ಬೆಂಗಳೂರು: ನೈಸ್ ಯೋಜನೆಗಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸು ನೀಡಬೇಕು ಹಾಗೂ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಲಾಗಿರುವ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮಾದವರ ಬಳಿ ಇರುವ ನೈಸ್ ಟೋಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ನೈಸ್
ಕರ್ನಾಟಕ ಹೈಕೋರ್ಟ್ ಜುಲೈ 29ರಂದು ನೈಸ್ ಭೂಮಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೈತರು, ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ಸ್ಥಳದಲ್ಲಿದ್ದ ಹಲವು ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ., ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ.ಎನ್., ಪ್ರಭಾ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಹಾಗೂ ವಕೀಲ ವೆಂಕಟೇಶಗೌಡ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ನೈಸ್
ಇದನ್ನೂ ಓದಿ : ನೈಸ್ ಹೋರಾಟ ಹತ್ತಿಕ್ಕುವ ಯತ್ನ? -ಹೋರಾಟಗಾರರನ್ನು ವಶಕ್ಕೆ ಪಡೆದ ಡಿಕೆಶಿ ಸರ್ಕಾರ

ಇದೇ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಯು. ಬಸವರಾಜ, ಮುಖಂಡರಾದ ಎನ್. ವೆಂಕಟಾಚಲಯ್ಯ, ಶಿವಣ್ಣ, ಚಂದ್ರಣ್ಣ ಹಾಗೂ ಕಾರ್ಮಿಕ ಮುಖಂಡ ಮಹಾಂತೇಶ್ ಸೇರಿದಂತೆ ಹಲವರನ್ನೂ ಪೊಲೀಸರು ಇಂದು ಬೆಳಗಿನ ಜಾವ ಬಂಧಿಸಿದ್ದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಹೊರಬಂದು ಸುಮಾರು 50 ದಿನ ಕಳೆದರೂ ಅದನ್ನು ಜಾರಿಗೊಳಿಸಿಲ್ಲ ಎಂದು ಸಿಪಿಐಎಂ ಆರೋಪಿಸಿದೆ. ತೀರ್ಪಿನ ಆಧಾರದಲ್ಲಿ ರೈತರ ಭೂಮಿಯನ್ನು ವಾಪಸು ನೀಡಬೇಕು ಮತ್ತು ಅಕ್ರಮ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.
ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದ್ದು, ಹೈಕೋರ್ಟ್ ಆದೇಶವನ್ನು ಜಾರಿಗೊಳಿಸದ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ನೈಸ್ ವಿರುದ್ಧದ ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ನೈಸ್

ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್? ಮತದಾನದ ಹಕ್ಕಿಗೇ ಕತ್ತರಿ! | Janashakthi Media
