ವಿದೇಶಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿಗೆ ಎಸ್‌ಎಫ್‌ಐ ಆಗ್ರಹ

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯಡಿ ವಿದೇಶದಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ವಿದೇಶಿ

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಆರ್ಥಿಕ ನೆರವು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಎಸ್‌ಎಫ್‌ಐ ನಿಯೋಗವು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿತು. ವಿಶೇಷವಾಗಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೀಸಾ ಪ್ರಕ್ರಿಯೆಯಲ್ಲಿ ಎದುರಾಗಿರುವ ಆರ್ಥಿಕ ಪ್ರಾಯೋಜಕತ್ವದ ಸಮಸ್ಯೆಯನ್ನು ನಿಯೋಗವು ಸರ್ಕಾರದ ಗಮನಕ್ಕೆ ತಂದಿತು.

ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಪರ ಕಾರ್ಯದರ್ಶಿ ಮಂಜುನಾಥ ಗೌಡ, ಆಯುಕ್ತರಾದ ರಾಕೇಶ್ ಹಾಗೂ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಮನಗಂಡು ಸಂಶೋಧನೆ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಒಟ್ಟು ₹8 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಹಾಗೂ ಸಚಿವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ :ಕೃಷಿಯಲ್ಲಿ ಎಐ ಬಳಕೆ ರೈತಕೇಂದ್ರಿತವಾಗಿರಲಿ: ತಂತ್ರಜ್ಞಾನಕ್ಕಿಂತ ಮಾನವೀಯತೆ ಮುಖ್ಯ

ವಿದೇಶಿ ಶಿಕ್ಷಣದ ಒಟ್ಟು ವೆಚ್ಚವು ಬೋಧನಾ ಶುಲ್ಕ ಹಾಗೂ ಜೀವನ ನಿರ್ವಹಣಾ ವೆಚ್ಚ ಸೇರಿದಂತೆ ಸುಮಾರು ₹40ರಿಂದ ₹50 ಲಕ್ಷದವರೆಗೆ ತಲುಪುತ್ತಿದ್ದು, ವಿದ್ಯಾರ್ಥಿವೇತನವನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಈ ಮೊತ್ತವನ್ನು ವೈಯಕ್ತಿಕವಾಗಿ ಅಥವಾ ಕುಟುಂಬದ ಮೂಲಕ ಭರಿಸುವುದು ಕಷ್ಟಕರವಾಗಿದೆ ಎಂದು ಎಸ್‌ಎಫ್‌ಐ ಸರ್ಕಾರದ ಗಮನಕ್ಕೆ ತಂದಿದೆ.

ಇದೇ ವೇಳೆ, ಯುನೈಟೆಡ್ ಕಿಂಗ್ಡಮ್‌ನಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ಯುಕೆ ಹೈ ಕಮಿಷನ್‌ರನ್ನು ಭೇಟಿಯಾಗಿ, ವಿದ್ಯಾರ್ಥಿಗಳ ವೀಸಾ ಮತ್ತು ಆರ್ಥಿಕ ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಮನವರಿಕೆ ಮಾಡಲಾಗಿದೆ. ಸಮಸ್ಯೆಯನ್ನು ಇನ್ನೂ ನಾಲ್ಕು ದಿನಗಳೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ವೀಸಾ ಹಾಗೂ ವಿದ್ಯಾರ್ಥಿವೇತನದ ಸಮಸ್ಯೆಯಿಂದಾಗಿ ಅತಂತ್ರವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಪ್ರವೇಶ ಹಾಗೂ ವ್ಯಾಸಂಗಕ್ಕೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.

ಈ ನಿಯೋಗದಲ್ಲಿ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಶಿವಪ್ಪ ಎನ್. ಅಂಬ್ಲಿಕಲ್, SFI UK ನೇಹಾ ಸಿ., ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ. ದೊಡ್ಡಬಸವರಾಜ್, ಸಂಶೋಧನಾರ್ಥಿ ಏಕ್ತಾ, ನವೀನ್, ಪ್ರಶಾಂತ್ ಹಾಗೂ ಉಮೇಶ್ ಉಪಸ್ಥಿತರಿದ್ದರು.

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *