ನೀಲಕುರಿಂಜಿ ನೋಡಲು ಕುದುರೆಮುಖಕ್ಕೆ ದಂಡು: ಟ್ರೆಕ್ಕರ್‌ಗಳಿಗೆ ಅರಣ್ಯ ಇಲಾಖೆ ಖಡಕ್‌ ರೂಲ್ಸ್‌!

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿವಿಧ ಚಾರಣ ಮಾರ್ಗಗಳಲ್ಲಿ ಅಪರೂಪದ ನೀಲಕುರಿಂಜಿ ಹೂವುಗಳು ಅರಳಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಆಸಕ್ತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕುದುರೆಮುಖವನ್ನು ಪ್ರಕೃತಿ ಹಾಗೂ ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿಚಯಿಸಲು ಮುಂದಾಗಿದ್ದರೂ, ಅರಣ್ಯ ಇಲಾಖೆ ಚಾರಣಿಗರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುರಿಂಜಲ್‌ ಶಿಖರ, ಗಂಗಾಡಿಕಲ್‌, ನೇತ್ರಾವತಿ ಹಾಗೂ ಕುದುರೆಮುಖ ಚಾರಣ ಮಾರ್ಗಗಳಲ್ಲಿ ನೀಲಕುರಿಂಜಿ ಹೂವುಗಳು ಅರಳಿವೆ. ಅಪರೂಪದ ನೀಲಿ-ನೇರಳೆ ಬಣ್ಣದ ಹೂವುಗಳ ಅರಳುವಿಕೆ ಪ್ರವಾಸಿಗರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.

ನೀಲಕುರಿಂಜಿ ಸೇರಿದಂತೆ ಅಪರೂಪದ ಸಸ್ಯವರ್ಗ ಮತ್ತು ಅವುಗಳ ಪರಿಸರ ಮಹತ್ವದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದರ ಜೊತೆಗೆ, ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸೂಚಿಸಿದೆ. ಪ್ರಕೃತಿ ತಾಣಗಳಿಗೆ ಭೇಟಿ ನೀಡುವವರು ಜವಾಬ್ದಾರಿಯುತ ಪ್ರವಾಸೋದ್ಯಮದ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್‌ ಪ್ರಸಾದ್‌ ಮನೋಹರ್‌ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಪ್ರಕಾರ, ಕುದುರೆಮುಖದ ನಾಲ್ಕೂ ಚಾರಣ ಮಾರ್ಗಗಳು ಸದ್ಯ ಪ್ರವಾಸಿಗರಿಗೆ ಮುಕ್ತವಾಗಿವೆ. ಆದರೆ ಅರಣ್ಯ ಇಲಾಖೆಯ ‘ಅರಣ್ಯ ವಿಹಾರ’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕವಷ್ಟೇ ಚಾರಣಕ್ಕೆ ಅವಕಾಶವಿದೆ. ನೀಲಕುರಿಂಜಿ ಹೂವುಗಳನ್ನು ವೀಕ್ಷಿಸಲು ಯಾವುದೇ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ನೇಪಾಳದಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 987ಕ್ಕೆ ಏರಿಕೆ, ಸಾವಿರಾರು ಮಂದಿ ನಾಪತ್ತೆ

ಆದರೆ ಚಾರಣ ಮಾರ್ಗಗಳ ಪರಿಸರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರ ಸಂಖ್ಯೆಗೆ ಕಟ್ಟುನಿಟ್ಟಿನ ಮಿತಿ ವಿಧಿಸಲಾಗಿದೆ. ಏಪ್ರಿಲ್‌ 9ರಂದು ಜಾರಿಗೊಳಿಸಲಾದ ಚಾರಣದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪ್ರಕಾರ ಮಾರ್ಗಗಳಲ್ಲಿನ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನೀಲಕುರಿಂಜಿ ಅರಳಿರುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇರುವುದರಿಂದ ಹೂವುಗಳು ಹಾಗೂ ಅವುಗಳ ಆವಾಸಸ್ಥಾನಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅನಿಯಂತ್ರಿತ ಪ್ರವಾಸೋದ್ಯಮದಿಂದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅರಣ್ಯ ಇಲಾಖೆಯ ಉದ್ದೇಶವಾಗಿದೆ.

ಇದನ್ನೂ ನೋಡಿ : ಸಾಮೂಹಿಕ ಮತ ಕಗ್ಗೊಲೆ ನಡೆಸುತ್ತಿರುವ SIR ವಿರುದ್ಧ ಚುನಾವಣಾ ಆಯೋಗ ಚಲೋ ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *