ಬೆಂಗಳೂರು: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರು ಗೃಹ ಇಲಾಖೆಯಲ್ಲಿ ಚುರುಕಿನ ಚಟುವಟಿಕೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇಲಾಖೆಯ ಕಾರ್ಯವೈಖರಿ ಕುರಿತು ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಈ ನಡುವೆ, ಗೃಹ ಇಲಾಖೆಯಲ್ಲಿ “ಪಂಚ ಸೂತ್ರಗಳ” ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಮಾಜದ ಪ್ರಮುಖ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಐದು ಅಂಶಗಳ ಮೇಲೆ ವಿಶೇಷ ಕೇಂದ್ರೀಕರಣ ನೀಡಲಾಗುತ್ತಿದೆ.
ಸೂತ್ರ – 1: ಡ್ರಗ್ಸ್ ಮಾಫಿಯಾಗೆ ಕಡಿವಾಣ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಡ್ರಗ್ಸ್ ಮಾಫಿಯಾ ನಿಯಂತ್ರಣ ಪೊಲೀಸ್ ಇಲಾಖೆಗೂ ಸವಾಲಾಗಿದೆ. ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ 45 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ‘ನಾನೂ ಕಾಕ್ರೋಚ್’ ಪ್ರಕಾಶ್ ರಾಜ್ ರಿಂದ ಮಹುವಾ ಮೊಯಿತ್ರಾವರೆಗೆ ಯುವಕರ ಚಳವಳಿಗೆ ವ್ಯಾಪಕ ಬೆಂಬಲ
ಅಷ್ಟೇ ಅಲ್ಲದೆ, ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 200 ವಿದೇಶಿಗರನ್ನು ಗಡಿಪಾರು ಮಾಡಲಾಗಿತ್ತು. ಇಂತಹ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಡ್ರಗ್ಸ್ ಮಾಫಿಯಾಗೆ ನಿಯಂತ್ರಣ ಬಿದ್ದಿಲ್ಲ. ಹೀಗಾಗಿ ಮಾದಕ ವ್ಯಸನ ಮತ್ತು ಮಾರಾಟದ ಬಗ್ಗೆ ಝೀರೋ ಟಾಲರೆನ್ಸ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಠಿಣ ಸೂಚನೆ ನೀಡಿದ್ದಾರೆ.
ಸೂತ್ರ – 2 : ಕೋಮು ಗಲಭೆ ನಿಯಂತ್ರಣ
ರಾಜ್ಯದಲ್ಲಿ ಕೋಮು ಸಂಘರ್ಷ ಬಹುದೊಡ್ಡ ಸವಾಲಾಗಿದೆ. ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಹಲವು ಬಲಿಗಳಾಗಿವೆ. ಇದೀಗ ಮಂಡ್ಯ, ಬಾಗಲಕೋಟೆಗೂ ಕೋಮು ಸಂಘರ್ಷ ವಿಸ್ತರಿಸಿದೆ. ಇಂತಹ ಇಂತಹ ಸಂದರ್ಭದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ನೀಡದಂತೆ ಕ್ರಮ ವಹಿಸಿಕೊಳ್ಳುವುದು ಅಗತ್ಯವಾಗಿದೆ.
ಇನ್ನೇನು ಎರಡು ವರ್ಷಗಳಲ್ಲಿ ಚುನಾವಣೆ ಬರಲಿದೆ. ಕರಾವಳಿ ಮತ್ತು ಇತರ ಜಿಲ್ಲೆಗಳಲ್ಲಿ ಕೋಮು ಸಂಘರ್ಷದ ವಾತಾವರಣವನ್ನು ಕಿಡಿಗೇಡಿಗಳು ಸೃಷ್ಟಿಸುವ ಆತಂಕ ಇದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಪ್ರಿಯಾಂಕ್ ಖರ್ಗೆ ಸೂಚನೆಗಳನ್ನು ನೀಡಿದ್ದಾರೆ.
ಸೂತ್ರ – 3: ಮಹಿಳಾ ದೌರ್ಜನ್ಯಕ್ಕೆ ಬ್ರೇಕ್
ಮಹಿಳಾ ದೌರ್ಜನ್ಯ ನಿಯಂತ್ರಣವೂ ಬಹುದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 1902 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2025 ರಲ್ಲಿ 586 ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸೂಚನೆಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಿ ಇಲ್ಲದೆ ಕ್ರಮ ಕೈಗೊಳ್ಳಬೇಕು ಎಂಬುವುದು ಸಚಿವರ ನಿಲುವಾಗಿದೆ.
ಸೂತ್ರ – 4 : ರೌಡಿಗಳ ಜೊತೆ ಸಿಬ್ಬಂದಿ ಸಂಪರ್ಕಕ್ಕೆ ಕಡಿವಾಣ
ಸಮಾಜ ವಿರೋಧಿ ಶಕ್ತಿಗಳು, ರೌಡಿಗಳು, ಕೋಮು ಸಂಘಟನೆಗಳಲ್ಲಿ ಗುರುತಿಸಿಕೊಂಡವರ ಜೊತೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಸಂಪರ್ಕ ಹೊಂದುವ ವಿಚಾರವಾಗಿ ಸಚಿವರು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ರೌಡಿಗಳು, ಮತೀಯ ಸಂಘಟನೆಗಳ ನಾಯಕರ ಜೊತೆಗೆ ಫೋಟೋಗಳನ್ನು ಹಂಚಿಕೊಳ್ಳುವುದು ಹಾಗೂ ಅಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.
ಸೂತ್ರ – 5: ಪೊಲೀಸ್ ಇಲಾಖೆಯಿಂದ ರಿಯಲ್ ಎಸ್ಟೇಟ್ ಮಧ್ಯವರ್ತಿ ಬೇಡ
ಪೊಲೀಸ್ ಇಲಾಖೆಯಲ್ಲಿ ಸಿವಿಲ್ ವ್ಯಾಜ್ಯಗಳ ಮಧ್ಯವರ್ತಿ ಕೆಲಸ ಮಾಡುತ್ತಿರುವ ಹಲವು ಪ್ರಕರಣಗಳು ಇವೆ. ಹೀಗಾಗಿ ಭೂವಿವಾದಗಳನ್ನು ಪೊಲೀಸ್ ಇಲಾಖೆಯಲ್ಲಿ ಅಥವಾ ಠಾಣೆಗಳಲ್ಲಿ ಬಗೆಹರಿಸಬಾರದು. ಹಿರಿಯ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಬಾರದು ಎಂಬ ಸೂಚನೆಯನ್ನು ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಬಗೆಹರಿಯಬೇಕಾಗಿರುವ ಭೂವಿವಾದಗಳು ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಬಗೆಹರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಇವೆ. ಹೀಗಾಗಿ ಗೃಹ ಸಚಿವ ಪ್ರಿಯಾಂಕ್ ಈ ಸೂಚನೆ ನೀಡಿದ್ದಾರೆ.
ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
