ಬಿಜೆಪಿಗೆ  ಸೇರಿದ 2 ಕೋಟಿ ರೂಪಾಯಿ ನಗದು  ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ; ಕೃಷ್ಣ ಬೈರೇಗೌಡ ವಾಗ್ದಾಳಿ

ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಿನಲ್ಲಿ ದಾಳಿ  ವೇಳೆ ವಶಪಡಿಸಿಕೊಂಡ ಬಿಜೆಪಿಗೆ  ಸೇರಿದ 2 ಕೋಟಿ ರೂಪಾಯಿ ನಗದು  ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿ  ವಿರುದ್ಧ ಕಂದಾಯ ಸಚಿವ  ಕೃಷ್ಣ ಬೈರೇಗೌಡ ವಾಗ್ದಾಳಿ  ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಖರ್ಚಿಗಾಗಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ ರೂ. 2 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು ಶನಿವಾರ ಕಾಟನ್‌ ಪೇಟೆಯಲ್ಲಿಯಲ್ಲಿ ಸೀಜ್ ಮಾಡಿದ್ದರು. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಲಾದ ಹಣಕ್ಕೆ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಕ್ಲೀನ್ ಚಿಟ್‌ ನೀಡಿ, ಹಣವನ್ನೂ ಅವರಿಗೆ ಹಿಂತಿರುಗಿಸಿದೆ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಕ್ಕಿಬಿದ್ದ ಹಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿರುವ ಬಿಜೆಪಿ ಮಾರ್ಚ್‌ 27 ರಂದೇ ₹5 ಕೋಟಿ ಹಣವನ್ನು ಕೆನೆರಾ ಬ್ಯಾಂಕ್‌ನಿಂದ ವಿತ್‌ಡ್ರಾ ಮಾಡಿ ಇಟ್ಟುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ, ಈ ಹಣವನ್ನು ಚುನಾವಣಾ ಖರ್ಚಿಗಾಗಿ ಮೈಸೂರು, ಚಾಮರಾಜನಗರ ಹಾಗೂ ಮಂಗಳೂರಿಗೆ ಕಳುಹಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಆದರೆ, ಈ ದಾಖಲೆಗಳು ಎಷ್ಟರ ಮಟ್ಟಿಗೆ ಸರಿಯಾಗಿವೆ? ನೀತಿ ಸಂಹಿತೆ ನಿರ್ದಿಷ್ಟಗೊಳಿಸಿರುವ ಶೇ.90ರಷ್ಟು ಹಣವನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಖರ್ಚು ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಕನಿಷ್ಟ ತನಿಖೆ ನಡೆಸದೆ ಹೋದದ್ದು ವಿಪರ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ : ಬಿಜೆಪಿಯ ‘‘ 400 ಪಾರ್’’ ಮತದಾನದ ದಿನದಂದೇ ಸೂಪರ್ ಫ್ಲಾಪ್; ತೇಜಸ್ವಿ ಯಾದವ್

ಕಳೆದ ಒಂದು ತಿಂಗಳಿನಿಂದ ಅವರು ಒಂದು ರೂಪಾಯಿಯನ್ನೂ ಚುನಾವಣೆಗಾಗಿ ಖರ್ಚು ಮಾಡಿಲ್ಲವೇ? ಹೀಗೆ ಯಾವುದೋ ಉದ್ದೇಶಕ್ಕೆ ಬ್ಯಾಂಕಿನಿಂದ ಹಣ ಪಡೆದ ದಾಖಲೆಗಳನ್ನು ತೋರಿಸಿದಾಕ್ಷಣ ಅದರ ಸತ್ಯಾಸತ್ಯತೆ ಬಗ್ಗೆ ಕಿಂಚಿತ್ತೂ ತನಿಖೆ ನಡೆಸದೆ ಶೀಘ್ರದಲ್ಲೇ ಅಧಿಕಾರಿಗಳು ಹಣವನ್ನು ಹಿಂತಿರುಗಿಸಿದ್ದಾರೆ. ಹೀಗೆ ಯಾವುದೋ ದಾಖಲೆಗಳನ್ನು ತೋರಿಸಿ ಕಳ್ಳತನದಿಂದ ಸಿಕ್ಕಿಬಿದ್ದ ಹಣವನ್ನು ಬಿಡಿಸಿಕೊಳ್ಳುವುದಾದರೆ ಚುನಾವಣೆ ಪಾವಿತ್ಯ್ರತೆ ಉಳಿಯುವುದು ಹೇಗೆ ಸಾಧ್ಯ ಎಂದು ಕೇಳಿದರು.

ಐವತ್ತು ಸಾವಿರಕ್ಕೆ ಮೇಲ್ಪಟ್ಟ ಯಾವುದೇ ಹಣದ ವಹಿವಾಟುಗಳು ಬ್ಯಾಂಕ್ ಖಾತೆ ಅಥವಾ ಚೆಕ್ ಮೂಲಕ ನಡೆಯಬೇಕು ಎಂಬ ಕಾನೂನು ಇದೆ. ಚುನಾವಣಾ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಚೆಕ್ ಮೂಲಕವೇ ನಡೆಸಬೇಕು ಎಂಬುದನ್ನು ಚುನಾವಣಾ ನೀತಿ ಸಂಹಿತೆಯೇ ಹೇಳುತ್ತದೆ. ಕಾನೂನು ಉಲ್ಲಂಘಿಸಿ ಅಥವಾ ಮುಂಚಿಂತವಾಗಿಯೇ ಮಾಹಿತಿ ನೀಡದೆ ಹೀಗೆ ರೂ.2 ಕೋಟಿ ಹಣವನ್ನು ವರ್ಗಾಯಿಸುತ್ತಿರುವುದು ಮನಿ ಲಾಂಡರಿಂಗ್ ಅಲ್ಲವೇ? ಈ ಬಗ್ಗೆ ಅಧಿಕಾರಿಗಳು ಏಕೆ ಪ್ರಶ್ನಿಸುತ್ತಿಲ್ಲ. ಅಥವಾ ಕಮಲದ ನಾಯಕರು ಚುನಾವಣಾ ಅಧಿಕಾರಿಗಳ ಸಹಾಯದೊಂದಿಗೆ ಹೊಸ ಮನಿ ಲಾಂಡರಿಂಗ್ ನಡೆಸುತ್ತಿದ್ದಾರ? ಎಂದು ಕೇಳಿದರು.

ಸ್ವಾಭಿಮಾನ ಕಳೆದುಕೊಂಡಿರುವ ಕೆಲವು ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿಜೆಪಿ ನಾಯಕರು ಅಧಿಕಾರಿಗಳನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಗಿದ್ದು, ಚುನಾವಣಾ ಅಧಿಕಾರಿಗಳು ಈ ಗೋಲ್‌ಮಾಲ್ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನು ನೋಡಿ : ಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ Janashakthi Media

Donate Janashakthi Media

Leave a Reply

Your email address will not be published. Required fields are marked *