ಕೋಲಾರ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆಗಳಿಂದ ಮನವಿ
ಕೋಲಾರ: ಪ್ರಸ್ತುತ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಕೇಳುತ್ತಿರುವ ಕಠಿಣ ದಾಖಲೆಗಳನ್ನು ಒದಗಿಸಲಾಗದೆ, ದೊಡ್ಡ ಸಂಖ್ಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಕೈಬಿಡಲ್ಪಡುತ್ತಿದ್ದಾರೆ. ಮತದಾನ
ಈ ಹಿನ್ನೆಲೆಯಲ್ಲಿ ಜನರು ತಮ್ಮ ಸಾಂವಿಧಾನಿಕ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕೋಲಾರದ ಎಡ, ದಲಿತ, ಅಲ್ಪಸಂಖ್ಯಾತರ ಹಾಗೂ ರೈತ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. ಮತದಾನ
ಸಂವಿಧಾನದ ಜನ ಪ್ರಾತಿನಿಧ್ಯ ಕಾಯ್ದೆಯಡಿ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶವಿದ್ದರೂ, ಈಗ ಜಾರಿಗೆ ತಂದಿರುವ ‘ವಿಶೇಷ’ ನಿಯಮಗಳು ದೇಶದ ಬಡ ಮತ್ತು ಸಾಮಾನ್ಯ ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದಂತಿದೆ.
ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ; ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
ಇತರ ರಾಜ್ಯಗಳಲ್ಲಿ ಎದುರಾಗಿರುವ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ಕಾಲಾವಕಾಶ ವಿಸ್ತರಣೆ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವುದರಿಂದ, ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇರುವ ಕಾಲಾವಕಾಶವನ್ನು ವಿಸ್ತರಿಸಬೇಕು.
ತಾರ್ಕಿಕ ವ್ಯತ್ಯಾಸಗಳ ನೆಪದಲ್ಲಿ ನೋಟಿಸ್ ಬೇಡ: ಮತದಾರರ ಹೆಸರು, ಉಪನಾಮ (ಸರ್ ನೇಮ್) ಅಥವಾ ಇನಿಷಿಯಲ್‌ಗಳಲ್ಲಿರುವ ತಪ್ಪುಗಳು ಚುನಾವಣಾ ಆಯೋಗದ ಲೋಪದಿಂದ ಆಗಿರುತ್ತವೆ. ಇದನ್ನು ಮತದಾರರ ತಪ್ಪೆಂದು ಪರಿಗಣಿಸಿ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು ಹಾಗೂ ‘ಲಾಜಿಕಲ್ ಡಿಸ್ತ್ರಿಪೆನ್ಸಿ’ ನಿಯಮವನ್ನು ರಾಜ್ಯದಲ್ಲಿ ಅಳವಡಿಸಬಾರದು.

ಮ್ಯಾಪಿಂಗ್-ಮ್ಯಾಚಿಂಗ್‌ಗೆ ಸಮಯಾವಕಾಶ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮ್ಯಾಪಿಂಗ್ ಮತ್ತು ಮ್ಯಾಚಿಂಗ್ ಪ್ರಕ್ರಿಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ, ಇದನ್ನು ಸಂಪೂರ್ಣಗೊಳಿಸಲು ಹೆಚ್ಚಿನ ಗಮನಹರಿಸಿ ಕಾಲಾವಕಾಶ ನೀಡಬೇಕು.
ಸೇವಾ ಕೇಂದ್ರಗಳ ಸ್ಥಾಪನೆ: ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ವಿಶೇಷ ಸೇವಾ ಕೇಂದ್ರಗಳನ್ನು ತೆರೆಯಬೇಕು.
ದಾಖಲೆಗಳ ಸಡಲಿಕೆ: ಮತದಾರರ ಚೀಟಿ ಸೇರಿದಂತೆ ಬಡವರ ಬಳಿ ಇರುವ ಸಾಮಾನ್ಯ ದಾಖಲೆಗಳನ್ನು ತಿರಸ್ಕರಿಸುವ ಚುನಾವಣಾ ಆಯೋಗದ ಧೋರಣೆ ಸರಿಯಲ್ಲ. ಸರ್ಕಾರದ ಸಕ್ಷಮ ಪ್ರಾಧಿಕಾರಗಳು ನೀಡಿರುವ ಗುರುತಿನ ಚೀಟಿಗಳನ್ನೇ ಅರ್ಹ ದಾಖಲೆಯಾಗಿ ಪರಿಗಣಿಸಬೇಕು
ವಿಶೇಷ ತಂಡಗಳ ರಚನೆ:
ಜಾತಿ, ವಾಸಸ್ಥಳ ಹಾಗೂ ವಂಶವೃಕ್ಷದಂತಹ ಅಗತ್ಯ ಪ್ರಮಾಣಪತ್ರಗಳನ್ನು ಯುದ್ಧೋಪಾದಿಯಲ್ಲಿ ವಿತರಿಸಲು ವಿಶೇಷ ಸರ್ಕಾರಿ ತಂಡಗಳನ್ನು ರಚಿಸಬೇಕು.
ಜನನ ಪ್ರಮಾಣಪತ್ರದ ನಿಯಮ ಸರಳೀಕರಣ: ಎಸ್‌ಐಆರ್ ಪ್ರಕ್ರಿಯೆಗೆ ಜನನ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದ್ದು, ಇದಕ್ಕಾಗಿ ಬಡವರು ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸಬೇಕು. ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಇಲಾಖೆಯ ಸಕ್ಷಮ ಪ್ರಾಧಿಕಾರವೇ ನೇರವಾಗಿ ಜನನ ಪ್ರಮಾಣಪತ್ರ
ನೀಡುವ ವ್ಯವಸ್ಥೆ ಮಾಡಬೇಕು.

ಬಾಲ್ಯ ವಿವಾಹದ ಹಿನ್ನೆಲೆ ಪರಿಗಣಿಸಿ: ರಾಜ್ಯದಲ್ಲಿ 30 ವರ್ಷಗಳ ಹಿಂದೆ ಶೇ. 45 ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿದ್ದ ಕಾರಣ, ತಾಯಿ ಮತ್ತು ಮಕ್ಕಳ ವಯಸ್ಸಿನ ಅಂತರ ಕಡಿಮೆ ಇರುವುದು ಸಹಜ. ಇಂತಹ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಯಾರನ್ನೂ ಮತದಾರರ ಪಟ್ಟಿಯಿಂದ ಕೈಬಿಡಬಾರದು.
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಜನರ ಮತದಾನದ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವು ಈ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ವೇಳೆ ದಸಂಸ ಅಂತರರಾಜ್ಯ ಸಂಚಾಲಕ ಎನ್.ಮುನಿಸ್ವಾಮಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ, ಸಿಪಿಐಎಂ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ಸಿ.ವಿ. .ಮುನಿವೆಂಕಟಪ್ಪ, ದಸಂಸ ಮುಖಂಡರಾದ ಹೂವರಸನಹಳ್ಳಿ ರಾಜಪ್ಪ, ದೇವರಾಜ್, ನರಸಿಂಹರಾಜು, ಮುನಿಯಪ್ಪ, ರೈತ ಸಂಘದ ಮುಖಂಡರಾದ ಗಂಗಮ್ಮ, ಎನ್ ಎನ್ ಶ್ರೀರಾಮ್, ವಿ.ನಾರಾಯಣರೆಡ್ಡಿ, ಸಿಂಗಪುರ್ ನಾರಾಯಣಸ್ವಾಮಿ, ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಸಾಧಿಕ್ ಅಹ್ಮದ್, ಶ್ರೀನಿವಾಸಪುರ ಪುರಸಭಾ ಸದಸ್ಯ ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ: “ಅನ್ನದಾತನ ಬೆನ್ನಿಗೆ ಚೂರಿ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದೇ ನಿಲುವೇ?” | ಬಸವರಾಜ | ಗುರುರಾಜ ದೇಸಾಯಿ
