ಮಳೆ ದುರಂತದ ನಡುವೆ ಸಿಎಂ ಭೇಟಿ ವಿವಾದ: ಸಿಪಿಐ(ಎಂ) ಟೀಕೆ

ತಿರುವನಂತಪುರಂ: ಸಿಪಿಐ(ಎಂ) ರಾಜ್ಯಸಭಾ ಸಂಸದ ಎ.ಎ. ರಹೀಮ್ ಮತ್ತು ಮಾಜಿ ಶಾಸಕ ವಿ.ಕೆ. ಪ್ರಸಾಂತ್ ಅವರು ಆಗಸ್ಟ್‌ 2ರಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಜ್ಯದಾದ್ಯಂತ ಭಾರಿ ಮಳೆಯಿಂದ ಉಂಟಾದ ದುರಂತದಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ, ಮಲಪ್ಪುರಂ ಜಿಲ್ಲೆಯ ಯೂತ್ ಲೀಗ್ ನಾಯಕನ ಮನೆಯನ್ನು ಭೇಟಿ ಮಾಡಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ. ಮಳೆ

ಫೇಸ್‌ಬುಕ್ ಪೋಸ್ಟ್‌ನಲ್ಲಿ ರಹೀಮ್, ಪೊನ್ನಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿರುವ ದೃಶ್ಯಗಳನ್ನು ಹಂಚಿಕೊಂಡು, ಮೊದಲು ಅದನ್ನು ನಂಬಲಿಲ್ಲ, ನಂತರ ಅದು ನಿಜ ಎಂದು ದೃಢಪಟ್ಟಿತು ಎಂದು ಹೇಳಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಜನರು ಸಂಕಷ್ಟ ಅನುಭವಿಸುತ್ತಿರುವಾಗ, ಸತೀಶನ್ ಅವರು ಪೊನ್ನಾನಿಯಲ್ಲಿ ಯೂತ್ ಲೀಗ್ ನಾಯಕನ ಮನೆಯಲ್ಲಿ ಅತಿಥಿಯಾಗಿ ಕಾಲ ಕಳೆಯುತ್ತಾ ಭೋಜನದಲ್ಲಿ ಪಾಲ್ಗೊಂಡಿದ್ದಾರೆ ಎಂದು ರಹೀಮ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್–ಹಿಮಾಚಲ–ಹರಿಯಾಣದಲ್ಲಿ ವನ್ಯಜೀವಿ ಚಟುವಟಿಕೆ ಹೆಚ್ಚಳ: ಘರಿಯಾಲ್ ರಕ್ಷಣೆ, ಹಿಮ ಚಿರತೆ ಪತ್ತೆ

ಯೂತ್ ಲೀಗ್ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷದ ಯುವ ಘಟಕವಾಗಿದೆ.

ಇಂತಹ ಗಂಭೀರ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರದಲ್ಲಿರುವವರ ಕರ್ತವ್ಯ ಜನರಿಗೆ ಧೈರ್ಯ ತುಂಬುವುದು ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುವುದಾಗಿದೆ ಎಂದು ರಹೀಮ್ ಹೇಳಿದ್ದಾರೆ. “ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ತುರ್ತು ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳನ್ನು ಸಮನ್ವಯಗೊಳಿಸಬೇಕು,” ಎಂದು ಅವರು ಹೇಳಿದರು.

ಅಧಿಕೃತ ಜವಾಬ್ದಾರಿಗಳನ್ನು ಬದಿಗಿಟ್ಟು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ಅವರು ಟೀಕಿಸಿದ್ದಾರೆ. ಸಂಕಷ್ಟದ ವೇಳೆ ವೈಯಕ್ತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಜನರ ಸಮಸ್ಯೆಗಳನ್ನು ಕಡೆಗಣಿಸುವುದಕ್ಕೆ ಸಮಾನ ಎಂದು ಅವರು ಆರೋಪಿಸಿ, ಸಿಎಂ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಪರಿಹಾರ ಕಾರ್ಯಗಳಿಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ವಿ.ಕೆ. ಪ್ರಸಾಂತ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡು ಸಿಎಂ ವಿರುದ್ಧ ಟೀಕಿಸಿದರು. ಹಿಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ಸ್ವತಃ ಪರಿಹಾರ ಕಾರ್ಯಗಳನ್ನು ನೋಡಿಕೊಂಡಿದ್ದರು ಎಂದು ಅವರು ಹೋಲಿಕೆ ಮಾಡಿದ್ದಾರೆ.

ಶನಿವಾರ  ಮಲಪ್ಪುರಂನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸತೀಶನ್ ಭಾಗವಹಿಸಿದ್ದ ವೇಳೆ, ಅದೇ ದಿನ ಕೇರಳದ ಹಲವೆಡೆ ಭೂಕುಸಿತ ಮತ್ತು ಪ್ರವಾಹದಿಂದ ಹಲವರು ಸಾವನ್ನಪ್ಪಿದ ಘಟನೆಗಳು ಸಂಭವಿಸಿದ್ದವು.

ಈ ಟೀಕೆಗೆ ಪ್ರತಿಕ್ರಿಯಿಸಿದ ಕೇರಳ ಪ್ರವಾಸೋದ್ಯಮ ಸಚಿವ ಪಿ.ಸಿ. ವಿಷ್ಣುನಾಥ್, ಇದು ರಾಜಕೀಯ ಆರೋಪ ಮಾಡುವ ಸಮಯವಲ್ಲ, ಸರ್ಕಾರದ ಆದ್ಯತೆ ಮಳೆಪೀಡಿತರಿಗೆ ಸಹಾಯ ನೀಡುವುದಾಗಿದೆ ಎಂದು ಹೇಳಿದರು.

ಪಥನಂತಿಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ತಮ್ಮ ಅಸ್ವಸ್ಥ ಮಾವನನ್ನು ಭೇಟಿ ಮಾಡಲು ಸರ್ಕಾರಿ ಹೆಲಿಕಾಪ್ಟರ್ ಬಳಸಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿ, “ಈಗ ಜನರ ಆರೈಕೆಯೇ ಮುಖ್ಯ. ಪರಿಸ್ಥಿತಿ ಸುಧಾರಿಸಿದ ಬಳಿಕ ಸಿಎಂ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ,” ಎಂದು ಹೇಳಿದರು.

ಸಿಎಂ ತಾವು ಇಲ್ಲಿ ತಂಗಿ ಪರಿಹಾರ ಕಾರ್ಯಗಳನ್ನು ಸಂಯೋಜಿಸಲು ಸೂಚಿಸಿದ್ದಾರೆ ಎಂದು ವಿಷ್ಣುನಾಥ್ ತಿಳಿಸಿದ್ದಾರೆ. ಮಳೆಯ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಯನ್ನು ಸಿಎಂ ಮೂರು ಬಾರಿ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜಕೀಯ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸತೀಶನ್ ಅವರು ತಮ್ಮ ಅಸ್ವಸ್ಥ ಮಾವನನ್ನು ಕೊಚ್ಚಿಯಲ್ಲಿ ಭೇಟಿ ಮಾಡಲು ಹೆಲಿಕಾಪ್ಟರ್ ಬಳಸಿದ್ದಾರೆ ಎಂಬ ಮಾಧ್ಯಮ ವರದಿಗಳೂ ವಿವಾದಕ್ಕೆ ಕಾರಣವಾಗಿವೆ.

ಈ ಆರೋಪಗಳಿಗೆ ಸಿಎಂ ಇನ್ನೂ ಪ್ರತಿಕ್ರಿಯಿಸಿಲ್ಲ.

ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು

Donate Janashakthi Media

Leave a Reply

Your email address will not be published. Required fields are marked *