ಬೆಂಗಳೂರು: ₹50,000ಕ್ಕಿಂತ ಹೆಚ್ಚು ವಾರ್ಷಿಕ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರನ್ನು ಒದಗಿಸಬೇಕು ಎಂಬ ಮುಖ್ಯಮಂತ್ರಿಯವರ ಪ್ರಸ್ತಾವನೆ ಅತ್ಯಂತ ಖಂಡನೀಯವಾಗಿದೆ. ಇದು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಕ್ರಮವಲ್ಲ; ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ, ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ದುರ್ಬಲ ವರ್ಗಗಳ ಮಕ್ಕಳ ಭವಿಷ್ಯವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ದಯೆ ಮತ್ತು ಮರ್ಜಿಗೆ ಒಪ್ಪಿಸುವ ಹೊಸ ಬಗೆಯ ಖಾಸಗೀಕರಣದ ಮಾದರಿಯಾಗಿದೆ ಎಂದು ಪಾಫ್ರೆ (PAFRE – People’s Alliance for Fundamental Right to Education) ಅಭಿಪ್ರಾಯಪಡುತ್ತದೆ. ಬೆಂಗಳೂರು
ಶಿಕ್ಷಣವು ದಾನ-ಧರ್ಮ ಅಥವಾ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಯೋಜನೆಯಲ್ಲ; ಸಂವಿಧಾನದ ಅನುಚ್ಛೇದ 21ಎ ಅಡಿಯಲ್ಲಿ ಮಾನ್ಯತೆ ಪಡೆದ ಕಾಯಿದೆಯ ಸೆಕ್ಷನ್ 3 ಪ್ರತಿಯೊಬ್ಬ 6ರಿಂದ 14 ವರ್ಷದ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಾತರಿಪಡಿಸುತ್ತದೆ. ಸೆಕ್ಷನ್ಗಳು 6, 7, 8 ಮತ್ತು 9 ಶಾಲೆ ಸ್ಥಾಪನೆ, ಅಗತ್ಯ ಹಣಕಾಸು ಒದಗಿಸುವುದು, ಮಕ್ಕಳ ಪ್ರವೇಶ ಮತ್ತು ಹಾಜರಾತಿ ಖಚಿತಪಡಿಸುವುದು, ಶಿಕ್ಷಕರು, ಮೂಲಸೌಕರ್ಯ, ಕಲಿಕಾ ಸಾಮಗ್ರಿ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ಹೊಣೆಗಾರಿಕೆಯನ್ನು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳ ಮೇಲೆ ವಿಧಿಸುತ್ತವೆ. ಹೀಗಿರುವಾಗ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಖಾಸಗಿ ಸಂಸ್ಥೆಗಳು ಒದಗಿಸಲಿ ಎನ್ನುವುದು ಸರ್ಕಾರ ತನ್ನ ಸಂವಿಧಾನಬದ್ಧ ಮತ್ತು ಕಾನೂನುಬದ್ಧ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಬೇಜವಾಬ್ದಾರಿ ಪ್ರಸ್ತಾವನೆಯಾಗಿದೆ. ಬೆಂಗಳೂರು
ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 19 ಮತ್ತು ಅದರ ಅನುಸೂಚಿ ಪ್ರತಿಯೊಂದು ಶಾಲೆಯಲ್ಲೂ ಅಗತ್ಯ ಮೂಲಸೌಕರ್ಯ ಇರಬೇಕೆಂದು ಕಡ್ಡಾಯಪಡಿಸುತ್ತವೆ. ಸೆಕ್ಷನ್ಗಳು 23, 24 ಮತ್ತು 25 ಅರ್ಹ ಶಿಕ್ಷಕರ ನೇಮಕ, ಅವರ ಕರ್ತವ್ಯಗಳು ಮತ್ತು ನಿಗದಿತ ವಿದ್ಯಾರ್ಥಿ–ಶಿಕ್ಷಕರ ಅನುಪಾತವನ್ನು ಖಚಿತಪಡಿಸುವ ಅಗತ್ಯವನ್ನು ಒತ್ತಿಹೇಳುತ್ತವೆ. ಗ್ರಾಮೀಣ ಶಾಲೆಗಳ ಶಿಕ್ಷಕರ ಕೊರತೆಗೆ ಪರಿಹಾರ ಖಾಸಗಿ ಶಾಲೆಗಳ ತಾತ್ಕಾಲಿಕ ಕೃಪೆಯಲ್ಲ; ಸರ್ಕಾರವೇ ಎಲ್ಲ ಖಾಲಿ ಹುದ್ದೆಗಳಿಗೆ ಅರ್ಹ ಶಿಕ್ಷಕರನ್ನು ಶಾಶ್ವತವಾಗಿ ನೇಮಕ ಮಾಡಿ ಸಮಾನ ಮತ್ತು ಗುಣಮಟ್ಟದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಬೇಕು. ಶಿಕ್ಷಕರ ನೇಮಕ ಮತ್ತು ಶೈಕ್ಷಣಿಕ ಆಡಳಿತವನ್ನು ಖಾಸಗಿ ಸಂಸ್ಥೆಗಳ ಕೈಗೆ ಒಪ್ಪಿಸಿದರೆ ಅವರ ಉತ್ತರದಾಯಿತ್ವ, ಸೇವಾ ಷರತ್ತು, ಪಠ್ಯಕ್ರಮದಲ್ಲಿ ಹಸ್ತಕ್ಷೇಪ ಮತ್ತು ಮಕ್ಕಳ ಹಕ್ಕು ಉಲ್ಲಂಘನೆಯ ಹೊಣೆಗಾರಿಕೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಇದು ಬಡ ಮಕ್ಕಳಿಗೆ ದಾನಾಧಾರಿತ, ಅಸ್ಥಿರ ಮತ್ತು ಎರಡನೇ ದರ್ಜೆಯ ಶಿಕ್ಷಣವನ್ನು ಶಾಶ್ವತಗೊಳಿಸುವ ಅಪಾಯ ಹೊಂದಿದೆ.
ಇದನ್ನೂ ಓದಿ: ವಾಂಗ್ಚುಕ್ ಉಪವಾಸ ಅಂತ್ಯ: ಕೇಂದ್ರದ ಭರವಸೆಗಳ ನಡುವೆ ಮಹತ್ವದ ತಿರುವು
ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳದಿದ್ದರೆ ಅವುಗಳ ಶುಲ್ಕವನ್ನು ನಿಯಂತ್ರಿಸಲಾಗುವುದು ಎಂಬ ಹೇಳಿಕೆ ಬಾಲಿಶ, ಹಾಸ್ಯಾಸ್ಪದ ಮತ್ತು ಅಪಾಯಕಾರಿ. ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 2(b) ಕ್ಯಾಪಿಟೇಷನ್ ಶುಲ್ಕವನ್ನು ವ್ಯಾಖ್ಯಾನಿಸುತ್ತದೆ ಮತ್ತು ಸೆಕ್ಷನ್ 13 ಇಂತಹ ಶುಲ್ಕ ವಸೂಲಿ ಹಾಗೂ ಪ್ರವೇಶದ ಆಯ್ಕೆ ಪರೀಕ್ಷೆಯನ್ನು ನಿಷೇಧಿಸುತ್ತದೆ. ಖಾಸಗಿ ಶಾಲೆಗಳ ಶುಲ್ಕವನ್ನು ನ್ಯಾಯಸಮ್ಮತ, ಪಾರದರ್ಶಕ ಮತ್ತು ಶೋಷಣೆಯಿಲ್ಲದ ರೀತಿಯಲ್ಲಿ ನಿಯಂತ್ರಿಸುವುದು ರಾಜ್ಯ ಸರ್ಕಾರದ ಸ್ವತಂತ್ರ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಯನ್ನು ದತ್ತು ಪಡೆಯುವುದನ್ನು ಶುಲ್ಕ ನಿಯಂತ್ರಣದಿಂದ ವಿನಾಯಿತಿ ಪಡೆಯುವ ವ್ಯವಹಾರವನ್ನಾಗಿ ರೂಪಿಸುವುದು, ಖಾಸಗಿ ಶಾಲೆಗಳು ಪೋಷಕರಿಂದ ಎಷ್ಟು ಬೇಕಾದರೂ ಶುಲ್ಕ ವಸೂಲಿ ಮಾಡಬಹುದು ಎಂಬ ಸಂದೇಶ ನೀಡುತ್ತದೆ. ಇದು ಪೋಷಕರ ಆರ್ಥಿಕ ಶೋಷಣೆಗೆ ಪರೋಕ್ಷ ಪರವಾನಗಿ ನೀಡಿದಂತಾಗಿದೆ. ಬೆಂಗಳೂರು
ಇಡೀ ದೇಶದಲ್ಲಿ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ನಿಲ್ಲಿಸಿ ಸಾರ್ವಜನಿಕ ಶಿಕ್ಷಣವನ್ನು ಗಟ್ಟಿಗೊಳಿಸಬೇಕೆಂದು ವಿದ್ಯಾರ್ಥಿ–ಯುವಜನರು ಬೀದಿಗಿಳಿದು ಹೋರಾಡುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಈ ಪ್ರಸ್ತಾವನೆ ಅತ್ಯಂತ ನಿರಾಶಾದಾಯಕವಾಗಿದೆ. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚ ಹೆಚ್ಚಿಸಿ, ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ, ಎಲ್ಲ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಬೇಡಿಕೆಗೆ ಸ್ಪಂದಿಸುವ ಬದಲು, ಸರ್ಕಾರ ಅದೇ ಖಾಸಗೀಕರಣದ ನೀತಿಯನ್ನು ವಿಸ್ತರಿಸಲು ಹೊರಟಿದೆ ಎಂಬ ಸಂದೇಶ ಈ ಪ್ರಸ್ತಾವನೆಯಿಂದ ಹೊರಹೊಮ್ಮುತ್ತದೆ. ಬೆಂಗಳೂರು
ಒಂದೆಡೆ ಕಾಂಗ್ರೆಸ್ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸಾರ್ವಜನಿಕ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ರಕ್ಷಣೆಯ ಕುರಿತು ಮಾತನಾಡುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕದ ಸಾರ್ವಜನಿಕ ಶಾಲೆಗಳನ್ನು ಖಾಸಗಿ ಸಂಸ್ಥೆಗಳ ಮರ್ಜಿಗೆ ತಳ್ಳುವ ಪ್ರಸ್ತಾವನೆ ಮಾಡಿರುವುದು ತೀವ್ರ ವಿಪರ್ಯಾಸವಾಗಿದೆ. ಸಾರ್ವಜನಿಕ ಶಾಲೆಗಳನ್ನು ಹಣಕಾಸು, ಶಿಕ್ಷಕರು ಮತ್ತು ಮೂಲಸೌಕರ್ಯವಿಲ್ಲದೆ ದುರ್ಬಲಗೊಳಿಸಿ, ನಂತರ ಅವುಗಳನ್ನು ಉಳಿಸುವ ನೆಪದಲ್ಲಿ ಖಾಸಗಿಯವರಿಗೆ ಒಪ್ಪಿಸುವುದು ತಡೆರಹಿತ ಖಾಸಗೀಕರಣದ ತಂತ್ರವಾಗಿದೆ. ಇದರಿಂದ ಶ್ರೀಮಂತರಿಗೆ ಸಂಪನ್ಮೂಲಸಮೃದ್ಧ ಖಾಸಗಿ ಶಾಲೆಗಳು ಮತ್ತು ಬಡವರಿಗೆ ದಾನಾಧಾರಿತ ಸರ್ಕಾರಿ ಶಾಲೆಗಳು ಎಂಬ ಎರಡು ಬಗೆಯ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ.
ಆದ್ದರಿಂದ ಸರ್ಕಾರ ಈ ಪ್ರಸ್ತಾವನೆಯನ್ನು ತಕ್ಷಣ ಮತ್ತು ಬೇಷರತ್ತಾಗಿ ಹಿಂಪಡೆಯಬೇಕು; ಸರ್ಕಾರಿ ಶಾಲೆಗಳ ಎಲ್ಲ ಖಾಲಿ ಶಿಕ್ಷಕರ ಹುದ್ದೆಗಳನ್ನು ಶಾಶ್ವತವಾಗಿ ಭರ್ತಿ ಮಾಡಬೇಕು; ಶಿಕ್ಷಣ ಹಕ್ಕು ಕಾಯಿದೆಯ ಮೂಲಸೌಕರ್ಯ ಮತ್ತು ವಿದ್ಯಾರ್ಥಿ–ಶಿಕ್ಷಕರ ಅನುಪಾತದ ಮಾನದಂಡಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು; ಶಿಕ್ಷಣಕ್ಕೆ ಅಗತ್ಯ ಬಜೆಟ್ ಒದಗಿಸಬೇಕು; ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಮತ್ತು ಪೋಷಕರ ಶೋಷಣೆಯನ್ನು ತಡೆಯಲು ಕಠಿಣ ಹಾಗೂ ಪಾರದರ್ಶಕ ಶುಲ್ಕ ನಿಯಂತ್ರಣ ಕಾಯಿದೆ ಜಾರಿಗೊಳಿಸಬೇಕು; ಸಾರ್ವಜನಿಕ ಶಿಕ್ಷಣವನ್ನು ಖಾಸಗಿಯವರ ದಯೆಗೆ ಬಿಡದೆ ಸರ್ಕಾರದ ಸಂವಿಧಾನಬದ್ಧ ಹೊಣೆಗಾರಿಕೆಯಾಗಿಯೇ ನಿರ್ವಹಿಸಬೇಕು ಎಂದು ಪಾಫ್ರೆ (PAFRE – People’s Alliance for Fundamental Right to Education) ಬಲವಾಗಿ ಒತ್ತಾಯಿಸುತ್ತದೆ. ಬೆಂಗಳೂರು
ಮುಖಂಡರಾದ ಪ್ರೊ. ನಿರಂಜನಾರಾಧ್ಯ ವಿ .ಪಿ., ಪ್ರೊ. ಬಾಬು ಮಾಥ್ಯು, ವೀರಸಂಗಯ್ಯ, ಮಾವಳ್ಳಿ ಶಂಕರ್ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ.
ಇದನ್ನೂ ನೋಡಿ: ಮಫ್ತಿ ಪೊಲೀಸರ ಕಾರ್ಯಾಚರಣೆ! ಸೋನಂ ವಾಂಗ್ಚುಕ್ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಕೇಂದ್ರದ ವಿರುದ್ಧ ಆಕ್ರೋಶ
