ಶ್ರೀಲಂಕಾದಲ್ಲಿ ಸಿಲುಕಿದ್ದ 130 ಭಾರತೀಯರನ್ನು ಭಾರತಕ್ಕೆ ಕರೆತಂದ ಐಎ‍ಎಫ್‌

ತಿರುವನಂತಪುರಂ: ಭಾರತೀಯ ವಾಯುಪಡೆ(IAF)ಯು ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಕರೆತಂದಿದೆ. ಕೊಲಂಬೊದಿಂದ ತಿರುವನಂತಪುರಂಗೆ ಕಾರ್ಯನಿರ್ವಹಿಸುತ್ತಿರುವ ಐಎಎಫ್ ವಿಮಾನಗಳು ನವೆಂಬರ್‌ 30ರ ಸಂಜೆ 7.30ರ ಹೊತ್ತಿಗೆ ಇಲ್ಲಿ ತಲುಪಿದವು ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ರಕ್ಷಣಾ ಇಲಾಖೆ ವಕ್ತಾರರ ಪ್ರಕಾರ, ದ್ವೀಪ ರಾಷ್ಟ್ರಕ್ಕೆ ರಕ್ಷಣಾ ಸಾಮಗ್ರಿ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ತಲುಪಿಸಲು ಬಳಸಲಾಗುತ್ತಿದ್ದ ಐಎಎಫ್‌ನ ಐಎಲ್-76 ಮತ್ತು ಸಿ-130 ಜೆ ಹೆವಿ ಲಿಫ್ಟ್ ಕ್ಯಾರಿಯರ್‌ಗಳು ಅಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತಂದಿವೆ.

ಶ್ರೀಲಂಕಾದಲ್ಲಿ ಇತ್ತೀಚಿನ ನೈಸರ್ಗಿಕ ವಿಕೋಪಗಳಿಂದ ಉಂಟಾದ ತೀವ್ರ ಮಾನವೀಯ ಪರಿಣಾಮದ ನಂತರ, ಆಪರೇಷನ್ ಸಾಗರ್ ಬಂಧು ಕಾರ್ಯಾಚರಣೆಯ ಭಾಗವಾಗಿ ಐಎಎಫ್ ಶ್ರೀಲಂಕಾದ ಜನರಿಗೆ ನಿರ್ಣಾಯಕ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಬೆಂಬಲ ನೀಡುವುದನ್ನು ಮುಂದುವರೆಸಿದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಒಳಮೀಸಲಾತಿ: ನೇಮಕಾತಿ‌ ಮುಂದುವರಿಸಲು ಷರತ್ತುಬದ್ಧ ಅನುಮತಿ – ಹೈಕೋರ್ಟ್

ಐಎಎಫ್ ಹೆಲಿಕಾಪ್ಟರ್‌ಗಳು ಒಟ್ಟು 57 ಶ್ರೀಲಂಕಾದ ಸೇನಾ ಸಿಬ್ಬಂದಿಯನ್ನು ದಿಯತಲಾವಾ ಸೇನಾ ಶಿಬಿರ ಮತ್ತು ಕೊಲಂಬೊದಿಂದ ಕೋಟ್ಮಲೆಗೆ ಸಾಗಿಸಿದೆ. ಶ್ರೀಲಂಕಾದ ಮಧ್ಯ ಪ್ರಾಂತ್ಯದ ಕೋಟ್ಮಲೆ ಭೂಕುಸಿತ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಐಎಎಫ್ ಒಂದು ಹೈಬ್ರಿಡ್ ಕಾರ್ಯಾಚರಣೆ ಕೈಗೊಂಡಿದ್ದು, ಇದರಲ್ಲಿ ಗರುಡ ಕಮಾಂಡೋಗಳು ಸಂಕಷ್ಟದಲ್ಲಿರುವ ನಾಗರಿಕರಿದ್ದ ಸ್ಥಳದಲ್ಲಿ ಇಳಿದಿದೆ. ನಂತರ ಮೊದಲೇ ಗುರುತಿಸಲಾದ ಲ್ಯಾಂಡಿಂಗ್ ಸ್ಥಳಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಹೆಲಿಕ್ಯಾಪ್ಟರ್​ ಮೂಲಕ ಕರೆದೊಯ್ಯಲಾಗಿದೆ.

ಭಾರತೀಯರು, ವಿದೇಶಿ ಪ್ರಜೆಗಳು ಮತ್ತು ಶ್ರೀಲಂಕಾದ ಬದುಕುಳಿದವರೂ ಸೇರಿದಂತೆ ಒಟ್ಟು ಐವರು ನಾಗರಿಕರನ್ನು ಕೊಲಂಬೊಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಎರಡು ಭಾರತೀಯ ಹೆಲಿಕಾಪ್ಟರ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯವರೆಗೆ ರಕ್ಷಣಾ ಕಾರ್ಯಾಚರಣೆಗಾಗಿ 12ಕ್ಕೂ ಹೆಚ್ಚು ಬಾರಿ ಹಾರಾಟ ನಡೆಸುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ.

ಶ್ರೀಲಂಕಾದಲ್ಲಿ ಸಿಲುಕಿರುವ ಎಲ್ಲ ಭಾರತೀಯ ಪ್ರಯಾಣಿಕರು ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಲು ಹೈಕಮಿಷನ್ ಪ್ರತ್ಯೇಕ ಪೋಸ್ಟ್‌ನಲ್ಲಿ ಲಿಂಕ್ ಒದಗಿಸಿದೆ. ಭಾರತೀಯ ಪ್ರಯಾಣಿಕರು ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ತುರ್ತು ಸಹಾಯ ಕೇಂದ್ರದಲ್ಲಿಯೂ ತಮ್ಮ ವಿವರವನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.

ಚಂಡಮಾರುತದಿಂದ ಹಾನಿಗೊಂಡಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು, ವಾಯು ಮತ್ತು ಸಮುದ್ರದ ಮೂಲಕ ಒಟ್ಟು 27 ಟನ್ ಪರಿಹಾರ ಸಾಮಗ್ರಿ ತಲುಪಿಸಿದೆ.

ಇದನ್ನೂ ನೋಡಿ: ರೈತ ಕಾರ್ಮಿಕರ ಧರಣಿ | ಬೆಂಗಳೂರು | ಧರಣಿ ಸ್ಥಳಕ್ಕೆ ಬಾರದ ಸಚಿವರು ; ರಸ್ತೆಗಿಳಿದು ರೈತರು Janashakthi Media

Donate Janashakthi Media