ನೀಟ್ ಅಕ್ರಮ ಖಂಡಿಸಿ ಸಿಐಟಿಯು ಪ್ರತಿಭಟನೆ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಬೆಂಗಳೂರು: ನೀಟ್ ಹಾಗೂ ಯುಜಿಸಿ-ನೆಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯಲ್ಲಿ ಸಮಗ್ರ ಸುಧಾರಣೆ ಜಾರಿಗೊಳಿಸಿ ಪಾರದರ್ಶಕ, ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಕ್ರಮವನ್ನು ಖಂಡಿಸಿದರು. ಪ್ರತಿಭಟನೆಯ ಕುರಿತು ಯಾವುದೇ ಮಾಹಿತಿ ಹರಡದಂತೆ ಜಂತರ್ ಮಂತರ್ ಪ್ರದೇಶದಲ್ಲಿ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗಳನ್ನು ನಿರ್ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿದರು.

ನೀಟ್ ಪರೀಕ್ಷೆ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ತೀವ್ರ ಮಾನಸಿಕ ಸಂಕಷ್ಟ ಅನುಭವಿಸಿವೆ. ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆ. ಮರುಪರೀಕ್ಷೆಗೆ 2,79,848 ವಿದ್ಯಾರ್ಥಿಗಳು ಗೈರಾಗಿರುವುದು ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಇದನ್ನೂ ಓದಿ : ‘ಚಲೋ ಸಂಸತ್’ ಮೆರವಣಿಗೆ ಉದ್ವಿಗ್ನತೆ: ಲಾಠಿ ಚಾರ್ಜ್, ಭಾರೀ ಭದ್ರತೆ ನಡುವೆ ಪ್ರತಿಭಟನೆ

ಯುಜಿಸಿ-ನೆಟ್ 2026 ಪರೀಕ್ಷೆಯಲ್ಲಿಯೂ ಗಂಭೀರ ಲೋಪಗಳು ಕಂಡುಬಂದಿವೆ. ಜೂನ್ 22ರಂದು ತಾಂತ್ರಿಕ ದೋಷದಿಂದ ಪರೀಕ್ಷೆಯನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದಿನ ಪ್ರಶ್ನೆಪತ್ರಿಕೆಗಳಿಂದ ಪ್ರಶ್ನೆಗಳನ್ನು ಮರುಬಳಕೆ ಮಾಡಿರುವ ಆರೋಪವೂ ಕೇಳಿಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ, ತಾಂತ್ರಿಕ ವೈಫಲ್ಯ, ಪರೀಕ್ಷೆಗಳ ರದ್ದತಿ ಹಾಗೂ ಕಳಪೆ ಗುಣಮಟ್ಟದ ಪ್ರಶ್ನೆಪತ್ರಿಕೆಗಳಂತಹ ಘಟನೆಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವಲ್ಲಿ ಎನ್‌ಟಿಎ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳ ಜೀವ ಹಾಗೂ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು. ಈ ವೈಫಲ್ಯಕ್ಕೆ ನೇರ ಹೊಣೆಗಾರರಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಕ್ರಿಯೆಯನ್ನು ರಾಜ್ಯಗಳಿಗೆ ವಹಿಸಬೇಕು ಎಂದು ಸಿಐಟಿಯು ಆಗ್ರಹಿಸಿತು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಚ್.ಎನ್. ಗೋಪಾಲಗೌಡ, ರಾಜ್ಯ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮಳವಳ್ಳಿ, ಉತ್ತರ ಜಿಲ್ಲಾ ಅಧ್ಯಕ್ಷ ಎನ್. ಪ್ರತಾಪಸಿಂಹ, ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಅರಳಹಳ್ಳಿ, ರಾಜಣ್ಣ, ಸೌಹಾರ್ದ ಕರ್ನಾಟಕದ ರಾಮಕೃಷ್ಣ ಸಿಐಟಿಯು ಮುಖಂಡರಾದ ಕೆ.ಎಸ್‌ ಲಕ್ಷ್ಮಿ, ಶ್ರೀಪತಿ, ದೇವಿಕಾ, ಮೀನರ್ವ ಚಂದ್ರು, ಹುಳ್ಳಿ ಉಮೇಶ್‌, ವಿನಾಯಕ ಸೇರಿದಂತೆ ಹಲವು ಮುಖಂಡರಿದ್ದರು.

ಇದನ್ನೂ ನೋಡಿ : “19ನೇ ದಿನಕ್ಕೆ ಸೋನಮ್‌ ವಾಂಗ್‌ಚುಕ್‌ ಉಪವಾಸ – ಕೇಂದ್ರಕ್ಕೆ ಎಚ್ಚರಿಕೆಯ ಗಂಟೆ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *