ಕೌಲುದಾರ ರೈತರ ಹೋರಾಟ ತೀವ್ರಗೊಳಿಸಲು ಕರೆ: ಎಪಿಯಲ್ಲಿ ಭಾರೀ ಸಮ್ಮೇಳನ

ವಿಜಯವಾಡ: ಆಂಧ್ರಪ್ರದೇಶದ ಬಾಡಿಗೆದಾರ ರೈತರ ಸಂಘ (ಕೌಲುದಾರ ರೈತ ಸಂಘ) ರಾಜ್ಯ ಸಮ್ಮೇಳನವು ಕೃಷ್ಣಾ ಜಿಲ್ಲೆಯ ಉಯ್ಯೂರು ಪಟ್ಟಣದಲ್ಲಿ ಮೂರು ದಿನಗಳ ಚರ್ಚೆಗಳು, ಭಾರೀ ರೈತ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆಯೊಂದಿಗೆ ಯಶಸ್ವಿಯಾಗಿ ಸಮಾಪ್ತಿಯಾಯಿತು.

ಏಪ್ರಿಲ್ 26ರಂದು ಭರ್ಜರಿ ರೈತ ರ್ಯಾಲಿಯಿಂದ ಸಮ್ಮೇಳನ ಆರಂಭಗೊಂಡಿದ್ದು, ವೀರಮ್ಮ ತಳ್ಳಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅಶೋಕ್ ಧವಳೆ, ಭಾರತದ ವ್ಯಾಪಾರ ಒಪ್ಪಂದಗಳನ್ನು, ವಿಶೇಷವಾಗಿ ಅಮೆರಿಕದೊಂದಿಗೆ ಇರುವ ಒಪ್ಪಂದಗಳನ್ನು ತೀವ್ರವಾಗಿ ಟೀಕಿಸಿದರು. ಇವು ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿವೆ ಎಂದು ಅವರು ಹೇಳಿದರು.

ಅಮೆರಿಕಾ, ನ್ಯೂಜಿಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳೊಂದಿಗೆ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದಗಳು (FTA) ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂದು ಎಚ್ಚರಿಸಿದರು. ರಾಸಾಯನಿಕ ಗೊಬ್ಬರ, ಕೀಟನಾಶಕ, ಡೀಸೆಲ್ ಮತ್ತು ಬೀಜಗಳ ಬೆಲೆ ಏರಿಕೆಯಿಂದ ಕೃಷಿ ಸಂಕಷ್ಟ ಗಂಭೀರವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಮೇ 29ರಿಂದ ಶಾಲೆ ಶುರು: 2026-27 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ

ಸ್ವಾತಂತ್ರ್ಯಾನಂತರ ಭೂ ಸುಧಾರಣೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ, ಮಧ್ಯವರ್ತಿಗಳ ಪ್ರಭಾವ ಹೆಚ್ಚಾಗಿದ್ದು ರೈತರಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತವನ್ನು ರಕ್ಷಿಸಲು ವಿಫಲವಾಗಿವೆ ಎಂದು ಟೀಕಿಸಿದರು.

ಕೌಲುದಾರ ರೈತರಿಗೆ ಕಾನೂನು ರಕ್ಷಣೆಯನ್ನು ಒದಗಿಸುವ ಸಮಗ್ರ ಕಾಯ್ದೆ, ಬೆಳೆಗಳಿಗೆ ಖಚಿತ ಪರಿಹಾರ ಹಾಗೂ ಖರೀದಿ ಭರವಸೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ರೈತರು ಏಕತೆಯಿಂದ ಹೋರಾಟವನ್ನು ತೀವ್ರಗೊಳಿಸಬೇಕು ಎಂದರು.

ಸಭೆಯಲ್ಲಿ ವಡ್ಡೆ ಶೋಭನಾದ್ರೀಶ್ವರ ರಾವ್, ಮಗಂತಿ ಹರಿಬಾಬು, ವೈ. ರಾಧಾಕೃಷ್ಣ, ವೈ. ಕೇಶವರಾವ್ ಹಾಗೂ ಕೆ. ಪ್ರಭಾಕರ್ ರೆಡ್ಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು.

ಮಗಂತಿ ಹರಿಬಾಬು ಅವರು ಕೌಲುದಾರ ರೈತರಿಗೆ ಬಡ್ಡಿರಹಿತ ಸಾಲ ಹಾಗೂ ಎಂ. ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನವನ್ನು ಒತ್ತಾಯಿಸಿದರು. ಉತ್ಪಾದನಾ ವೆಚ್ಚಕ್ಕಿಂತ 50% ಹೆಚ್ಚುವರಿ MSP ನಿಗದಿ ಮಾಡುವಂತೆ ಆಗ್ರಹಿಸಿದರು.

ಏಪ್ರಿಲ್ 27ರಂದು ಪ್ರತಿನಿಧಿಗಳ ಸಭೆ ಧ್ವಜಾರೋಹಣ ಹಾಗೂ ಶಹೀದರ ಸ್ಮರಣೆಯೊಂದಿಗೆ ಆರಂಭವಾಯಿತು. ಸಂಘದ ಸದಸ್ಯತ್ವವು ಕಳೆದ ಮೂರು ವರ್ಷಗಳಲ್ಲಿ 18,500ರಿಂದ 57,000ಕ್ಕೆ ಏರಿಕೆಯಾಗಿದೆ ಎಂದು ವರದಿ ಮಂಡಿಸಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ ರಾವ್ ಮಾತನಾಡಿ, ಗ್ರಾಮ ಕಾರ್ಯಾಲಯಗಳನ್ನು ಹೋರಾಟದ ಕೇಂದ್ರಗಳಾಗಿ ರೂಪಿಸಬೇಕೆಂದು ಕರೆ ನೀಡಿದರು. ₹22,000 ಕೋಟಿ ಮೌಲ್ಯದ ಯೋಜನೆಗಳಿಗೆ ರಿಯಾಯಿತಿಗಳನ್ನು ನೀಡುವ ಸರ್ಕಾರ ರೈತರಿಗೆ ಸಮರ್ಪಕ ನೆರವು ನೀಡುತ್ತಿಲ್ಲ ಎಂದು ಟೀಕಿಸಿದರು.

ಟಿಡಿಪಿ ನೇತೃತ್ವದ ಸರ್ಕಾರವು ಭೂ ಮಾಲೀಕರ ಸಹಿಯನ್ನು ಕಡ್ಡಾಯಗೊಳಿಸುವ ಕಾನೂನನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿ, ಕೌಲುದಾರ ರೈತರು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಸಮ್ಮೇಳನದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ನಾಯಕರು, ಜನವಿರೋಧಿ ನೀತಿಗಳಿಗೆ ವಿರೋಧವಾಗಿ ಏಕತೆಯ ಹೋರಾಟ ಅಗತ್ಯ ಎಂದು ಒತ್ತಿಹೇಳಿದರು. ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನ ಹೆಚ್ಚುತ್ತಿದೆ, ರೈತರಿಗೆ ಸಮರ್ಪಕ ಖರೀದಿ ಕೇಂದ್ರಗಳ ಕೊರತೆಯಿಂದ ನಷ್ಟವಾಗುತ್ತಿದೆ ಎಂದು ಹೇಳಿದರು.

ಏಪ್ರಿಲ್ 28ರಂದು 48 ಸದಸ್ಯರ ಹೊಸ ರಾಜ್ಯ ಸಮಿತಿ ಆಯ್ಕೆ ಮಾಡಲಾಯಿತು. ಬಿ. ಬಲರಾಮ್ ಅಧ್ಯಕ್ಷರಾಗಿ, ಮಗಂತಿ ಹರಿಬಾಬು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವೈ. ರಾಧಾಕೃಷ್ಣ ಖಜಾಂಚಿಯಾಗಿ ಆಯ್ಕೆಯಾದರು.

21 ಜಿಲ್ಲೆಗಳಿಂದ 185 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೃಷಿ ತಂತ್ರಜ್ಞಾನ, ಬೀಜಗಳು, ಯಂತ್ರೋಪಕರಣಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ವಿಶೇಷ ಕಳೆ ತಂದವು.

ಸಮ್ಮೇಳನವು ರೈತರ ಏಕತೆ ಹಾಗೂ ಹಕ್ಕುಗಳಿಗಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪದೊಂದಿಗೆ ಅಂತ್ಯಗೊಂಡಿತು.

ಇದನ್ನೂ ನೋಡಿ: ಗ್ರಾಮೀಣ ಕೂಲಿಕಾರರ ಸಂಕಷ್ಟಗಳಿಗೆ ಧ್ವನಿಯಾದ ಕೂಲಿಕಾರರ ಸಮ್ಮೇಳನ Janashakthi Media

Donate Janashakthi Media

Leave a Reply

Your email address will not be published. Required fields are marked *