ಫ್ಲೈಓವರ್‌ ಬೈಕ್‌–ಆಟೊಗಳಿಗೆ ಬಂದ್‌: ಸವಾರರ ಆಕ್ರೋಶ, ಸಂಚಾರ ದಟ್ಟಣೆ ಭೀತಿ

ಬೆಂಗಳೂರು: ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಿದ್ದು, ಮೊದಲ ದಿನವೇ ವಾಹನ ಸವಾರರು ಹಾಗೂ ಆಟೊ ಚಾಲಕರಿಂದ ಅಸಮಾಧಾನ ವ್ಯಕ್ತವಾಗಿದೆ. ನಿರ್ಬಂಧದಿಂದ ಪರ್ಯಾಯ ರಸ್ತೆಗಳತ್ತ ವಾಹನಗಳ ಒತ್ತಡ ಹೆಚ್ಚಾಗಿ ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣಿಸುವ ಆತಂಕವನ್ನು ಸವಾರರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರು ಶುಕ್ರವಾರದಿಂದ ಬಿಜಿಎಸ್ ಫ್ಲೈಓವರ್, ಪೀಣ್ಯ ಮೇಲ್ಸೇತುವೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ ಹಾಗೂ ಸಿಲ್ಕ್‌ಬೋರ್ಡ್–ರಾಗಿಗುಡ್ಡ ಡಬಲ್‌ಡೆಕ್ಕರ್ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಇದೇ ರೀತಿಯ ನಿರ್ಬಂಧ ಸೆ.11ರಿಂದ ಜಾರಿಗೆ ಬರಲಿದೆ. ಫ್ಲೈಓವರ್‌

ಯಾವ ವಾಹನಗಳಿಗೆ ನಿರ್ಬಂಧ?

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳು ಮತ್ತು ಪ್ರಯಾಣಿಕ ಆಟೊಗಳಿಗೆ ದಿನದ 24 ಗಂಟೆಯೂ ನಿರ್ಬಂಧ ಹೇರಲಾಗಿದೆ. ಪೀಣ್ಯ ಮೇಲ್ಸೇತುವೆಯಲ್ಲಿ ಪ್ರಯಾಣಿಕ ಆಟೊ ಹಾಗೂ ಮೂರು ಚಕ್ರದ ಸರಕು ವಾಹನಗಳಿಗೆ ನಿರ್ಬಂಧವಿದ್ದು, ಭಾರಿ ಮತ್ತು ಮಧ್ಯಮ ಸರಕು ವಾಹನಗಳ ಸಂಚಾರಕ್ಕೆ ಗರಿಷ್ಠ ಸಂಚಾರದ ಅವಧಿಯಲ್ಲಿ ನಿರ್ಬಂಧವಿದೆ.

ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ಸರಕು ವಾಹನಗಳ ಸಂಚಾರಕ್ಕೆ ದಿನವಿಡೀ ನಿರ್ಬಂಧವಿದ್ದು, ಇತರ ಸರಕು ವಾಹನಗಳಿಗೆ ಬೆಳಿಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧ ವಿಧಿಸಲಾಗಿದೆ. ಸಿಲ್ಕ್‌ಬೋರ್ಡ್–ರಾಗಿಗುಡ್ಡ ಡಬಲ್‌ಡೆಕ್ಕರ್ ಫ್ಲೈಓವರ್‌ನಲ್ಲೂ ಭಾರಿ ಸರಕು ವಾಹನಗಳ ಸಂಚಾರಕ್ಕೆ ದಿನವಿಡೀ ನಿರ್ಬಂಧವಿದೆ.

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಸೆ.11ರಿಂದ ದ್ವಿಚಕ್ರ ವಾಹನ, ಪ್ರಯಾಣಿಕ ಆಟೊ ಹಾಗೂ ಮೂರು ಚಕ್ರದ ಸರಕು ವಾಹನಗಳಿಗೆ ದಿನವಿಡೀ ನಿರ್ಬಂಧ ಜಾರಿಗೆ ಬರಲಿದೆ. ಸರಕು ವಾಹನಗಳ ಸಂಚಾರಕ್ಕೂ ನಿಗದಿತ ಅವಧಿಯಲ್ಲಿ ನಿರ್ಬಂಧ ಇರಲಿದೆ. ಫ್ಲೈಓವರ್‌

ಫ್ಲೈಓವರ್ / ಎಲಿವೇಟೆಡ್ ಕಾರಿಡಾರ್ ನಿರ್ಬಂಧಿತ ವಾಹನಗಳು ನಿರ್ಬಂಧದ ಅವಧಿ
ಬಿಜಿಎಸ್ ಫ್ಲೈಓವರ್ ಭಾರಿ ಸರಕು ವಾಹನಗಳು 24 ಗಂಟೆ
ಇತರೆ ಸರಕು ವಾಹನಗಳು ಬೆಳಗ್ಗೆ 7–11, ಸಂಜೆ 4–ರಾತ್ರಿ 10
ಪೀಣ್ಯ ಎಲಿವೇಟೆಡ್ ಕಾರಿಡಾರ್ ಪ್ರಯಾಣಿಕ ಆಟೊ, 3-ಚಕ್ರ ಸರಕು ಆಟೊ 24 ಗಂಟೆ
ಭಾರಿ ಮತ್ತು ಮಧ್ಯಮ ಸರಕು ವಾಹನಗಳು ಬೆಳಗ್ಗೆ 7–11, ಸಂಜೆ 4–ರಾತ್ರಿ 10
ಸಿಲ್ಕ್‌ಬೋರ್ಡ್–ರಾಗಿಗುಡ್ಡ ಡಬಲ್‌ಡೆಕ್ಕರ್ ಫ್ಲೈಓವರ್ ಭಾರಿ ಸರಕು ವಾಹನಗಳು 24 ಗಂಟೆ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ ದ್ವಿಚಕ್ರ ವಾಹನ, ಪ್ರಯಾಣಿಕ ಆಟೊ 24 ಗಂಟೆ
ಎಲ್ಲ ವರ್ಗದ ಸರಕು ವಾಹನಗಳು ಬೆಳಗ್ಗೆ 6–ರಾತ್ರಿ 10
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ ದ್ವಿಚಕ್ರ ವಾಹನ, ಪ್ರಯಾಣಿಕ ಆಟೊ, 3-ಚಕ್ರ ಸರಕು ಆಟೊ 24 ಗಂಟೆ*
ಭಾರಿ, ಮಧ್ಯಮ ಮತ್ತು ಲಘು ಸರಕು ವಾಹನಗಳು ಬೆಳಗ್ಗೆ 6–ರಾತ್ರಿ 10*

ಇದನ್ನೂ ಓದಿ : ಜಂತರ್‌ ಮಂತರ್‌ ಹಲ್ಲೆ ಪ್ರಕರಣ: ಸ್ವತಂತ್ರ ಭಾರದ್ವಾಜ್‌ ಬಂಧನ

‘ಪರ್ಯಾಯ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಲಿದೆ’

ಫ್ಲೈಓವರ್‌ಗಳ ಬಳಕೆಗೆ ನಿರ್ಬಂಧ ಹೇರಿರುವುದರಿಂದ ಅನಿವಾರ್ಯವಾಗಿ ಕೆಳಗಿನ ರಸ್ತೆಗಳತ್ತ ವಾಹನಗಳು ಹರಿಯಲಿವೆ. ಇದರಿಂದ ಈಗಾಗಲೇ ದಟ್ಟಣೆಯಿಂದ ಬಳಲುತ್ತಿರುವ ರಸ್ತೆಗಳ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ ಎಂಬುದು ವಾಹನ ಸವಾರರ ವಾದ.

ಪ್ರತಿದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರಿಗೆ ಈ ನಿರ್ಬಂಧದಿಂದ ಪ್ರಯಾಣದ ದೂರ ಮತ್ತು ಸಮಯ ಎರಡೂ ಹೆಚ್ಚಾಗಲಿದೆ. ಆಟೊ ಚಾಲಕರೂ ಹೆಚ್ಚುವರಿ ದೂರ ಸಂಚರಿಸಬೇಕಾಗುವುದರಿಂದ ಇಂಧನ ವೆಚ್ಚ ಹಾಗೂ ಪ್ರಯಾಣದ ಅವಧಿ ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಸವಾರರು ಅಪಘಾತ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡಿದ್ದರೂ, ಎಲ್ಲ ದ್ವಿಚಕ್ರ ವಾಹನಗಳಿಗೂ ಒಂದೇ ರೀತಿಯ ನಿರ್ಬಂಧ ವಿಧಿಸುವ ಬದಲು ವಾಹನದ ಸಾಮರ್ಥ್ಯ, ವೇಗ ಹಾಗೂ ಸಂಚಾರ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಫ್ಲೈಓವರ್‌

ಅಪಘಾತ ನಿಯಂತ್ರಣವೇ ಪೊಲೀಸರ ಉದ್ದೇಶ

ಮೇಲ್ಸೇತುವೆಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡುವುದು ಮತ್ತು ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ನಿರ್ಬಂಧದ ಕುರಿತು ವಾಹನ ಸವಾರರಿಗೆ ಮಾಹಿತಿ ನೀಡಲು ಮೇಲ್ಸೇತುವೆಗಳ ಬಳಿ ಫಲಕಗಳನ್ನು ಅಳವಡಿಸಲಾಗಿದ್ದು, ಧ್ವನಿವರ್ಧಕಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

ನಿರ್ಬಂಧ ಜಾರಿಗೆ ತಂದಿರುವ ಮೇಲ್ಸೇತುವೆಗಳಲ್ಲಿ ದಿನದ 24 ಗಂಟೆಯೂ ನಿಯಮ ಪಾಲನೆ ಮಾಡಿಸುವುದು ಪೊಲೀಸರಿಗೆ ಹೆಚ್ಚುವರಿ ಸವಾಲಾಗಿದೆ. ನಿರ್ಬಂಧ ಜಾರಿಗೊಳಿಸಲು ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧದಿಂದ ಸುಮಾರು 20ರಿಂದ 25 ಸಾವಿರ ದಿನನಿತ್ಯದ ಪ್ರಯಾಣಿಕರ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಚರ್ಚೆಯೂ ಆರಂಭವಾಗಿದೆ.

ಹೀಗಾಗಿ, ರಸ್ತೆ ಸುರಕ್ಷತೆಗಾಗಿ ಕೈಗೊಂಡಿರುವ ನಿರ್ಬಂಧಗಳು ನಿಜವಾಗಿಯೂ ಅಪಘಾತ ಕಡಿಮೆ ಮಾಡುವಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿವೆ ಮತ್ತು ಪರ್ಯಾಯ ರಸ್ತೆಗಳ ಮೇಲಿನ ಸಂಚಾರದ ಒತ್ತಡವನ್ನು ಪೊಲೀಸರು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಪ್ರಮುಖ ಪ್ರಶ್ನೆಯಾಗಿದೆ.

ಇದನ್ನೂ ನೋಡಿ : ತೀವ್ರ ಬಲಪಂಥೀಯವಾದಿ ಸ್ವತಂತ್ರ ಭಾರದ್ವಾಜ್ ಬಹಿರಂಗಗೊಳಿಸಿದ ಘೋರ ವಾಸ್ತವಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *