ಬೆಂಗಳೂರು: ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ನಗರದಾದ್ಯಂತ ಪೊಲೀಸರು ಕಾಲ್ನಡಿಗೆ ಮೂಲಕ ಗಸ್ತು ಕರ್ತವ್ಯ ನಿರ್ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಸೂಚಿಸಿದ್ದಾರೆ.
ಬೀಟ್ಗಳಿಗೆ ಸಿಬ್ಬಂದಿಯನ್ನು ನೇಮಿಸಿದ್ದೇವೆ ಅಲ್ಲದೇ, ಹೋಯ್ಸಳ ಹಾಗೂ ಚೀತಾ ವಾಹನಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆಂದು ಅವರು ವಿವರಿಸಿ, ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಲು ಮತ್ತು ಪೊಲೀಸ್ ಉಪಸ್ಥಿತಿಯನ್ನು ಹೆಚ್ಚಿಸಲು ಬೀಟ್ ಸಿಬ್ಬಂದಿಯೊಂದಿಗೆ, ಹೋಯ್ಸಳ, ಚೀತಾ ವಾಹನದ ಸಿಬ್ಬಂದಿಗಳು ಮತ್ತು ಸಬ್ಇನ್ಸ್ ಪೆಕ್ಟರ್ ಶ್ರೀಣಿಯ ಅಧಿಕಾರಿಗಳು ತಮ್ಮ ತಮ್ಮ ಠಾಣೆ ವ್ಯಾಪ್ತಿಗಳಲ್ಲಿ ಕಾಲ್ನಡಿಗೆಯ ಮುಖಾಂತರ ಗಸ್ತು ಕರ್ತವ್ಯ ನಿರ್ವಹಿಸಲು ಈಗಾಗಲೇ ಸೂಚಿಸಿದ್ದೇನೆ ಎಂದು ಹೇಳಿದರು.
ಅಪರಾಧ ಹಾಗೂ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ಈ ಹೊಸ ಯೋಜನೆಯನ್ನು ಪ್ರಾಯೋಗಿಕವಾಗಿ ಪೂರ್ವ ಮತ್ತು ಪಶ್ಚಿಮ ವಿಭಾಗಗಳಲ್ಲಿ ಜಾರಿಗೆ ತರಲಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಭದ್ರಾವತಿ| ತೋಟಗಾರಿಕೆ ಇಲಾಖೆ: ಸಹಾಯಧನಕ್ಕೆ ಆಸಕ್ತ ರೈತರಿಗೆ ಅರ್ಜಿ ಆಹ್ವಾನ
ಚೀತಾ ಹಾಗೂ ಹೊಯ್ಸಳ ವಾಹನಗಳಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿರುತ್ತಾರೆ. ಆದರೆ ಅವರು ಸ್ಥಳದಲ್ಲಿ ಖುದ್ದು ಹಾಜರಿದ್ದು, ಸೂಕ್ಮ ಪ್ರದೇಶಗಳು ಹಾಗೂ ಸರ್ಕಲ್ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಗಸ್ತು ಮಾಡುವುದರಿಂದ ಅಪರಾಧಗಳನ್ನು ನಿಯಂತ್ರಿಸ ಬಹುದಾಗಿದೆ ಎಂದು ಅವರು ಹೇಳಿದರು.
ವಿಶೇಷವಾಗಿ ಸಂಜೆ ವೇಳೆಯಲ್ಲಿ ಮತ್ತು ವಾರದ ಕೊನೆಯ ದಿನಗಳಂದು ಸೂಕ್ಷ್ಮ ವಲಯಗಳಾದಂತಹ ಪ್ರಾರ್ಥನ ಸ್ಥಳಗಳು, ಮಾಲ್ಗಳು ಹಾಗೂ ಮಾರ್ಕೆಟ್ನಂತಹ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಕಾಲ್ನಡಿಗೆೆಯ ಮುಖಾಂತರ ನಮ್ಮ ಸಿಬ್ಬಂದಿ ಗಸ್ತು ಮಾಡಿದರೆ, ಯಾವುದೇ ಘರ್ಷಣೆಗಳಾಗಲೀ, ಕಾನೂನು ಬಾಹಿರ ಚಟುವಟಿಕೆಗಳಾಗಲೀ ನಡೆಯುವುದಿಲ್ಲ. ಒಂದು ವೇಳೆ ಅಂತಹ ಘಟನೆಗಳೇನಾದರೂ ನಡೆದರೆ ತಕ್ಷಣ ತಡೆಗಟ್ಟಬಹು ದಾಗಿದೆ ಎಂದು ಅವರು ವಿವರಿಸಿದರು.
ಈಗಿರುವ ನಮ್ಮ 112 ನಂಬರ್ಗೆ ಸಾರ್ವಜನಿಕರು ಕರೆ ಮಾಡಿದ ತಕ್ಷಣ ಅದನ್ನು ಸ್ವೀಕರಿಸಲಾಗುತ್ತದೆ. ಸಾರ್ವಜನಿಕರು ಕುಂದು ಕೊರತೆಗಳನ್ನು ತಿಳಿಸಿ, ಪೊಲೀಸರ ಸಹಾಯವನ್ನು ಪಡೆದುಕೊಳ್ಳಲು ನೆರವಾಗುತ್ತದೆೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಖುದ್ದು ಸ್ಥಳದಲ್ಲಿದ್ದರೆ ನಾಗರಿಕರು ಸಹಾಯವನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಡಿಸಿಪಿಗಳ ಸಭೆ ನಡೆಸಿ,ಚರ್ಚಿಸಿ ಈ ಯೋಜನೆಗಳನ್ನು ಅಳವಡಿಸಿದ್ದೇವೆ ಎಂದು ಅವರು ಹೇಳಿದರು.
ಠಾಣಾಧಿಕಾರಿಗಳು ಮತ್ತು ಎಸಿಪಿ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟರ್ಗಳು, ಎಂಓಬಿ ವ್ಯಕ್ತಿಗಳು ಮತ್ತು ಯಾವ ಅವಧಿ ಹಾಗೂ ಪ್ರದೇಶಗಳಲ್ಲಿ ಹೆಚ್ಚಾಗಿ ಅಪರಾಧಿಕ ಕೃತ್ಯಗಳು ಜರುಗುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆದು, ಅಂತಹ ಪ್ರದೇಶಗಳಲ್ಲಿ ಗಸ್ತನ್ನು ಹೆಚ್ಚಿಗೆ ಮಾಡಿ, ಪರಿಣಾಮಕಾರಿ ಮತ್ತು ಪೊಲೀಸ್ ಸ್ಪಂದಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಇದನ್ನೂ ನೋಡಿ: ವಚನಾನುಭವ 30| ಅಲ್ಲಮನ ವಚನ | ಅರಿವಿನ ಜಾಗೃತಿ – ಡಾ. ಮೀನಾಕ್ಷಿ ಬಾಳಿ Janashakthi Media
