ನವದೆಹಲಿ: ಚೈಲ್ಡ್ ಪ್ರೊಟೆಕ್ಷನ್ ಮಾಸದ ಅಂಗವಾಗಿ ಕೈಗೊಂಡ ನಗರವ್ಯಾಪಿ ಪರಿಶೀಲನಾ ಅಭಿಯಾನದಲ್ಲಿ, ದೆಹಲಿಯ 774 ಶಾಲೆಗಳಲ್ಲಿ ಸುರಕ್ಷತಾ ಸಂಬಂಧಿತ ಕೊರತೆಗಳು ಪತ್ತೆಯಾಗಿವೆ. ಇದರಲ್ಲಿ ಖಾಸಗಿ ಶಾಲೆಗಳ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಜುಲೈ 26ರಂದು ತಿಳಿಸಿದ್ದಾರೆ.
ಜುಲೈ 13ರಿಂದ 24ರವರೆಗೆ ಒಟ್ಟು 1,677 ಶಾಲೆಗಳ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR), ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (DCPCR) ಮಾರ್ಗಸೂಚಿಗಳು ಹಾಗೂ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯಿದೆ (POCSO) ಅನ್ವಯ ತಯಾರಿಸಲಾದ ‘ವಿದ್ಯಾರ್ಥಿ ಸುರಕ್ಷತಾ ಚೆಕ್‌ಲಿಸ್ಟ್’ ಆಧಾರದ ಮೇಲೆ ಈ ಪರಿಶೀಲನೆ ನಡೆಯಿತು.
ಸುರಕ್ಷತಾ ಕೊರತೆ ಕಂಡುಬಂದ ಶಾಲೆಗಳನ್ನು ತಿದ್ದುಪಡಿ ಕ್ರಮಗಳಿಗಾಗಿ ಫಾಲೋ-ಅಪ್‌ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ – ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು
ಜುಲೈ 6ರಂದು ನಡೆದ ವಿಮರ್ಶಾ ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ತರಂಜೀತ್ ಸಿಂಗ್ ಸಂಧು ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ನೀಡಿದ ನಿರ್ದೇಶನದ ಮೇರೆಗೆ ಈ ಅಭಿಯಾನ ಆರಂಭಿಸಲಾಗಿದೆ. ರಾಜಧಾನಿಯ ಎಲ್ಲಾ ಶಾಲೆಗಳಲ್ಲಿ ಚೈಲ್ಡ್ ಪ್ರೊಟೆಕ್ಷನ್ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಹಾಗೂ ಸಮಯಬದ್ಧವಾಗಿ ಜಾರಿಗೊಳಿಸಲು ಅವರು ಸೂಚಿಸಿದ್ದರು.
ಈ ಪರಿಶೀಲನೆ ಸರ್ಕಾರ, ಸರ್ಕಾರ ನೆರವು, ಎಂಸಿಡಿ, ಎನ್‌ಡಿಎಂಸಿ, ದೆಹಲಿ ಕ್ಯಾಂಟೋನ್ಮೆಂಟ್ ಬೋರ್ಡ್ ಹಾಗೂ ಖಾಸಗಿ ಶಾಲೆಗಳನ್ನು ಒಳಗೊಂಡಿದೆ.
ಪರಿಶೀಲನೆಗೊಂಡ 1,677 ಶಾಲೆಗಳಲ್ಲಿ 790 ಸರ್ಕಾರ ಶಾಲೆಗಳು, 812 ಖಾಸಗಿ ಶಾಲೆಗಳು ಹಾಗೂ 75 ಸರ್ಕಾರ ನೆರವು ಶಾಲೆಗಳಾಗಿವೆ. ಇದರಲ್ಲಿ 270 ಸರ್ಕಾರ ಶಾಲೆಗಳು, 463 ಖಾಸಗಿ ಶಾಲೆಗಳು ಮತ್ತು 41 ನೆರವು ಶಾಲೆಗಳಲ್ಲಿ ಸುರಕ್ಷತಾ ಕೊರತೆಗಳು ಪತ್ತೆಯಾಗಿವೆ.
ಪರಿಶೀಲಿಸಲಾದ ಸಂಖ್ಯೆಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ಅತಿಯಾಗಿ ಕೊರತೆಗಳು ಕಂಡುಬಂದಿದ್ದು, ಅವುಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪೋಷಕರ ಪ್ರತಿನಿಧಿಗಳು, ಶಿಕ್ಷಣ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೆಹಲಿ ಪೊಲೀಸ್ ಹಾಗೂ ಶಾಲಾ ಮುಖ್ಯಸ್ಥರನ್ನು ಒಳಗೊಂಡ ತಂಡಗಳು ಪರಿಶೀಲನೆ ನಡೆಸುತ್ತಿವೆ.
ಈ ತಂಡಗಳು ಸುರಕ್ಷತಾ ಚೆಕ್‌ಲಿಸ್ಟ್ ಆಧಾರದಲ್ಲಿ ಶಾಲೆಗಳನ್ನು ಮೌಲ್ಯಮಾಪನ ಮಾಡಿ ತಕ್ಷಣ ಗಮನ ಹರಿಸಬೇಕಾದ ಕೊರತೆಗಳನ್ನು ಗುರುತಿಸುತ್ತಿವೆ.
ಕೊರತೆ ಕಂಡುಬಂದ ಶಾಲೆಗಳಿಗೆ ತಿದ್ದುಪಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, ನಂತರ ನಿಯಮಾನುಸಾರ ಅನುಸರಣೆ ನಡೆಯುತ್ತಿರುವುದನ್ನು ಪರಿಶೀಲಿಸಲಾಗುತ್ತದೆ. ಇದನ್ನು ‘ಒಮ್ಮೆ ಮಾಡುವ ವಿಧಿ’ ಎಂದು ನೋಡದೇ ನಿರಂತರ ಪ್ರಕ್ರಿಯೆಯಾಗಿ ಮುಂದುವರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಪರಿಶೀಲನಾ ಅಭಿಯಾನ ದೆಹಲಿಯ ಎಲ್ಲಾ 5,633 ಶಾಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಮುಂದುವರಿಯಲಿದೆ.
ಶಾಲಾ ಕಾರ್ಯಾಚರಣೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಶಾಶ್ವತ ಅಂಶವಾಗಿ ರೂಪಿಸುವುದು ಹಾಗೂ ಭದ್ರತೆ, ಹೊಣೆಗಾರಿಕೆ ಮತ್ತು ಸಿದ್ಧತೆಯ ಸಂಸ್ಕೃತಿಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.
ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ
