ನವದೆಹಲಿ: ಕೆಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುತ್ತ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಜೂನ್ 5ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ಅಂಗೀಕರಿಸಿದೆ.
ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಅಣ್ಣಾಮಲೈ, ಬಿಜೆಪಿ ಹಿರಿಯ ನಾಯಕರಾದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ್ದರು. ಈ ಸಭೆಗಳಲ್ಲಿ ತಮಿಳುನಾಡಿನಲ್ಲಿ ಪಕ್ಷದ ಕಾರ್ಯವೈಖರಿ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ.
ಅವರ ರಾಜೀನಾಮೆ ಕುರಿತು ಹಲವು ದಿನಗಳಿಂದ ವರದಿಗಳು ಹರಿದಾಡುತ್ತಿದ್ದರೂ, ಶುಕ್ರವಾರ ಬಿಜೆಪಿ ನೀಡಿದ ಅಧಿಕೃತ ದೃಢೀಕರಣದಿಂದ ಅವರ ರಾಜಕೀಯ ಭವಿಷ್ಯದ ಕುರಿತು ಇದ್ದ ಅನಿಶ್ಚಿತತೆಗೆ ತೆರೆ ಬಿದ್ದಿದೆ.
ಇದನ್ನೂ ಓದಿ: ರಾಜ್ಯಸಭೆ ಸ್ಥಾನ ಕಾಂಗ್ರೆಸ್‌ಗೆ: ಟಿವಿಕೆ ಮುಖ್ಯಸ್ಥ ವಿಜಯ್ ಘೋಷಣೆ
ಅಣ್ಣಾಮಲೈ ಅವರು ಜೂನ್ 5ರ ಮಧ್ಯಾಹ್ನ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದ್ದು, ತಮ್ಮ ರಾಜೀನಾಮೆಗೆ ಕಾರಣವಾದ ಸಂದರ್ಭಗಳ ಬಗ್ಗೆ ವಿವರಿಸುವ ಸಾಧ್ಯತೆಯಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ನಾಳೆ ಮಧ್ಯಾಹ್ನ 12 ಗಂಟೆಗೆ ನಿಮ್ಮೆಲ್ಲರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂವಾದ ನಡೆಸಲು ಕಾತರವಾಗಿದ್ದೇನೆ. ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ಹೃದಯಸ್ಪರ್ಶಿ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.
ರಾಜೀನಾಮೆ ನೀಡಿದರೂ, ಅಣ್ಣಾಮಲೈ ಅವರ ಸಲಹೆಗಳು ಮತ್ತು ಅಸಮಾಧಾನಗಳನ್ನು ಪರಿಗಣಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರು ಎತ್ತಿದ ವಿಷಯಗಳು ಆಂತರಿಕವಾಗಿದ್ದು, ಪಕ್ಷದೊಳಗೇ ಪರಿಹರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಅಣ್ಣಾಮಲೈ ನಿರ್ಗಮನದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಕ್ಷದ ಒಳವಲಯಗಳು ಸ್ಪಷ್ಟಪಡಿಸಿವೆ. ತಮಿಳುನಾಡಿನಲ್ಲಿ ಬಿಜೆಪಿಯ ಸಂಘಟನೆ ಹಾಗೂ ಮೈತ್ರಿ ಸಮೀಕರಣಗಳ ಮೇಲೆ ಇದರ ಪರಿಣಾಮ ಇರುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ, ತಮಿಳುನಾಡಿನಲ್ಲಿ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಬಿಜೆಪಿ ಆಶಾವಾದಿಯಾಗಿದ್ದು, ನಾಯಕತ್ವ ಬದಲಾವಣೆಯ ನಡುವೆಯೂ ಪಕ್ಷದ ಸಂಘಟನೆ ಮತ್ತು ಮೈತ್ರಿ ಬದ್ಧತೆಗಳು ಸುಗಮವಾಗಿ ಮುಂದುವರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ನೋಡಿ: ಸಾಮಾಜಿಕ ನ್ಯಾಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ – ಕೆ.ನೀಲಾ Janashakthi Media
