– ಭಾವನ ಟಿ
ರಚ್ಚೆ ಹಿಡಿದು
ಹುಚ್ಚ ಮೀರೀ
ಕೊಚ್ಚೆಯಲ್ಲಿ ಬಂದು ನಿಂತರಿವರು…
ಸ್ವಾರ್ಥಕ್ಕಾಗಿ
ಮತಕ್ಕಾಗಿ
ಅಂಗಲಾಚಿ ಬೇಡಿದವರು…
ಆ ಹರಕಲು ಚಿಂದಿಯ ತೊಟ್ಟವಳ ಅವ್ವ ಎಂದೂ…
ಅವಳ ಹಕ್ಕದೋಚಿ..!
ಈ ಗೂನುಬೆನ್ನಿನ ಹಮಾಲಿ ಮುದುಕನ ನನ್ನಪ್ಪನೆಂದೂ…
ಇವನ ಬೆವರು ಒಂದಿಷ್ಟು ಸೋಕಿಸಿಕೊಳ್ಳದೆ..!
ಕಾಲುಗಳ ಹಿಡಿದದ್ದೇ…
ಹೌದು ಮುಂದೆ ಅದೇ ಕಾಲುಗಳ ಹಗ್ಗಕಟ್ಟಿ ಎಳೆದೂ ಬೀಳಿಸಿ
ಕುಂಟರಾಗಿಸಬೇಕಲ್ಲವೇ..?
ಅದಕ್ಕೀಗ ನೆಂಟನಾಗುವ ನಾಟಕ…!?
ಸೇವಕನಂತೆ
ಜನತೆಯ ಭಂಟನತೆ
ಹೌದು ಹಣದ ಪಾಲಕನಂತೆ…
ಮರೆತಿದ್ದೆ ಇವನ ಜೇಬಿನ ತುಂಬಾ ಭ್ರಷ್ಟಾಚಾರದ್ದೇ ಕಂತೆ..!
ರಸ್ತೆಯಲ್ಲಿ ರ್ಯಾಲಿಯಂತೆ ಕಾರಿನಲ್ಲಿ
ಆ ಇಂಧನದ ಹೊಗೆಯಲ್ಲಿಯೇ ಬಡ – ಬಗ್ಗರ ಸುಟ್ಟು ಬೂದಿಮಾಡುವ ಹುನ್ನಾರವಂತೆ…
ಬೀದಿಮೆರವಣಿಗೆ
ಕೈ ಎತ್ತಿ ಮುಗಿದದ್ದೇ ಮುಗಿದದ್ದು…
ಜನಸಾಮಾನ್ಯರ ತಲೆಗಳ ಮೇಲೆ ಉರುಳಿಸಬೇಕಲ್ಲವೇ
ಬಂಡೆಕಲ್ಲುಗಳ ಸಂತೆ…!!?
ಎಲ್ಲರ ಬೆತ್ತಲುಗೊಳಿಸಿ
ಮೈ – ತುಂಬಾ ಖಾದಿ ಹೊದ್ದು…
ಓತಿಕಾಟಕ್ಕೆ ಬೇಲಿ ಸಾಕ್ಷಿ ಎಂಬಂತೆ…
ಬೂಟಾಟಿಕೆಯ ಪೂಜೆ – ಪುನಸ್ಕಾರ
ಮಂತ್ರ – ತಂತ್ರ…
ಓಟು ಬೇಕು
ನೋಟಿಗೆ ತಮ್ಮತನವ ಮಾರಿಕೊಂಡು…
ಅವರ ಸಾರಾಯಿ ಸ್ನಾನದ ಘಮಲಿನಲ್ಲಿ ತೇಲಾಡಿ…
ಪಾದ ನೆಕ್ಕುತ್ತಿರುವವರ…
ಓಟು ಬೇಕು
ಮನುಷ್ಯತ್ವ ಹರಾಜಿಗಿಟ್ಟು…
ಇವರಿಗೆ ಮತ ನೀಡಬೇಕು…
ಎಚ್ಚರ…!!!
ಇದನ್ನೂ ನೋಡಿ: ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್