ಮತದಾರರ ಪಟ್ಟಿಯ ಪರಿಷ್ಕರಣೆ: ಅವಧಿ ವಿಸ್ತರಣೆ ಅರ್ಜಿ ತಳ್ಳಿಹಾಕಿದ ಹೈಕೋರ್ಟ್‌

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಜುಲೈ 28ರಂದು ಪರಿಗಣಿಸಲು ನಿರಾಕರಿಸಿದೆ. ಪರಿಷ್ಕರಣೆ

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ವಿಭಾಗೀಯ ಪೀಠ, “ಅರ್ಜಿಯನ್ನು ಅವಧಿ ಪೂರ್ವವಾಗಿ ಸಲ್ಲಿಸಿರುವುದರಿಂದ ಈ ಹಂತದಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ” ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅರ್ಜಿದಾರರಾದ ಸಾಹಿತಿ ದೇವನೂರು ಮಹಾದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಮತ್ತು ಲೇಖಕಿ ಸಬೀಹಾ ಭೂಮಿಗೌಡ ಅವರು ಎಸ್‌ಐಆರ್ ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆ ಹೆಚ್ಚಳ: ತಕ್ಷಣ ಪೊಲೀಸರಿಗೆ ವರದಿ ಕಡ್ಡಾಯ – ಶಿಕ್ಷಣ ಇಲಾಖೆ

ಪೀಠವು ತನ್ನ ಆದೇಶದಲ್ಲಿ, ಎಸ್‌ಐಆರ್ ಸಂಬಂಧಿತ ಕೆಲವು ವಿಚಾರಗಳು ಈಗಾಗಲೇ ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿರುವುದನ್ನು ಉಲ್ಲೇಖಿಸಿ, ಈ ಹಂತದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಸೂಕ್ತವಲ್ಲ ಎಂದು ಹೇಳಿದೆ. ಜೊತೆಗೆ, ಪರಿಷ್ಕರಣೆ ಪ್ರಕ್ರಿಯೆಯ ಕಾಲಮಿತಿ ನಿಗದಿ ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರಿದ್ದು, ಅದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

“ಚುನಾವಣಾ ಆಯೋಗವು ಎಸ್‌ಐಆರ್ ನಡೆಸಲು ವಿಶೇಷ ಸಂಸ್ಥೆಯಾಗಿದ್ದು, ಪ್ರಕ್ರಿಯೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ. ಆಯೋಗ ಸೂಕ್ತ ಗಮನ ನೀಡುವುದಿಲ್ಲ ಎಂದು ಊಹಿಸಲು ಯಾವುದೇ ಆಧಾರವಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ತರಬೇತಿ, ಸಮಯ ಮಿತಿ ಹಾಗೂ ಗ್ರಾಮೀಣ ಮತ್ತು ಅನಕ್ಷರಸ್ಥ ಮತದಾರರಿಗೆ ಎದುರಾಗುವ ಅಡಚಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸುಮಾರು 70 ಲಕ್ಷ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಯಾಗಿ, ಚುನಾವಣಾ ಆಯೋಗದ ಪರ ವಕೀಲರು ಅಗತ್ಯವಿದ್ದಲ್ಲಿ ಕಾಲಮಿತಿಯನ್ನು ವಿಸ್ತರಿಸುವ ಅಧಿಕಾರ ಆಯೋಗಕ್ಕಿದೆ ಎಂದು ತಿಳಿಸಿದರು. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ರಾಜ್ಯ ಸರ್ಕಾರವು ಜನರ ಹಿತದೃಷ್ಟಿಯಿಂದ ಆಯೋಗಕ್ಕೆ ಸಲಹೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ವಿಚಾರಣೆ ಅಂತ್ಯದಲ್ಲಿ, ಅರ್ಜಿದಾರರ ವಾದಗಳಿಗೆ ಪ್ರತಿಕ್ರಿಯಿಸಿದ ಪೀಠ, “ಈ ಹಂತದಲ್ಲಿ ಎಲ್ಲವನ್ನೂ ಊಹಿಸುವ ಅಗತ್ಯವಿಲ್ಲ” ಎಂದು ನಗೆಯೊಂದಿಗೆ ಅಭಿಪ್ರಾಯಪಟ್ಟಿತು.

ಇದನ್ನೂ ನೋಡಿ: ನೀಟ್ ಅಕ್ರಮ ವಿರೋಧಿಸಿ ರಾಜಭವನ ಚಲೋ: ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಎಸ್‌ಎಫ್‌ಐ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *