ಬಳ್ಳಾರಿ: ದೆಹಲಿ ಜಂತರ್ ಮಂತರ್ ನಡೆಯುತ್ತಿರುವ ಹೋರಾಟದಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ನಿರಂತರಾಗಿರುವ ಸೋನಂ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳ ಜೀವ ರಕ್ಷಣೆಗೆ ತುರ್ತು ಮಧ್ಯೆಪ್ರವೇಶಿಸಿ, ಪರೀಕ್ಷಾ ಅಕ್ರಮಗಳ ಕುರಿತು ಹೊಣೆಗಾರಿಕೆ ಸಂಪೂರ್ಣ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವುದು ಮತ್ತು ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ದಲಿತ ಯುವಕರ ಸಂಘ, DSS, SFI, ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.
ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆ ವೈಫಲ್ಯ, ಅಕ್ರಮ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತೀರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಯುವಜನರ ಮೇಲಿನ ಕ್ರೂರ ಲಾಠಿ ಚಾರ್ಚ್ ಖಂಡಿಸಿ ದೇಶ ವಿಖ್ಯಾತ ಪರಿಸರ, ಶಿಕ್ಷಣ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಾರರಾದ ಶ್ರೀ ಸೋನಂ ವಾಂಗ್ಚುಕ್ ಮತ್ತು ಹಲವಾರು ವಿದ್ಯಾರ್ಥಿಗಳು ಹಾಗೂ ಯುವಜನರು ಕಳೆದ 24 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ತಾವುಗಳು ಕೂಡಲೇ ಮಧ್ಯೆಪ್ರವೇಶಿಸಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ. ಧರ್ಮೇಂದ್ರ
ಈ ಉಪವಾಸ ಸತ್ಯಾಗ್ರಹವು, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯಲ್ಲಿನ ವೈಫಲ್ಯಗಳು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಅನುಭವಿಸಿದ ಸಂಕಷ್ಟಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಒತ್ತಾಯಿಸುತ್ತಿದೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ, ಪರೀಕ್ಷಾ ಬಿಕ್ಕಟ್ಟಿನ ಪರಿಣಾಮವಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ನೀಡುವಂತೆಯೂ ಆಗ್ರಹಿಸುತ್ತಿರುವುದು ನ್ಯಾಯಬದ್ದವಾಗಿದೆ. ಧರ್ಮೇಂದ್ರ
ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಎಸ್ಎಫ್ಐ ಪ್ರತಿಭಟನೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ
ಹೋರಾಟಗಾರರ ಈ ಬೇಡಿಕೆಗಳು ಯಾವುದೇ ಪಕ್ಷಪಾತದ ಅಥವಾ ವೈಯಕ್ತಿಕ ಉದ್ದೇಶಗಳಿಂದ ಕೂಡಿಲ್ಲ. ಅವು ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ, ಸಮಾನ ಅವಕಾಶ, ಸಂಸ್ಥೆಗಳ ಹೊಣೆಗಾರಿಕೆ ಹಾಗೂ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರ ಪ್ರಶ್ನೆಗಳಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಪ್ರಗತಿಗೆ ದಾರಿ ಮಾಡಿಕೊಡುತ್ತವೆ. ಅವುಗಳ ವಿಶ್ವಾಸಾರ್ಹತೆ ಕುಸಿದಾಗ ಅದರ ತೀವ್ರ ಪರಿಣಾಮ ಬಡವರು, ಗ್ರಾಮೀಣ ಪ್ರದೇಶದವರು, ಅಂಚಿನ ಸಮುದಾಯಗಳು ಹಾಗೂ ಮೊದಲ ತಲೆಮಾರಿನ ವಿದ್ಯಾರ್ಥಿಗಳ ಮೇಲೆ ಬೀಳುತ್ತದೆ.
ಸೋನಂ ವಾಂಗ್ಚುಕ್ ಹಾಗೂ ಇತರ ಉಪವಾಸ ನಿರತರ ಆರೋಗ್ಯವು ಗಂಭೀರವಾಗಿ ಹದಗೆಟ್ಟಿದೆ ಎಂಬ ವರದಿಗಳು ನಮಗೆ ತೀವ್ರ ಆತಂಕ ಉಂಟುಮಾಡಿವೆ. ದೀರ್ಘಕಾಲದ ಉಪವಾಸವು ಅವರ ಜೀವಕ್ಕೆ ತಕ್ಷಣದ ಅಪಾಯವನ್ನು ಉಂಟುಮಾಡಬಹುದು. ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ಮೌನವು ಮುಂದುವರಿದಿರುವುದು ನಾಚಿಕೆಗೇಡು! ಪ್ರಜಾಪ್ರಭುತ್ವದ ಹಕ್ಕುಗಳನ್ನು ಶಾಂತಿಯುತವಾಗಿ ಚಲಾಯಿಸುತ್ತಿರುವ ನಾಗರಿಕರ ಜೀವ ಅಪಾಯದಲ್ಲಿರುವಾಗ ಸರ್ಕಾರವು ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯುದನ್ನು ಸಹಿಸುವುದು ಸಾಧ್ಯವಿಲ್ಲ.
ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕನ್ನು ಖಾತರಿಪಡಿಸುತ್ತದೆ ಹಾಗೂ ಮಾನವ ಜೀವವನ್ನು ರಕ್ಷಿಸುವ ಧನಾತ್ಮಕ ಹೊಣೆಗಾರಿಕೆಯನ್ನು ರಾಜ್ಯದ ಮೇಲೆ ವಿಧಿಸುತ್ತದೆ. 19ನೇ ವಿಧಿಯು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಯ ಹಕ್ಕುಗಳು ಸರ್ಕಾರದ ನಿರ್ಲಕ್ಷ್ಯದಿಂದ ಅರ್ಥಹೀನವಾಗಬಾರದು. ಶಾಂತಿಯುತ ಸತ್ಯಾಗ್ರಹವು ಭಾರತದ ಸಂವಿಧಾನಾತ್ಮಕ ಮತ್ತು ರಾಜಕೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಅದನ್ನು ಮೌನ, ಬಲಪ್ರಯೋಗ, ಬಲವಂತದ ತೆರವು ಅಥವಾ ಅಪರಾಧೀಕರಣದ ಮೂಲಕ ಎದುರಿಸುವುದು ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳಿಗೆ ವಿರುದ್ಧವಾಗಿರುತ್ತದೆ.
ಪ್ರತಿಭಟನಾಕಾರರು ಕೇಳುತ್ತಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯು ಮೂಲತಃ ಸಚಿವರ ಹೊಣೆಗಾರಿಕೆಯ ಸಂಪೂರ್ಣ ವೈಫಲ್ಯದ ಬೇಡಿಕೆಯಾಗಿದೆ. ಸಂಸದಿಯ ಪ್ರಜಾಪ್ರಭುತ್ವದಲ್ಲಿ, ಪದೇ ಪದೇ ಸಂಭವಿಸುವ ಹಾಗೂ ಕೋಟ್ಯಂತರ ಜನರ ಜೀವನದ ಮೇಲೆ ಕರಾಳ ಪರಿಣಾಮ ಬೀರುವ ವ್ಯವಸ್ಥೆಯ ವೈಫಲ್ಯಗಳಿಗೆ ಕೇವಲ ಅಧೀನ ಅಧಿಕಾರಿಗಳು ಅಥವಾ ಪರೀಕ್ಷಾ ಸಂಸ್ಥೆಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಸರಕಾರ ನಡೆಸುತ್ತಿರುವವರ ಆತ್ಮ ವಂಚನೆಯ ನಡೆಯಾಗುತ್ತದೆ.
ಆಡಳಿತಾತ್ಮಕ ಮತ್ತು ರಾಜಕೀಯ ಹೊಣೆಗಾರಿಕೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕ ಪ್ರಕ್ರಿಯೆಯ ಮೂಲಕ ನಿರ್ಧರಿಸುವಂತಾಬೇಕು. ಈ ಪರೀಕ್ಷಾ ಬಿಕ್ಕಟ್ಟು ಒಂದು ಪರೀಕ್ಷೆಯ ರದ್ದತಿ ಅಥವಾ ಮುಂದೂಡಿಕೆಗೆ ಮಾತ್ರ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಆತಂಕ, ಆರ್ಥಿಕ ನಷ್ಟ, ಶೈಕ್ಷಣಿಕ ವರ್ಷಗಳ ನಷ್ಟ, ಮಾನಸಿಕ ಆಘಾತ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲಿನ ನಂಬಿಕೆಯ ಕುಸಿತಕ್ಕೆ ಕಾರಣವಾಗಿದೆ. ಪರೀಕ್ಷಾ ಒತ್ತಡ ಮತ್ತು ಆಡಳಿತಾತ್ಮಕ ವೈಫಲ್ಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ವರದಿಗಳು ತ್ವರಿತ ನ್ಯಾಯ ಹಾಗೂ ಮಾನವೀಯ ಸ್ಪಂದನೆಯನ್ನು ಕೋರುತ್ತವೆ.
ಅದೇ ರೀತಿ, ನ್ಯಾಯಯುತವಾದ ಬೇಡಿಕೆಗಳ ಕುರಿತು ಪ್ರತಿಭಟನಾಕಾರರೊಂದಿಗೆ ಕಾಲಮಿತಿಯೊಳಗೆ ಜವಾಬ್ದಾರಿಯಿಂದ ಸಂವಾದ ನಡೆಸಲು ಸರ್ಕಾರ ವಿಫಲವಾಗಿರುವುದು ದೇಶದ ಯುವಜನತೆಗೆ ಅತ್ಯಂತ ನಿರಾಶಾದಾಯಕ ಮತ್ತು ಹತಾಸೆಯ ಸಂದೇಶವನ್ನು ನೀಡುತ್ತಿದೆ. ಶಾಂತಿಯುತ ಹಾಗೂ ಸಂವಿಧಾನಾತ್ಮಕ ಮಾರ್ಗಗಳನ್ನು ಅನುಸರಿಸುವ ನಾಗರಿಕರ ಧ್ವನಿಗೆ ಸ್ಪಂದಿಸದಿರುವುದು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಕುಗ್ಗಿಸಬಹುದು.
ಇಂತಹ ನ್ಯಾಯಸಮ್ಮತ ಸಾರ್ವಜನಿಕ ಬೇಡಿಕೆಗಳ ಕುರಿತಂತೆ ಕೇಂದ್ರ ಬಿಜೆಪಿ ಸರ್ಕಾರದ ದಿವ್ಯ ನಿರ್ಲಕ್ಷ್ಯವು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು, ಅಪಖ್ಯಾತಿಗೊಳಿಸಲು ಅಥವಾ ಬಲವಂತವಾಗಿ ಚದುರಿಸಲು ಮಾಡುವ ಪ್ರಯತ್ನಗಳು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಮತ್ತಷ್ಟು ದೂರ ಮಾಡಬಹುದು. ಇದು ಪ್ರಜಾಪ್ರಭುತ್ವಕ್ಕಷ್ಟೇ ಅಲ್ಲ, ದೇಶದ ಏಕತೆ, ಸಾಮಾಜಿಕ ಸ್ಥಿರತೆ ಹಾಗೂ ಅಖಂಡತೆಗೆ ಸಹ ಹಾನಿಕಾರಕವಾಗಿದೆ.
ಆದ್ದರಿಂದ ರಾಷ್ಟ್ರದ ಮುಖ್ಯಸ್ಥರೂ ಹಾಗೂ ಸಂವಿಧಾನದ ನೈತಿಕ ಸಂರಕ್ಷಕರಾಗಿರುವ ತಾವು, ಈ ನಿರ್ಣಾಯಕ ಸಂದರ್ಭದಲ್ಲಿ ತಮ್ಮ ಮಧ್ಯೆಪ್ರವೇಶವು, ಒಂದು ಮಾನವೀಯ ದುರಂತವನ್ನು ತಡೆಯಲು ಹಾಗೂ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ನೆರವಾಗಬಹುದು. ಹಾಗಾಗಿ, ತಮ್ಮ ಸಂವಿಧಾನಾತ್ಮಕ ಮತ್ತು ನೈತಿಕ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ವಿದ್ಯಾರ್ಥಿ ಯುವಜನರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು..
ಈ ಸಂದರ್ಭದಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಹೆಚ್. ಸ್ವಾಮಿ ತಾಲೂಕು ಕಾರ್ಯದರ್ಶಿ ನಾಗಭೂಷಣ ಗ್ರಾಮ ಘಟಕದ ಹೆಚ್. ಶಂಕರ್ ಕರಿಯಪ್ಪ, ದೇವದಾಸಿ ವಿಮೋಚನ ಸಂಘಟನೆಯ ಏ ಸ್ವಾಮಿ ವಿದ್ಯಾರ್ಥಿ ಯುವಜನ ಮುಖಂಡರಾದ ಮಂಜುನಾಥ್, ಮಹೇಶ್ , ಹುಲಿಗೇಶ್ , ಹರೀಶ್, ಮಲ್ಲಿಕಾರ್ಜುನ, ಶ್ರಾವಣಿ, ಎನ್ . ಸಂಗೀತ , ಸಿಂಚನ, ಯು ಸಂಗೀತ , ಸಿಂಧು , ಸ್ನೇಹ , ಸ್ವಪ್ನ, ಅಸ್ಮಿತ, ವಿನೋದ, ಪುರುಷೋತ್ತಮ್, ರವಿಕಿರಣ್, ದರ್ಶನ್ ಇತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
