ಪ್ರಧಾನ್ ರಾಜೀನಾಮೆ ಬಳಿಕವೂ ಹೋರಾಟ ಮುಂದುವರಿಕೆ: ಶಿಕ್ಷಣ ಸುಧಾರಣೆಗಳಿಗೆ ಆಗ್ರಹ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬಳಿಕ, ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಜುಲೈ 25ರಂದು, ನಾಯಕತ್ವದ ಬದಲಾವಣೆ ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆಗಳಿಗೂ ಕಾರಣವಾಗಬೇಕು ಎಂದು ಹೇಳಿದರು.

ಪ್ರಧಾನ್ ಅವರ ನಿರ್ಗಮನವನ್ನು ಸ್ವಾಗತಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳು ಕೇವಲ ಸಚಿವರ ಬದಲಾವಣೆಗೆ ಸೀಮಿತವಲ್ಲ ಎಂದು ಒತ್ತಿಹೇಳಿದರು. ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ಎಲ್ಲರಿಗೂ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣ, ಬಲಿಷ್ಠ ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆ ಆರಂಭವಾದಾಗಿನಿಂದಲೇ ಸುಮಾರು ಒಂದು ತಿಂಗಳಿಂದ ಧರಣಿಯಲ್ಲಿ ಭಾಗಿಯಾಗಿರುವ ಗಾಜಿಯಾಬಾದ್‌ನ ರಾಜ್ ಯಾದವ್, ಹೊಸ ಸಚಿವರು ಸಮಗ್ರ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 36 ದಿನಗಳ CJP ಪ್ರತಿಭಟನೆ ಅಂತ್ಯ: ಬೇಡಿಕೆಗಳಿಗೆ ಕೇಂದ್ರ ಒಪ್ಪಿಗೆ

“ಹೊಸ ಸಚಿವರು ಶಿಕ್ಷಣ ವ್ಯವಸ್ಥೆಯ ಮೇಲೆಯೇ ಗಮನ ಕೇಂದ್ರೀಕರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಅವರು ಸಂಪೂರ್ಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ಅದರ ದೋಷಗಳನ್ನು ಸರಿಪಡಿಸಬೇಕು ಮತ್ತು ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು,” ಎಂದು ಅವರು ಹೇಳಿದರು.

ದೆಹಲಿ ಲಕ್ಸ್ಮಿ ನಗರದ ನಿವಾಸಿ ಸೃಷ್ಠಿ, ಶಿಕ್ಷಣದ ವೆಚ್ಚ ಹೆಚ್ಚುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಓದು ಮುಂದುವರಿಸುವುದು ದಿನೇದಿನೇ ಕಷ್ಟವಾಗುತ್ತಿದೆ ಎಂದು ಹೇಳಿದರು.

ತಾವು ತಮ್ಮ ಶಿಕ್ಷಣ ವೆಚ್ಚವನ್ನು ತಾವೇ ಕೆಲಸ ಮಾಡಿ ಭರಿಸುತ್ತಿರುವುದಾಗಿ ಹೇಳಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಗಳು ಆಕಾಂಕ್ಷಿಗಳಿಗೆ ವಿನಾಶಕಾರಿ ಪರಿಣಾಮ ಉಂಟುಮಾಡುತ್ತವೆ ಎಂದರು.

ಹೊಸ ಸಚಿವರು ಸಾಕಷ್ಟು ಶಿಕ್ಷಕರ ನೇಮಕಾತಿ ಮಾಡಬೇಕು, ಶಿಕ್ಷಣವನ್ನು ಹೆಚ್ಚು ಕೈಗೆಟುಕುವಂತೆ ಮಾಡಬೇಕು ಮತ್ತು ಸರ್ಕಾರಿ ಶಾಲೆಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ರಾಜಸ್ಥಾನದ ವಿದ್ಯಾರ್ಥಿ ವಿಕ್ರಂ ಚೌಧರಿ, ಸುಮಾರು ಎರಡು ವಾರಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವವರು, ಸುಧಾರಣೆಗಳು ಪ್ರಾಥಮಿಕ ಶಾಲಾ ಮಟ್ಟದಿಂದಲೇ ಆರಂಭವಾಗಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು, ಶಿಕ್ಷಣ ಬಜೆಟ್ ಹೆಚ್ಚಿಸುವುದು, ಮತ್ತು UPSC, NEET ಹಾಗೂ JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಅಗತ್ಯ ಎಂದು ಅವರು ಹೇಳಿದರು.

“ಈ ದೇಶದಲ್ಲಿ ಶಿಕ್ಷಣ ತುಂಬಾ ದುಬಾರಿಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದು ಚೌಧರಿ ಹೇಳಿದರು.

NEETಗಾಗಿ ತಯಾರಿ ನಡೆಸುತ್ತಿರುವ 11ನೇ ತರಗತಿಯ ವಿದ್ಯಾರ್ಥಿ ಶೌರ್ಯ, ಪ್ರಧಾನ್ ಅವರ ರಾಜೀನಾಮೆಯಿಂದ ವ್ಯವಸ್ಥೆಯ ಮೇಲಿನ ತನ್ನ ನಂಬಿಕೆ ಮತ್ತೆ ಬಲಗೊಂಡಿದೆ ಎಂದು ಹೇಳಿದರು.

“ನಮ್ಮ ಧ್ವನಿ ಕೇಳಲಾಗಿದೆ ಎಂಬುದಕ್ಕೆ ನಾನು ಸಂತೋಷವಾಗಿದ್ದೇನೆ. ಹೊಸ ಶಿಕ್ಷಣ ಸಚಿವರು ಮುಂದೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ಮತ್ತೆ ನಡೆಯಲು ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ,” ಎಂದು ಅವರು PTIಗೆ ಹೇಳಿದರು.

ರಾಜಸ್ಥಾನದ ಜೈಸಲ್ಮೇರ್‌ನ ಶ್ರವಣ ಕುಮಾರ್, ಆಡಳಿತ ವೈಫಲ್ಯಗಳ ಕಾರಣದಿಂದ ವಿದ್ಯಾರ್ಥಿಗಳನ್ನು ಮರುಮರು ಪರೀಕ್ಷೆಗಳಿಗೆ ಹಾಜರಾಗುವಂತೆ ಮಾಡಬಾರದು ಎಂದು ಹೇಳಿ, ದೂರದ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ

Donate Janashakthi Media

Leave a Reply

Your email address will not be published. Required fields are marked *