ಬೆಂಗಳೂರು: ಏಳು ವರ್ಷಗಳಿಂದ ತನ್ನ ಶಾಲಾ ಸಹಪಾಠಿಯನ್ನು ಪ್ರೀತಿಸಿ ಆಕೆಯ ಮಗುವಿನ ತಂದೆಯಾಗಿರುವ ಪುತ್ತೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಕೃಷ್ಣ ಜೆ.ರಾವ್, ಆಕೆಗೆ ಜೀವನಾಂಶ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಸಂತ್ರಸ್ತೆ
‘ಬಿಜೆಪಿ ಮುಖಂಡ ಪಿ. ಜಿ. ಜಗನ್ನಿವಾಸ ರಾವ್ ಪುತ್ರ ಆರೋಪಿ ಶ್ರೀಕೃಷ್ಣ ಜೆ.ರಾವ್ ಮಗುವಿನ ಜೈವಿಕ ತಂದೆ ಎಂಬುದು ನಿರ್ವಿವಾದ ಮತ್ತು ಈ ಅಂಶ ಈಗಾಗಲೇ ವೈದ್ಯಕೀಯವಾಗಿ ದೃಢಪಟ್ಟಿದೆ. ಹೀಗಾಗಿ ಪ್ರಕರಣ ಇತ್ಯರ್ಥವಾಗುವ ತನಕ ಸಂತ್ರಸ್ತೆಯ ಜೀವನ ನಿರ್ವಹಣೆಗೆ ಪ್ರತಿ ತಿಂಗಳೂ ₹75 ಸಾವಿರ ಆರ್ಥಿಕ ನೆರವು ನೀಡಬೇಕು. ಮೊದಲ ಕಂತಿನ ಮೊತ್ತವನ್ನು ವಾರದೊಳಗೆ ಪಾವತಿಸಬೇಕು’ ಎಂದು ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಮಹತ್ವದ ನ್ಯಾಯಾಂಗ ಆದೇಶವನ್ನು ಏಕಸದಸ್ಯ ನ್ಯಾಯಪೀಠ ಹೊರಡಿಸಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ಜೆ.ರಾವ್ (22) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಇದನ್ನೂ ಓದಿ: ಶೃಂಗೇರಿ ಶಾಸಕ ಟಿಡಿ ರಾಜೇಗೌಡಗೆ ಬಿಗ್ ಶಾಕ್: ಅಂಚೆ ಮತ ಮರು ಎಣಿಕೆಗೆ ಹೈಕೋರ್ಟ್ ಆದೇಶ
ಇದೇ ವೇಳೆ ಶ್ರೀಕೃಷ್ಣ ರಾವ್, ಅವರ ತಂದೆ ಮತ್ತು ತಾಯಿಯ ವಿರುದ್ಧ ಅಧೀನ ನ್ಯಾಯಾಲಯದ ಮುಂದಿನ ನ್ಯಾಯಿಕ ಪಕ್ರಿಯೆಗೆ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಆರೋಪಿಯ ಪೋಷಕರು ಪ್ರಕರಣವನ್ನು ರಾಜಿಸಂಧಾನದ ಮೂಲಕ ಸಮಾಪ್ತಿಗೊಳಿಸಲು ₹50 ಲಕ್ಷದ ಆಮಿಷ ಒಡ್ಡಿರುವುದಾಗಿ ತಿಳಿದು ಬಂದಿದೆ’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ತಂದರು.
ಇದನ್ನು ಬಲವಾಗಿ ಅಲ್ಲಗಳೆದ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪಿ.ಪಿ.ಹೆಗ್ಡೆ, ‘ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರಶ್ನಿತ ಕೃತ್ಯಗಳು ಸಂಪೂರ್ಣ ಸಮ್ಮತಿಯಿಂದಲೇ ಜರುಗಿವೆ. ನ್ಯಾಯಪೀಠ ಉದಾರ ಭಾವನೆ ತೋರಿದರೆ ಉಭಯ ಪಕ್ಷಗಾರರು ಪ್ರಕರಣವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.
ಆದರೆ, ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ‘ಸಂತ್ರಸ್ತೆ ಮತ್ತು ಆಕೆಯ ಬಡಕುಟುಂಬ ಎದುರಿಸುತ್ತಿರುವ ಕಷ್ಟಗಳನ್ನು ಕಡೆಗಣಿಸಲಾಗದು. ತಾಯಿ-ಮಗು ಇಬ್ಬರೂ ದುರ್ಬಲ ಮತ್ತು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯುವತಿಯೊಬ್ಬಳ ಸುಂದರ ಕನಸುಗಳನ್ನು ಮತ್ತು ಭವಿಷ್ಯವನ್ನು ಮಸುಕಾಗಿಸಿ ಆಕೆಯನ್ನು ಅಕಾಲಿಕವಾಗಿ ತಾಯ್ತನದ ಜವಾಬ್ದಾರಿಗಳಿಗೆ ತಳ್ಳಿರುವ ಆರೋಪಿಯ ನಡೆ ಒಪ್ಪತಕ್ಕದ್ದಲ್ಲ’ ಎಂದು ತೀವ್ರ ಆಘಾತ ವ್ಯಕ್ತಪಡಿಸಿದೆ.
‘ಈ ವಿಷಯದಲ್ಲಿ ಅರ್ಜಿದಾರ ಇನ್ನೂ ವಿದ್ಯಾರ್ಥಿ ಎಂಬುದು ಹೊರೆಯಿಂದ ನುಣುಚಿಕೊಳ್ಳಲು ಸಕಾರಣ ಎನಿಸುವುದಿಲ್ಲ. ಆರೋಪಿಯು ಸಂತ್ರಸ್ತೆಯನ್ನು ಮದುವೆಯಾಗುವ ಭರವಸೆಗೆ ಎಳ್ಳು ನೀರು ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಶ್ರೀಕೃಷ್ಣ ರಾವ್ ಪೋಷಕರೂ ಆರೋಪಿಗಳಾಗಿರುವುದು ಪ್ರಕರಣದ ಗಹನತೆಯನ್ನು ಎತ್ತಿ ತೋರಿಸುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣ: ಸಂತ್ರಸ್ತೆಗೆ ಈಗ 10 ತಿಂಗಳ ಗಂಡು ಮಗುವಿದೆ. ಈಕೆಯ ತಾಯಿ ಮನೆಗೆಲಸ ಮತ್ತು ತಂದೆ ಚಿನ್ನದ ಮಳಿಗೆಯಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗು ಜನಿಸಿದ ಕಾರಣಕ್ಕಾಗಿ ಸಂತ್ರಸ್ತೆ ಬಿಎಸ್‌ಸಿ ಪದವಿ ಶಿಕ್ಷಣವನ್ನು ಅರ್ಧಕ್ಕೇ ಕೈಬಿಟ್ಟಿದ್ದಾರೆ.
ಶ್ರೀಕೃಷ್ಣ ರಾವ್ ವಿರುದ್ಧ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ, ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 64, 92 (ಎಂ) ಮತ್ತು 69ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದರ ನ್ಯಾಯಿಕ ವಿಚಾರಣೆ 6ನೇ ಹೆಚ್ಚುವರಿ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ನ್ಯಾ.ಎಂ.ನಾಗಪ್ರಸನ್ನಭರವಸೆಯ ಬೆಳಕಿನಲ್ಲಿ ಶಿಕ್ಷಣ ಪಡೆದು ವಿಕಸನಗೊಳ್ಳಬೇಕಿದ್ದ 20ರ ಹರಯದ ತರುಣಿಯೊಬ್ಬಳ ಉಜ್ವಲ ಭವಿಷ್ಯ ಮತ್ತು ಕೋಮಲ ಅವಕಾಶಗಳಿಗೆ ಈಗ ಕಾರ್ಮೋಡ ಕವಿದಿದೆ. ಅನಿರೀಕ್ಷಿತ ಬಾಧ್ಯತೆಗಳ ಹೊರೆಯಲ್ಗಿ ಆಕೆ ಬಳಲುತ್ತಿದ್ದಾಳೆ.
ದೇಶದ ಇತಿಹಾಸದಲ್ಲೇ ಮೊದಲ ಆದೇಶ
ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಪರೂಪದ ಮೊದಲ ಆದೇಶಕ್ಕೆ ಸಾಕ್ಷಿಯಾಗಿರುವ ಈ ಪ್ರಕರಣ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಸಾಧಿಸಿ ನಂತರ ತರುಣಿ ಅಥವಾ ಮಹಿಳೆಯರನ್ನು ನಡುನೀರಿನಲ್ಲಿ ಕೈಬಿಡುವ ಮೋಸಗಾರರಿಗೆ ತಕ್ಕ ಎಚ್ಚರಿಕೆಯಾಗಿದೆ’ ಎಂದು ನ್ಯಾಯಾಂಗ ತಜ್ಞರು ಈ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ.
ವೈವಾಹಿಕ ವ್ಯಾಜ್ಯಗಳಲ್ಲಿ ಪರಿಣತಿ ಹೊಂದಿರುವ ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲೆ ಎಸ್.ಸುಶೀಲಾ ಅವರು ‘ಇಂದಿನ ಆದೇಶ ಮಧ್ಯಂತರ ಆದೇಶ ಎನಿಸಿದ್ದರೂ ಅಪಕೃತ್ಯಗಳನ್ನು ತಡೆಯುವ ಕಾನೂನಿಗೆ ಹೊಸ ಭಾಷ್ಯ ಬರೆದಿದೆ’ ಎಂದು ಹೇಳಿದ್ದಾರೆ.
‘ದೇಶದ ಇತರೆ ಹೈಕೋರ್ಟ್‌ಗಳಲ್ಲಿ ಈ ರೀತಿಯ ಆರ್ಥಿಕ ನೆರವಿನ ಯಾವುದೇ ಆದೇಶ ಸದ್ಯಕ್ಕೆ ನಿಖರವಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಇನ್ನು ಮುಂದೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ ಮೋಸ ಎಸಗುವ ಖದೀಮರಿಗೆ ಈ ಆದೇಶ ತಕ್ಕ ಪಾಠ ಕಲಿಸುವುದಕ್ಕೆ ಪೂರ್ವ ನಿದರ್ಶನವಾಗಲಿದೆ’ ಎನ್ನುತ್ತಾರೆ ಹೈಕೋರ್ಟ್‌ನ ಯುವ ವಕೀಲ ಪಿ.ರಾಹುಲ್ ಕೃಷ್ಣಾರೆಡ್ಡಿ.
ಮಾಧ್ಯಮಗಳ ಮುಂದೆ ಹೋಗದಂತೆ ನಿರ್ಬಂಧ
‘ಮಾಧ್ಯಮಗಳು ಈ ವಿಷಯವನ್ನು ಸ್ಥಳೀಯವಾಗಿ ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳುತ್ತಿವೆ. ಹಾಗಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು’ ಎಂಬ ಪಿ.ಪಿ.ಹೆಗ್ಡೆಯವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
‘ಇಂತಹ ವಿಷಯಗಳಲ್ಲಿ ಎಲ್ಲರನ್ನೂ ಸುಮ್ಮನಿರುವಂತೆ ಆದೇಶಿಸಲಾಗದು’ ಎಂದು ಖಂಡತುಂಡವಾಗಿ ನುಡಿದಿದೆ. ‘ಸಂತ್ರಸ್ತೆ ಆಕೆಯ ಪೋಷಕರು ಅಥವಾ ಸಂಬಂಧಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಯಾವುದೇ ವಿವರ ನೀಡಕೂಡದು’ ಎಂದು ನಿರ್ದೇಶಿಸಿದೆ.
‘ಸಂತ್ರಸ್ತೆಯ ಮಗುವಿಗೆ ‘ಶ್ರೀಕೃಷ್ಣ’ ಎಂದು ನಾಮಕರಣ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಬಡತನ ಮತ್ತು ದುಃಸ್ಥಿತಿಯಲ್ಲಿ ಇಂತಹುದೊಂದು ಸಂತಸದ ಗಳಿಗೆ ಇಲ್ಲವಾಗಿದೆ’ ಎಂದು ಸಂತ್ರಸ್ತೆ ಪರ ಹೈಕೋರ್ಟ್ ವಕೀಲ ಫ್ರಾನ್ಸಿಸ್ ಝೇವಿಯರ್ ನ್ಯಾಯಪೀಠಕ್ಕೆ ಸಂತ್ರಸ್ತೆಯ ಗೋಳನ್ನು ವಿವರಿಸಿದರು.
ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media
