ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಹೆಚ್ಚಿನವರು ನಿವೃತ್ತ ಅಧಿಕಾರಿಗಳೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ಶನಿವಾರ ಸಂಜೆ 4 ಗಂಟೆಗೆ ಮುಕ್ತಾಯವಾಗಿದೆ.
ರಾಮ ಮಂದಿರದ ದೇಣಿಗೆ ದುರುಪಯೋಗ ಆರೋಪಗಳ ಹಿನ್ನೆಲೆ ಈ ನೇಮಕಾತಿ ನಡೆಯುತ್ತಿದ್ದು, ಟ್ರಸ್ಟ್ನ ಹಣಕಾಸು ಮೇಲ್ವಿಚಾರಣೆ ಬಲಪಡಿಸುವುದು ಮತ್ತು ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ಹೊಸ CEO ಹುದ್ದೆ ದಿನನಿತ್ಯದ ಕಾರ್ಯಾಚರಣೆ, ಹಣಕಾಸು ಪಾರದರ್ಶಕತೆ ಹಾಗೂ ಸಂಸ್ಥೆಯ ಜವಾಬ್ದಾರಿತನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಟ್ರಸ್ಟ್ ಮೂಲಗಳ ಪ್ರಕಾರ, ಅರ್ಜಿಗಳಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಕೆಲವರು ನೇರವಾಗಿ ಟ್ರಸ್ಟ್ಗೆ ರೆಸ್ಯೂಮ್ ಕಳುಹಿಸಿದರೂ, ಅವನ್ನು ತಜ್ಞ ಸಮಿತಿಗೆ ಕಳುಹಿಸುವಂತೆ ಹಿಂದಿರುಗಿಸಲಾಗಿದೆ. ಮೂರು ಸದಸ್ಯರ ತಜ್ಞ ಸಮಿತಿ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ಲಿಸ್ಟ್ ತಯಾರಿಸಲಿದೆ. ಅಂತಿಮ ನಿರ್ಧಾರವನ್ನು ಟ್ರಸ್ಟ್ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: ಪಿಎಂ–ಸಿಎಂ ಪದಚ್ಯುತಿ ಮಸೂದೆಗೆ ತಾತ್ಕಾಲಿಕ ತಡೆ; ಮತ್ತಷ್ಟು ಚರ್ಚೆಗೆ ಅಂಗೀಕಾರ ಮುಂದೂಡಿಕೆ
ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಹಾಗೂ ಮಾಜಿ NIT ರಾಯ್ಪುರ ಅಧ್ಯಕ್ಷ ಸುರೇಶ್ ಹಾವರೆ ಇದ್ದಾರೆ. ಸಮಿತಿ ಹೆಚ್ಚುದಲ್ಲಿ ಮೂರು ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಸಾಧ್ಯತೆ ಇದ್ದು, ಆಯ್ಕೆಯಾದವರೊಂದಿಗೆ ವೈಯಕ್ತಿಕ ಸಂದರ್ಶನ ನಡೆಸುವ ಸಾಧ್ಯತೆಯೂ ಇದೆ. ಸಮಿತಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು ಒಂದು ತಿಂಗಳ ಅವಧಿ ನೀಡಲಾಗಿದೆ.
ಟ್ರಸ್ಟ್ ಪ್ರಸ್ತುತ 13 ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ರಾಜೀನಾಮೆಗಳು ಮತ್ತು ಸದಸ್ಯರ ನಿಧನದಿಂದ ಖಾಲಿ ಇರುವ ಸ್ಥಾನಗಳನ್ನು ಜುಲೈ 22ರಂದು ನಡೆಯುವ ಸಭೆಯಲ್ಲಿ ಭರ್ತಿ ಮಾಡುವ ನಿರೀಕ್ಷೆಯಿದೆ. ಆಯ್ಕೆ ಪ್ರಕ್ರಿಯೆ ಸಂಪೂರ್ಣ ಸ್ವತಂತ್ರವಾಗಿದ್ದು, ಟ್ರಸ್ಟ್ ಸುಪ್ರೀಂ ಕೋರ್ಟ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಭ್ಯರ್ಥಿಗಳು 50 ರಿಂದ 70 ವರ್ಷದೊಳಗಿರಬೇಕು ಮತ್ತು ಕನಿಷ್ಠ 20 ವರ್ಷಗಳ ಆಡಳಿತ ಅನುಭವ ಹೊಂದಿರಬೇಕು. ಅವರು ಸಕ್ರಿಯ ಹಿಂದೂ ಆಗಿರಬೇಕು ಮತ್ತು ರಾಮ ಭಕ್ತರಿಗೆ ಆದ್ಯತೆ ನೀಡಲಾಗುತ್ತದೆ. ಪದವಿ ಶಿಕ್ಷಣದೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಜ್ಞಾನ ಕಡ್ಡಾಯವಾಗಿದೆ. ಆಡಳಿತ, ಹಣಕಾಸು, ಮಾನವ ಸಂಪನ್ಮೂಲ, ಸಾರ್ವಜನಿಕ ಸಂಪರ್ಕ, ಮಾಹಿತಿ ತಂತ್ರಜ್ಞಾನ, ಭದ್ರತೆ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ಸಿಗಲಿದೆ.
CEO ಹುದ್ದೆಗೆ ಪ್ರಾರಂಭದಲ್ಲಿ ಮೂರು ವರ್ಷಗಳ ಅವಧಿ ಇರಲಿದ್ದು, ಕಾರ್ಯಕ್ಷಮತೆಯ ಆಧಾರದಲ್ಲಿ ವಿಸ್ತರಣೆ ಸಾಧ್ಯ. ವೇತನ ಮತ್ತು ಸೇವಾ ನಿಯಮಗಳನ್ನು ಪರಸ್ಪರ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ. ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳುವಂತೆ, CEO ಯ ಪ್ರಮುಖ ಜವಾಬ್ದಾರಿ ಭಕ್ತರ ವಿಶ್ವಾಸವನ್ನು ಕಾಪಾಡುವುದು ಹಾಗೂ ದೇವಸ್ಥಾನದ ಹಣಕಾಸು ವ್ಯವಸ್ಥೆ ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡುವುದು ಆಗಿರುತ್ತದೆ.
ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲದೆ CEO ಟ್ರಸ್ಟ್ಗೆ ಸಹಾಯಕನಾಗಿ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣವಾಗಿ ಟ್ರಸ್ಟ್ಗೆ ಉತ್ತರದಾಯಕರಾಗಿರುತ್ತಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ನೋಡಿ: ಪಂಚಮ’ ಪತ್ರಿಕೆ ಆರ್ಥಿಕ ಸಂಕಷ್ಟದಿಂದಲ್ಲ, ಚಳವಳಿಯೊಳಗಿನ ವಿಶ್ವಾಸದ ಕೊರತೆಯಿಂದ ಸ್ಥಗಿತ: ಎಚ್. ಗೋವಿಂದಯ್ಯ
