕಲರು. ಧೈರ್ಯವಾಗಿ ಎದ್ದರೆ ಹಿಂದೆ ಸರಿಯುತ್ತಾರೆ. ಪ್ರಜೆಗಳು ಒಂದೆಡೆ ಸೇರಿದರೆ ಹೆದರುತ್ತಾರೆ ಎಂದರು.

ಗೌರಿ ಲಂಕೇಶ್ ಅಂತ್ಯಕ್ರಿಯೆಯ ವೇಳೆ ‘ನಾನು ಗೌರಿಯನ್ನು ಹೂಳುತ್ತಿಲ್ಲ, ಬಿತ್ತುತ್ತಿದ್ದೇನೆ’ ಎಂದು ಹೇಳಿದ ಮಾತು ಸತ್ಯವಾದುದು. ಏಕೆಂದರೆ, ಒಂದು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ, ಅದಕ್ಕಿಂತ ದೊಡ್ಡದಾದ ಪ್ರತಿರೋಧದ ಧ್ವನಿ ಎದ್ದುಬರಲೇಬೇಕು ಎಂದ ಅವರು, ನನ್ನಲ್ಲಿ ಇಂತಹ ಪ್ರತಿರೋಧದ ಧ್ವನಿ ಮೊಳಗಲು ಗೌರಿ ಒಂದು ಮಾಧ್ಯಮವಾದರೆ, ಅದಕ್ಕೆ ಭದ್ರ ಬುನಾದಿ ಹಾಕಿದ್ದು ನಮ್ಮನ್ನು ಬೆಳೆಸಿದ ಕನ್ನಡ ಸಾಹಿತ್ಯ ಮತ್ತು ಲಂಕೇಶ್ ಅವರಂತಹ ಕನ್ನಡದ ಪ್ರತಿರೋದದ ಪರಂಪರೆ‌ ಎಂದರು.

ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಇದು ಮಾಡಬೇಕಾದ ಕೆಲಸ. ಮುಂದಿನ ಎರಡು ವರ್ಷ ಕಾರ್ಯಕ್ರಮಗಳ ಪರ್ವ ಅಲ್ಲ. ಪ್ರತಿಭಟನೆಗಳ ಪರ್ವ ಎಂದರು.

ಡಾ. ನಾಗೇಗೌಡ ಕೆ.ಎಸ್. ಅವರು ಮಾತುಕತೆಯನ್ನು ನಡೆಸಿಕೊಟ್ಟರು.

Please follow and like us:
Donate Janashakthi Media

Leave a Reply

Your email address will not be published. Required fields are marked *