ವಾಂಗ್ಚುಕ್ ಚಿಕಿತ್ಸೆ ವಿವಾದ: ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ನವದೆಹಲಿ: ಜುಲೈ 20ರಂದು ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸಲ್ಲಿಸಿದ್ದ ಅಪೀಲನ್ನು ಹೈಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವಾಂಗ್ಚುಕ್ ಅವರ ಚಿಕಿತ್ಸೆ ಮುಂದುವರಿಯುತ್ತಿರುವ ಕುರಿತು ಏಕಸದಸ್ಯ ನ್ಯಾಯಾಧೀಶರು ಹಸ್ತಕ್ಷೇಪಿಸಲು ನಿರಾಕರಿಸಿದ್ದ ತೀರ್ಪನ್ನು ಅವರು ಪ್ರಶ್ನಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಒಳಗೊಂಡ ವಿಭಾಗೀಯ ಪೀಠದ ಮುಂದೆ ತುರ್ತು ವಿಚಾರಣೆಗೆ ಅರ್ಜಿಯನ್ನು ಮಂಡಿಸಲಾಗಿದ್ದು, ಅದನ್ನು ಇದೇ ದಿನ ನಂತರ ವಿಚಾರಣೆ ನಡೆಸಲು ನ್ಯಾಯಪೀಠ ಒಪ್ಪಿಕೊಂಡಿದೆ.

ಅಂಗ್ಮೋ ಪರ ಹಿರಿಯ ವಕೀಲ ಅಖಿಲ್ ಸಿಬಲ್ ವಾದಿಸಿ, ವಾಂಗ್ಚುಕ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿ ಅಗತ್ಯವಿದ್ದರೆ ಚಿಕಿತ್ಸೆ ನೀಡಬೇಕು ಎಂಬ ಹೈಕೋರ್ಟ್‌ನ ಹಿಂದಿನ ಆದೇಶವನ್ನು ಏಕಸದಸ್ಯ ನ್ಯಾಯಾಧೀಶರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಸೇರಿ ಹಲವೆಡೆ ಜುಲೈ 19ರಂದು ಭಾರಿ ಮಳೆ ಸಾಧ್ಯತೆ: ಐಎಂಡಿ ಎಚ್ಚರಿಕೆ

ಜಂತರ್ ಮಂತರ್‌ನಿಂದ ದೆಹಲಿ ಪೊಲೀಸರು ಸ್ಥಳಾಂತರಿಸಿದ ನಂತರ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟ ವಾಂಗ್ಚುಕ್ ತಮ್ಮ ಇಚ್ಛೆಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ ಎಂದು ಸಿಬಲ್ ತಿಳಿಸಿದರು. ವೈದ್ಯಕೀಯ ಸೇವೆ ಪಡೆಯುವ ಸ್ಥಳವನ್ನು ಆಯ್ಕೆಮಾಡುವುದು ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು, ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಪ್ರತಿವಾದಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೆಚ್ಚಿನ ಸಮಯ ಕೇಳಿ, ವಿಚಾರಣೆಯನ್ನು ಮಧ್ಯಾಹ್ನ ಅಥವಾ ಮಂಗಳವಾರಕ್ಕೆ ಮುಂದೂಡಲು ಮನವಿ ಮಾಡಿದರು. ನ್ಯಾಯಪೀಠವು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸುವ ಸಾಧ್ಯತೆಯನ್ನು ಸೂಚಿಸಿದೆ.

ಅಪೀಲಿನಲ್ಲಿ, ಏಕಸದಸ್ಯ ನ್ಯಾಯಾಧೀಶರ ಆದೇಶವು ಯಾವುದೇ ಬಂಧನವಿಲ್ಲದಿದ್ದರೂ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸೀಮಿತಗೊಳಿಸಿದೆ ಎಂದು ಅಂಗ್ಮೋ ವಾದಿಸಿದ್ದಾರೆ. ಇದರಿಂದ ವಾಂಗ್ಚುಕ್ ಹಾಗೂ ಅವರ ಕುಟುಂಬಕ್ಕೆ ಚಿಕಿತ್ಸೆ ಕುರಿತು ನಿರ್ಧಾರ ಕೈಗೊಳ್ಳುವ ಹಕ್ಕು ಕಳೆದುಕೊಂಡಂತಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಮಾಹಿತಿ ಆಧಾರಿತ ಒಪ್ಪಿಗೆ (informed consent) ಹಾಗೂ ವ್ಯಕ್ತಿಯು ಚಿಕಿತ್ಸೆ ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕುಗಳನ್ನು ಪರಿಗಣಿಸದಿರುವುದಾಗಿ ಅಪೀಲಿನಲ್ಲಿ ವಾದಿಸಲಾಗಿದೆ.

ಭಾನುವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿ ಮಿನಿ ಪುಷ್ಕರ್ಣಾ ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ನಿರ್ದೇಶಿಸಲು ನಿರಾಕರಿಸಿದ್ದರು. ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಅಧಿಕಾರಿಗಳು ತಮ್ಮ ಅಧಿಕಾರದೊಳಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸರ್ಕಾರಿ ಆಸ್ಪತ್ರೆಯ ವೈದ್ಯರು ವಾಂಗ್ಚುಕ್ ಅವರ ಆರೋಗ್ಯವನ್ನು ನಿಕಟವಾಗಿ ಗಮನಿಸುತ್ತಿದ್ದು, ಅವರ ದೇಹದ ಅಖಂಡತೆಯನ್ನು ಉಲ್ಲಂಘಿಸುವಂತೆ ಬಲಪ್ರಯೋಗ ನಡೆದಿರುವ ಯಾವುದೇ ಸಾಕ್ಷ್ಯ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಜುಲೈ 16ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಉಲ್ಲೇಖಿಸಿ, ವಾಂಗ್ಚುಕ್ ಸ್ವಯಂ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಸೇರದ ಹಿನ್ನೆಲೆಯಲ್ಲಿ ಅವರನ್ನು ಸ್ಥಳಾಂತರಿಸುವುದು ಸರ್ಕಾರದ ಕ್ರಮ ಸಮಂಜಸ ಎಂದು ನ್ಯಾಯಾಲಯ ತಿಳಿಸಿತು.

ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳು ಸ್ಥಾಪಿತ ವೈದ್ಯಕೀಯ ನಿಯಮಾವಳಿಗಳ ಪ್ರಕಾರ ವೈದ್ಯಕೀಯ ತಂಡದ ಅಧೀನದಲ್ಲಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜೂನ್ 28ರಿಂದ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಅವರನ್ನು, 21ನೇ ದಿನವಾದ ಶನಿವಾರ ದೆಹಲಿ ಪೊಲೀಸರು ಜಂತರ್ ಮಂತರ್‌ನಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ NEET ಪರೀಕ್ಷೆ ರದ್ದುಪಡಿಸಿದ ಹಿನ್ನೆಲೆಯಲ್ಲಿನ ವಿದ್ಯಾರ್ಥಿಗಳ ಸಾವಿನ ವಿರುದ್ಧ ಅವರು ಉಪವಾಸ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್‌ | ಕೆ ಎಸ್ ವಿಮಲಾ

Donate Janashakthi Media

Leave a Reply

Your email address will not be published. Required fields are marked *