ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದು, ಸ್ಥಳೀಯ ಮಟ್ಟದಲ್ಲಿ ಬೆಳೆದಿರುವ ಪ್ರಭಾವ ಜಾಲಗಳನ್ನು ಮುರಿಯುವುದು ಹಾಗೂ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭಾರಿ ಪ್ರಮಾಣದ ವರ್ಗಾವಣೆ ನಡೆಸಿದೆ. ಇಲಾಖೆಯ ಸುಮಾರು 160 ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಇದು ಇಲಾಖೆಯ ಇತಿಹಾಸದಲ್ಲೇ ಅತಿ ದೊಡ್ಡ ವರ್ಗಾವಣೆಗಳಲ್ಲಿ ಒಂದಾಗಿದೆ. ಗಣಿ
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಗಣಿಗಾರಿಕೆ ತಡೆ, ಖನಿಜ ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆ, ಆದಾಯ ಸಂಗ್ರಹದಲ್ಲಿ ಸುಧಾರಣೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರ್ಷಗಳ ಕಾಲ ಒಂದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವ ಮೂಲಕ ಸ್ಥಳೀಯ ಪ್ರಭಾವ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ವರ್ಗಾವಣೆಯ ನಂತರ ಕ್ಷೇತ್ರ ಮಟ್ಟದ ಮೇಲ್ವಿಚಾರಣೆ, ಕಾನೂನು ಜಾರಿ ಹಾಗೂ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವತ್ತ ವಿಶೇಷ ಒತ್ತು ನೀಡಲಾಗುವುದು ಎಂದು ಹೇಳಲಾಗಿದೆ. ಗಣಿ
ಇದನ್ನೂ ಓದಿ :ಕುರಿ ಕಾಯುತ್ತಾ ಓದಿದ ಕೊಪ್ಪಳದ ಯುವಕನ ಸಾಧನೆ: ನೀಟ್‌ನಲ್ಲಿ ದೇಶಕ್ಕೇ 694ನೇ ರ‍್ಯಾಂಕ್
ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದ್ದು, ಅಕ್ರಮ ಗಣಿಗಾರಿಕೆ ಮತ್ತು ಆಡಳಿತಾತ್ಮಕ ಲೋಪಗಳ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಈ ವ್ಯಾಪಕ ವರ್ಗಾವಣೆ ಕ್ರಮ ಮಹತ್ವ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಇನ್ನಷ್ಟು ಕಠಿಣ ಜಾರಿ ಕ್ರಮಗಳು ಹಾಗೂ ಇಲಾಖೆಯ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಇದನ್ನೂ ನೋಡಿ : ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್ | ಕೆ ಎಸ್ ವಿಮಲಾ
