ಸರ್ಕಾರದ ಯೋಜನೆಗಳು: ಹಕ್ಕು ಕಡಿಮೆ, ಫಲಾನುಭವಿ ಹೆಚ್ಚು? ಹೊಸ ಕೈಪಿಡಿ ಪ್ರಶ್ನೆ

ನವದೆಹಲಿ: ಭಾರತದ ಕಲ್ಯಾಣ ಯೋಜನೆಗಳ ಸ್ವರೂಪವು ಕಳೆದ ಕೆಲವು ವರ್ಷಗಳಲ್ಲಿ ‘ಹಕ್ಕು ಆಧಾರಿತ’ (Rights-based) ವ್ಯವಸ್ಥೆಯಿಂದ ‘ಫಲಾನುಭವಿ ಕೇಂದ್ರಿತ’ (Beneficiary-centric) ಮಾದರಿಯತ್ತ ಬದಲಾಗುತ್ತಿದೆ ಎಂಬ ಆತಂಕವನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿರುವ ಹೊಸ ಅಧ್ಯಯನ ಕೈಪಿಡಿ ವ್ಯಕ್ತಪಡಿಸಿದೆ. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಸಾಮಾಜಿಕ ಭದ್ರತೆ ಕ್ಷೇತ್ರಗಳಲ್ಲಿ ಸರ್ಕಾರಿ ಯೋಜನೆಗಳು ವಿಸ್ತರಿಸಿದ್ದರೂ, ಮೂಲಭೂತ ಸೇವೆಗಳಲ್ಲಿ ಇನ್ನೂ ದೊಡ್ಡ ಕೊರತೆಗಳಿವೆ ಎಂದು ವರದಿ ಹೇಳಿದೆ. ಯೋಜನೆಗಳು

‘ರಿಯಲೈಸಿಂಗ್ ರೈಟ್ಸ್: ಎ ಹ್ಯಾಂಡ್‌ಬುಕ್ ಆಫ್ ವೆಲ್ಫೇರ್ ಇನ್ ಇಂಡಿಯಾ’ (Realising Rights: A Handbook of Welfare in India) ಎಂಬ ಶೀರ್ಷಿಕೆಯ ಈ ಕೈಪಿಡಿಯನ್ನು ಜೂನ್ 26ರಂದು ನವದೆಹಲಿಯಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿತು. 27 ಲೇಖಕರು 18 ಅಧ್ಯಾಯಗಳಲ್ಲಿ ಭಾರತದ ಕಲ್ಯಾಣ ವ್ಯವಸ್ಥೆಯ ಸಾಧನೆಗಳು, ಸವಾಲುಗಳು ಹಾಗೂ ಭವಿಷ್ಯದ ದಿಕ್ಕನ್ನು ವಿಶ್ಲೇಷಿಸಿದ್ದಾರೆ.

ಕೈಪಿಡಿಯ ಪ್ರಕಾರ, ಸರ್ಕಾರದ ಯೋಜನೆಗಳನ್ನು ಕೇವಲ ಫಲಾನುಭವಿಗಳ ಸಂಖ್ಯೆಯಿಂದ ಅಳೆಯಬಾರದು. ಬದಲಿಗೆ, ನಾಗರಿಕರ ಘನತೆ, ಹಕ್ಕುಗಳು ಮತ್ತು ಸರ್ಕಾರದ ಉತ್ತರದಾಯಿತ್ವ ಎಂಬ ಅಂಶಗಳನ್ನೂ ಪರಿಗಣಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ರಾಜೇಂದ್ರನ್ ನಾರಾಯಣನ್ ಮಾತನಾಡಿ, ಕಳೆದ ಒಂದು ದಶಕದಲ್ಲಿ ನಾಗರಿಕರನ್ನು “ಹಕ್ಕುದಾರರು” ಎನ್ನುವ ಪರಿಕಲ್ಪನೆಯ ಬದಲಿಗೆ “ಫಲಾನುಭವಿಗಳು” ಎಂದು ಕರೆಯುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದರಿಂದ ಜನರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯುವವರ ಬದಲು ಸರ್ಕಾರದ ನೆರವು ಪಡೆಯುವವರಂತೆ ಬಿಂಬಿತರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅರ್ಥಶಾಸ್ತ್ರಜ್ಞ ಎ.ಕೆ. ಶಿವಕುಮಾರ್ ಅವರ ಪ್ರಕಾರ, ಹಕ್ಕು ಆಧಾರಿತ ಸಾರ್ವಜನಿಕ ವ್ಯವಸ್ಥೆಗಳು ಕ್ರಮೇಣ ನೇರ ಹಣ ವರ್ಗಾವಣೆ (Cash Transfer) ಮತ್ತು ಡಿಜಿಟಲ್ ಸೇವಾ ವಿತರಣಾ ವ್ಯವಸ್ಥೆಗಳಿಗೆ ಸ್ಥಳ ನೀಡುತ್ತಿವೆ. ಆದರೆ, ಈ ಬದಲಾವಣೆ ನಾಗರಿಕರ ಹಕ್ಕುಗಳನ್ನು ಬಲಪಡಿಸುತ್ತದೆಯೇ ಅಥವಾ ದುರ್ಬಲಗೊಳಿಸುತ್ತದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಯೋಜನೆಗಳು

ಇದನ್ನೂ ಓದಿ : PNB, ಕೆನರಾ ಬ್ಯಾಂಕ್‌, SBI ವಿಲೀನದ ವದಂತಿಗೆ ಸ್ಪಷ್ಟನೆ: ಅಧಿಕೃತ ಘೋಷಣೆ ಇಲ್ಲ

ವೆಚ್ಚ ಇನ್ನೂ ಗುರಿಗಿಂತ ಕಡಿಮೆ

ಕೈಪಿಡಿಯ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಸಾರ್ವಜನಿಕ ವೆಚ್ಚವು ಹಲವು ವರ್ಷಗಳಿಂದ ಜಿಡಿಪಿಯ ಸುಮಾರು 4 ಶೇಕಡಾ ಮಟ್ಟದಲ್ಲೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ 6 ಶೇಕಡಾ ಆಗಿದೆ. ಆರೋಗ್ಯ ಕ್ಷೇತ್ರದಲ್ಲೂ ಸಾರ್ವಜನಿಕ ವೆಚ್ಚವು 2 ಶೇಕಡಾಕ್ಕಿಂತ ಕಡಿಮೆ ಇದ್ದು, ರಾಷ್ಟ್ರೀಯ ಆರೋಗ್ಯ ನೀತಿಯ ಗುರಿ 2.5 ಶೇಕಡಾವಾಗಿದೆ. ಸಾಮಾಜಿಕ ಭದ್ರತೆಗೆ ಭಾರತವು 2023ರಲ್ಲಿ ಜಿಡಿಪಿಯ ಕೇವಲ 4 ಶೇಕಡಾ ವೆಚ್ಚ ಮಾಡಿದ್ದು, ಇದು ಬ್ರೆಜಿಲ್, ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾದಂತಹ ದೇಶಗಳಿಗಿಂತ ಕಡಿಮೆ ಎಂದು ವರದಿ ಉಲ್ಲೇಖಿಸಿದೆ. ಯೋಜನೆಗಳು

ಡಿಜಿಟಲ್ ವ್ಯವಸ್ಥೆಯಿಂದ ಹೊರಗುಳಿಯುವ ಅಪಾಯ

ಆಧಾರ್ ದೃಢೀಕರಣ, ಇ-ಕೆವೈಸಿ ಹಾಗೂ ಡಿಜಿಟಲ್ ಪ್ರಕ್ರಿಯೆಗಳ ಕಾರಣದಿಂದ ಕೆಲ ಅರ್ಹರು ಯೋಜನೆಗಳಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಅಧ್ಯಯನ ಎಚ್ಚರಿಸಿದೆ. ಮೊಬೈಲ್ ಫೋನ್ ಅಥವಾ ಡಿಜಿಟಲ್ ಸೌಲಭ್ಯಗಳ ಕೊರತೆಯಿಂದ ಅನೇಕ ಮಹಿಳೆಯರು ಹಾಗೂ ಗ್ರಾಮೀಣ ಕುಟುಂಬಗಳು ಯೋಜನೆಗಳ ಲಾಭ ಪಡೆಯಲು ತೊಂದರೆ ಅನುಭವಿಸುತ್ತಿವೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಪಾತ್ರವೂ ಕ್ರಮೇಣ ಕುಗ್ಗುತ್ತಿರುವ ಬಗ್ಗೆ ಕೈಪಿಡಿ ಆತಂಕ ವ್ಯಕ್ತಪಡಿಸಿದೆ.

ಸರ್ಕಾರದ ಹೂಡಿಕೆ ಹೆಚ್ಚಿಸುವ ಅಗತ್ಯ

ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ಸಾಮಾಜಿಕ ಭದ್ರತೆ ಕ್ಷೇತ್ರಗಳಲ್ಲಿ ಹೆಚ್ಚಿನ ಸಾರ್ವಜನಿಕ ಹೂಡಿಕೆ, ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಹಾಗೂ ಉತ್ತರದಾಯಿತ್ವಯುತ ಆಡಳಿತದ ಮೂಲಕವೇ ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಕಲ್ಯಾಣ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ ಎಂದು ಕೈಪಿಡಿ ಶಿಫಾರಸು ಮಾಡಿದೆ.

ಇದನ್ನೂ ನೋಡಿ : ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media

Donate Janashakthi Media

Leave a Reply

Your email address will not be published. Required fields are marked *