ಪುರೋಹಿತರು ಬಂದಿದ್ದು ಸತ್ಯನಾರಾಯಣ ಪೂಜೆ ಮಾಡಲು, ಮಾಡಿದ್ದು ‘ಸನಾತನ ಧರ್ಮ ಉಳಿಸಲು ಮತ ಹಾಕಿ’ ಎಂಬ ಚುನಾವಣಾ ಭಾಷಣ

-ಸಿ.ಸಿದ್ದಯ್ಯ 

ಈಗ ಆ ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿವೆ. ಹೆಸರಿಗೆ ಮಾತ್ರ ಸಂವಿಧಾನಕ್ಕೆ ನಿಷ್ಠರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದರೂ, ವಾಸ್ತವದಲ್ಲಿ ಮನುವಾದವೇ ಅವರಿಗೆ ಹೆಚ್ಚು ಮಹತ್ವದ್ದಾಗಿವೆ. ಸನಾತನ ಧರ್ಮ ಎಂದರೆ ಅವರ ದೃಷ್ಟಿಯಲ್ಲಿ ಮನುಧರ್ಮ. ಮನುಧರ್ಮ ಎಂದರೆ ಚಾತುರ್ವರ್ಣ ಪದ್ದತಿ. ಇಸ್ಕಾನ್ ಆಂದೋಲನವು ತನ್ನ ವೆಬ್ಸೈಟ್ನಲ್ಲಿ ಸನಾತನದ ಬಗ್ಗೆ ಹೀಗೆ ಬರೆದಿದೆ : “ಧರ್ಮ ಎಂದರೇನು? ಈ ಪದವು ಮನುಸ್ಮೃತಿಯಿಂದ ಬಂದಿದೆ. ನಿನಗೆ ಕೊಟ್ಟ, ನಿನ್ನ ಸಮುದಾಯಕ್ಕೆ ಕೊಟ್ಟ, ನಿನ್ನ ಜಾತಿಗೆ ಕೊಟ್ಟ ಕರ್ತವ್ಯವನ್ನು ನೀನು ಮಾಡಬೇಕು. ಅದು ಧರ್ಮ.”  ಹಾಗಾಗಿ ಒಂದು ಜಾತಿಯವರು ತನ್ನ ಮೇಲಿನ ಜಾತಿಯವರು ಮಾಡುವ ಕೆಲಸವನ್ನು ತಾವೂ ಮಾಡಲು ಯೋಚಿಸಬಾರದು. ಅವರು ತನ್ನ ಜಾತಿಗೆ ನಿಗದಿಪಡಿಸಿದ ಕರ್ತವ್ಯವನ್ನು ಮಾತ್ರ ಮಾಡಬೇಕು. ಇವರು ನೇರವಾಗಿ ಮನುಧರ್ಮವನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯ ಮಾಡಲಾರರು. ಆದುದರಿಂದ ‘ಸನಾತನ ಧರ್ಮ’ ಎಂಬ ಪದವನ್ನು ಮುಂದಿಡಲಾಯಿತು. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ ಮತ್ತು ಸಮಾನತೆಗೆ ಬೆಲೆ ಇಲ್ಲ.

ಮೊದಲು ಆ ಪುರೋಹಿತರು ಮಾಡಿದ ನಾಲ್ಕು ನಿಮಿಷಗಳ ಪುಟ್ಟ ಚುನಾವಣಾ ಭಾಷಣದ ಸಾರಾಂಶ ಏನೆಂಬುದನ್ನು ನೋಡೋಣ

“ನಮ್ಮ ದೇಹ ಎಷ್ಟು ಮುಖ್ಯನೊ ನಮ್ಮ ದೇಶ ಅಷ್ಟೇ ಮುಖ್ಯ…. ನಮ್ಮ ದೇಹ ಚೆನ್ನಾಗಿರ್ಲಿ ಅಂತ, ನಮ್ಮ ದೇಹಕ್ಕೆ ಹೊರಗಡೆಯಿಂದ ಕ್ರಿಮಿ ಕೀಟಗಳು, ಕ್ಯಾನ್ಸರ್ ಗಳು ಇತ್ಯಾದಿಗಳು ನಮ್ಮ ಮೇಲೆ ಪ್ರಭಾವ ಬೀರದೇ ಇರ್ಲಿ ಅಂತೇಳಿ, ಆ ಕಾಲಕ್ಕೆ ತಕ್ಕಂತೆ ನಾವು ವೈಧ್ಯಕೀಯ ಸಲಹೆಯನ್ನು ತೆಗೆದುಕೊಂಡು, ಅದಕ್ಕೆ ಪರಿಹಾರವನ್ನು ಸಹ ಮಾಡ್ಕೊತ್ತೀವಿ. ಇದು ನಮ್ಮ ದೇಹಕ್ಕಾಯ್ತು. ನಮ್ಮ ದೇಶಕ್ಕೂ ಕೂಡ ಇದೇ ರೀತಿ ಖಾಯಿಲೆ ಬರೊವಂಥ ಪರಿಸ್ಥಿತಿ ಸದಾ ಕಾಲದಿಂದಲೂ ಇದ್ದೇ ಇದೆ. ಇಂದು ನಮ್ಮ ದೇಶಕ್ಕೆ ಮತ್ತೆ ನಮ್ಮ ಸನಾತನ ಧರ್ಮಕ್ಕೆ ಒಂದು ದೊಡ್ಡ ಖಾಯಿಲೆಗಳು ಬರುವಂಥ ಅವಕಾಶಗಳಿವೆ, ಮತ್ತೆ ನಾವು ಪ್ರತಿದಿನ ನೋಡ್ತಾಇದ್ದೀವಿ, ಆ ಖಾಯಿಲೆ ಬಂದಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ-ಸಿ.ಟಿ.ರವಿ ವಿರುದ್ಧ ಧರ್ಮದ ಹೆಸರಿನಲ್ಲಿ ಮತಯಾಚಿಸಿದ್ದಕ್ಕೆ ಪ್ರತ್ಯೇಕ ಪ್ರಕರಣ ದಾಖಲು

…ನಮ್ಮ ದೇಶಕ್ಕೂ ಬಂದಿರತಕ್ಕಂಥ, ಮುಂದೆ ಬರತಕ್ಕಂಥ ಖಾಯಿಲೆಯನ್ನು ಪರಿಹಾರ ಮಾಡ್ಕೊಬೇಕು, ಮತ್ತೆ ನಮ್ಮ ಸನಾತನ ಧರ್ಮ ಸದಾ ಉಳಿದಿರಬೇಕು. ನಮ್ಗೆ ನಾವೆಲ್ಲಾ ಚೆನ್ನಾಗಿರ್ಬೇಕು. ಅಂದ್ರೆ ಈವತ್ತಿನ ದಿನ ಸತ್ಯನಾರಾಯಣ ಪೂಜೆ ಚೆನ್ನಾಗಿ ಮಾಡ್ತಿದ್ದೀವಿ ಕೂತ್ಕೊಂಡು. ಧೈರ್ಯದಿಂದ ಮಾಡ್ತಿದ್ದೀವಿ. ಇನ್ನೊಂದು ಹತ್ತು ವರ್ಷ ಕಾಲ ನಾವು ಇದೇ ರೀತಿ ನಿದ್ರೆ ಮಾಡಿದ್ದಾದ್ರೆ, ನಾವು ಈ ಸತ್ಯನಾರಾಯಣ ಪೂಜೆಯನ್ನು ಮಾಡುವಂಥ ಸಮಯದಲ್ಲಿ ಯಾರೋ ಬಂದು ನಮ್ಮನ್ನು ಹೊರಗಡೆ ಎಳೆದಾಕಿ, ನೀವು ಪೂಜೆ ಮಾಡಕೂಡದು, ನೀವು ಇನ್ಮುಂದೆ ಇವೆಲ್ಲ ಆಚರಿಸ್ಬೇಡಿ ಅಂತ ಹೇಳಿ, ನಮ್ಮನ್ನ ಹೊರಗಡೆ ದಬ್ಬುವಂತ ಕಾಲ ಬಂದೇ ಬರುತ್ತೆ. ಅದ್ಯಾವುದೂ ಬರಬಾರದು ಅಂದ್ರೆ, ನಮ್ಮ ದೇಹ ನಾವು ಚೆನ್ನಾಗಿರ್ಬೇಕು ಅಂತ ಹೇಗೆ ಬಯಸುತ್ತೇವೋ ಅದೇ ರೀತಿ, ನಮ್ಮ ದೇಶ ಚೆನ್ನಾಗಿರ್ಬೇಕು, ನಮ್ಮ ಸನಾತನ ಧರ್ಮ ಸದಾ ಹೀಗೇ ಉಳಿದಿರಬೇಕು ಅಂತೇಳಿದ್ರೆ, ಈ ತಿಂಗಳ 26ನೇ ತಾರೀಖು, ಚುನಾವಣೆ ಬರ್ತಾಯಿದೆ. ಚುನಾವಣೆಯಲ್ಲಿ ಮತವನ್ನು ಚಲಾಯಿಸುವುದರ ಮುಖಾಂತರ ಪ್ರತಿಯೊಬ್ಬರು, ಆ ಭಗವಂತನ ಕೃಫೆಗೆ ಪಾತ್ರರಾಗಬೇಕು, ಭಗವಂತನ ಕೃಫೆಗೆ ಅಂದ್ರೆ ಹೇಗಪ್ಪ, ಇದಕ್ಕೂ ಅದಕ್ಕೂ ಏನ್ ಸಂಬಂಧ ಅಂತ ಹೇಳಿದ್ರೆ, ನಮ್ಮ ಸನಾತನ ಧರ್ಮ ಉಳೀಬೇಕು ಅಂತೇಳಿದ್ರೆ ಉಳಿಯಿತು, ಉಳಿಯೋದಕ್ಕೆ ನಾವು ಸಹಾಯ ಮಾಡ್ತಿದ್ದೀವಿ ಅಂತೇಳಿದ್ರೆ, ಆ ಭಗವಂತನಿಗೆ ನಿಮ್ಮ ಮೇಲೆ ಪ್ರೀತಿ ಆಗುತ್ತೆ.” ಇದಿಷ್ಟು ಪುರೋಹಿತರ ಮಾತುಗಳ ಸಾರಾಂಶ

ಏನಿದು ಸನಾತನ ಧರ್ಮ?

ಬಿಜೆಪಿ ನಾಯಕರು, ಸಂಘಪರಿವಾರದವರು, ಪುರೋಹಿತಶಾಹಿಗಳು ಸದಾ ಹೇಳುವ ಮಾತು ‘ನಮ್ಮ ಸನಾತನ ಧರ್ಮ ಅಪಾಯದಲ್ಲಿದೆ, ನಮ್ಮ ಸನಾತನ ಧರ್ಮವನ್ನು ನಾವು ರಕ್ಷಣೆ ಮಾಡಬೇಕು. ಸ್ವತಃ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸನಾತನ ಧರ್ಮದ ಮೇಲೆ ದಾಳಿ ನಡೆಯುತ್ತಿದೆ ಮತ್ತು ಅದನ್ನು ತಡೆಯಿರಿ ಎಂದು ಜನರಿಗೆ ಕರೆ ನೀಡಿದ್ದಾರೆ. ಆದರೆ, ಮೋದಿಯವರಾಗಲೀ, ಈ ಬ್ರಾಹ್ಮಣ ಪುರೋಹಿತರಾಗಲೀ ಸನಾತನ ಧರ್ಮ ಎಂದರೇನು ಎಂದು ಜನರಿಗೆ ಹೇಳಿ, ಅದನ್ನು ರಕ್ಷಿಸಿ ಎಂದು ಹೇಳಿದ್ದರೆ ಅದರಲ್ಲಿ ಪ್ರಾಮಾಣಿಕತೆ ಇದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಸನಾತನ ಧರ್ಮ ಎಂದರೇನು ಎಂಬುದನ್ನೇ ಇವರ್ಯಾರೂ ಬಿಡಿಸಿ ಹೇಳುತ್ತಿಲ್ಲ. ಹಾಗಾದರೆ, ಈ ಸನಾತನ ಧರ್ಮ ಎಂದರೆ ಏನು? ಈ ಶಬ್ದ ಯಾವಾಗ ಹುಟ್ಟಿಕೊಂಡಿತು? ಇದನ್ನು ನೋಡುವ ಮುನ್ನ ‘ಸನಾತನ’ ಎಂದರೇನು ಎಂಬುದನ್ನು ನೋಡೋಣ.

‘ಸನಾತನ’ ಎಂದರೆ ಸಂಸ್ಕೃತದಲ್ಲಿ, ಸರಿಸುಮಾರು “ಶಾಶ್ವತ ಕಾನೂನು” ಅಥವಾ ಅಕ್ಷರಶಃ “ಶಾಶ್ವತ ಮಾರ್ಗ” ಎಂದು ಅನುವಾದಿಸುತ್ತದೆ. ಹಿಂದಿಯಲ್ಲಿ “ಶಾಶ್ವತ ಧರ್ಮ” ಎಂದು ಅನುವಾದಿಸುತ್ತದೆ. ‘ಸನಾತನ ಧರ್ಮ’ ಎಂಬ ಪದವನ್ನು 19 ನೇ ಶತಮಾನದಲ್ಲಿ ರಚಿಸಲಾಯಿತು ಮತ್ತು ಅದನ್ನು ಮೊದಲು ‘ಹಿಂದೂ ಸುಧಾರಕರು’ ಬಳಸಿದರು ಎಂದು ಹಿಂದೂ ಧರ್ಮದ ಸಂಶೋಧಕ ಪ್ರೊಫೆಸರ್ ಆಡ್ರೆ ದುರುಷ್ಕೆ ಹೇಳುತ್ತಾರೆ. ವೇದಗಳಾಗಲಿ, ಉಪನಿಷತ್ತುಗಳಾಗಲಿ ಸನಾತನದ ಬಗ್ಗೆ ಏನನ್ನೂ ಹೇಳಿಲ್ಲ. ಹಾಗೆಯೇ, ವೈದಿಕ ಸಂಪ್ರದಾಯಗಳು ಚಾಲ್ತಿಯಲ್ಲಿದ್ದಾಗ ಅದರ ವಿರುದ್ಧ ಕೆಲಸ ಮಾಡಿದ ಅಥವಾ ಬೆಂಬಲಿಸಿದ ಯಾವುದೇ ತಾತ್ವಿಕ ಪಂಗಡಗಳಲ್ಲಿ ಸನಾತನದ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಸನಾತನ ಹಿಂದೂ ಧರ್ಮಕ್ಕೆ ಸಮಾನಾರ್ಥಕ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್)ನ ನಾಯಕ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ಅದೇ ಆರ್ ಎಸ್ ಎಸ್ ನ ದೀನದಯಾಳ್ ಉಪಾಧ್ಯಾಯ ಅವರು ತಮ್ಮ ‘ಇಂಟಿಗ್ರೇಟೆಡ್ ಮ್ಯಾನ್’ ಎಂಬ ಮಹತ್ವದ ದಾಖಲೆಯಲ್ಲಿ ಸನಾತನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಒಟ್ಟಿನಲ್ಲಿ ಸನಾತನ ಎಂದರೆ ಹಿಂದೂ ಧರ್ಮವೆಂದೂ, ಅದೊಂದು ಜೀವನ ವಿಧಾನವೆಂದೂ ಇಂದು ಹೇಳುವವರು ಈ ಪದವನ್ನು ಸಾವಿರಾರು ವರ್ಷಗಳಿಂದ ಏಕೆ ಬಳಸಲಿಲ್ಲ ಮತ್ತು ಇನ್ನೂರು ವರ್ಷಗಳ ಹಿಂದೆ ವಸಾಹತುಶಾಹಿ ಆಳ್ವಿಕೆಯಲ್ಲಿ ಮಾತ್ರ ಏಕೆ ಬಳಸಲಾಯಿತು ಎಂಬುದನ್ನು ವಿವರಿಸಲು ಸಿದ್ಧರಿಲ್ಲ.

ನಿನ್ನ ಜಾತಿಗೆ ಕೊಟ್ಟ ಕರ್ತವ್ಯವನ್ನು ನೀನು ಮಾಡಬೇಕು ;

ಇಸ್ಕಾನ್ ಆಂದೋಲನವು ತನ್ನ ವೆಬ್ಸೈಟ್ನಲ್ಲಿ ಸನಾತನದ ಬಗ್ಗೆ ಹೀಗೆ ಬರೆದಿದೆ; ಧರ್ಮಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಸನಾತನ ಧರ್ಮದ ಒಂದು ವಿಧ- ಇದು ಆಧ್ಯಾತ್ಮಿಕ ಮನಸ್ಸಿನೊಂದಿಗೆ ವ್ಯವಹರಿಸುತ್ತದೆ; ಇನ್ನೊಂದು ವರ್ಣಾಶ್ರಮ ಧರ್ಮ – ಇದು ಒಬ್ಬರ ಜೀವನ ಕರ್ತವ್ಯಕ್ಕೆ ಸಂಬಂಧಿಸಿದೆ. ಪ್ರತಿಯೊಂದು ವರ್ಣತತ್ವವೂ ತನಗೆ ವಹಿಸಿದ ಕರ್ತವ್ಯವನ್ನು ನಿರ್ವಹಿಸುವುದು. ಅಂದರೆ ಸನಾತನ ಧರ್ಮಕ್ಕೂ ವರ್ಣಾಶ್ರಮ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ವರ್ಣಾಶ್ರಮ ಧರ್ಮವು ಜನರ ನಡುವಿನ ಅಸಮಾನತೆಗಳನ್ನು ವ್ಯಾಖ್ಯಾನಿಸುವ ವರ್ಣ ಶ್ರೇಣಿಯಾಗಿದೆ. ಅವರು ಹೇಳುತ್ತಾರೆ: “ಧರ್ಮ ಎಂದರೇನು? ಈ ಪದವು ಮನುಸ್ಮೃತಿಯಿಂದ ಬಂದಿದೆ. ನಿನಗೆ ಕೊಟ್ಟ, ನಿನ್ನ ಸಮುದಾಯಕ್ಕೆ ಕೊಟ್ಟ, ನಿನ್ನ ಜಾತಿಗೆ ಕೊಟ್ಟ ಕರ್ತವ್ಯವನ್ನು ನೀನು ಮಾಡಬೇಕು. ಅದು ಧರ್ಮ.”  ಹಾಗಾಗಿ ಒಂದು ಜಾತಿಯವರು ತನ್ನ ಮೇಲಿನ ಜಾತಿಯವರು ಮಾಡುವ ಕೆಲಸವನ್ನು ತಾವೂ ಮಾಡಲು ಯೋಚಿಸಬಾರದು. ಅವರು ತನ್ನ ಜಾತಿಗೆ ನಿಗದಿಪಡಿಸಿದ ಕರ್ತವ್ಯವನ್ನು ಮಾತ್ರ ಮಾಡಬೇಕು. ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ “ಸ್ವಚ್ಛತಾ ಕಾರ್ಮಿಕರು ಮಾಡುವ ಎಲ್ಲ ಕೆಲಸಗಳನ್ನು ಸಂತೋಷದಿಂದ ಮಾಡುತ್ತಾರೆ, ಅದು ಅವರಿಗೆ ದೇವರು ಕೊಟ್ಟ ಕೆಲಸ” ಎಂದು ಉಲ್ಲೇಖಿಸಿದ್ದರು. ನಂತರ ಈ ವಾಕ್ಯಗಳನ್ನು ಅವರ ಭಾಷಣದಿಂದ ತೆಗೆದುಹಾಕಲಾಗಿದ್ದರೂ, ಬಿ.ಜೆ.ಪಿ ನಾಯಕರು ಏನು ಯೋಚಿಸುತ್ತಿದ್ದಾರೆ ಎಂಬುದು ಬಹಿರಂಗವಾಯಿತು.

ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಎಲ್ಲ ವಿಚಾರ, ಸಿದ್ಧಾಂತ, ಸಂಪ್ರದಾಯ, ನಂಬಿಕೆ, ಆಚಾರ ವಿಚಾರಗಳನ್ನು ಪರಿಗಣಿಸುತ್ತೇವೆ. ಪ್ರಾಚೀನ ಕಾಲದಲ್ಲಿ ಶ್ರೇಷ್ಠವಾಗಿದ್ದ ಎಲ್ಲಾ ಭಾವನೆಗಳು ಈಗ ಉತ್ತಮವಾಗಿಲ್ಲದಿರಬಹುದು. ಅವುಗಳಲ್ಲಿ ಕೆಲವು ಇನ್ನೂ ಉತ್ತಮವಾಗಿವೆ ಮತ್ತು ಇನ್ನೂ ಫ್ಲಕ್ಸ್‌ನಲ್ಲಿರಬಹುದು. ಹಾಗಾಗಿ “ಸನಾತನ” ಪದವನ್ನು ಬಳಸಿದಾಗ ಅದು ಶ್ರೇಷ್ಠವಾಗಿರಬೇಕು ಎಂಬ ನಿಯಮವಿಲ್ಲ. ನರಬಲಿ, ಸತಿ ಸಹಗಮನ ಪದ್ದತಿ, ದೇವದಾಸಿ ಪದ್ಧತಿ, ಅಸ್ಪೃಶ್ಯತೆ ಇವುಗಳನ್ನು ಶ್ರೇಷ್ಠ ಎಂದು ಯಾರಾದರೂ ಹೇಳುತ್ತಾರೆಯೇ?

ಮಾನವ ಸಮಾಜ ನಿರಂತರವಾಗಿ ಮುನ್ನಡೆಯುತ್ತಿದೆ

ಮಾನವ ಸಮಾಜ ನಿರಂತರವಾಗಿ ಮುನ್ನಡೆಯುತ್ತಿದೆ ಎಂದು ಹೇಳಬಹುದು. ಪ್ರತಿ ಹಂತದಲ್ಲಿ, ಮಾನವರು ಕೆಲವು ಸಂಪ್ರದಾಯಗಳು, ಪದ್ಧತಿಗಳು ಮತ್ತು ನಂಬಿಕೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ವರ್ಷಗಳಲ್ಲಿ, ಅಂತಹ ಕೆಲವು ಸಂಪ್ರದಾಯಗಳು ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತವೆ. ಕೆಲವು ಪದ್ಧತಿಗಳನ್ನು ದುರ್ಗುಣಗಳೆಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳು ಮೂಢನಂಬಿಕೆಗಳಾಗುತ್ತವೆ. ಈ ಮೂಲಕ ಸಮಾಜದ ಪ್ರಗತಿಗೆ ಅಡ್ಡಿಯಾಗಿರುವ ಸಂಗತಿಗಳನ್ನು ತಿರಸ್ಕರಿಸಿ ಹೊಸ ಸಂಪ್ರದಾಯ, ಹೊಸ ಆಚಾರ-ವಿಚಾರಗಳನ್ನು ಮನುಷ್ಯರು ಹುಟ್ಟು ಹಾಕುತ್ತಾರೆ.

ಅದೇ ಸಮಯದಲ್ಲಿ ಸಮಾಜ ಎಷ್ಟೇ ಬದಲಾದರೂ ಕೆಲವು ಆದರ್ಶಗಳು ಮತ್ತು ಸಂಪ್ರದಾಯಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುವುದಲ್ಲ. “ಓಂ ಸಹನಾವವತು ಸಹನೌಭುನಕ್ತು, ಸಹವೀರ್ಯಂ ಕರವಾವಹೈ ….” ಎಂಬ ಅತ್ಯಂತ ಪುರಾತನವಾದ ಶಾಂತಿ ಮಂತ್ರವು, ನಾವೆಲ್ಲರೂ ಒಟ್ಟಿಗೆ ಬಾಳೋಣ, ಒಟ್ಟಿಗೆ ಕಲಿಯೋಣ, ಒಟ್ಟಿಗೆ ನಮ್ಮ ಶಕ್ತಿಯನ್ನು ಬೆಳೆಸಿಕೊಳ್ಳೋಣ, ನಮ್ಮ ನಡುವೆ ವೈರತ್ವ ಬೇಡ ಎಂಬುದನ್ನು ಸೂಚಿಸುತ್ತದೆ. ಇವು ಸಾಂಪ್ರದಾಯಿಕ ಭಾವನೆಗಳು. ಆದರೆ ಉದಾತ್ತ ಭಾವನೆಗಳು.

ಭೂತಕಾಲದ ಭಾವನೆಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳಲ್ಲಿ ಮುಂದುವರಿಯಲು ನಮಗೆ ಸಹಾಯ ಮಾಡುವ ವಿಷಯಗಳನ್ನು ಮುಂದುವರಿಸುವಾಗ, ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ನಾವು ಹೊಸ ಭಾವನೆಗಳು ಮತ್ತು ಹೊಸ ಸಂಪ್ರದಾಯಗಳನ್ನು ಸ್ವಾಗತಿಸಬೇಕು.

ಆಧಿಕಾಲದಲ್ಲಿ ಧರ್ಮ ಎಂಬುದೇ ಇರಲಿಲ್ಲ 

ಇಲ್ಲಿಯವರೆಗೆ ನಾವು ಸನಾತನ ಭಾವನೆಗಳ ಕುರಿತು ಚರ್ಚಿಸಿದ್ದೇವೆ. ಈಗ ಸನಾತನ ‘ಧರ್ಮ’ದ ಕುರಿತು ಚರ್ಚಿಸಬೇಕಿದೆ. ಹಿಂದುತ್ವವಾದಿಗಳ ಹೋರಾಟವೆಲ್ಲಾ ಆ ಸನಾತನ ಧರ್ಮದ ಬಗ್ಗೆಯೇ. ಧರ್ಮ ಎಂದರೆ ಆ ಕಾಲದಲ್ಲಿ ಸಮಾಜದಲ್ಲಿ ಪ್ರಭುತ್ವ ಸಾಧಿಸಿದವರು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮಾಡಿದ ನಿಯಮಗಳು. ಆದಿಕಾಲದಲ್ಲಿ ದೊರೆಗಳು ಮತ್ತು ಆಳುವವರು ಇರಲಿಲ್ಲವಾದ್ದರಿಂದ ಧರ್ಮ ಎಂಬುದೇ ಇರಲಿಲ್ಲ. ಕೆಲವು ನಂಬಿಕೆಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳು ಮಾತ್ರ ರೂಪುಗೊಂಡಿವೆ. ಸಮಾಜವನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಪ್ರಬಲ ಗುಂಪುಗಳು ರೂಪುಗೊಂಡ ನಂತರ ಧರ್ಮದ ಪ್ರಸ್ತಾಪವು ಮುಂದೆ ಬಂದಿತು.

ಜಾತಿ ವ್ಯವಸ್ಥೆಯ ರಚನೆ

ನಮ್ಮ ದೇಶದಲ್ಲಿ ಸಮಾಜವನ್ನು ಜಾತಿಗಳಾಗಿ ವಿಭಜಿಸುವುದು ಮತ್ತು ಜಾತಿ ವ್ಯವಸ್ಥೆಯ ರಚನೆಯು ಬಹುತೇಕ ಏಕಕಾಲದಲ್ಲಿ ಸಂಭವಿಸಿದೆ. ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಗಳು ಪ್ರಬಲ ವರ್ಗವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ಜಾತಿ ವ್ಯವಸ್ಥೆಯು ಅವರ ಪ್ರಾಬಲ್ಯ ಮತ್ತು ಶೋಷಣೆಯೊಂದಿಗೆ ವಿಸ್ತರಿಸಿತು. ಕೆಳವರ್ಗದವರ ದಬ್ಬಾಳಿಕೆಯನ್ನೂ ಹೆಚ್ಚಿಸಿತು. ಸ್ಮೃತಿಗಳು ಅಥವಾ ಧರ್ಮ ಶಾಸ್ತ್ರಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ರಚಿಸಲ್ಪಟ್ಟವು. ಅದರಲ್ಲಿ ಹೇಳಿರುವ ಸದ್ಗುಣಗಳನ್ನು ಇಡೀ ಸಮಾಜ ಒಪ್ಪುವುದಿಲ್ಲ. ಕೆಲವೇ ಕೆಲವು ಪ್ರಬಲ ಜಾತಿಗಳು ತಮ್ಮ ಸಂಪತ್ತಿನ ಮುಂದುವರಿಕೆಗಾಗಿ ಅವುಗಳನ್ನು ವಿನ್ಯಾಸಗೊಳಿಸಿದವು. ಮನು ಸ್ಮೃತಿ, ನಾರದ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಕೌಟಿಲ್ಯನ ಅರ್ಥಶಾಸ್ತ್ರ ಇತ್ಯಾದಿ. ಇವೆಲ್ಲವನ್ನೂ ಬ್ರಾಹ್ಮಣರು ಅರಸರಿಗಾಗಿ ಬರೆದುಕೊಟ್ಟಿದ್ದಾರೆ. ಆದರೆ ಅವು ಜಾರಿಯಾಗಬೇಕಾದರೆ ಜನರ ಮೇಲೆ ಹೇರಬೇಕು. ಅದಕ್ಕೇ ಅಲ್ಲೊಂದು ಇಲ್ಲೊಂದು ಒಳ್ಳೆಯ ಮಾತುಗಳ ನೆಪದಲ್ಲಿ ಲೂಟಿಕೋರ ವರ್ಗದ ಸದ್ಗುಣಗಳನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಪುರಾಣಗಳನ್ನು ಬರೆಯಲಾಗಿದೆ.

ಪ್ರತಿಯೊಬ್ಬ ರಾಜ ಅಧಿಕಾರ ಹಿಡಿದಾಗ ಧರ್ಮವನ್ನು ರಕ್ಷಿಸುತ್ತೇನೆ ಎಂದು ಪ್ರಮಾಣ ಮಾಡಬೇಕು (ಈಗ ಹುದ್ದೆ ಬೇಕಾದರೆ ಚುನಾವಣೆಯಲ್ಲಿ ಗೆದ್ದು ಸಂವಿಧಾನವನ್ನು ಪಾಲಿಸುತ್ತೇನೆ ಎಂದು ಪ್ರಮಾಣ ಮಾಡುತ್ತಾರೆ). ಧರ್ಮವನ್ನು ಎತ್ತಿಹಿಡಿಯಲು ವಿಫಲರಾದ ರಾಜನನ್ನು ತೆಗೆದುಹಾಕುವ ಅಧಿಕಾರ ಧರ್ಮಗುರುಗಳಿಗೆ ಇತ್ತು.

ಮನಸ್ಮೃತಿ ಸಮಾಜದ ಅರ್ಧದಷ್ಟು ಮಹಿಳೆಯರನ್ನು ಮತ್ತು ಬಹುಸಂಖ್ಯಾತರಾದ ಶೂದ್ರ, ಅತಿಶೂದ್ರ, ದಲಿತ ಜಾತಿಗಳನ್ನು ಕ್ರೂರವಾಗಿ ತುಳಿಯಲು ಆಳುವವರಿಗೆ ಹುರುಪು ನೀಡಿದೆ. ಈ ಪ್ರಕ್ರಿಯೆಯಲ್ಲಿ, ಈ ಮನಸ್ಮೃತಿ ನಮ್ಮ ಉಪಖಂಡದಲ್ಲಿ ಸಮಾಜದ ಪ್ರಗತಿಗೆ ಮುಖ್ಯ ಅಡಚಣೆಯಾಗಿದೆ.

ಸುಧಾರಣಾ ಚಳವಳಿಗಳು

ಇದನ್ನು ಮನಗಂಡ ಪ್ರಗತಿಪರರು ಭಾರತದ ಬಹುತೇಕ ಎಲ್ಲ ಭಾಗಗಳಲ್ಲಿ ವಿವಿಧ ರೀತಿಯ ಸುಧಾರಣಾ ಚಳವಳಿಗಳನ್ನು ನಡೆಸಿದರು. ನಮ್ಮ ಬಸವಣ್ಣ ಹಾಗೂ ಬಸವಾದಿ ಶರಣರು ಮುಂತಾದವರು ಮನುವಾದವನ್ನು ವಿರೋಧಿಸಿ ಹೊಸ ಪ್ರಗತಿಪರ ಸಂಪ್ರದಾಯಗಳಿಗೆ ಬಾಗಿಲು ತೆರೆದರು. ಸುಧಾರಣಾ ಆಂದೋಲನದ ಪ್ರವೃತ್ತಿಯನ್ನು ಭಾರತೀಯ ರಾಷ್ಟ್ರೀಯ ಚಳವಳಿಯು ಸ್ವಲ್ಪ ಮಟ್ಟಿಗೆ ಅಳವಡಿಸಿಕೊಂಡಿದೆ. ಫುಲೆ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳು ಸಮಾಜವನ್ನು ಮಾನವೀಯತೆಯ ಪಿಡುಗಿನಿಂದ ಮುಕ್ತಗೊಳಿಸಲು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಬಹುಪಾಲು ಜನಸಾಮಾನ್ಯರು ಸುಧಾರಣಾ ಆಂದೋಲನಗಳನ್ನು ಸ್ವಾಗತಿಸಿದರು ನಮ್ಮ ದೇಶವನ್ನು ಆಧುನಿಕ ಸಮಾಜವಾಗಿ ಮುನ್ನಡೆಸುವ ಬಲವಾದ ಬಯಕೆ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ ಉಳಿದ ಜನಸಾಮಾನ್ಯರಲ್ಲಿ ವ್ಯಕ್ತವಾಗಿದೆ. ಅದರ ಪರಿಣಾಮವಾಗಿ ನಮ್ಮ ಸಂವಿಧಾನ ರೂಪುಗೊಂಡಿತು.

ಸನಾತನ ಧರ್ಮ ಎಂದರೆ ಅವರ ದೃಷ್ಟಿಯಲ್ಲಿ ಮನುಧರ್ಮ 

ನಮ್ಮ ದೇಶದಲ್ಲಿ ಸಂವಿಧಾನ ರಚಿಸಿ ಅಂಗೀಕರಿಸಿದ ದಿನವನ್ನು ಎಲ್ಲರೂ ಆಚರಿಸಿದರು. ಆದರೆ ಆರ್ ಎಸ್ಎಸ್ ಇದನ್ನು ಕೆಟ್ಟ ದಿನ ಎಂದು ಕರೆದಿದೆ. ನಮ್ಮಲ್ಲಿ ಮನು ಧರ್ಮಶಾಸ್ತ್ರ ಇರುವಾಗ ಇನ್ನೊಂದು ಸಂವಿಧಾನ ಏಕೆ ಎಂಬ ವಾದವನ್ನು ಆರ್ಗನೈಸರ್ ಪತ್ರಿಕೆ ಮಾಡಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮಿಂದ ದೂರ ಉಳಿದು ಅಂದಿನ ಬ್ರಿಟಿಷ್ ಆಡಳಿತಗಾರರಿಗೆ ನಿಷ್ಠರಾಗಿದ್ದ ಇವರಿಂದ  ಇನ್ನೇನು ನಿರೀಕ್ಷಿಸಲು ಸಾಧ್ಯ?

ಈಗ ಆ ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿವೆ.

ಹೆಸರಿಗೆ ಮಾತ್ರ ಸಂವಿಧಾನಕ್ಕೆ ನಿಷ್ಠರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದರೂ ವಾಸ್ತವದಲ್ಲಿ ಮನುವಾದಕ್ಕೆ ಅವು ಹೆಚ್ಚು ಮಹತ್ವ ಕೊಡುತ್ತವೆ. ಸನಾತನ ಧರ್ಮ ಎಂದರೆ ಅವರ ದೃಷ್ಟಿಯಲ್ಲಿ ಮನುಧರ್ಮ. ಆದರೆ ನೇರವಾಗಿ ಮನುಧರ್ಮವನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯ ಮಾಡಲಾರರು. ಆದುದರಿಂದ ಬದಲಾಗಿ ಸನಾತನ ಧರ್ಮ ಎಂಬ ಪದವನ್ನು ಮುಂದಿಡಲಾಯಿತು. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ ಮತ್ತು ಸಮಾನತೆಗೆ ಬೆಲೆ ಇಲ್ಲ.

ಹಾಗಾಗಿ ಸನಾತನ ಧರ್ಮ ಎಂಬ ಪದವನ್ನು ನೋಡಿ ಅದನ್ನು ವಿರೋಧಿಸುವುದು ಎಂದರೆ ನಮ್ಮ ಸಮಾಜದ ಹಿಂದಿನ ಸಾಧನೆಗಳನ್ನು ವಿರೋಧಿಸುವುದು ಎಂದು ಭಾವಿಸಬಾರದು. ನಾವು ಹೆಮ್ಮೆಪಡುವ ಗತಕಾಲದ ಉದಾತ್ತತೆ ಬಹಳ ಸೀಮಿತವಾಗಿದೆ. ಈಗ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಹಸಿವಿನಿಂದ ನರಳುತ್ತಿರುವ ಕೋಟಿಗಟ್ಟಲೆ ಜನರ ಅಗತ್ಯಗಳನ್ನು ಪೂರೈಸಲು ಮತ್ತು `ಜಗತ್ತು ಸಂತೋಷ ಮತ್ತು ಸಮೃದ್ಧವಾಗಿದೆ’ ಎಂಬ ಸಾಂಪ್ರದಾಯಿಕ ಆದರ್ಶವನ್ನು ಪೂರೈಸಲು, ಈ ಸಾಂಪ್ರದಾಯಿಕ ಮನುವಾದವನ್ನು ಅಗೆದು ಹೂಳಬೇಕಾಗಿದೆ.  ಜಾತಿ ವ್ಯವಸ್ಥೆ ತೊಲಗಬೇಕು. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ”

(ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೊ, ಅಲ್ಲಿ ದೇವರುಗಳು ಸುಖವಾಗಿ ವಿಹರಿಸುತ್ತಾರೆ) ಎಂಬ ಪರಿಕಲ್ಪನೆ ಆಚರಣೆಗೆ ಬರಬೇಕಾದರೆ ಮನುವಾದ ಮತ್ತು ಅದರ ಪ್ರತಿಪಾದಕರನ್ನು ನಮ್ಮ ಸಮಾಜದಿಂದ ಹೊರಹಾಕಬೇಕು. ಸಾಮಾಜಿಕ ಪ್ರಗತಿ ಬಯಸುವ ಎಲ್ಲ ಶಕ್ತಿಗಳು ಜೊತೆಯಾಗಿ ಕ್ಷೇತ್ರಕ್ಕೆ ಬರಬೇಕು.

ಧರ್ಮ ಎಂದರೆ ಆ ಕಾಲದಲ್ಲಿ ಸಮಾಜದಲ್ಲಿ ಪ್ರಭುತ್ವ ಸಾಧಿಸಿದವರು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮಾಡಿದ ನಿಯಮಗಳು. ಆದಿಕಾಲದಲ್ಲಿ ದೊರೆಗಳು ಮತ್ತು ಆಳುವವರು ಇರಲಿಲ್ಲವಾದ್ದರಿಂದ ಧರ್ಮ ಎಂಬುದೇ ಇರಲಿಲ್ಲ. ಕೆಲವು ನಂಬಿಕೆಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳು ಮಾತ್ರ ರೂಪುಗೊಂಡಿವೆ. ಸಮಾಜವನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಪ್ರಬಲ ಗುಂಪುಗಳು ರೂಪುಗೊಂಡ ನಂತರ ಧರ್ಮದ ಪ್ರಸ್ತಾಪವು ಮುಂದೆ ಬಂದಿತು.

ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ “ಸ್ವಚ್ಛತಾ ಕಾರ್ಮಿಕರು ಮಾಡುವ ಎಲ್ಲ ಕೆಲಸಗಳನ್ನು ಸಂತೋಷದಿಂದ ಮಾಡುತ್ತಾರೆ, ಅದು ಅವರಿಗೆ ದೇವರು ಕೊಟ್ಟ ಕೆಲಸ” ಎಂದು ಉಲ್ಲೇಖಿಸಿದ್ದರು. ನಂತರ ಈ ವಾಕ್ಯಗಳನ್ನು ಅವರ ಭಾಷಣದಿಂದ ತೆಗೆದುಹಾಕಲಾಗಿದ್ದರೂ, ಬಿ.ಜೆ.ಪಿ ನಾಯಕರು ಏನು ಯೋಚಿಸುತ್ತಿದ್ದಾರೆ ಎಂಬುದು ಬಹಿರಂಗವಾಯಿತು.

ಇದನ್ನೂ ನೋಡಿ: ಚಿತ್ರದುರ್ಗ : ಒಳ ಏಟಿನ ಪೆಟ್ಟು ಬಿಜೆಪಿಗಾ? ಕಾಂಗ್ರೆಸ್‌ಗೆ Janashakthi Media

Donate Janashakthi Media

Leave a Reply

Your email address will not be published. Required fields are marked *