ಜಂತರ್ ಮಂತರ್ ಪ್ರತಿಭಟನೆಗೆ ಸಿದ್ಧತೆ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಭಾರತಕ್ಕೆ ಪ್ರಯಾಣ

ನವದೆಹಲಿ: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಜೂನ್‌ 5ರಂದು ಅಮೆರಿಕಾವನ್ನು ತೊರೆದು ಭಾರತಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪಕ್ಷದ ಪ್ರಸ್ತಾವಿತ ಪ್ರತಿಭಟನೆಗೂ ಮುನ್ನ ಅವರು ಈ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ದೀಪ್ಕೆ, “ನಾನು ನನ್ನ ಭವಿಷ್ಯವನ್ನು ಸಂವಿಧಾನದ ಕೈಗೆ ಒಪ್ಪಿಸಿದ್ದೇನೆ,” ಎಂದು ಹೇಳಿದ್ದಾರೆ. ಜೂನ್ 6ರಂದು ನಡೆಯಲಿರುವ ಪ್ರತಿಭಟನೆಗೆ ಪೊಲೀಸ್ ಅನುಮತಿ ಸಿಗುವ ಬಗ್ಗೆ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಗಮನಸೆಳೆದಿದೆ.

ನೀಟ್ ಪ್ರಶ್ನಾಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ಈ ಪ್ರತಿಭಟನೆ ಕರೆದಿಡಲಾಗಿದೆ. ದೀಪ್ಕೆ ಅವರು ದೆಹಲಿಗೆ ಆಗಮಿಸಿದ ಬಳಿಕ ಈ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಖಾತೆ ಹಂಚಿಕೆ ಗೊಂದಲ: ಮುನಿಯಪ್ಪ ಅಸಮಾಧಾನ

ವಿಮಾನ ನಿಲ್ದಾಣ ಸ್ವಾಗತ ಯೋಜನೆ ರದ್ದು

ಒಂದು ದಿನ ಮುಂಚೆ, ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೀಪ್ಕೆ ಅವರನ್ನು ಸ್ವಾಗತಿಸಲು ಬೆಂಬಲಿಗರು ಸೇರುವುದನ್ನು ತಪ್ಪಿಸಲು ಸಿಜೆಪಿ ಮನವಿ ಮಾಡಿತ್ತು.

ಇದು ಮೊದಲಿನ ಕರೆಗಿಂತ ವಿಭಿನ್ನವಾಗಿದೆ. ಬೋಸ್ಟನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ರಾಜಕೀಯ ಕಾರ್ಯಕರ್ತ ದೀಪ್ಕೆ, ಜೂನ್ 6ರಂದು ವಿಮಾನ ನಿಲ್ದಾಣದಲ್ಲಿ ಸೇರುವಂತೆ ಬೆಂಬಲಿಗರಿಗೆ ಮೊದಲು ಕರೆ ನೀಡಿದ್ದರು.

ಪಕ್ಷದ ಪ್ರಕಟಣೆಯ ಪ್ರಕಾರ, ವಿಮಾನ ನಿಲ್ದಾಣಕ್ಕೆ ಸೇರುವಂತೆ ನೀಡಿದ ಕರೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ನಮ್ಮ ಕರೆಗೆ ಬೆಂಬಲ ವ್ಯಕ್ತಪಡಿಸಿದವರ ಸಂಖ್ಯೆ ನಮ್ಮ ನಿರೀಕ್ಷೆಗೂ ಮೀರಿದೆ,” ಎಂದು ಪಕ್ಷ ತಿಳಿಸಿದೆ.

ಶಾಂತಿಯುತ ಪ್ರತಿಭಟನೆಗೆ ಕರೆ

ಸಿಜೆಪಿ ಬೆಂಬಲಿಗರು ಶಿಸ್ತು ಪಾಲಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಪಕ್ಷ ಹಲವಾರು ಬಾರಿ ಮನವಿ ಮಾಡಿದೆ.

“ನಾವು ಕಾನೂನು ಪಾಲಿಸುವ ನಾಗರಿಕರು. ನಮ್ಮ ಚಳುವಳಿಯನ್ನು ಕೆಡಿಸಲು ಅಥವಾ ದುಷ್ಪ್ರಚಾರ ಮಾಡಲು ಅವಕಾಶ ನೀಡಬಾರದು,” ಎಂದು ದೀಪ್ಕೆ ತಿಳಿಸಿದ್ದಾರೆ.

ಪ್ರತಿಭಟನೆ ಅನುಮತಿ ಕುರಿತು ಗಮನ

ಜೂನ್ 6ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಅಧಿಕಾರಿಗಳು ಅನುಮತಿ ನೀಡುತ್ತಾರೆಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ.

ಇದನ್ನು ಕುರಿತು ಪ್ರತಿಕ್ರಿಯಿಸಿದ ಸಿಜೆಪಿ ವಕ್ತಾರ ವಿಜಯತಾ ದಹಿಯಾ, ವಿಮಾನ ನಿಲ್ದಾಣದ ನಿರ್ಧಾರವು ಸಂಘಟನೆಯ ತಂತ್ರದ ಭಾಗವಾಗಿದೆ ಎಂದು ಹೇಳಿದ್ದಾರೆ.

“ಜನರ ಭಾವನೆ ಈ ಚಳುವಳಿಯನ್ನು ಮುನ್ನಡೆಸುತ್ತಿದೆ. ಈಗ ಅವರು ಅಭಿಜೀತ್ ದೀಪ್ಕೆ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದ್ದರಿಂದ ಜೂನ್ 6ರಂದು ಅವರು ಸ್ವತಃ ಪೊಲೀಸ್ ಅನುಮತಿ ಪಡೆಯಲು ಮುಂದಾಗುತ್ತಾರೆ,” ಎಂದು ದಹಿಯಾ ತಿಳಿಸಿದ್ದಾರೆ.

ಅವರು ಮುಂದುವರೆದು, “ಶಾಂತಿಯುತ ಪ್ರತಿಭಟನೆ ನಡೆಸಲು ಅಗತ್ಯ ಅನುಮತಿ ಸಿಜೆಪಿಗೆ ದೊರೆಯುತ್ತದೆ ಎಂಬ ವಿಶ್ವಾಸ ನಮಗಿದೆ,” ಎಂದು ಹೇಳಿದ್ದಾರೆ.

ಪಕ್ಷದ ಪ್ರಕಾರ, ದೀಪ್ಕೆ ದೆಹಲಿಗೆ ಆಗಮಿಸಿದ ಬಳಿಕ ಸ್ವತಃ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತಿಭಟನೆಗೆ ಅನುಮತಿ ಕೋರುವ ನಿರೀಕ್ಷೆಯಿದೆ.

ಇದನ್ನೂ ನೋಡಿ: ಪಿಣರಾಯಿ ವಿಜಯನ್‌ ಮೇಲಿನ ಇ.ಡಿ. ದಾಳಿ: ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ Janashakthi Media

Donate Janashakthi Media

Leave a Reply

Your email address will not be published. Required fields are marked *