ಪ್ರಜಾಪ್ರಭುತ್ವದಲ್ಲಿ ಮತದಾರರ ಹೊರತಳ್ಳುವಿಕೆ: ‘ಎಸ್‌ಐಆರ್‌’ ಕುರಿತು ಕೆ.ಎಸ್. ವಿಮಲ ಕಳವಳ

ಹಾಸನ: ಒಳಗೊಳ್ಳಬೇಕಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಡವರು, ದಲಿತರು, ಶ್ರಮಿಕರು ಮತ್ತು ಮಹಿಳೆಯರನ್ನು ವ್ಯವಸ್ಥಿತವಾಗಿ ಹೊರತಳ್ಳಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗವು ಜಾರಿಗೆ ತರುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಆಶಯಗಳಿಗೇ ಮಾರಕವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್. ವಿಮಲ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ

ನಗರದಲ್ಲಿ ಆಯೋಜಿಸಲಾಗಿದ್ದ ದುಂಡುಮೇಜಿನ ಸಭೆಯಲ್ಲಿ ‘ಹೊರತಳ್ಳಲ್ಪಡುತ್ತಿರುವ ಮತದಾರರು ಮತ್ತು ಚುನಾವಣಾ ಆಯೋಗದ ನೀತಿಗಳು’ ಎಂಬ ವಿಷಯದ ಕುರಿತು ಅವರು ವಿಸ್ತಾರವಾಗಿ ಮಾತನಾಡಿದರು. ಅವರ ಭಾಷಣದ ಪ್ರಮುಖಾಂಶಗಳ ವಿವರ ಇಲ್ಲಿದೆ: ಪ್ರಜಾಪ್ರಭುತ್ವ

ಸಂವಿಧಾನ ವಿರೋಧಿ ನಡೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ವಿಮಲ ಅವರು ಮಾತನಾಡುತ್ತಾ, “ಚುನಾವಣಾ ಆಯೋಗ ಹಮ್ಮಿಕೊಂಡಿರುವ ಈ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಎಂಬ ಪ್ರಕ್ರಿಯೆಗೆ ನಮ್ಮ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಇದು ಸಂಪೂರ್ಣ ಅಸಂವಿಧಾನಿಕ ಎಂದು ನಾವು ಮೊದಲಿನಿಂದಲೂ ವಾದಿಸುತ್ತಿದ್ದೆವು. ಸಂವಿಧಾನದ ವಿಧಿಗಳಾದ 324 ರಿಂದ 327 ರವರೆಗಿನ ಅಂಶಗಳು ಏನನ್ನು ಹೇಳುತ್ತವೆ ಎಂಬುದನ್ನು ನಾವು ಕಾನೂನು ತಜ್ಞರ ಮೂಲಕ ವಿಶ್ಲೇಷಿಸಿದ್ದೆವು.

ಇದನ್ನೂ ಓದಿ: ಸಮಾಜವಾದಿ ಪಕ್ಷದಲ್ಲಿ ಭೇದ ಸಾಧ್ಯತೆ: ರಾಜ್ಭರ್ ಹೇಳಿಕೆ, ಅಖಿಲೇಶ್ ತಿರುಗೇಟು

ಆದರೆ, ಮೇ 27 ರಂದು ಬಂದ ಸುಪ್ರೀಂ ಕೋರ್ಟ್ ತೀರ್ಪು ಚುನಾವಣಾ ಆಯೋಗದ ಈ ನಡೆಗೆ ಹಸಿರು ನಿಶಾನೆ ತೋರಿದೆ. ಈ ಹಸಿರು ನಿಶಾನೆ ಆಡಳಿತ ವ್ಯವಸ್ಥೆಗೆ ಅನುಕೂಲಕರವಾಗಿದ್ದರೆ, ದೇಶದ ಬಹುಸಂಖ್ಯಾತ ದುಡಿಯುವ ವರ್ಗ, ಬಡವರು, ಕೂಲಿ ಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಇದು ‘ರೆಡ್ ಸಿಗ್ನಲ್’ (ಅಪಾಯದ ಮುನ್ಸೂಚನೆ) ಆಗಿ ಮಾರ್ಪಟ್ಟಿದೆ” ಎಂದು ಖೇದ ವ್ಯಕ್ತಪಡಿಸಿದರು.

ಒಳಗೊಳ್ಳುವಿಕೆಯಿಂದ ಹೊರತಳ್ಳುವಿಕೆಯತ್ತ ಪ್ರಜಾಪ್ರಭುತ್ವ

“ನಮ್ಮ ದೇಶದ್ದು ಸಾರ್ವತ್ರಿಕ ಚುನಾವಣಾ ವ್ಯವಸ್ಥೆ. 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಲಿಂಗ, ಧರ್ಮ, ಜಾತಿ, ಭಾಷೆಯ ತಾರತಮ್ಯವಿಲ್ಲದೆ ಮತದಾನದ ಹಕ್ಕನ್ನು ಸಂವಿಧಾನ ಖಾತರಿಪಡಿಸಿದೆ. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ‘ಹಿಂದೆ ದೇಶದ ಮತದಾರರು ತಮಗೆ ಬೇಕಾದ ಸರ್ಕಾರವನ್ನು ಆರಿಸುತ್ತಿದ್ದರು, ಆದರೆ ಇಂದು ಸರ್ಕಾರ ನಡೆಸುವ ಪಕ್ಷಗಳು ತಮಗೆ ಬೇಕಾದ ಮತದಾರರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ'” ಎಂದು ಅವರು ಮಾರ್ಮಿಕವಾಗಿ ನುಡಿದರು.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳೂ ಕೂಡ ತೀರ್ಪಿನ ಮೊದಲ ಸಾಲುಗಳಲ್ಲೇ ‘ಯಾರ ಮತವನ್ನು ಎಣಿಸಬೇಕು ಎಂದು ರಾಜಕೀಯವಾಗಿ ಬಂದವರಿಗೆ ಗೊತ್ತಿರಬೇಕು’ ಎಂದು ಬರೆದಿರುವುದು ಈ ಆತಂಕವನ್ನು ನಿಜವಾಗಿಸಿದೆ ಎಂದು ಅವರು ತಿಳಿಸಿದರು.

‘ಶುದ್ಧೀಕರಣ’ದ ಹೆಸರಿನಲ್ಲಿ ಬಡವರ ಧ್ವನಿ ಅಡಗಿಸುವ ಯತ್ನ

ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ಶುದ್ಧೀಕರಣ’ (ಮರಣ ಹೊಂದಿದವರ, ದ್ವಿಪ್ರತಿ ಇರುವವರ ಹೆಸರು ತೆಗೆಯುವುದು) ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಈ ಶುದ್ಧೀಕರಣದ ಅಡಿಯಲ್ಲಿ ಧ್ವನಿ ಇಲ್ಲದವರನ್ನು, ಆಸ್ತಿ ಮತ್ತು ಶಿಕ್ಷಣ ಇಲ್ಲದವರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಆಯೋಗವು ಕೇಳುತ್ತಿರುವ 11 ದಾಖಲೆಗಳು ದೇಶದ ಸಾಮಾನ್ಯ ಜನಸಾಮಾನ್ಯರ ಬಳಿ ಇರಲು ಸಾಧ್ಯವೇ ಇಲ್ಲ.

ವಲಸೆ ಕಾರ್ಮಿಕರು, ತೀರಾ ಬಡವರು ಮತ್ತು ಶಿಕ್ಷಣ ವಂಚಿತರ ಬಳಿ ಇಂತಹ ದಾಖಲೆಗಳು ಸಿಗುವುದಿಲ್ಲ. ಸ್ವತಃ ಚುನಾವಣಾ ಆಯೋಗ ನೀಡಿದ ‘ವೋಟರ್ ಐಡಿ’ ಮತ್ತು ದೇಶದ ಕಡ್ಡಾಯ ದಾಖಲೆಯಾದ ‘ಆಧಾರ್ ಕಾರ್ಡ್’ ಗಳನ್ನೇ ಪೌರತ್ವ ಅಥವಾ ಮತದಾನದ ಅರ್ಹತೆಗೆ ಮಾನ್ಯ ಮಾಡುತ್ತಿಲ್ಲ.

ಮದುವೆಯಾಗಿ ಬೇರೊಂದು ಊರಿಗೆ ಹೋಗುವ ಮಹಿಳೆಯರು ತಮ್ಮ ತಂದೆ-ತಾಯಿಯ ದಾಖಲೆಗಳನ್ನು ಒದಗಿಸಲಾಗದೆ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

‘ತಾತ್ವಿಕ ವ್ಯತ್ಯಾಸ’ (Logical Discrepancy) ಎಂಬ ಹೊಸ ಉರುಳು

ಮತದಾರರನ್ನು ಹೊರದಬ್ಬಲು ಆಯೋಗವು ‘ತಾತ್ವಿಕ ವ್ಯತ್ಯಾಸ’ ಅಥವಾ ಅಸಂಗತ ವಿವರಗಳ ನೆಪವನ್ನು ಬಳಸಿಕೊಳ್ಳುತ್ತಿದೆ. ಹೆಸರುಗಳ ಉಚ್ಛಾರಣೆಯಲ್ಲಿನ ಸಣ್ಣ ವ್ಯತ್ಯಾಸ (ಉದಾಹರಣೆಗೆ: ವಿಮಲ ಮತ್ತು ವಿಮಲಾ), ಇನಿಷಿಯಲ್ ಬದಲಾವಣೆ ಅಥವಾ ತಾಯಿ ಮತ್ತು ಮಗುವಿನ ವಯಸ್ಸಿನ ನಡುವಿನ ತಾಂತ್ರಿಕ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಪಟ್ಟಿಗೆ ಸೇರಿಸಿ, ಅಂತಿಮವಾಗಿ ಅವರ ಹೆಸರುಗಳನ್ನು ಕೈಬಿಡಲಾಗುತ್ತಿದೆ.

ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಇಂತಹ ಸಣ್ಣ ತಪ್ಪುಗಳನ್ನು ಸರಿಪಡಿಸುವ ಬದಲು, ಇಡೀ ಮತದಾರರನ್ನೇ ಸಂಶಯದಿಂದ ನೋಡುವುದು ಎಷ್ಟು ಸರಿ ಎಂದು ವಿಮಲ ಪ್ರಶ್ನಿಸಿದರು.

ವಿವಿಧ ರಾಜ್ಯಗಳ ಆತಂಕಕಾರಿ ಅನುಭವಗಳು

ಇದೇ ಪ್ರಕ್ರಿಯೆಯನ್ನು ಈಗಾಗಲೇ ಅನುಷ್ಠಾನಗೊಳಿಸಿರುವ ರಾಜ್ಯಗಳ ಅಂಕಿ-ಅಂಶಗಳನ್ನು ವಿಮಲ ಅವರು ಸಭೆಯ ಮುಂದಿಟ್ಟರು:

ಬಿಹಾರ: ಮೊದಲ ಹಂತದಲ್ಲಿ ಸುಮಾರು 65 ಲಕ್ಷ ಜನರ ಹೆಸರನ್ನು ಕೈಬಿಡಲಾಯಿತು. ತದನಂತರ ಅಲ್ಲಿನ ಹೊಸ ಸರ್ಕಾರವು ಮತದಾರರ ಪಟ್ಟಿಯಿಂದ ಹೊರಬಿದ್ದ ಸುಮಾರು 5 ಲಕ್ಷ ಜನರ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿದೆ.

ಪಶ್ಚಿಮ ಬಂಗಾಳ: ಇಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹೊರತಳ್ಳುವ ಪ್ರಕ್ರಿಯೆ ಆರಂಭವಾಯಿತಾದರೂ, ಅಂತಿಮವಾಗಿ ಲಕ್ಷಾಂತರ ಬಡ ಹಿಂದೂಗಳೂ ಕೂಡ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ದೇಶದ ಹೆಮ್ಮೆಯ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಹೆಸರೇ ‘ಡೌಟ್‌ಫುಲ್ ಸಿಟಿಜನ್’ ಪಟ್ಟಿಗೆ ಸೇರುವಂತಾಗಿದ್ದು ಈ ವ್ಯವಸ್ಥೆಯ ಅಣಕ.

ಕರ್ನಾಟಕ: ರಾಜ್ಯದಲ್ಲಿ ಈಗಾಗಲೇ ‘ಮ್ಯಾಪಿಂಗ್ ಮತ್ತು ಮ್ಯಾಚಿಂಗ್’ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದಲ್ಲೇ ಸುಮಾರು 1 ಕೋಟಿ 10 ಲಕ್ಷ ಜನರ ಹೆಸರುಗಳು ಮ್ಯಾಪ್ ಆಗಿಲ್ಲ ಎಂದು ಸ್ವತಃ ರಾಜ್ಯ ಚುನಾವಣಾ ಆಯುಕ್ತರು ಒಪ್ಪಿಕೊಂಡಿದ್ದಾರೆ.

ಮುಂದಿನ ಹಾದಿ ಮತ್ತು ನಮ್ಮ ಒತ್ತಾಯಗಳು

ಈ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ನಾಗರಿಕ ಸಮಾಜ ಮತ್ತು ರಾಜಕೀಯ ಪಕ್ಷಗಳು ತಕ್ಷಣವೇ ಜಾಗೃತರಾಗಬೇಕಿದೆ ಎಂದು ದುಂಡುಮೇಜಿನ ಸಭೆಯು ಕೆಲವು ಪ್ರಮುಖ ಒತ್ತಾಯಗಳನ್ನು ಮಂಡಿಸಿತು.

1. ಮತದಾನದ ಹಕ್ಕಿನ ಗ್ಯಾರಂಟಿ: ಸರ್ಕಾರವು ನಮಗೆ ಬೇರೆಲ್ಲಾ ಗ್ಯಾರಂಟಿಗಳನ್ನು ನೀಡುತ್ತಿರುವಂತೆ, ಮೊದಲು ನಮ್ಮ ‘ಮತದಾನದ ಹಕ್ಕಿನ ಗ್ಯಾರಂಟಿ’ಯನ್ನು ರಕ್ಷಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂಬ ಧಮ್ಕಿಗೆ ಜಗ್ಗಬಾರದು.

2. ಬೂತ್ ಮಟ್ಟದ ಸಹಾಯ ಕೇಂದ್ರಗಳು: ಪ್ರತಿಯೊಂದು ಬೂತ್ ಮಟ್ಟದಲ್ಲಿ ಆಯೋಗವು ಸಹಾಯ ಕೇಂದ್ರಗಳನ್ನು (Help Desks) ತೆರೆದು ಸಾಮಾನ್ಯ ಜನರಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಸಹಾಯ ಮಾಡಬೇಕು.

3. ಅಸಂಗತ ನಿಯಮಗಳ ರದ್ದತಿ: ‘ತಾತ್ವಿಕ ವ್ಯತ್ಯಾಸ’ (Logical Discrepancy) ಎಂಬ ನೆಪದಲ್ಲಿ ಮತದಾರರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು.

4. ವ್ಯಾಪಕ ಜನಜಾಗೃತಿ: ಪ್ರತಿಯೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕು ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಾಪಕವಾದ ಜನಚಳುವಳಿ ರೂಪಿಸಬೇಕಿದೆ.

“ಇದು ಕೇವಲ ಮತದಾರರ ಪಟ್ಟಿಯ ಶುದ್ಧೀಕರಣವಲ್ಲ, ಬದಲಾಗಿ ‘ಮನುವ್ಯಾಧಿ’ಯನ್ನು ತಲೆಗೆ ಏರಿಸಿಕೊಂಡವರು ತಮಗೆ ಬೇಕಾದಂತೆ ದೇಶವನ್ನು ನಡೆಸಲು ಮಾಡಿಕೊಳ್ಳುತ್ತಿರುವ ವ್ಯವಸ್ಥಿತ ಸಂಚು. ಇದನ್ನು ಎಲ್ಲರೂ ಒಗ್ಗೂಡಿ ವಿರೋಧಿಸದೇ ಹೋದರೆ, ದೇಶದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ” ಆದ್ದರಿಂದ ದುಂಡು ಮೇಜಿನ ಸಭೆಯ ನಿರ್ಣಯಗನ್ನು ಜೂನ್ 22 ರಂದು ಹಾಸನ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕವಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಆರಂಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್‌ಕುಮಾರ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಧರ್ಮೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಪೃಥ್ವಿ ಎಂ.ಜಿ. ಸ್ವಾಗತಿಸಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶ್ ಮೂರ್ತಿ, ಎಂ.ಸಿ. ಡೋಂಗ್ರೆ, ಟಿ.ಆರ್.ವಿಜಯಕುಮಾರ್, ಕಾಡಯ್ಯ, ಅನ್‌ಷದ್ ಪಾಳ್ಯ, ಕಿಶೋರ್ ಕುಮಾರ್, ಪರಮಶಿವಯ್ಯ, ಚಲಂ ಹಾಡ್ಳಹಳ್ಳಿ, ರಾಜಶೇಖರ್ ಹುಲಿಕಲ್, ಈರೇಶ್ ಹಿರೇಹಳ್ಳಿ, ಅಂಬುಗ ಮಲ್ಲೇಶ್, ಆರಿಫ್ ಕರ‍್ಲೆ, ಸಮೀರ್, ಮುಬಶಿರ್ ಅಹಮದ್, ಹರೀಶ್ ಕಟ್ಟೆ, ತೌಫಿಕ್ ಅಹಮದ್,ಅನ್ಸರ್, ಅರವಿಂದ ಮುಂತಾದವರು ಭಾಗವಹಿ ಮಾತನಾಡಿದರು.

ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್‌ ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *