ಚಂಡೀಗಢ :ಪಂಜಾಬ್ನಲ್ಲಿ ಖರೀಫ್ ಹಂಗಾಮು ಸಮೀಪಿಸುತ್ತಿರುವ ಬೆನ್ನಲ್ಲೇ ಡೀಸೆಲ್ ದರ ಏರಿಕೆ ಮತ್ತು ರಸಗೊಬ್ಬರ ಕೊರತೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರ್ಯಾಕ್ಟರ್, ನೀರಾವರಿ ಮೋಟಾರ್, ಹಾರ್ವೆಸ್ಟರ್ ಸೇರಿದಂತೆ ಕೃಷಿ ಚಟುವಟಿಕೆಗಳ ಬಹುಪಾಲು ಡೀಸೆಲ್ ಅವಲಂಬಿತವಾಗಿರುವುದರಿಂದ ಇಂಧನ ದರ ಏರಿಕೆ ನೇರವಾಗಿ ಕೃಷಿ ವೆಚ್ಚವನ್ನು ಹೆಚ್ಚಿಸುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ಗೆ ಸುಮಾರು 3 ರೂ. ಏರಿಕೆ ಮಾಡಿದ್ದು, ಇದರಿಂದ ರೈತರಿಗೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಪಂಜಾಬ್ನ ವಿವಿಧ ರೈತ ಸಂಘಟನೆಗಳು ಎಚ್ಚರಿಸಿವೆ. ವಿಶೇಷವಾಗಿ ಭತ್ತ ಬಿತ್ತನೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಡೀಸೆಲ್ ವೆಚ್ಚ ಏರಿಕೆಯಿಂದ ಕೃಷಿ ಲಾಭದಾಯಕತೆ ಮತ್ತಷ್ಟು ಕುಸಿಯಲಿದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಯೂರಿಯಾ, ಡಿಎಪಿ ಸೇರಿದಂತೆ ಪ್ರಮುಖ ರಸಗೊಬ್ಬರಗಳ ಕೊರತೆ ಕೂಡ ರೈತರಲ್ಲಿ ಆತಂಕ ಹುಟ್ಟಿಸಿದೆ. ಪಶ್ಚಿಮ ಏಷ್ಯಾ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ತಡೆ ಪರಿಣಾಮ ಜಾಗತಿಕ ಸರಬರಾಜು ಸರಪಳಿ ಅಸ್ತವ್ಯಸ್ತಗೊಂಡಿದ್ದು, ಭಾರತಕ್ಕೆ ರಸಗೊಬ್ಬರ ಆಮದು ದುಬಾರಿಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಮಸ್ಕಿಟೋ ರಿಪೆಲ್ಲೆಂಟ್ ಅಗರ್ಬತ್ತಿಗಳಲ್ಲಿ ಅಪಾಯಕರ ರಾಸಾಯನಿಕಗಳು: ಸಮೀಕ್ಷೆ ಬಹಿರಂಗ
ಸರ್ಕಾರದ ಅಂಕಿಅಂಶಗಳ ಪ್ರಕಾರ, ಖರೀಫ್ ಹಂಗಾಮಿಗೆ ದೇಶಕ್ಕೆ ಸುಮಾರು 390.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, ಲಭ್ಯ ಇರುವ ಸಂಗ್ರಹ ಅದರ ಅರ್ಧದಷ್ಟೇ ಇದೆ. ಯೂರಿಯಾ ದರ ಟನ್ಗೆ ಸುಮಾರು 510 ಡಾಲರ್ನಿಂದ 950 ಡಾಲರ್ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ದೇಶೀಯ ಉತ್ಪಾದನೆಯೂ ದ್ರವೀಕೃತ ಅನಿಲ (LNG) ಕೊರತೆಯಿಂದ ಕುಂಠಿತಗೊಂಡಿದೆ.
ಪಂಜಾಬ್ ದೇಶದ ಅತ್ಯಧಿಕ ರಸಗೊಬ್ಬರ ಬಳಕೆ ಮಾಡುವ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿ ಹೆಕ್ಟೇರ್ಗೆ ಸರಾಸರಿ 248 ಕೆಜಿ ರಸಗೊಬ್ಬರ ಬಳಕೆಯಾಗುತ್ತಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು. ಹೀಗಾಗಿ ಸರಬರಾಜು ವ್ಯತ್ಯಯ ಮತ್ತು ಬೆಲೆ ಏರಿಕೆಯ ಪರಿಣಾಮ ಪಂಜಾಬ್ನ ರೈತರ ಮೇಲೆ ಗಂಭೀರವಾಗಿ ಬೀಳುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಕೇಂದ್ರ ಸರ್ಕಾರಕ್ಕೆ ಇಂಧನ ಮತ್ತು ರಸಗೊಬ್ಬರಗಳ ನಿರಂತರ ಸರಬರಾಜು ಖಚಿತಪಡಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ವ್ಯತ್ಯಯ ಉಂಟಾದರೆ ದೇಶದ ಆಹಾರ ಭದ್ರತೆಯ ಮೇಲೆಯೇ ಪರಿಣಾಮ ಬೀಳಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ನೋಡಿ : ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
