ಜಿಡಿಪಿಯನ್ನು ಒಂದು ದೇಶದ ಆರ್ಥಿಕತೆಯ ಮಾಪನವನ್ನಾಗಿ ಬಳಸುವ ಬಗ್ಗೆ ವಿವಾದ ಲಾಗಾಯ್ತಿನಿಂದ ಇದೆ. ಹಲವರು ಹಲವು ಪರ್ಯಾಯ ಕ್ರಮಗಳನ್ನು ಸೂಚಿಸಿದ್ದಾರೆ. ಆದರೂ ಇಂದಿಗೂ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಜಿಡಿಪಿಯನ್ನೇ ವ್ಯಾಪಕವಾಗಿ ಬಳಸಲಾಗುತ್ತಿದೆ. ಜಿಡಿಪಿ ಗತಿಯನ್ನು ಪರಿಶೀಲಿಸಿ ಅರ್ಥಿಕತೆ ಬೆಳೆಯುತ್ತಿದೆಯೋ ಇಲ್ಲ ಕುಸಿಯುತ್ತಿದೆಯೋ ಅನ್ನುವುದನ್ನು ಅಂದಾಜು ಮಾಡಲಾಗುತ್ತದೆ. ಜನರ ಜೀವನಮಟ್ಟವನ್ನು ಅರ್ಥಮಾಡಿಕೊಳ್ಳುವುದಕ್ಕೂ ಇದನ್ನು ಗಮನಿಸಲಾಗುತ್ತದೆ. ಹಾಗಾಗಿ ಸರ್ಕಾರದ ನೀತಿ ನಿರೂಪಕರು, ಉದ್ಯಮಗಳು ಮತ್ತು ಹಣಕಾಸು ಸಂಸ್ಥೆಗಳ ಆರ್ಥಿಕ ಯೋಜನೆಗಳನ್ನು ರೂಪಿಸಲು, ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಜಿಡಿಪಿಯನ್ನೇ ಮಾಪನವನ್ನಾಗಿ ಬಳಸುತ್ತಿದ್ದಾರೆ. ಅಂದಾಜು
– ಟಿ. ಎಸ್. ವೇಣುಗೋಪಾಲ್
ನಮ್ಮ ಸರ್ಕಾರವೂ ಜಿಡಿಪಿಯ ಕಣ್ಣಲ್ಲೇ ದೇಶದ ಆರ್ಥಿಕತೆಯನ್ನು, ಜನರ ಬದುಕನ್ನು ಗ್ರಹಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ನಮ್ಮ ಜಿಡಿಪಿಯ ಲೆಕ್ಕಾಚಾರದ ಬಗ್ಗೆಯೂ ತೀವ್ರವಾದ ಅನುಮಾನಗಳು, ಟೀಕೆಗಳು ವ್ಯಕ್ತವಾಗಿವೆ. ನಮ್ಮ ಆರ್ಥಿಕತೆಯ ಮುಖ್ಯ ಭಾಗವಾದ ಅಸಂಘಟಿತ ವಲಯದ ಬಗ್ಗೆ ನಮ್ಮಲ್ಲಿ ಸರಿಯಾದ ಮಾಹಿತಿಯಿಲ್ಲ. ಸಂಘಟಿತ ವಲಯದ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಯನ್ನೇ ಅದಕ್ಕೂ ಅನ್ವಯಿಸುತ್ತಿದ್ದೆವು. ಅರ್ಥಿಕತೆಯನ್ನು ಹೋಲಿಸುವುದಕ್ಕೆ ಬಳಸುವ ಆಧಾರ ವರ್ಷ(ಬೇಸ್ ಇಯರ್) ತೀರಾ ಹಳತಾಗಿದೆ. ಭಾರತದಲ್ಲಿ ಕಳೆದ ೧೫ ವರ್ಷಗಳಿಂದ 2011-12ನ್ನೇ ಆಧಾರ ವರ್ಷವನ್ನಾಗಿ ಇಟ್ಟುಕೊಳ್ಳಲಾಗಿದೆ. ನಮ್ಮಲ್ಲಿ ಜನಗಣತಿಯಾಗಿಲ್ಲ. ನಮ್ಮ ಜನಸಂಖ್ಯೆ ಎಷ್ಟೆಂಬುದೇ ನಮಗೆ ಕರಾರುವಕ್ಕಾಗಿ ಗೊತ್ತಿಲ್ಲ. ಹೀಗೆ ಹಲವು ಟೀಕೆಗಳು ಇವೆ. ಅಂದಾಜು
ಈ ನ್ಯೂನತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸಾಂಖ್ಯಿಕ ಸಚಿವಾಲಯವು(ಮೊಸ್ಪಿ) ಪರಿಷ್ಕೃತ ಜಿಡಿಪಿ ಅಂದಾಜನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಜಿಡಿಪಿ ಅಂದಾಜಿನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ಆಧಾರ ವರ್ಷವನ್ನು ಬದಲಿಸಲಾಗಿದೆ. ಈ ಬದಲಾವಣೆ ಅನಿವಾರ್ಯವಾಗಿತ್ತು. ಯಾಕೆಂದರೆ ದಿನಕಳೆದಂತೆ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳು, ವಸ್ತುಗಳ ಬೆಲೆ, ಜನರು ಖರ್ಚು ಮಾಡುವ ಕ್ರಮ, ಹೂಡಿಕೆಯ ಕ್ರಮ, ತಂತ್ರಜ್ಞಾನದ ಬೆಳೆವಣಿಗೆ ಹೀಗೆ ಪ್ರತಿಯೊಂದರಲ್ಲೂ ವಿಪರೀತ ಬದಲಾವಣೆಗಳಾಗುತ್ತಿರುತ್ತವೆ. ಹಳೆಯ ವರ್ಷವನ್ನೇ ಆಧಾರವಾಗಿ ಇಟ್ಟುಕೊಂಡರೆ ಇಂದಿನ ಆರ್ಥಿಕತೆಯ ವಾಸ್ತವ ಚಿತ್ರ ತಿಳಿಯುವುದಿಲ್ಲ. ಉದಾಹರಣೆಗೆ, ಇಂದು ಇಡೀ ಆರ್ಥಿಕತೆ ಕಂಪ್ಯೂಟರುಗಳನ್ನು ಬಳಸುತ್ತಿರುವಾಗ, ಟೈಪ್‌ರೈಟರ್‌ಗಳ ಉತ್ಪಾದನೆ ಮತ್ತು ಬೆಲೆಯನ್ನು ನೋಡಿ ಜಿಡಿಪಿ ಲೆಕ್ಕ ಹಾಕುವುದು ಸರಿಯಲ್ಲ. ಹಾಗಾಗಿ ಆಗಿಂದ್ದಾಗೆ ಆಧಾರ ವರ್ಷವನ್ನು ಬದಲಿಸಲಾಗುತ್ತಿರುತ್ತದೆ. ಅಂದಾಜು
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಆಧಾರ ವರ್ಷದ ಬದಲಾವಣೆ:
ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿ ಆಧಾರ ವರ್ಷವನ್ನು ಬದಲಾಯಿಸುತ್ತಿರುವುದು ಇದು ಎಂಟನೆಯ ಬಾರಿ. ಈಗ 2022-23 ಅನ್ನು ಆಧಾರ ವರ್ಷವಾಗಿ ಆರಿಸಿಕೊಳ್ಳಲಾಗಿದೆ. 2022-23ರಲ್ಲಿ ಕೋವಿಡ್ ಇತ್ಯಾದಿ ಯಾವುದೇ ದೊಡ್ಡ ಏರುಪೇರುಗಳಿಲ್ಲದಿದ್ದ ಕಾರಣ ಅದನ್ನು ಹೋಲಿಕೆಗೆ ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಅಂದರೆ ಇನ್ನು ಮುಂದೆ ತಯಾರಾಗುವ ಸರಕು ಹಾಗೂ ಸೇವೆಗಳನ್ನು, ಮತ್ತು ಅವುಗಳನ್ನು ಮಾರುವ ಹಾಗೂ ಕೊಳ್ಳುವ ಬೆಲೆಯನ್ನು 2022-23ರ ಉತ್ಪನ್ನ ಹಾಗೂ ಬೆಲೆಗಳೊಂದಿಗೆ ಹೋಲಿಸಲಾಗುತ್ತದೆ. ಈ ಬದಲಾವಣೆ ಜಿಡಿಪಿಗೆ ಮಾತ್ರ ಸೀಮಿತವಲ್ಲ. ‘ಗ್ರಾಹಕ ಬೆಲೆ ಸೂಚ್ಯಂಕ’ (ಸಿಪಿಐ) ಮತ್ತು ‘ಕೈಗಾರಿಕಾ ಉತ್ಪಾದನಾ ಸೂಚ್ಯಂಕ’(IIP) ಇತ್ಯಾದಿ ಪ್ರಮುಖ ಸೂಚಿಗಳಿಗೂ ಇದೇ ಆಧಾರವಾಗಿರುತ್ತದೆ.
ಸಾಂಖ್ಯಿಕ ಅಂತರ
ಒಂದು ದೇಶದ ಜಿಡಿಪಿಯನ್ನು ಹಲವು ಬಗೆಯಲ್ಲಿ ಅಂದಾಜು ಮಾಡಬಹುದು. ಒಟ್ಟಾರೆ ದೇಶದ ಆ ವರ್ಷದ ಉತ್ಪಾದನೆಯನ್ನು, ಅಥವಾ ವರಮಾನವನ್ನು, ಅಥವಾ ಒಟ್ಟಾರೆ ಜನರು ಮಾಡುವ ಖರ್ಚನ್ನು ಆಧರಿಸಿ ಜಿಡಿಪಿಯನ್ನು ಲೆಕ್ಕ ಹಾಕಬಹುದು. ಜಿಡಿಪಿಯನ್ನು ಲೆಕ್ಕ ಹಾಕುವುದಕ್ಕೆ ನೇರ ಕ್ರಮವೆಂದರೆ ಒಂದು ದೇಶ ಒಂದು ನಿರ್ದಿಷ್ಟ ವರ್ಷದಲ್ಲಿ ಉತ್ಪಾದಿಸುವ ಎಲ್ಲದರ ಒಟ್ಟು ಮೌಲ್ಯವನ್ನು ಲೆಕ್ಕ ಹಾಕುವುದು. ಇದು ಒಂದು ವರ್ಷದಲ್ಲಿ ಅರ್ಥಿಕತೆಯ ವಿವಿಧ ವಲಯಗಳು ಸೃಷ್ಟಿಸಿದ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಇದನ್ನು ಒಟ್ಟು ಮೌಲ್ಯವರ್ಧನೆ ಅಥವಾ ಜಿವಿಎ ಎಂದು ಕರೆಯುತ್ತಾರೆ.
ಆರ್ಥಿಕತೆಯನ್ನು ನೋಡುವ ಇನ್ನೊಂದು ಕ್ರಮವೆಂದರೆ ವಿಭಿನ್ನ ಜನ ಅಥವಾ ಅರ್ಥಿಕತೆಯ ವಿಭಿನ್ನ ಗುಂಪುಗಳು (ಅದು ವ್ಯಕ್ತಿಗಳಾಗಿರಬಹುದು, ಸರ್ಕಾರವಾಗಿರಬಹುದು ಅಥವಾ ವ್ಯಾಪಾರ ಉದ್ದಿಮೆಗಳಾಗಿರಬಹುದು) ಮಾಡುವ ಎಲ್ಲಾ ಖರ್ಚುಗಳ ಮೊತ್ತವನ್ನು ಲೆಕ್ಕ ಹಾಕುವುದು. ಇದನ್ನು ಜಿಡಿಪಿ ಎಂದು ಕರೆಯುತ್ತಾರೆ. ಇವೆರಡರ ನಡುವಿನ ಸಂಬಂಧವನ್ನು ಕೆಳಗಿನ ಸಮೀಕರಣದ ಮೂಲಕ ವಿವರಿಸಬಹುದು. ಜಿಡಿಪಿ = ಜಿವಿಎ+ನಿವ್ವಳ ಪರೋಕ್ಷ ತೆರಿಗೆ, ಇಲ್ಲಿ ನಿವ್ವಳ ಪರೋಕ್ಷ ತೆರಿಗೆ ಅಂದರೆ ಸರ್ಕಾರ ವಿವಿಧ ಸರಕುಗಳ ಮೇಲೆ ಹಾಕುವ ತೆರಿಗೆಯಲ್ಲಿ ಸರ್ಕಾರ ವಿಭಿನ್ನ ಸರಕುಗಳಿಗೆ ಕೊಡುವ ಸಬ್ಸಡಿಯನ್ನು ಕಳೆದಾಗ ಬರುವ ಮೊತ್ತ.
ಸೈದ್ದಾಂತಿಕವಾಗಿ ಇವೆರಡೂ ಸಮನಾಗಿ ಇರಬೇಕು. ಆದರೆ ಮೋಸ್ಪಿ ಹೇಳುವಂತೆ ಎರಡು ಒಂದೇ ಇರುವುದಿಲ್ಲ. ಅವೆರಡರ ನಡುವಿನ ವ್ಯತ್ಯಾಸವನ್ನು ಸಾಂಖ್ಯಿಕ ಅಂತರ (ಸ್ಟಾಟಿಸ್ಟಿಕಲ್ ಡಿಸ್ಕ್ರಿಪೆನ್ಸಿ) ಎಂದು ಕರೆಯಲಾಗಿದೆ. ಹೀಗೆ ವ್ಯತ್ಯಾಸ ಬರುವುದಕ್ಕೆ ಕಾರಣ ಕೆಲವೊಮ್ಮ ಖರ್ಚಿಗೆ ಸಂಬಂಧಿಸಿದ ಮಾಹಿತಿಗಳು ಸಮಯಕ್ಕೆ ಸಿಗದೇ ಇರುವುದು. ಉದಾಹರಣೆಗೆ ಒಂದು ಕಾರು ಉತ್ಪಾದನೆಯಾದ ಲೆಕ್ಕ ಸಿಗುತ್ತದೆ. ಆದನ್ನು ಯಾರು ಕೊಂಡರು, ಅಥವಾ ಖರ್ಚಾಗದೆ ಹಾಗೇ ಉಳಿದಿದೆಯೇ ಇತ್ಯಾದಿ ಮಾಹಿತಿಗಳು ತಕ್ಷಣ ಸಿಗದೇ ಇರಬಹುದು.
ಹೀಗೆ ಹಲವು ಕಾರಣಗಳಿಂದಾಗಿ ಎರಡರ ನಡುವೆ ವ್ಯತ್ಯಾಸವಿರುತ್ತದೆ. ಅದನ್ನು ಸರಿಪಡಿಸುವುದಕ್ಕೆ ಉತ್ಪನ್ನ ಸಮತೋಲನ ಸಿದ್ದಾಂತವನ್ನು ಅನುಸರಿಸಲಾಗಿದೆ. ಅಂದರೆ ಒಟ್ಟು ಪೂರೈಕೆ ಒಟ್ಟು ಬಳಕೆಗೆ ಸಮನಾಗಿರಬೇಕು ಅನ್ನುವ ನಿಯಮವನ್ನು ಅನುಸರಿಸಿ ಎರಡರ ನಡುವೆ ಸಮತೋಲನವನ್ನು ಸ್ಥಾಪಿಸಲು ಪ್ರಯತ್ನಿಸಲಾಗಿದೆ. ಅಂದರೆ ಒಟ್ಟು ಪೂರೈಕೆ (ಉತ್ಪಾದನೆ + ಆಮದು) = ಒಟ್ಟು ಬಳಕೆ (ಖರ್ಚು + ರಫ್ತು) ಆಗಿರುವಂತೆ ನೋಡಿಕೊಳ್ಳಲಾಗುತ್ತದೆ.
ಇದಕ್ಕಾಗಿ ಪೂರೈಕೆ ಮತ್ತು ಬಳಕೆ ಕೋಷ್ಟಕದ (SUT) ಮೂಲಕ ಉತ್ಪಾದನೆ, ಆದಾಯ ಮತ್ತು ವೆಚ್ಚದ ಅಂಕಿಅಂಶಗಳನ್ನು ಪರಸ್ಪರ ತಾಳೆ ನೋಡಿ, ಸಮತೋಲನಗೊಳಿಸಲು ಪ್ರಯತ್ನಿಸಲಾಗಿದೆ. ಭಾರತದ ಹೊಸ ಜಿಡಿಪಿ ಸರಣಿಯಲ್ಲಿ ಈ SUT ಚೌಕಟ್ಟನ್ನು ವ್ಯವಸ್ಥಿತವಾಗಿ ಬಳಸಲಾಗುತ್ತಿದೆ. ದೇಶದ ಒಟ್ಟು ಪೂರೈಕೆ ಮತ್ತು ಒಟ್ಟು ಬೇಡಿಕೆಯನ್ನು ತಾಳೆ ನೋಡುವ ಮೂಲಕ ಲೆಕ್ಕಾಚಾರದಲ್ಲಿ ಸ್ಥಿರತೆ ತರಲು ಯತ್ನಿಸಲಾಗುತ್ತಿದೆ.
ಡಬಲ್ ಡಿಫ್ಲೇಷನ್:
ಈಗಿನ ಜಿಡಿಪಿ ಅಂದಾಜು ಮಾಡುವ ಕ್ರಮದಲ್ಲಿ ಇನ್ನೊಂದು ಸುಧಾರಣೆ ಅಂದರೆ ಡಬಲ್ ಡಿಫ್ಲೇಷನ್ ಕ್ರಮದ ಬಳಕೆ. ಇದಕ್ಕಾಗಿ ಹಲವು ಅರ್ಥಶಾಸ್ತçಜ್ಞರು ಒತ್ತಾಯಿಸುತ್ತಲೇ ಇದ್ದರು.
ಏನಿದು ಡಬಲ್ ಡಿಫ್ಲೇಷನ್ ಕ್ರಮ?
ಜಿಡಿಪಿಯನ್ನು ಅಂದಾಜು ಮಾಡುವುದಕ್ಕೆ ದೇಶದಲ್ಲಿ ತಯಾರಾದ ಒಟ್ಟಾರೆ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ಪರಿಗಣಿಸಲಾಗುತ್ತದೆ. ಹೀಗೆ ಮಾರುಕಟ್ಟೆ ಮೌಲ್ಯದಲ್ಲಿ ಲೆಕ್ಕ ಹಾಕಿದ ಜಿಡಿಪಿಯನ್ನು ನಾಮಿನಲ್ ಜಿಡಿಪಿ ಎನ್ನಲಾಗುತ್ತದೆ. ಇದರ ಸಮಸ್ಯೆಯೆಂದರೆ ಒಟ್ಟಾರೆ ಉತ್ಪನ್ನ ಅಷ್ಟೇ ಇದ್ದರೂ ಉತ್ಪಾದನೆಯಾದ ಸರಕುಗಳ ಬೆಲೆಗಳಲ್ಲಿ ಏರಿಕೆಯಾದರೆೆ ಜಿಡಿಪಿಯಲ್ಲಿ ಏರಿಕೆಯಾಗುತ್ತದೆ. ಆದರೆ ವಾಸ್ತವದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದಿಲ್ಲ.
ಅವುಗಳ ಬೆಲೆಗಳಲ್ಲಿ ಮಾತ್ರ ಏರಿಕೆಯಾಗಿರುತ್ತದೆ. ಅದರಿಂದ ನೈಜ ಜಿಡಿಪಿಯನ್ನು ಲೆಕ್ಕ ಹಾಕುವುದಕ್ಕೆ ನಾಮಿನಲ್ ಜಿಡಿಪಿಯಿಂದ ಹಣದುಬ್ಬರದ ದರವನ್ನು ಕಳೆಯಲಾಗುತ್ತದೆ. ಹೀಗೆ ಹಣದುಬ್ಬರದ ಪರಿಣಾಮವನ್ನು ತೆಗೆಯುವ ಪ್ರಕ್ರಿಯೆಯನ್ನು ಡಿಫ್ಲೇಷನ್ ಎಂದು ಕರೆಯುತ್ತಾರೆ. ಹೀಗೆ ಹಣದುಬ್ಬರದ ಪರಿಣಾಮವನ್ನು ಕಳೆದು ಅಂದಾಜು ಮಾಡಿದ ನೈಜ ಜಿವಿಎ ನಿಜವಾಗಿ ಉತ್ಪಾದನಾ ಪ್ರಕ್ರಿಯೆಯಿಂದಾಗಿ ಹೆಚ್ಚುವರಿಯಾಗಿ ಸೇರ್ಪಡೆಯಾದ ಮೌಲ್ಯವನ್ನು ಅಥವಾ ಮೌಲ್ಯವರ್ಧನೆಯನ್ನು ತೋರಿಸುತ್ತದೆ.

ಈವರೆಗೂ ಅಂತಿಮ ಉತ್ಪನ್ನದ ಬೆಲೆಯ ಪರಿಣಾಮವನ್ನು ಮಾತ್ರ ಸರಿತೂಗಿಸುವ ಕೆಲಸ ಮಾಡಲಾಗುತ್ತಿತ್ತು. ಅಂದರೆ ಕೇವಲ ಅಂತಿಮ ಉತ್ಪನ್ನದ ಮೌಲ್ಯದಿಂದ ಮಾತ್ರ ಹಣದುಬ್ಬರದ ದರವನ್ನು ಕಳೆಯಲಾಗುತ್ತಿತ್ತು. ಇದನ್ನು ಸಿಂಗಲ್ ಡಿಫ್ಲೇಷನ್ ಎಂದು ಕರೆಯಲಾಗುತ್ತದೆ. ಇದರ ಸಮಸ್ಯೆಯೆಂದರೆ ಉತ್ಪಾದನೆ ಅಷ್ಟೇ ಇದ್ದು ಉತ್ಪಾದನೆಗೆ ಬಳಸುವ ಕಚ್ಚಾಪದಾರ್ಥಗಳ ಬೆಲೆ ಕಡಿಮೆಯಾದರೂ ಜಿಡಿಪಿ ಹೆಚ್ಚಾದಂತೆ ತೋರುತ್ತಿತ್ತು. ಹಲವು ಅರ್ಥಶಾಸ್ತ್ರಜ್ಞರು ಜಿಡಿಪಿ ಹೆಚ್ಚಳಕ್ಕೆ ಇದನ್ನೇ ಕಾರಣ ಎಂದು ಟೀಕಿಸಿದ್ದರು.
ಕಚ್ಚಾ ವಸ್ತುಗಳ ಮತ್ತು ಸಿದ್ದಪಡಿಸಿದ ವಸ್ತುಗಳ ಬೆಲೆಗಳು ಒಂದೇ ಪ್ರಮಾಣದಲ್ಲಿ ಬದಲಾಗುವುದಿಲ್ಲ. ಆದ್ದರಿಂದ ಇವೆರಡರ ಮೌಲ್ಯಗಳನ್ನು ಅವುಗಳ ಬೆಲೆಗೆ ಅನುಗುಣವಾಗಿ ಪ್ರತ್ಯೇಕವಾಗಿ ಹೊಂದಿಸುವುದು ಹೆಚ್ಚು ಸಮರ್ಪಕ ಕ್ರಮ. ಇದನ್ನು ಡಬಲ್ ಡಿಫ್ಲೇಷನ್ ಎನ್ನಲಾಗುತ್ತದೆ.
ಜೊತೆಗೆ ಈ ಪರಿಷ್ಕೃತ ಕ್ರಮದಲ್ಲಿ ಇನ್ನೂ ಒಂದು ಬದಲಾವಣೆಯನ್ನು ಮಾಡಲಾಗಿದೆ. ಇದಕ್ಕೆ ಮೊದಲು ಹಲವು ಪದಾರ್ಥಗಳನ್ನು ಕ್ರೋಡೀಕರಿಸಿ ಅವುಗಳ ಬೆಲೆ ಸೂಚ್ಯಂಕವನ್ನು ಒಟ್ಟಾರೆಯಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಹೊಂದಿಸುವಾಗ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳನ್ನು ಕ್ರೋಡೀಕರಿಸಿ ತಯಾರಿಸಿದ ಸೂಚಿಯನ್ನು ಬಳಸಲಾಗುತ್ತಿತ್ತು. ಈಗ ಪ್ರತಿಯೊಂದು ಪದಾರ್ಥಗಳನ್ನು ಪ್ರತ್ಯೇಕವಾಗಿ ಗಣನೆಗೆ ತೆಗೆದುಕೊಂಡು ಜಿಡಿಪಿಯನ್ನು ಅದಕ್ಕೆ ಅನುಗುಣವಾಗಿ ಹೊಂದಿಸಲಾಗುತ್ತಿದೆ. ಈಗ 260ಕ್ಕೂ ಹೆಚ್ಚು ವಸ್ತುಗಳ ಮಟ್ಟದಲ್ಲಿ ಬೆಲೆ ಸೂಚ್ಯಂಕಗಳನ್ನು-ಸಿಪಿಐ ಬಳಸುವ ಮೂಲಕ ಅತ್ಯಂತ ಸೂಕ್ಷ್ಮವಾಗಿ ಬೆಲೆ ಬದಲಾವಣೆಯನ್ನು ಅಳೆಯಲಾಗುತ್ತಿದೆ.
ಮಾಹಿತಿ ಸಂಗ್ರಹಣೆಗೆ ಹೊಸ ಹಾಗೂ ಪರಿಷ್ಕöÈತ ಮೂಲಗಳ ಬಳಕೆ:
ಈವರೆಗೆ ಜಿಡಿಪಿ ಲೆಕ್ಕಾಚಾರಕ್ಕೆ ಬೇಕಾದ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಆ ಸಮಸ್ಯೆಯನ್ನು ಮೀರಿಕೊಳ್ಳುವುದಕ್ಕೆ ಹೊಸ ಹಾಗೂ ಪರಿಷ್ಕೃತ ಮೂಲಗಳನ್ನು ಬಳಸಲಾಗುತ್ತಿದೆ. ನಿಯತಕಾಲಿಕ ಕಾರ್ಮಿಕ ಶಕ್ತಿ ಸಮೀಕ್ಷೆ (PLFS) ಮತ್ತು ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಗಳಿಂದ ಮಾಹಿತಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಹಲವಾರು ಸಚಿವಾಲಯಗಳ ಆಡಳಿತಾತ್ಮಕ ದತ್ತಾಂಶಗಳನ್ನು ಬಳಸಲಾಗಿದೆ. ಪಿಎಲ್‌ಎಫ್ ಸಮೀಕ್ಷೆಯು ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಅಸ್ಯುಸ್ ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.
ಮತ್ತು ಈ ಸಮೀಕ್ಷೆಗಳೂ ಪ್ರತಿವರ್ಷ ನಡೆಯುವುದರಿಂದ ಗುಣಮಟ್ಟದ ಅಂಕಿಅಂಶಗಳು ದೊರೆಯಬಹುದು. ಮತ್ತು ಜಿಡಿಪಿ ಅಂದಾಜೂ ಹೆಚ್ಚು ನಿಖರವಾಗುವ ಸಾಧ್ಯತೆಯಿದೆ. ಹಿಂದೆ ಅಸಂಘಟಿತ ವಲಯದ ಬೆಳವಣಿಗೆಯನ್ನು ಹಳೆಯ ಸಮೀಕ್ಷೆಗಳನ್ನು ಅಥವಾ ಇತರ ಪರ್ಯಾಯ ಸೂಚಿಗಳನ್ನು ಬಳಸಿ ಅಂದಾಜು ಮಾಡಲಾಗುತ್ತಿತ್ತು. ಆದರೆ ಈಗ ಸಮೀಕ್ಷೆಗಳ ಮೂಲಕ ಪ್ರತಿವರ್ಷ ಮಾಹಿತಿ ಸಂಗ್ರಹಿಸುತ್ತಿರುವುದರಿಂದ ಅನೌಪಚಾರಿಕ ವಲಯಕ್ಕೆ ಸಂಬಂಧಿಸಿದಂತೆ ಹೆಚ್ಚು ನಿಖರವಾದ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ಜಿಎಸ್‌ಟಿ ಮತ್ತು ಡಿಜಿಟಲ್ ವಹಿವಾಟಿನ ದತ್ತಾಂಶಗಳನ್ನು ಬಳಸಿಕೊಳ್ಳುವ ಪ್ರಯತ್ನದಿಂದಾಗಿ ಅಸಂಘಟಿತ ವಲಯದ ಪರಿಸ್ಥಿತಿಯನ್ನು ಹೆಚ್ಚು ನಿಖರವಾಗಿ ತಿಳಿಯಬಹುದು.
ಕಂಪೆನಿಗಳ ವಿವಿಧ ಚಟುವಟಿಕೆಗಳ ಕಂಪನಿಗಳ ಪ್ರತ್ಯೇಕ ವರ್ಗೀಕರಣ:
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಈವರೆಗೆ ಒಂದು ಕಂಪೆನಿ ಹಲವು ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದಾಗ ಅದರ ಸಂಪೂರ್ಣ ಲಾಭವನ್ನು ಅದರ ಪ್ರಮುಖ ಕ್ಷೇತ್ರದ ಅಡಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಉದಾಹರಣೆಗೆ ಹೋಟಲ್ ನಡೆಸುತ್ತಿದ್ದ ಕಂಪೆನಿಯೊಂದು ಸಾಫ್ಟವೇರನ್ನು ಉತ್ಪಾದಿಸುತ್ತಿದ್ದರೆ ಅದರ ಲಾಭವನ್ನು ಹೋಟೆಲ್ ಉದ್ದಿಮೆಯಲ್ಲಿ ದಾಖಲಿಸಲಾಗುತ್ತಿತ್ತು. ಈಗ ಆ ಕಂಪೆನಿಯು ಪ್ರತಿ ಕ್ಷೇತ್ರದಿಂದ ಗಳಿಸುವ ಲಾಭವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ.
ಈ ಎಲ್ಲಾ ಬದಲಾವಣೆಗಳಿಂದ ಜಿಡಿಪಿ ಹೆಚ್ಚು ನಿಖರವಾಗುತ್ತದೆ, ಇದರಿಂದ ಯಾವ ವಲಯ ಕುಸಿಯುತ್ತಿದೆ ಮತ್ತು ಯಾವ ವಲಯ ಬೆಳೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಜಿಡಿಪಿಯನ್ನು ಕುರಿತಂತೆ ಹೊಸ ಅಂದಾಜು
ಹೊಸ ವಿಧಾನವನ್ನು ಮತ್ತು ದತ್ತಾಂಶವನ್ನು ಬಳಸಿ ಮಾಡಿರುವ ಅಂದಾಜನ್ನು ಮೊಸ್ಪಿ ಪ್ರಕಟಿಸಿದೆ. ಈಗ ಪ್ರಕಟವಾಗಿರುವ ಪರಿಷ್ಕೃತ ಜಿಡಿಪಿ ಅಂದಾಜು ಹಳೆಯ ಜಿಡಿಪಿಗೆ ಹೋಲಿಸಿದರೆ 2022ರಿಂದ 2025ರ ಅವಧಿಯಲ್ಲಿ ಮೊದಲಿಗಿಂತ ಸುಮಾರು 3% ನಿಂದ 3.8% ರಷ್ಟು ಕಡಿಮೆಯಾಗಿದೆ. ಅಂದರೆ ಆರ್ಥಿಕತೆಯ ಗಾತ್ರ ನಿರೀಕ್ಷೆಗಿಂತ ಕಡಿಮೆ ಇದೆ. ಹೊಸ ಸರಣಿಯ ದತ್ತಾಂಶದ ಪ್ರಕಾರ,2025-26ರಲ್ಲಿ ಭಾರತದ ಆರ್ಥಿಕತೆಯ ಗಾತ್ರವು 345.47 ಲಕ್ಷ ಕೋಟಿ ರೂಪಾಯಿ ಆಗುವ ನಿರೀಕ್ಷೆಯಿದೆ. ಇದು ಹಳೆಯ ಸರಣಿಯ ಆಧಾರದ ಮೇಲೆ ನೀಡಲಾಗಿದ್ದ ಮೊದಲ ಮುಂಗಡ ಅಂದಾಜಿಗಿಂತ ಸುಮಾರು ಶೇ. 3.3 ರಷ್ಟು ಚಿಕ್ಕದಾಗಿದೆ.
ತಾತ್ವಿಕವಾಗಿ ಹೇಳುವುದಾದರೆ ಆಧಾರವರ್ಷ ಬದಲಾದರೆ ಜಿಡಿಪಿಯ ಪ್ರಮಾಣದಲ್ಲಿ ಬದಲಾವಣೆಯಾಗಬಾರದು. ಯಾಕೆಂದರೆ ಅಂದಾಜು ಮಾಡುತ್ತಿರುವ ಅರ್ಥಿಕತೆ ಅದೇ ಇರುತ್ತದೆ. ಹೊಸ ಮಾಹಿತಿ ಸಿಗುವುದರಿಂದ, ವಿಧಾನದಲ್ಲಿ ಸುಧಾರಣೆಯಾಗುವುದರಿಂದ ಆರ್ಥಿಕತೆಯ ಗಾತ್ರ ಹಿಗ್ಗಬಹುದು. ಕಡಿಮೆಯಾಗಿರುವುದರ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಹುಶಃ ಹಿಂದಿನ ಜಿಡಿಪಿಯ ಅಂದಾಜು ಜಿಡಿಪಿಯ ಗಾತ್ರವನ್ನು ಉತ್ಪ್ರೇಕ್ಷೆಗೊಳಿಸಿದೆ ಅನ್ನುವ ಟೀಕೆಯನ್ನು ಇದು ಸಮರ್ಥಿಸುತ್ತಿದೆಯೇ ಅನ್ನುವ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಏನೇ ಇರಲಿ, ಇದು ನಮ್ಮ ಆರ್ಥಿಕತೆಯ ಬಗೆಗಿನ ಗ್ರಹಿಕೆಯನ್ನು ಬದಲಿಸುತ್ತದೆ. ನಮ್ಮ ಐದು ಟ್ರಿಲಿಯನ್ ಆರ್ಥಿಕತೆಯ ಕನಸು ಇನ್ನಷ್ಟು ದೂರಕ್ಕೆ ಹೋಗುತ್ತದೆ.
ಇದು ವಿತ್ತೀಯ ಕೊರತೆ, ಸರ್ಕಾರದ ಬಜೆಟ್ ಮತ್ತು ಸಾಲದ ಲೆಕ್ಕಾಚಾರದ ಮೇಲೆ ಪರಿಣಾಮವಾಗುತ್ತದೆ. ಇದರಿಂದ ಸರ್ಕಾರದ ವಿತ್ತೀಯ ಕೊರತೆಯ ಅನುಪಾತ ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಸಾಲದ ಹೊರೆ ಇಳಿಸುವ ಗುರಿಯ ಮೇಲೂ ಇದು ಪರಿಣಾಮ ಬೀರಲಿದೆ. 2026-27ನೇ ಹಣಕಾಸು ವರ್ಷಕ್ಕೆ ಸಾಲ-ಜಿಡಿಪಿ ಅನುಪಾತವನ್ನು ಶೇ. 55.6ಎಂದು ನಿಗದಿಪಡಿಸಲಾಗಿತ್ತು, ಆದರೆ ಈಗ ಅದು ಶೇ.57.5ರಷ್ಟು (1.9 ಶೇಕಡಾವಾರು ಪಾಯಿಂಟ್ ಹೆಚ್ಚು) ಇರಲಿದೆ.
ಇದು 2031ರ ವೇಳೆಗೆ ಆರ್ಥಿಕತೆಯನ್ನು ಸ್ಥಿರಗೊಳಿಸುವ ಹಾದಿಯನ್ನು ಮೊದಲಿದ್ದದ್ದಕ್ಕಿಂತ ಕಠಿಣವಾಗಿಸಲಿದೆ ಎನ್ನುವ ಅನುಮಾನವೂ ಕೇಳಿ ಬರುತ್ತಿದೆ.
ಸಮೀಕ್ಷೆಗಳು ಅನಿವಾರ್ಯ. ಸಮೀಕ್ಷೆಗಳು ನಿಯತಕಾಲಿಕವಾಗಿ ನಡೆಯಬೇಕು. ಆದರೂ ಸಮೀಕ್ಷೆಯನ್ನು ಅತಿಯಾಗಿ ಅವಲಂಬಿಸುವುದು ಒಳ್ಳೆಯದಲ್ಲ. ಜನಗಣತಿ ಮತ್ತು ಆರ್ಥಿಕ ಗಣತಿ ನಡೆಸುವುದು ಸಮೀಕ್ಷೆಗಳ ನಿಖರತೆಯ ದೃಷ್ಟಿಯಿಂದಲೂ ಅನಿವಾರ್ಯ. ಸುಮ್ಮನೆ ಜನಸಂಖ್ಯೆ ಶೇಕಡ 0.9ರಷ್ಟು ಹೆಚ್ಚುತ್ತಿದೆ ಎಂದು ಭಾವಿಸಿಕೊಂಡು ಉಳಿದ ಅಂದಾಜುಗಳನ್ನು ಮಾಡುವುದರಿಂದ ದಾರಿತಪ್ಪುವ ಸಾಧ್ಯತೆಯಿದೆ.
ಪರಿಷ್ಕೃತ ಜಿಡಿಪಿಯ ಅಂದಾಜಿನ ಕ್ರಮಗಳ ಬಗ್ಗೆ ವಿವರಗಳು ಮತ್ತು ಹಿಂದಿನ ವರ್ಷಗಳನ್ನು ಕುರಿತಂತೆ ಮಾಹಿತಿ ಸಿಕ್ಕ ಮೇಲೆ ಆರ್ಥಿಕತೆಯನ್ನು ಕುರಿತಂತೆ ಹೆಚ್ಚು ಸ್ಪಷ್ಟವಾದ ಚಿತ್ರವನ್ನು ಹೊಂದುವುದಕ್ಕೆ ಸಾಧ್ಯ. ಆದರೂ ಸುಧಾರಣೆಗೆ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಇದು ಇಲ್ಲಿಗೆ ನಿಲ್ಲದೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಾ ಹೋಗುವಂತಾಗಬೇಕು. ಸಮೀಕ್ಷೆಗಳು ನಡೆಸುವ ಸಂಸ್ಥೆಗಳು ಸ್ವಾಯತ್ತವಾಗಿ ಮುಂದುವರಿಯಬೇಕು.
ಇದನ್ನೂ ನೋಡಿ: “ಕರ್ನಾಟಕದಲ್ಲಿ SIR: ಬೂತ್ ಮಟ್ಟದ ಜಾಗೃತಿ – ವಂಚನೆ ತಡೆಯುವ ಹೊಣೆ ಯಾರದ್ದು?” Janashakthi Media
